ನವೀನ್ ಡಿಸೋಜ
ಉತ್ತಮ ಮಳೆಯಾದ ಹಿನ್ನೆಲೆ ೮೪ ಲಕ್ಷ ಮೀನು ಮರಿ ಬಿತ್ತನೆ ಗುರಿ
ಜೂ.೧೫ರ ಬಳಿಕ ೨ನೇ ಹಂತದಲ್ಲಿ ಮೀನು ಮರಿಗಳ ಉತ್ಪಾದನೆ
ಮಡಿಕೇರಿ: ಈ ಬಾರಿ ಮುಂಗಾರು ಬೇಗನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಕೆರೆಕಟ್ಟೆಗಳು ತುಂಬಿದ್ದು, ಹೆಚ್ಚಿನ ಪ್ರಮಾಣದ ಮೀನು ಉತ್ಪಾದನೆಗೆ ಮೀನುಗಾರಿಕೆ ಇಲಾಖೆ ಸಿದ್ಧತೆ ನಡೆಸಿದೆ.
ಅಪರೂಪವೆಂಬಂತೆ ಈ ಬಾರಿ ಮೇ ತಿಂಗಳಲ್ಲಿಯೇ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಕೆರೆ-ಕಟ್ಟೆಗಳು, ಜಲಾಶಯಗಳು ಭರ್ತಿಯಾಗಿರುವುದರಿಂದ ಮೀನು ಉತ್ಪಾದನೆಗೆ ಪೂರಕವಾಗಿದೆ. ಹಾಗಾಗಿ ಮೀನುಗಾರಿಕೆ ಇಲಾಖೆ ಈ ಬಾರಿ ಹೆಚ್ಚಿನ ಪ್ರಮಾಣದ ಮೀನು ಮರಿಗಳ ಬಿತ್ತನೆ ಗುರಿ ಯನ್ನು ಹೊಂದಿದ್ದು, ಹಾರಂಗಿ ಮೀನು ಮರಿಗಳ ಉತ್ಪಾದನಾ ಘಟಕದಲ್ಲಿ ಈಗಾಗಲೇ ಚಟುವಟಿಕೆಯನ್ನು ಆರಂಭಿಸಿದೆ.
ಸಾಮಾನ್ಯವಾಗಿ ಕೊಡಗು ಜಿಲ್ಲೆಯಲ್ಲಿ ಜೂನ್ ೧೫ರ ಬಳಿಕ ಮೀನು ಮರಿಗಳ ಉತ್ಪಾದನೆ ಮತ್ತು ಪಾಲನಾ ಕಾರ್ಯ ಆರಂಭಿಸಲಾಗುತ್ತದೆ. ಆದರೆ ಈ ಬಾರಿ ಮೇ ತಿಂಗಳ ಅಂತ್ಯದಲ್ಲಿಯೇ ಮೀನು ಮರಿಗಳ ಉತ್ಪಾದನೆಗೆ ಪ್ರಯತ್ನ ನಡೆಸಲಾಗಿದ್ದು, ಅದು ಅಷ್ಟಾಗಿ ಯಶಸ್ವಿಯಾಗಲಿಲ್ಲ. ಹಾರಂಗಿ ಮೀನು ಮರಿಗಳ ಉತ್ಪಾದನಾ ಕೇಂದ್ರದಲ್ಲಿ ಪ್ರಾಯೋಗಿಕವಾಗಿ ಮೊದಲ ಹಂತದಲ್ಲಿ ಮೀನು ಮರಿಗಳ ಉತ್ಪಾದನೆಗೆ ಪ್ರಯತ್ನಿಸಲಾಗಿದ್ದು, ಶೇ.೨೫ ಮಾತ್ರ ಯಶಸ್ವಿಯಾಗಿದೆ. ಹೀಗಾಗಿ ಜೂ.೧೫ರ ಬಳಿಕ ೨ನೇ ಹಂತದಲ್ಲಿ ಮತ್ತೆ ಮೀನು ಮರಿಗಳಉತ್ಪಾದನೆ ಕಾರ್ಯ ಮಾಡಲಾಗುತ್ತದೆ.
ಇದಕ್ಕಾಗಿ ಸಿದ್ಧತೆ ನಡೆಸಲಾಗಿದೆ ಎಂದು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸಚಿನ್ ತಿಳಿಸಿದ್ದಾರೆ. ಜೂನ್ ೨ನೇ ವಾರದಿಂದ ಮೀನು ಮರಿಗಳ ಸಂತಾನೋತ್ಪತ್ತಿ ಆರಂಭವಾಗಲಿದೆ. ಕಳೆದ ವರ್ಷ ಒಟ್ಟು ೨ ಕೋಟಿ ಸ್ಪಾನ್ ಉತ್ಪಾದನಾ ಗುರಿಯ ಪೈಕಿ ೧.೭೭ ಕೋಟಿ ಸ್ಪಾನ್ ಮಾಡಲಾಗಿದ್ದು, ಶೇ.೯೦ ಗುರಿ ಸಾಧಿಸಲಾಗಿತ್ತು. ಈ ಬಾರಿ ಹಾರಂಗಿಯಲ್ಲಿ ೨ ಕೋಟಿ ಸ್ಪಾನ್ ಉತ್ಪಾದನಾ ಗುರಿಯನ್ನು ಹೊಂದಲಾಗಿದೆ.
ಜಿಲ್ಲೆಯ ಡ್ಯಾಂ ಮತ್ತು ದೊಡ್ಡ ಕೆರೆಗಳಲ್ಲಿ ಒಟ್ಟು ೧೫ ಲಕ್ಷ ಮೀನು ಮರಿಗಳ ಬಿತ್ತನೆ, ಗ್ರಾ.ಪಂ ಕೆರೆಗಳಲ್ಲಿ ಒಟ್ಟು ೧೨ ಲಕ್ಷ ಮೀನು ಮರಿಗಳ ಬಿತ್ತನೆ ಹಾಗೂ ಜಿಲ್ಲೆಯಲ್ಲಿರುವ ೫೨೮ ಹೆಕ್ಟೇರ್ ಖಾಸಗಿ ಕೆರೆಗಳಲ್ಲಿ ಒಟ್ಟು ೫೭ ಲಕ್ಷ ಮೀನು ಮರಿಗಳ ಬಿತ್ತನೆ ಮಾಡುವ ಗುರಿಯನ್ನು ಇಲಾಖೆಯು ಹೊಂದಿದೆ. ಈ ಬಾರಿ ಕಳೆದ ೫ ವರ್ಷಗಳಿಗಿಂತ ಹೆಚ್ಚಿನ ಮೀನು ಉತ್ಪಾದನೆ ಗುರಿಯನ್ನು ಇಲಾಖೆ ಹೊಂದಿದೆ. ದೊಡ್ಡ ಕೆರೆಗಳು, ಸಣ್ಣ ಕೆರೆಗಳು, ಖಾಸಗಿ ಕೆರೆಗಳೂ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ೮೪ ಲಕ್ಷ ಮೀನು ಮರಿಗಳ ಬಿತ್ತನೆ ಗುರಿಯನ್ನು ಹೊಂದಲಾಗಿದ್ದು, ಇದು ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚಿನ ಪ್ರಮಾಣದ್ದಾಗಿದೆ. ಇತ್ತೀಚಿನ ವರ್ಷಗಳಲ್ಲಿ ೨೦೨೧-೨೨ನೇ ಸಾಲಿನಲ್ಲಿ ೬೩.೯ ಲಕ್ಷ ಮರಿಗಳ ಬಿತ್ತನೆ ಮಾಡಲಾಗಿದ್ದು, ಇದಾದ ಬಳಿಕ ಕಳೆದ ವರ್ಷ ಉತ್ತಮ ಮಳೆ ಬಿದ್ದಿದ್ದ ಕಾರಣ ೬೨ ಲಕ್ಷ ಮೀನು ಮರಿಗಳ ಬಿತ್ತನೆ ಮಾಡಲಾಗಿತ್ತು. ಈ ಬಾರಿ ಇನ್ನೂ ಹೆಚ್ಚಿನ ಬಿತ್ತನೆಯ ಗುರಿ ಹೊಂದಲಾಗಿದ್ದು, ಕೆರೆ ಕಟ್ಟೆಗಳು ಬೇಗನೇ ಭರ್ತಿಯಾಗಿರುವುದರಿಂದ ಗುರಿ ಸಾಧನೆಗೆ ಉತ್ತಮ ವಾತಾವರಣ ಸೃಷ್ಟಿಯಾಗಿದೆ. ಆದ್ದರಿಂದ ಈಗಾಗಲೇ ಉತ್ಪಾದನಾ ಕೇಂದ್ರದಲ್ಲಿ ಚಟುವಟಿಕೆಗಳು ಆರಂಭಗೊಂಡಿವೆ.
” ಈ ಬಾರಿ ಮುಂಗಾರು ಮಳೆಬೇಗನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಮೇ ಕೊನೆಯ ವಾರದಲ್ಲಿಯೇ ಮೀನು ಮರಿಗಳ ಉತ್ಪಾದನೆಗೆ ಪ್ರಾಯೋಗಿಕ ಪ್ರಯತ್ನ ಮಾಡಲಾಯಿತು. ಆದರೆ ವಾತಾವರಣದ ಕಾರಣಕ್ಕೆ ಅಷ್ಟಾಗಿ ಯಶಸ್ವಿಯಾಗಲಿಲ್ಲ. ಹೀಗಾಗಿ ಜೂನ್ ೧೫ರ ಬಳಿಕ ಹಾರಂಗಿ ಮೀನು ಮರಿಗಳ ಉತ್ಪಾದನಾ ಕೇಂದ್ರದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ.”
-ಎಸ್.ಎಂ. ಸಚಿನ್, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ.





