ಭೇರ್ಯ ಮಹೇಶ್
ಭೇರ್ಯ: ಸಮೀಪದ ಬಟಿಗನಹಳ್ಳಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ಓಕುಳಿ ಹಬ್ಬದ ಪ್ರಯುಕ್ತ ನಡೆದ ಗ್ರಾಮೀಣ ಕಲೆಗಳ ಪ್ರದರ್ಶನ ನಮ್ಮ ಜಾನಪದ ಸೊಗಡನ್ನು ಅನಾವರಣಗೊಳಿಸಿತು.
ಸಾಲಿಗ್ರಾಮ ತಾಲ್ಲೂಕಿನ ಭೇರ್ಯ ಗ್ರಾಮದ ಶ್ರೀ ದೊಡ್ಡಮ್ಮ, ಕರಿಯಮ್ಮ ಸಿಡಿ ಮತ್ತು ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಬಟಿಗನಹಳ್ಳಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ದೇವರ ಓಕುಳಿ ಹಬ್ಬ ನಡೆದ ಮಾರನೇ ದಿನ ಮಂಗಳವಾರ ವಿವಿಧ ಜನಪದ ಗ್ರಾಮೀಣ ಕಲೆಗಳನ್ನು ವಿಭಿನ್ನವಾಗಿ ಪ್ರದರ್ಶಿಸಲಾಯಿತು.
ಗ್ರಾಮೀಣ ಕಲೆಗಳಾದ ಹುಲಿ ವೇಷ, ಪಾಳೆಗಾರಿಕೆ, ಕೀಲು ಕುದುರೆ, ಮಹಿಷಿ , ಮರಿ ಹುಲಿಗಳು, ಯಮಕಿಂಕರರ ವೇಷ ಸೇರಿದಂತೆ ಅನೇಕ ವಿಭಿನ್ನ ರೀತಿಯ ಜನಪದ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ನಾಡಿನ ಗ್ರಾಮೀಣ ಸಂಸ್ಕೃತಿಯನ್ನು ಬಿಂಬಿಸುವ ಕಲಾ ಪ್ರಕಾರಗಳು ಗ್ರಾಮೀಣ ಪ್ರದೇಶಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ಜನರಿಗೆ ಉತ್ತಮ ಸಂದೇಶ ನೀಡುವಲ್ಲಿ ಪ್ರಮಖ ಪಾತ್ರ ವಹಿಸಿವೆ.
ನಾನು ನನ್ನ ಹತ್ತನೇ ವಯಸ್ಸಿನಿಂದ ಗ್ರಾಮದ ಹಬ್ಬಗಳಲ್ಲಿ ಸಿಂಡು ಹುಲಿ ವೇಷ ಹಾಕುತ್ತಿದ್ದೇನೆ. ನಾನು ವೇಷ ಹಾಕಿ ಕುಣಿತ ಹಾಕುವಾಗ ಜನರು ಪ್ರತಿ ಬಾರಿ ನನಗೆ ಬೆಂಬಲ ಸೂಚಿಸಿ ಸೂರ್ತಿ ತುಂಬುತ್ತಾರೆ. ನನಗೆ ೫೭ ವರ್ಷಗಳು ತುಂಬಿದೆ. ಆದರೂ ಇನ್ನೂ ಕುಣಿತ ಹಾಕಬೇಕು ಎನ್ನುವ ಆಸೆ ಹೊಂದಿದ್ದೇನೆ ಎಂದು ಹುಲಿ ವೇಷ ಪಾತ್ರಧಾರಿ ಸತ್ಯನಾರಾಯಣ ಹೇಳಿದರು.
” ನಮ್ಮ ಪೂರ್ವಿಕರ ಕಾಲದಿಂದ ಭೇರ್ಯ ಗ್ರಾಮದ ದೊಡಮ್ಮ ಕರಿಯಮ್ಮ ಜಾತ್ರೆ ಪ್ರಯುಕ್ತ ನಡೆಯುವ ಶ್ರೀ ಬಸವೇಶ್ವರ ದೇವರ ಓಕುಳಿ ಹಬ್ಬವನ್ನು ಎಲ್ಲಾ ಜಾತಿ ಜನಾಂಗದವರೊಂದಿಗೆ ಬಟಿಗನಹಳ್ಳಿ ಗ್ರಾಮದಲ್ಲಿ ಸಾಮರಸ್ಯದಿಂದ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ಗ್ರಾಮದ ಯುವಕರು ವಿವಿಧ ಕಲೆಗಳನ್ನು ಪ್ರದರ್ಶಿಸಿ ಹಳ್ಳಿಯ ಜನಪದ ಸೊಗಡನ್ನು ಜೀವಂತವಾಗಿಸಿದ್ದಾರೆ.”
-ಬಿ.ಹೆಚ್.ಮಹದೇವ್, ಗ್ರಾ.ಪಂ. ಮಾಜಿ ಅಧ್ಯಕ್ಷ.





