ಆಂದೋಲನ ವರದಿಗೆ ಸ್ಪಂದಿಸಿದ ಪ್ರಣವ್ ಫೌಂಡೇಷನ್
ಮಡಿಕೇರಿ: ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ಯಾಡಿ ಗ್ರಾಮಕ್ಕೆ ಬೆಂಗಳೂರಿನ ಪ್ರಣವ್ ಫೌಂಡೇಶನ್ ವತಿಯಿಂದ ನಿರ್ಮಿಸಲಾಗಿರುವ ಕಾಲು ಸೇತುವೆಯನ್ನು ಆ.25ರಂದು ಗ್ರಾಮಸ್ಥರಿಗೆ ಹಸ್ತಾಂತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಣವ್ ಫೌಂಡೇಶನ್ ಮಾಧ್ಯಮ ಸಲಹೆಗಾರ ಯು.ಎಚ್.ಕಾರ್ತಿಕ್ ಭಟ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.10ರಂದು ಕಾಮಗಾರಿ ಕಾಲುಸೇತುವೆಯ ಆರಂಭವಾಯಿತು. ಆ.22ಕ್ಕೆ ಸೇತುವೆ ನಿರ್ಮಾಣ ಹಾಗೂ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. 2.50 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಲಾಗಿದೆ. ಸೇತುವೆಯನ್ನು ಉಕ್ಕಿನಿಂದ ಮಾಡಲಾಗಿದ್ದು, ಸುಮಾರು 24 ಮೀಟರ್ ಉದ್ದ, 0.75 ಮೀಟರ್ ಅಗಲವಿದೆ. ಒಂದೇ ಬಾರಿಗೆ 10 ಜನರು ನಿಲ್ಲಬಹುದಾಗಿದೆ. ಅಲ್ಲದೇ, ಈ ಸೇತುವೆಯ ಸಂಪೂರ್ಣ ನಿರ್ವಹಣೆಯನ್ನು ಪ್ರಣವ್ ಫೌಂಡೇಶನ್ ವಹಿಸಿಕೊಂಡಿದೆ ಎಂದು ತಿಳಿಸಿದರು.
ಕಾಲು ಸೇತುವೆಗೆ ಪ್ರಣವ ಸೇತು ಎಂದು ನಾಮಕರಣ ಮಾಡಲಾಗಿದೆ. ಸೇತುವೆಯನ್ನು ಗ್ರಾಮಸ್ಥರಿಗೆ ಹಸ್ತಾಂತರ ಮಾಡುವ ಕಾರ್ಯಕ್ರಮ ಆ.25ರ ಭಾನುವಾರ ಬೆಳಿಗ್ಗೆ 11.30ಕ್ಕೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಅತ್ಯಾಡಿ ಗ್ರಾಮಸ್ಥರು ಹಾಗೂ ಪ್ರಣವ್ ಫೌಂಡೇಶನ್‌ನ ಅಧ್ಯಕ್ಷ ರಾಕೇಶ್ ರೈ, ಸ್ಥಾಪಕ ಕಾರ್ಯದರ್ಶಿ ನಾಗರಾಜ ಹೆಬ್ಬಾಳ್, ಟ್ರಸ್ಟಿಗಳಾದ ಕೆ.ಪಿ.ರಕ್ಷಿಣ್, ಮಂಜುನಾಥ ಭಟ್, ಮಹೇಶ್ ಮೇನಾಲ, ನೇತ್ರ, ಯೋಜನೆಯ ಸಂಚಾಲಕರಾದ ದೇವಿಪ್ರಸಾದ್, ಕಿರಣ್ ಅಟ್ಟೂರು ಇತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಪ್ರಣವ್ ಫೌಂಡೇಶನ್ ಟ್ರಸ್ಟಿಗಳಾದ ಯು.ಎಚ್.ಮಂಜುನಾಥ್ ಭಟ್, ನೇತ್ರ, ಮಹೇಶ್ ಕುಮಾರ್, ಯೋಜನೆಯ ಸಂಚಾಲಕರಾದ ದೇವಿಪ್ರಸಾದ್, ಕಿರಣ್ ಅಟ್ಟೂರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ವರದಿ ಪ್ರಕಟಿಸಿದ್ದ ಆಂದೋಲನ..!
ಚೆಂಬು ಗ್ರಾ.ಪಂ. ವ್ಯಾಪ್ತಿಯ ಅತ್ಯಾಡಿ ಗ್ರಾಮದಲ್ಲಿ ಸೇತುವೆಯಿಲ್ಲದೆ ಅಲ್ಲಿನ ಜನರು ಸಮಸ್ಯೆ ಎದುರಿಸುತ್ತಿ ರುವ ಕುರಿತು ಆಂದೋಲನ ದಿನಪತ್ರಿಕೆಯು ವರದಿ ಪ್ರಕಟಿಸಿತ್ತು. ಸ್ಥಳಕ್ಕೆ ತೆರಳಿ ಅಲ್ಲಿನ ಚಿತ್ರಣ, ಗ್ರಾಮಸ್ಥರ ಸಮಸ್ಯೆಗಳ ಬಗ್ಗೆ ಜೂ.18ರಂದು ‘ಮಳೆಗಾಲದಲ್ಲಿ ದ್ವೀಪವಾಗುವ ಗ್ರಾಮ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು. ಇದೀಗ ‘ಆಂದೋಲನ’ ವರದಿಗೆ ಫಲಶ್ರುತಿ ದೊರೆತಿದ್ದು, ಅಲ್ಲಿನ ಗ್ರಾಮಸ್ಥರ ಸಮಸ್ಯೆಯು ಬಗೆಹರಿದಂತಾಗಿದೆ.





