Mysore
23
haze

Social Media

ಶನಿವಾರ, 20 ಡಿಸೆಂಬರ್ 2025
Light
Dark

ಮರಗಳ ಕಟಾವಿಗೆ ಹರಾಜು ಕರೆದ ಅರಣ್ಯ ಇಲಾಖೆ!

ಮಹೇಂದ್ರ ಹಸಗೂಲಿ

ವಸತಿನಿಲಯ ಆವರಣದ ಮರಗಳನ್ನು ಕಡಿಯುವುದಕ್ಕೆ ಪರಿಸರ ಪ್ರೇಮಿಗಳ ವಿರೋಧ 

ಗುಂಡ್ಲುಪೇಟೆ: ಪಟ್ಟಣದ ಹೊರವಲಯದ ವೀರನಪುರ ಕ್ರಾಸ್ ಬಳಿ ಇರುವ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ ನಿಲಯ ಆವರಣದಲ್ಲಿರುವ ೯ ಆಲದ ಮರಗಳ ಕಟಾವಿಗೆ ಅರಣ್ಯ ಇಲಾಖೆ ಬಹಿರಂಗ ಹರಾಜು ಕರೆದಿದ್ದು, ಇದಕ್ಕೆ ಸಾರ್ವಜನಿಕರು, ಪರಿಸರ ಪ್ರೇಮಿಗಳು, ಕನ್ನಡ ಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಸತಿ ಶಾಲೆಯ ಮುಂದೆ ವಿಶಾಲವಾದ ಖಾಲಿ ಜಾಗವಿದ್ದು, ಅಲ್ಲಿ ಕಟ್ಟಡ ನಿರ್ಮಿಸದೆ ಮರಗಳನ್ನು ಕಟಾವು ಮಾಡಿ ಆ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಪರಿಸರ ಪ್ರೇಮಿಗಳಿಂದ ವಿರೋಧ ವ್ಯಕ್ತ ಸವಾಗಿದೆ. ಅರಣ್ಯ ಇಲಾಖೆ ಒಂದುಕಡೆ ಮರಗಳನ್ನು ಬೆಳೆಸಿ, ಪರಿಸರ ಉಳಿಸಿ ಎಂದು ಸಂದೇಶ ಸಾರಿದರೆ, ಇನ್ನೊಂದು ಕಡೆ ತಾನೇ ಮರಗಳ ಕಟಾವಿಗೆ ಹರಾಜಿಗೆ ಮುಂದಾಗಿರುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಮರಗಳನ್ನು ಕಟಾವು ಮಾಡಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಮರಗಳ ಕಟಾವು ಮಾಡಬಾರದು ಎಂದು ಕರ್ನಾಟಕ ಕಾವಲು ಪಡೆ ಅಧ್ಯಕ್ಷ ಅಬ್ದುಲ್ ಮಲಿಕ್, ಪದಾಧಿಕಾರಿಗಳಾದ ರಾಮೇಗೌಡ, ಸಾದಿಕ್ ಪಾಷ, ಅಬ್ದುಲ್ ಜಬ್ಬಾರ್, ಮಿಮಿಕ್ರಿ ರಾಜು, ಅಯೂಬ್ ಖಾನ್ ಮತ್ತಿತರರು ವಸತಿ ಶಾಲೆಯ ವಾರ್ಡನ್‌ರವರಿಗೆ ಮನವಿ ಸಲ್ಲಿಸಿದರು.

” ಕೋವಿಡ್ ಸಮಯದಲ್ಲಿ ಅನೇಕರು ಶುದ್ಧ ಗಾಳಿ ಸಿಗದೆ ಮೃತಪಟ್ಟರು. ಇದೇ ಅಬ್ದುಲ್ ಕಲಾಂ ವಸತಿ ನಿಲಯದಲ್ಲಿ ಕೋವಿಡ್ ಸೆಂಟರ್ ತೆರೆಯಲಾಗಿತ್ತು. ಶಿಕ್ಷಣ ಸಂಸ್ಥೆಗಳು, ಅರಣ್ಯ ಇಲಾಖೆ ಮರ ಉಳಿಸುವ ಸಂದೇಶ ಸಾರಬೇಕೇ ಹೊರತು, ಮರಗಳ ನಾಶಕ್ಕೆ ಕೈ ಹಾಕಬಾರದು. ಮರ ಕಡಿದು ಕಟ್ಟಡ ನಿರ್ಮಿಸುವುದು ಸರಿಯಲ್ಲ.”

-ಮಣಿ ಮಡಹಳ್ಳಿ, ಪರಿಸರ ಪ್ರೇಮಿ.

” ಉತ್ತಮ ವಾತಾವರಣವಿರುವ ವಸತಿ ಶಾಲೆಯಲ್ಲಿ ಮರಗಳನ್ನು ಕಡಿದು ಕಾಂಕ್ರೀಟ್‌ಮಯ ಮಾಡಲು ಮುಂದಾಗಿರುವುದು ಸರಿಯಲ್ಲ. ಮರಗಳನ್ನು ಕಡಿದು ಕಟ್ಟಡ ನಿರ್ಮಿಸಬಾರದು. ಮರಗಳ ಕಟಾವಿಗೆ ಮುಂದಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ.”

-ಅಬ್ದುಲ್ ಮಲಿಕ್, ಕರ್ನಾಟಕ ಕಾವಲುಪಡೆ ತಾಲ್ಲೂಕು ಅಧ್ಯಕ್ಷ

” ಡಾ.ಅಬ್ದುಲ್ ಕಲಾಂ ವಸತಿ ಶಾಲೆಯ ಆವರಣದಲ್ಲಿದ್ದ ೯ ಆಲದ ಮರಗಳ ಕಟಾವಿಗೆ ೫-೬ ತಿಂಗಳ ಹಿಂದೆಯೇ ನಮಗೆ ಪತ್ರ ಬರೆಯಲಾಗಿತ್ತು. ಮರಗಳನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಅವರಿಗೆ ಕಾಲಾವಕಾಶ ನೀಡಲಾಗಿತ್ತು. ಇಂಜಿನಿಯರ್ ಬೇರೆ ಜಾಗದಲ್ಲಿ ಸ್ಥಳಾವಕಾಶದ ಕೊರತೆ ಇದ್ದು, ಇಲ್ಲಿಯೇ ಕಟ್ಟಡ ನಿರ್ಮಿಸಬೇಕು ಎಂಬ ಉತ್ತರ ನೀಡಿದ್ದರಿಂದ ಮರಗಳ ಕಟಾವಿಗೆ ಹರಾಜು ಕರೆಯಲಾಗಿದೆ.”

-ಶಿವಕುಮಾರ್, ವಲಯ ಸಂರಕ್ಷಣಾಧಿಕಾರಿ ಬಫರ್ ಜೋನ್, ಗುಂಡ್ಲುಪೇಟೆ 

Tags:
error: Content is protected !!