Mysore
21
broken clouds

Social Media

ಬುಧವಾರ, 18 ಫೆಬ್ರವರಿ 2026
Light
Dark

ದೊಡ್ಡಮಾರಗೌಡನಹಳ್ಳಿ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾ ರ

ಚಿರಂಜೀವಿ ಸಿ.ಹುಲ್ಲಹಳ್ಳಿ

ಮನ್ರೇಗಾ ವಿಶೇಷ ಸಾಧನೆ, ಪರಿಸರ, ಶಿಕ್ಷಣ, ಆರೋಗ್ಯ ಕ್ಷೇತ್ರದ ಅಭಿವೃದ್ಧಿ ಕೆಲಸ ಪರಿಗಣನೆ 

ಮೈಸೂರು: ಮಹಾತ್ಮ ಗಾಂಧಿಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡುವ ಮೂಲಕ ತಾಲ್ಲೂಕಿನ ದೊಡ್ಡಮಾರಗೌಡನಹಳ್ಳಿ ಗ್ರಾಮ ಪಂಚಾಯಿತಿ ೨ನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ.

ಪಂಚಾಯಿತಿ ವ್ಯಾಪ್ತಿಯ ಐದು ಕೆರೆಗಳ ಅಭಿವೃದ್ಧಿ, ಅಂಗನವಾಡಿ ಕೇಂದ್ರಗಳ ಅಭಿವೃದ್ಧಿ, ಪ್ರತಿ ಶಾಲೆಯಲ್ಲಿ ಡಿಜಿಟಲ್ ಲೈಬ್ರರಿ ಸ್ಥಾಪನೆ ಮತ್ತು ನಿರ್ವಹಣೆ, ಮನ್ರೇಗಾದಲ್ಲಿನ ವಿಶೇಷ ಸಾಧನೆ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಟ್ಟಡದ ಜೊತೆಗೆ ಉಪಕರಣಗಳನ್ನು ಗ್ರಾಮ ಪಂಚಾಯಿತಿ ಅನುದಾನದಲ್ಲಿ ನಿರ್ವಹಿಸಿ ಇತರೆ ಗ್ರಾಮ ಪಂಚಾಯಿತಿಗಳಿಗೆ ಮಾದರಿಯೆನಿಸಿದೆ. ಈ ಎಲ್ಲಾ ಸಾಧನೆಯನ್ನು ಪರಿಗಣಿಸಿರುವ ರಾಜ್ಯ ಸರ್ಕಾರವು ೨ನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರವನ್ನು ನೀಡಿದೆ. ೨೦೧೩-೧೪ನೇ ಸಾಲಿನಲ್ಲಿ ಈ ಪಂಚಾಯಿತಿ ಪ್ರಥಮ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿತ್ತು.

ಎನ್‌ಆರ್‌ಇಜಿ ಡಿಮ್ಯಾಂಡ್ ಕೆಲಸದಿಂದ ಆಗಿತ್ತು. ಈಗ ಪ್ರಸ್ತಕ ಸಾಲಿನಲ್ಲಿ ವಿಶೇಷ ಗೌರವಕ್ಕೆ ಪಾತ್ರವಾಗಿದೆ. ಗ್ರಾಪಂ ವ್ಯಾಪ್ತಿಯ ೯ ಗ್ರಾಮಗಳಲ್ಲಿನ ಶಾಲೆಗಳನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲಾಗಿದೆ. ಪ್ರತಿ ಶಾಲೆಯಲ್ಲಿಯೂ ಡಿಜಿಟಲ್ ಗ್ರಂಥಾಲಯ, ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳು, ವಾಚನಾಲಯ, ಪ್ರೌಢಶಾಲೆಗಳಲ್ಲಿ ಸ್ಮಾರ್ಟ್ ತರಗತಿಗಳನ್ನು ನಡೆಸಲಾಗುತ್ತದೆ. ಶೌಚಾಲಯವನ್ನು ಸುಸಜ್ಜಿತವಾಗಿ ನಿರ್ವಹಣೆ ಮಾಡಲಾಗಿದೆ. ಗ್ರಾಮ ಪಂಚಾಯಿತಿ ಅನುದಾನ ವೆಚ್ಚದಲ್ಲಿ ಶೇ.೫೦ ಹಣವನ್ನು ಶಿಕ್ಷಣ ಕ್ಷೇತ್ರಕ್ಕೆ ಬಳಸಲಾಗಿದೆ.

ಹೀಗಾಗಿ ತರಗತಿ ಕೊಠಡಿಗಳ ನಿರ್ಮಾಣ, ಶೌಚಾಲಯ ಮತ್ತು ಶಾಲಾ ಪರಿಸರಕ್ಕೆ ಒತ್ತು ನೀಡಲಾಗಿದೆ. ಮನ್ರೇಗಾ ಯೋಜನೆಯನ್ನು ಸಮಪರ್ಕವಾಗಿ ಬಳಕೆ ಮಾಡಿಕೊಂಡು ಸರ್ಕಾರ ನೀಡಿದ್ದ ಗುರಿ ಮೀರಿ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದೆ. ಅಂಗನವಾಡಿ ಕಟ್ಟಡಗಳನ್ನು ದುರಸ್ತಿಗೊಳಿಸಿ, ಬಣ್ಣ ಬಳಿದು ಕಟ್ಟಡವನ್ನು ಸುಂದರವಾಗಿಸಿ ಮಕ್ಕಳ ಕಲಿಕೆ ಮತ್ತು ಆರೋಗ್ಯಕ್ಕೆ ಪೂರಕ ವಾತಾವರಣವನ್ನು ಸೃಷ್ಟಿಸಲಾಗಿದೆ. ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಈ ಗ್ರಾಪಂ ವ್ಯಾಪ್ತಿಯ ಕಟ್ಟೆಹುಂಡಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ಇರಲಿಲ್ಲ. ಗ್ರಾಮದಲ್ಲಿ ಸುಸಜ್ಜಿತ ಹೊಸ ಕಟ್ಟಡವನ್ನು ನಿರ್ಮಾಣ ಮಾಡಿ ಅಂಗನವಾಡಿ ತೆರೆಯಲಾಗಿದೆ. ಅಲ್ಲಿ ಈಗ ೨೫ ಮಕ್ಕಳು ಕಲಿಯುತ್ತಿದ್ದಾರೆ.

ಆರೋಗ್ಯಕ್ಕೆ ಒತ್ತು: ಯಾವುದೇ ಮೂಲ ಸೌಕರ್ಯ ಮತ್ತು ಉಪಕರಣಗಳಿಲ್ಲದೆ ಕೇವಲ ಸಮುದಾಯ ಆರೋಗ್ಯ ಕೇಂದ್ರ ಎಂಬ ಬೋರ್ಡ್ ತಗುಲಿ ಹಾಕಿಕೊಂಡಿದ್ದ ಹಳೆಯ ಕಟ್ಟಡವನ್ನು ನವೀಕರಣ ಮಾಡಿ ಗ್ರಾಮ ಪಂಚಾಯಿತಿಯ ಸಂಪೂರ್ಣ ವೆಚ್ಚದಲ್ಲಿ ಪೂರ್ಣ ಪ್ರಮಾಣದಲ್ಲಿ ಭೌತಿಕ ಸವಲತ್ತುಗಳನ್ನು ನೀಡಿ ಸುತ್ತಮುತ್ತಲಿನ ಗ್ರಾಮಸ್ಥರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಾಗಿದೆ. ಕಟ್ಟಡ ನವೀಕರಣಗೊಂಡ ನಂತರ ನಿತ್ಯ ೪೦-೫೦ ಜನರು ಆರೋಗ್ಯ ತಪಾಸಣೆಗೆ ಬರುವಂತಾಗಿದೆ.

ದೊಡ್ಡಮಾರಗೌಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಹಟ್ಟಿಹುಂಡಿ, ಕಮರವಳ್ಳಿ, ಮಾಣಿಕ್ಯಪುರ, ಕಟ್ಟೆಹುಂಡಿ, ಮರಯ್ಯನಹುಂಡಿ, ಶೆಟ್ಟನಾಯಕಹಳ್ಳಿ, ಮಾದಹಳ್ಳಿ, ನುಗ್ಗಳ್ಳಿ ಗ್ರಾಮಗಳಲ್ಲಿ ೧೩ ಸಾವಿರ ಜನಸಂಖ್ಯೆ ಇದ್ದು, ೨೩ ಮಂದಿ ಗ್ರಾಪಂ ಸದಸ್ಯರಿದ್ದಾರೆ.

ಮನ್ರೇಗಾದಲ್ಲಿ ಜಿಲ್ಲೆಗೆ ಮಾದರಿ ಸಾಧನೆ: ಮನ್ರೇಗಾ ಯೋಜನೆಯನ್ನು ಸದ್ಭಳಕೆ ಮಾಡಿಕೊಂಡಿರುವ ಗ್ರಾಮ ಪಂಚಾಯಿತಿಯು ಮಾದಹಳ್ಳಿ, ದೊಡ್ಡಮಾರನಗೌಡನಹಳ್ಳಿಯ ಐದು ಕೆರೆಗಳನ್ನು ಅಭಿವೃದ್ಧಿಪಡಿಸಿದೆ. ಹೂಳು ತುಂಬಿ ಕೆರೆಗಳು ಅವನತಿಯತ್ತ ಸಾಗಿದ್ದವು. ಈ ಸಂದರ್ಭದಲ್ಲಿ ಹೂಳು ತೆಗೆದು ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈಗ ಐದು ಕೆರೆಗಳಲ್ಲಿಯೂ ಈಗ ನೀರು ತುಂಬಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ರುಕ್ಮಾಂಗದ ತಿಳಿಸಿದ್ದಾರೆ.

” ಎರಡನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿರುವುದು ಸಂತಸದ ಜೊತೆಗೆ ಮತ್ತಷ್ಟು ಜವಾಬ್ದಾರಿಯನ್ನೂ ಹೆಚ್ಚಿಸಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಶಾಸಕರಾದ ಜಿ.ಟಿ.ದೇವೇಗೌಡ ಮತ್ತು ಗ್ರಾ.ಪಂ. ಸದಸ್ಯರು ಒತ್ತು ನೀಡಿದರು. ಅಧಿಕಾರಿಗಳ ಸಹಕಾರದೊಂದಿಗೆ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇವೆ.”

– ಕೆ.ರುಕ್ಮಾಂಗದ, ಪಿಡಿಒ, ದೊಡ್ಡಮಾರಗೌಡನಹಳ್ಳಿ ಗ್ರಾಪಂ.

Tags:
error: Content is protected !!