ಇಂಡೋನೇಷ್ಯಾ, ಫ್ರಾನ್ಸ್, ಜರ್ಮನಿ, ಇಸ್ರೇಲ್, ಅಮೆರಿಕ, ಆಸ್ಟ್ರೇಲಿಯ ಪ್ರವಾಸಿಗರು ಭಾಗಿ
ಚಿರಂಜೀವಿ ಸಿ.ಹುಲ್ಲಹಳ್ಳಿ
ಮೈಸೂರು: ದಸರಾ ಮಹೋತ್ಸವದ ಅದ್ದೂರಿ ಜಂಬೂಸವಾರಿಗೆ ನೂರಾರು ಜನ ವಿದೇಶಿಯರು ಸಾಕ್ಷಿಯಾದರು. ನಗರದ ಆಯುರ್ವೆದಿಕ್ ವೃತ್ತದ ಬಳಿ ಸಾಂಸ್ಕೃತಿಕ ಲೋಕ ಸಂಸ್ಥೆಯ ವತಿಯಿಂದ ಹಾಕಲಾಗಿದ್ದ ಶಾಮಿಯಾನದಲ್ಲಿ ಮಳೆಯಲ್ಲಿ ನೆನೆದುಕೊಂಡು ಸ್ತಬ್ಧಚಿತ್ರ, ಜಾನಪದ ಕಲಾ ತಂಡಗಳು ಹಾಗೂ ಜಂಬೂಸವಾರಿ ಮೆರವಣಿಗೆಯನ್ನು ಕಣ್ತುಂಬಿಕೊಂಡರು.
ಈ ಬಾರಿ ವಿದೇಶಿಗರು, ವಿಶೇಷಚೇತನರು, ರೈತರು ಹಾಗೂ ಸ್ಥಳೀಯರೂ ಸೇರಿದಂತೆ 1 ಸಾವಿರ ಜನರಿಗೆ ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ಅದರಲ್ಲಿ 300 ವಿದೇಶಿಗರು, 200 ವಿಶೇಷಚೇತನರು, 300 ರೈತರು ಹಾಗೂ ಉಳಿದಂತೆ ವಿವಿಧ ಭಾಗಗಳಿಂದ ಬಂದಿದ್ದವರಿಗೆ ಉಚಿತ ಪಾಸ್ ವಿತರಣೆ ಮಾಡಲಾಯಿತು. ಈ ಬಾರಿಯ ದಸರೆ ವೀಕ್ಷಣೆಗೆ ಬಂದಿದ್ದ ವಿದೇಶಿಯರಲ್ಲಿ ಇಂಡೋನೇಷ್ಯಾ, ಫ್ರಾನ್ಸ್, ಜರ್ಮನಿ, ಇಸ್ರೇಲ್, ಅಮೆರಿಕ, ಆಸ್ಟ್ರೇಲಿಯಾದ ಪ್ರವಾಸಿಗರು ಹೆಚ್ಚಾಗಿದ್ದರು.
ವಿಶೇಷಚೇತನರಿಗೂ ಆಸನ ವ್ಯವಸ್ಥೆ: ‘ಜಂಬೂಸವಾರಿ ವೀಕ್ಷಣೆಗೆ ಆಗಮಿಸುವ ವಿಶೇಷಚೇತನರಿಗಾಗಿ ಎಲ್ಲಿಯೂ ಸೂಕ್ತ ವ್ಯವಸ್ಥೆ ಕಲ್ಪಿಸಿರಲಿಲ್ಲ. ಹಾಗಾಗಿ ಸಂಸ್ಥೆಯೇ ಆಸನದ ವ್ಯವಸ್ಥೆ ಮಾಡಿತ್ತು. ಜೊತೆಗೆ ಸ್ಥಳೀಯ ರೈತರು ಕೂತು ಅಭಿಮನ್ಯು ಮೇಲೆ ಚಾಮುಂಡೇಶ್ವರಿ ಚಿನ್ನದ ಮೂರ್ತಿಯನ್ನು ಕಣ್ತುಂಬಿಕೊಂಡರು.
ಕಳೆದ 13 ವರ್ಷಗಳಿಂದ ಮಹಾವೀರ್ ಪ್ರಸಾದ ದಂಪತಿ ಈ ವ್ಯವಸ್ಥೆ ಮಾಡಿಕೊಂಡು ಬರುತ್ತಿದ್ದು, ಅದರಂತೆ ಈ ಬಾರಿಯೂ ಮಾಡಲಾಗಿದೆ. ಬೆಳಿಗ್ಗೆ 10ರಿಂದ 11 ಗಂಟೆಯಿಂದ ವಿದೇಶಿಗರು, ವಿಶೇಷಚೇತನರು, ರೈತರು ಬಂದು ಕುರ್ಚಿಗಳಲ್ಲಿ ಕುಳಿತು ಜಂಬೂ ಸವಾರಿಯನ್ನು ವೀಕ್ಷಿಸಿದರು.
ಮೊದಲ ಬಾರಿಗೆ ದಸರಾ ವೀಕ್ಷಣೆ ಮಾಡುತ್ತಿರುವುದು ತುಂಬಾ ಖುಷಿ ತಂದಿದೆ. ಇಲ್ಲಿನ ಸಂಪ್ರದಾಯ, ಆಚರಣೆಗಳು ನನಗೆ ಇಷ್ಟವಾಯಿತು. ಮುಂದಿನ
ಬಾರಿಯೂ ದಸರಾಗೆ ಬರುವೆ.
–ಅಸ್ಟ್ರಿಯ ಆತಿ ಜಬ್ಬರ್, ಇಂಡೋನೇಷ್ಯಾ.
ಇಲ್ಲಿನ ಸಂಸ್ಕೃತಿ, ಹಬ್ಬ ಆಚರಣೆಯ ಕುರಿತಂತೆ ಕೇಳಿದ್ದೆವು. ಇದೇ ಮೊದಲ ಬಾರಿ ಅವುಗಳನ್ನು ಕಣ್ತುಂಬಿಕೊಂಡಿರುವುದರಿಂದ ಸಂತೋಷವಾಗಿದೆ. ಕಲಾ ತಂಡಗಳ ನೃತ್ಯಗಳಿಗೆ ನಾವು ಹೆಜ್ಜೆ ಹಾಕಿದೆವು.
-ಕೊಬಿ, ಇಸ್ರೇಲ್.
ದಸರೆಯ 9 ದಿನಗಳನ್ನೂ ಮೈಸೂರಿನಲ್ಲಿ ಕಳೆದಿದ್ದೇನೆ. ಜಂಬೂಸವಾರಿ ವೀಕ್ಷಣೆಗಾಗಿ ಬಹಳ ಕಾತರದಿಂದ ಕಾಯುತ್ತಿದ್ದೆ. ಇದೇ ಮೊದಲು ಬಾರಿಗೆ ನೋಡಿ ಪುಳಕಿತಳಾಗಿದ್ದೇನೆ.
-ಇಲಿಸ್, ಫ್ರಾನ್ಸ್.
ಜಂಬೂಸವಾರಿ ವೀಕ್ಷಣೆಯು ನನಗೆ ಬಹಳಷ್ಟು ಖುಷಿ ನೀಡಿದೆ. ಇಲ್ಲಿನ ಸಂಪ್ರದಾಯ, ಪರಂಪರೆಯನ್ನು ಜಂಬೂ ಸವಾರಿ ಮೂಲಕ ತಿಳಿದುಕೊಳ್ಳುವಂತಾಯಿತು. ಸ್ತಬ್ಧಚಿತ್ರಗಳು ಆಕರ್ಷಕವಾಗಿದ್ದವು.
-ನುಮೋನಿ, ಫ್ರಾನ್ಸ್.
ಜಂಬೂಸವಾರಿ ವೀಕ್ಷಿಸಲು ನಾನು ಟಿಕೆಟ್ ಖರೀದಿ ಮಾಡಿದ್ದೆ. ಅಭಿಮನ್ಯುವಿನ ಮೇಲೆ ಚಾಮುಂಡೇಶ್ವರಿ ಮೂರ್ತಿ ವಿರಾಜಮಾನವಾಗಿ ಕುಳಿತಿದ್ದನ್ನು ಕಂಡು ಧನ್ಯತೆ ಮೂಡಿದೆ.
-ರಾಜು, ಬೆಂಗಳೂರು.
ಬೆಳಿಗ್ಗೆ 11ಕ್ಕೆ ಬಂದು ಕೆ.ಆರ್.ವೃತ್ತದ ಬಳಿ ಜಾಗ ಹಿಡಿದುಕೊಂಡಿದ್ದೆವು. ಆಗ ಅಲ್ಪ ಪ್ರಮಾಣದ ಜನರಿದ್ದರೂ ಇಷ್ಟೊಂದು ನೂಕು ನುಗ್ಗಲು ಆಗುತ್ತದೆ ಎಂದು ಭಾವಿಸಿರಲಿಲ್ಲ. ಮೊದಲ ಬಾರಿಗೆ ಅಂಬಾರಿ ಕಂಡು ಖುಷಿಯಾಗಿದ್ದೇನೆ.
-ಆಶಾ, ಬಿಡದಿ
ಅನೇಕ ಬಾರಿ ಜಂಬೂ ಸವಾರಿ ಮೆರವಣಿಗೆಯನ್ನು ನೋಡಿದ್ದೇನೆ. ಈ ಬಾರಿ ಬೆಳಿಗ್ಗೆ ಬೇಗ ಬಂದು ಜಾಗ ಹಿಡಿದುಕೊಂಡಿದ್ದೆವು. ಆದರೆ, ಜನ ಹೆಚ್ಚಾಗಿ ಕಷ್ಟಪಡುತ್ತಿದ್ದನು ನೋಡಿದ ಪೊಲೀಸರು ಮುಂದೆ ಕೂರಿಸಿದರು.
-ಚೆನ್ನಾಜಮ್ಮ, ಬನ್ನೂರು.
ಜಂಬೂ ಸವಾರಿ ನೋಡಲು ದೇಶ-ವಿದೇಶಗಳಿಂದ ಬಂದು ರಸ್ತೆಗಳಲ್ಲಿ ನಿಲ್ಲುತ್ತಾರೆ. ಅಂತಹದರಲ್ಲಿ ಮೈಸೂರಿನವರಾಗಿ ನಾವು ಮನೆಯಲ್ಲಿ ಕೂರಲು ಸಾಧ್ಯವೇ, ಅಂಬಾರಿ ವೀಕ್ಷಣೆ ನನ್ನ ಅವಿಸ್ಮರಣೀಯ ಕ್ಷಣ.
-ರಜಿನಿ, ಸಿದ್ದಾರ್ಥನಗರ.
ಮೈಸೂರೆಂದರೆ ನನಗೆ ಅಚ್ಚುಮೆಚ್ಚು. ಅದರಲ್ಲಿಯೂ ಜಂಬೂಸವಾರಿ ವೀಕ್ಷಣೆ ಮಾಡಬೇಕು ಎನ್ನುವುದು ಹಲವು ದಿನಗಳ ಬಯಕೆ ಆಗಿತ್ತು. ಇದೆ ಮೊದಲ ಬಾರಿ ಬಂದು ದಸರಾ ನೋಡುತ್ತಿರುವುದು ಖುಷಿ ತಂದಿದೆ.
-ಮೇಘ, ಕೊಳ್ಳೇಗಾಲ.