ಮೈಸೂರು: ಅರಣ್ಯ ಪ್ರದೇಶದಲ್ಲಿ ಹುಲಿಗಳ ಚಲನವಲನ ಹುಲಿಗಳ ಅರಿಯಲು ಅರಣ್ಯ ಇಲಾಖೆ ಇದೀಗ ಮೊಬೈಲ್ ಆ್ಯಪ್ ತಂತ್ರಜ್ಞಾನದ ಮೊರೆ ಹೋಗಿದೆ. ಹುಲಿಗಳ ಕುರಿತು ಆಂತರಿಕ ಗಣತಿ ಕೈಗೊಂಡಿರುವ ಇಲಾಖೆ ಇದೇ ಮೊದಲ ಬಾರಿಗೆ ಆ್ಯಪ್ ಬಳಸಿ ಮೊಬೈಲ್ ಮೂಲಕವೇ ಎಲ್ಲ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ. ಈ ಬಗ್ಗೆ ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದು, ಇದಕ್ಕಾಗಿ ಈಗಾಗಲೇ 1000 ಮೊಬೈಲ್‌ಗಳನ್ನು ಖರೀದಿಸಲಾಗಿದೆ ಎಂದು ಡಿ.ಸಿ.ಎಫ್. ಹರ್ಷ ಕುಮಾರ್ ಚಿಕ್ಕನರಗುಂದ ತಿಳಿಸಿದ್ದಾರೆ.
ಗಣತಿ ನಡೆಯುವ ಬಗೆ: ಪ್ರಮುಖವಾಗಿ ವನ್ಯಪ್ರಾಣಿಗಳು ಹಾದು ಹೋಗುವ ಕೇಂದ್ರೀಕೃತ ಪ್ರದೇಶಗಳಲ್ಲಿ ಗುರುತಿಸಿರುವ ಸ್ಥಳದ ಎರಡೂ ಬದಿಯಲ್ಲಿ ಅಂದರೆ ಪ್ರತಿ 2 ಚ.ಕಿ.ಮೀ.ಗೆ ಒಂದು ಕಡೆ ಸೆನ್ಸಾರ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮಾರ್ಗದಲ್ಲಿ ಹಾದು ಹೋಗುವ ಹುಲಿ ಜತೆಗೆ ಇತರೆ ಪ್ರಾಣಿಗಳ ಚಿತ್ರವನ್ನು ಎರಡು ಕಡೆಯೂ ಕ್ಯಾಮೆರಾಗಳು ಸ್ವಯಂಚಾಲಿತವಾಗಿ ಹಿಡಿಯುತ್ತವೆ. ಹುಲಿ ಮೈ ಮೇಲಿನ ಪಟ್ಟೆ ಆಧರಿಸಿ ಸಂಖ್ಯೆಯನ್ನು ಪರಿಗಣಿಸಲಾಗುತ್ತದೆ.
ಹುಲಿ ಗಣತಿಯನ್ನು ನಾಲ್ಕು ವಿಧಾನದಲ್ಲಿ ನಡೆಸಲಾಗುತ್ತದೆ. ಮೊದಲ ಎರಡು ಹಂತದಲ್ಲಿ ಹುಲಿ ಇರುವಿಕೆಯ ಚಿಹ್ನೆ ಮತ್ತು ಹೆಜ್ಜೆ ಗುರುತು ಮೂಲಕ ಗುರುತಿಸಲಾಗುತ್ತದೆ. ಮೂರನೇ ಹಂತದಲ್ಲಿ ಜಿಐಎಸ್ ಆ್ಯಪ್ ನೊಂದಿಗೆ ಸಿದ್ಧಪಡಿಸಿದ ಕ್ಯಾಮೆರಾ ಟ್ರ್ಯಾಪ್‌ಗಳನ್ನು ಬಳಸಿ ಎಣಿಸಲಾಗುತ್ತದೆ. ಕೊನೆ ಹಂತದಲ್ಲಿ ಕ್ಯಾಮೆರಾ ಹಾಕದ ಪ್ರದೇಶದಲ್ಲಿ ಸರ್ವೇ ಕಾರ್ಯ ನಡೆಸಿ ದತ್ತಾಂಶ ಕಲೆ ಹಾಕಲಾಗುತ್ತದೆ.
ಅರಣ್ಯದಲ್ಲೀಗ ಅತ್ಯಂತ ಸೂಕ್ಷ್ಮ ಪರಿಸ್ಥಿತಿ ಯಿದ್ದು, ವನ್ಯಜೀವಿಗಳ ಜೀವನ ಕ್ರಮದಲ್ಲೂ ಸಾಕಷ್ಟು ಬದಲಾವಣೆಯ ಪರ್ವ ಕಾಲವಾಗಿದೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಉದ್ಯಾನವ್ಯಾಪ್ತಿಯ ಅಂತರಸಂತೆ ವಲಯ 4200 ಕಿ.ಮೀ.
ಈ ವ್ಯಾಪ್ತಿಯಲ್ಲಿ ಕೇವಲ 1800 ಕಿ.ಮೀ. ವ್ಯಾಪ್ತಿಯಲ್ಲಿ ದಟ್ಟ ಕಾಡಿದ್ದು ವನ್ಯಜೀವಿಗಳು ತಮ್ಮ ಸಹಜ ಜೀವನ ಕ್ರಿಯೆಗಾಗಿ ಕಾಡಿನಿಂದ ಹೊರಬರುವುದು ರೂಢಿಯಾಗಿ ಬಿಟ್ಟಿದೆ.
ಅರಣ್ಯದಲ್ಲಿ ಸಹಜತೆಯನ್ನು ಕಾಪಾಡುವಲ್ಲಿ ಬದ್ಧತೆ ಅವಶ್ಯಕ. ವನ್ಯಜೀವಿಗಳ ಆಹಾರ ಚಕ್ರದಲ್ಲಿ ಹುಲಿಯ ಪಾತ್ರವೇ ಬಹುಮುಖ್ಯ. ಅರಣ್ಯದಲ್ಲಿನ ನೀರಿನ ಸಂಪನ್ಮೂಲ ಅಭಿವೃದ್ಧಿಗೂ ಈ ವನ್ಯಜೀವಿಗಳ ಆಹಾರ ಚಕ್ರವೇ ಬಹುಮುಖ್ಯ. ಹೀಗಾಗಿ ಯಾವುದೇ ಪ್ರಾಣಿಗಳ ಜೊತೆ ಲಘುವಾಗಿ ನಡೆದುಕೊಳ್ಳದೇ ಅರಣ್ಯದಲ್ಲಿ ಸಹಜತೆಯನ್ನು ಕಾಪಾಡಿಕೊಳ್ಳಲು ಇಲಾಖೆ ಶ್ರಮಿಸುತ್ತಿದೆ ಎಂದು ಡಿ.ಸಿ.ಎಫ್. ಹರ್ಷಕುಮಾರ್ ಚಿಕ್ಕನರಗುಂದ ತಿಳಿಸಿದ್ದಾರೆ.
ನಾಗರಹೊಳೆ ಉದ್ಯಾನವನದ ಕಚೇರಿಯಲ್ಲಿ ಇತ್ತೀಚೆಗೆ ಗಣತಿದಾರರಿಗೆ ತರಬೇತಿಯನ್ನೂ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಹರ್ಷಕುಮಾರ್, ಪರಿಸರದ ಕುರಿತು ಕಾಳಜಿ ಮತ್ತು ಅಧ್ಯಯನದ ಜೊತೆಗೆ ಹುಲಿ ಗಣತಿ ಕಾರ್ಯಕ್ಕೆ ಬಂದಿರುವ ಸ್ವಯಂಸೇವಕರು ಕಾಡಿನೊಳಗೆ ವನ್ಯಜೀವಿಗಳ ದೈನಂದಿನ ಬದುಕಿಗೆ ಯಾವುದೇ ತೊಂದರೆಯಾಗದಂತೆ ಗಣತಿ ಕಾರ್ಯದಲ್ಲಿ ತೊಡಗಬೇಕೆಂದು ಮಾಹಿತಿ ನೀಡಿದರು.
ಹುಲಿ ಗಣತಿ ಅತ್ಯಂತ ಕಷ್ಟಕರವಾಗಿದ್ದು, ಈ ಕಾರ್ಯವನ್ನು ಯಶಸ್ವಿಯಾಗಿ ನಡೆಸುವ ಎಲ್ಲಾ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ. ಹುಲಿಗಳಿಗೆ ಉತ್ತಮ ವಾತಾವರಣ ಕಲ್ಪಿಸಲು ಶ್ರಮಿಸುತ್ತಿರುವ ಅರಣ್ಯ ಸಿಬ್ಬಂದಿಯ ಶ್ರಮ ಅಪಾರವಾದದ್ದು. ಹಾಗೆ ಕಾಡ್ಗಿಚ್ಚು ಕುರಿತು ಗಮನಹರಿಸುವಂತೆ ಸೂಚನೆ ನೀಡಿದ್ದೇವೆ.
• ಹರ್ಷಕುಮಾರ್ ಚಿಕ್ಕನರಗುಂದ, ಡಿಸಿಎಫ್ ನಾಗರಹೊಳೆ ಹುಲಿ ಸಂರಕಿತ ಪ್ರದೇಶ