Mysore
25
mist

Social Media

ಬುಧವಾರ, 14 ಜನವರಿ 2026
Light
Dark

ಸೌಹಾರ್ದತೆ ಸಾರಿದ ಗಣೇಶೋತ್ಸವ

ಕೃಷ್ಣ ಸಿದ್ದಾಪುರ

ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ವತ್ತೆಕರೆ ಮತ್ತು ಸ್ಕೂಲ್ ಪೈಸಾರಿಯಲ್ಲಿ ಹಬ್ಬ

ಕ್ರೈಸ್ತ, ಮುಸ್ಲಿಂ ಸಮುದಾಯದವರನ್ನೂ ಒಳಗೊಂಡ ಶ್ರೀ ವಿನಾಯಕ ಮಿತ್ರ ಮಂಡಳಿಯಿಂದ ಆಚರಣೆ 

ಸಿದ್ದಾಪುರ: ಕೊಡಗು ಜಿಲ್ಲೆಯ ವಿವಿಧೆಡೆ ಗೌರಿ-ಗಣೇಶೋತ್ಸವದ ಅಂಗವಾಗಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಆದರೆ, ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ವತ್ತೆಕರೆ ಮತ್ತು ಸ್ಕೂಲ್ ಪೈಸಾರಿಯಲ್ಲಿ ಸರ್ವ ಧರ್ಮೀಯ ಗೌರಿ -ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸ್ನೇಹ ಸೌಹಾರ್ದತೆ, ಏಕತೆ ಸಾರುತ್ತಿರುವ ಯುವಕರ ತಂಡ ನಾಡಿಗೆ ಮಾದರಿಯಾಗಿದೆ.

ಇಲ್ಲಿನ ಶ್ರೀವಿನಾಯಕ ಮಿತ್ರ ಮಂಡಳಿ ವತಿಯಿಂದ ೩೨ನೇ ವರ್ಷದ ಗಣಪತಿ ಮೂರ್ತಿಯನ್ನು ಪ್ರತಿಷ್ಠಾನೆ ಮಾಡಲಾಗಿದೆ. ವಿಶೇಷವೆಂದರೆ ಹಲವು ವರ್ಷಗಳಿಂದ ಸರ್ವಧರ್ಮೀಯರೂ ಒಳಗೊಂಡಂತೆ ಉತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಮುಸ್ಲಿಂ ಸಮುದಾಯದವರೂ ಸೇರಿ ನಡೆಸುವ ಹಬ್ಬ ಆಚರಣೆ ಗಮನ ಸೆಳೆದಿದೆ.

ಅನ್ನಸಂತರ್ಪಣೆ, ವಿಸರ್ಜನೋತ್ಸವ, ಇಲ್ಲಿಯ ಮಸೀದಿ ತಲುಪುತ್ತಿದ್ದಂತೆ ಭಕ್ತಾದಿಗಳಿಗೆ ಪಾನಕ, ಹಣ್ಣು, ಸಿಹಿ ತಿನಿಸು ನೀಡಿ ಸ್ವಾಗತಿಸುವುದು ವಾಡಿಕೆ. ನಂತರ ಸರ್ವ ಧರ್ಮಗಳ ಯುವಕರು ವಾದ್ಯಗೋಷ್ಠಿ , ಸಂಗೀತಕ್ಕೆ ಕುಣಿದು ಕುಪ್ಪಳಿಸುವುದು ಕೂಡ ಇಲ್ಲಿನ ಹಬ್ಬದ ವಿಶೇಷ.

ಪ್ರತಿ ವರ್ಷ ಗಣೇಶ ಉತ್ಸವ, ಈದ್ ಮಿಲಾದ್ ಆಚರಣೆಯು ಜೊತೆಗೇ ಬರುವುದರಿಂದ ಇಲ್ಲಿ ಎರಡೂ ಧರ್ಮಗಳವರು ಜೊತೆಗೂಡಿ ಆಚರಿಸುತ್ತಾರೆ. ಈದ್ ಮಿಲಾದ್ ಸಂದರ್ಭದಲ್ಲಿ ಮಹಮದ್ ಪೈಗಂಬರರ ಶಾಂತಿ ಸಂದೇಶಸಾರುವ ಸೌಹಾರ್ದತೆಯ ಜಾಥಾ ಬರುವಾಗ ಶ್ರೀ  ವಿನಾಯಕ ಮಿತ್ರ ಮಂಡಳಿಯ ಸದಸ್ಯರು ಹಾಗೂ ಮಹಿಳೆಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಮುಸ್ಲಿಮರಿಗೆ ಪಾನಕ ನೀಡಿ ಸ್ವಾಗತಿಸುತ್ತಾರೆ.

ಈ ಸಂದರ್ಭದಲ್ಲಿ ಸರ್ವ ಧರ್ಮೀಯ ಪ್ರಾರ್ಥನೆ ಪಠಿಸಿ ತೆರಳುವುದು ಕೂಡ ವಾಡಿಕೆಯಾಗಿದೆ. ಹಬ್ಬದ ಸಂದರ್ಭಕ್ಕೆ ಮಾತ್ರ ಸೀಮಿತವಾಗದ ಈ ಆಚರಣೆ, ಉತ್ಸವದಲ್ಲಿ ಸಂಗ್ರಹವಾಗುವ ದೇಣಿಗೆಯನ್ನು ಶೈಕ್ಷಣಿಕ ಸಹಾಯ, ನಿರ್ಗತಿಕರಿಗೆ ಆರೋಗ್ಯ ವೆಚ್ಚ ಭರಿಸುವುದು, ಉಚಿತ ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ ಶಿಬಿರ, ಸೇರಿದಂತೆ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತದೆ.

ಕ್ರೈಸ್ತ ಧರ್ಮದ ವ್ಯಕ್ತಿ ಅಧ್ಯಕ್ಷ..! ನೆಲ್ಯಹುದಿಕೇರಿಯ ಸ್ಕೂಲ್ ಪೈಸಾರಿಯಲ್ಲಿ ಶ್ರೀಸಿದ್ಧಿವಿನಾಯಕ ಮಿತ್ರ ಮಂಡಳಿ ತನ್ನ ೧೩ನೇ ವರ್ಷದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದು, ಸರ್ವ ಧರ್ಮೀಯರನ್ನೂ ಒಳಗೊಂಡ ಸಮಿತಿಯ ಅಧ್ಯಕ್ಷ ಕ್ರೈಸ್ತ ಧರ್ಮದ ಕ್ಸೇವಿಯರ್ ಎಂಬುದು ಮತ್ತೊಂದು ವಿಶೇಷ. ಅಲ್ಲದೆ ಸದಸ್ಯರಾದ ನೌಫಲ್, ಆಂಟೋನಿ ಸೇರಿದಂತೆ ಎಲ್ಲ ಧರ್ಮಗಳವರೂ ಸಂಘದಲ್ಲಿ ಇದ್ದು, ಸೌಹಾರ್ದತೆ, ಏಕತೆಯನ್ನು ಸಾರುತ್ತಾ ಬರುತ್ತಿದ್ದಾರೆ.

” ಶ್ರೀ ಸಿದ್ಧಿವಿನಾಯಕ ಮಿತ್ರ ಮಂಡಳಿ ೧೩ ವರ್ಷಗಳಿಂದ ಸರ್ವಧರ್ಮ ಸಮನ್ವಯದಲ್ಲಿ ಗೌರಿ- ಗಣೇಶ ಹಬ್ಬವನ್ನು ಆಚರಿಸುತ್ತಿದೆ. ೩ ವರ್ಷಗಳಿಂದ ನನ್ನ ಅಧ್ಯಕ್ಷತೆಯಲ್ಲಿ ಉತ್ಸವ ನಡೆಯುತ್ತಿದ್ದು, ಪೂಜೆಗೆ ಬೇಕಾದ ನೀರು, ಅನ್ನ ಸಂತರ್ಪಣೆ ಕಾರ್ಯ ನನ್ನ ಮನೆಯಲ್ಲಿಯೇ ನಡೆಯುತ್ತಿದೆ. ಹಬ್ಬ ಮುಗಿಯುವವರೆಗೆ ವ್ರತ ಆಚರಿಸುತ್ತೇನೆ”

-ಸಿ.ಟಿ.ಕ್ಸೇವಿಯರ್, ಅಧ್ಯಕ್ಷ, ಶ್ರೀ ವಿನಾಯಕ ಮಿತ್ರ ಮಂಡಳಿ

ಜಿಲ್ಲೆಯ ವಿವಿಧೆಡೆ ಸೌಹಾರ್ದ ಆಚರಣೆ..:  ನೆಲ್ಯಹುದಿಕೇರಿ ಮಾತ್ರವಲ್ಲದೆ ಜಿಲ್ಲೆಯ ಹಲವೆಡೆ ಸೌಹಾರ್ದ ಗಣೇಶೋತ್ಸವ ಆಚರಣೆ ನಡೆದಿದೆ. ಮಡಿಕೇರಿ ಸಮೀಪದ ಮೇಕೇರಿ ಗಣೇಶೋತ್ಸವದಲ್ಲಿ ಮುಸ್ಲಿಮರು ಪಾನಕ ವಿತರಿಸಿದರೆ, ೭ನೇ ಹೊಸಕೋಟೆ ಸೇರಿದಂತೆ ವಿವಿಧೆಡೆ ಇದೇ ರೀತಿಯ ಆಚರಣೆ ನಡೆದಿದೆ. ಕೋಮು ಸಂಘರ್ಷ ಸೃಷ್ಟಿಸುವವರ ನಡುವೆ ಇಂತಹ ಸೌಹಾರ್ದ ಆಚರಣೆ ಬಾಂಧವ್ಯ ವೃದ್ಧಿಸಲು ಸಹಕಾರಿಯಾಗಿದೆ.

” ಶ್ರೀ ವಿನಾಯಕ ಮಿತ್ರ ಮಂಡಳಿಯು ೩೨ ವರ್ಷಗಳಿಂದ ಗಣಪತಿ ಉತ್ಸವ ಆಚರಣೆ ಮಾಡಿಕೊಂಡು ಬರುತ್ತಿದ್ದು, ಎಲ್ಲ ಧರ್ಮಗಳವರೂ ಕೂಡಿ ಹಬ್ಬ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ. ಇಲ್ಲಿನ ಮಸೀದಿ ವತಿಯಿಂದ ಒಂದು ದಿನದ ಅನ್ನಸಂತರ್ಪಣೆ ನಡೆಸುತ್ತಾರೆ. ನಾವು ಕೂಡ ಈದ್ ಸೌಹಾರ್ದ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದು ಸಹೋದರರ ರೀತಿಯಲ್ಲಿ ಬಾಳುತ್ತಿದ್ದೇವೆ.”

-ಸತೀಶ್, ಅಧ್ಯಕ್ಷ, ಶ್ರೀ ವಿನಾಯಕ ಮಿತ್ರ ಮಂಡಳಿ, ನಲ್ವತ್ತೆಕರೆ

” ಹಬ್ಬ ಆಚರಣೆಗಳು ಅವರವರ ಧರ್ಮಗಳಿಗೆ ಶ್ರೇಷ್ಠವಾದುದು. ಎಲ್ಲಾ ಧರ್ಮಗಳನ್ನೂ ಗೌರವಿಸಬೇಕು. ಎಲ್ಲಾ ಧರ್ಮಗಳ ಆಚರಣೆಗಳನ್ನೂ ಗೌರವಿಸುವ ಮೂಲಕ ಸೌಹಾರ್ದತೆ ಸಾರುವ ನಿಟ್ಟಿನಲ್ಲಿ ಹಬ್ಬಗಳೂ ನಡೆಯಬೇಕು.ಜಿಲ್ಲೆಯ ವಿವಿಧೆಡೆ ಇದೇ ರೀತಿ ಆಚರಣೆಗಳು ನಡೆಯುತ್ತಿರುವುದು ಹೆಮ್ಮೆಯ ವಿಚಾರ”

-ತಮ್ಲಿಖ್ ಧಾರಿಮಿ, ಎಸ್‌ಕೆಎಸ್‌ಎಸ್‌ಎಫ್ ಜಿಲ್ಲಾ ಉಪಾಧ್ಯಕ್ಷ

Tags:
error: Content is protected !!