ಕೆ.ಶಿವಣ್ಣ
ಟಿಬೆಟಿಯನ್ ಕ್ಯಾಂಪ್‌ಗಳಿಂದ ಸಂಗ್ರಹಿಸಿದ ತ್ಯಾಜ್ಯಕ್ಕೆ ಬೆಂಕಿ; ದುರ್ವಾಸನೆಯಿಂದ ರೋಗ ಹರಡುವ ಭೀತಿ
ಬೈಲಕುಪ್ಪೆ: ಪ್ಲಾಸ್ಟಿಕ್ ತ್ಯಾಜ್ಯವನ್ನು ಸುಟ್ಟ ಪರಿಣಾಮ ದುರ್ವಾಸನೆ ಹರಡುತ್ತಿರುವುದರಿಂದ ಬೈಲಕುಪ್ಪೆ ಸುತ್ತಮುತ್ತಲಿನ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ ಎಂಬ ಆರೋಪ ಕೇಳಿಬಂದಿದೆ.
ಪಿರಿಯಾಪಟ್ಟಣ ತಾಲ್ಲೂಕಿನ ಬೈಲಕುಪ್ಪೆ ಗ್ರಾಪಂ ವ್ಯಾಪ್ತಿಯ ಬೈಲಕುಪ್ಪೆ ಪೆಟ್ರೋಲ್ ಬಂಕ್ ಸಮೀಪ ಟಿಬೆಟಿಯನ್ ಸೊಸೈಟಿ ವತಿಯಿಂದ ಟೆಂಡರ್ ಮೂಲಕ ಗುತ್ತಿಗೆ ನೀಡಿದ ಗುತ್ತಿಗೆದಾರರಿಂದ ಟಿಬೆಟಿಯನ್ ಕ್ಯಾಂಪ್‌ಗಳಿಂದ ಪ್ಲಾಸ್ಟಿಕ್ ತ್ಯಾಜ್ಯದ ರಾಶಿಯನ್ನು ಸಂಗ್ರಹಿಸಿ ವಾಹನದಲ್ಲಿ ತಂದು ಸುರಿದು ಗ್ರೇಡ್ ಮಾಡಿಕೊಂಡು, ವಾರಕ್ಕೆರಡು ಬಾರಿ ತ್ಯಾಜ್ಯದ ಗುಂಡಿಗೆ ಹಾಕಿ ಸುಡುವುದರಿಂದ ದುರ್ವಾಸನೆ ಬೀರುತ್ತಿದೆ.
ಇದರಿಂದ ಗ್ರಾಮದ ಜನರಿಗೆ ಸಮಸ್ಯೆಯಾಗಿದೆ. ರಾತ್ರಿ ವೇಳೆ ಮನೆಯಿಂದ ಜನರು ಹೊರಬಂದರೆ ದುರ್ವಾಸನೆ ಮೂಗಿಗೆ ಬಡಿಯುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಹಿಂದೆ ಇದ್ದ ಬೈಲಕುಪ್ಪೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯವರು ಹಾಗೂ ಅಭಿವೃದ್ಧಿ ಅಧಿಕಾರಿಗಳು ಗ್ರಾಮಸ್ಥರ ದೂರಿನ ಮೇರೆಗೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಟಿಬೆಟಿಯನ್ ಸೊಸೈಟಿ ವ್ಯವಸ್ಥಾಪಕರೊಡನೆ ಚರ್ಚಿಸಿದ್ದು, ಟಿಬೆಟಿಯನ್ ಕ್ಯಾಂಪಿನ ಹೊರವಲಯದಲ್ಲಿ ತ್ಯಾಜ್ಯ ವಿಲೇವಾರಿಗೆ ಜಾಗ ಪತ್ತೆ ಹಚ್ಚಲಾಗಿದೆ.
ಕೊರೊನಾ ಬಂದಿದ್ದರಿಂದ ಆ ವಿಚಾರ ನನೆಗುದಿಗೆ ಬಿದ್ದಿತು. ಬೇಸಿಗೆ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದ್ದು, ಪಿಡಿಒಗೆ ಹಲವಾರು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರಾದ ಜವರೇಗೌಡ, ದೂರಿದ್ದಾರೆ.
” ಈ ವಿಚಾರ ಕುರಿತು ನಾವು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಚರ್ಚಿಸಿದ್ದು, ಕೂಡಲೇ ಸಂಬಂಧಪಟ್ಟವರಿಗೆ ಪಂಚಾಯಿತಿ ವತಿಯಿಂದ ತಿಳಿವಳಿಕೆ ಪತ್ರ ನೀಡಲಾಗಿದೆ. ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು.”
-ರಘು, ಗ್ರಾಪಂ ಅಧ್ಯಕ್ಷ, ಬೈಲಕುಪ್ಪೆ
” ಈಗಾಗಲೇ ಟಿಬೆಟಿಯನ್ ಕೋ ಆಪರೇಟಿವ್ ಸೊಸೈಟಿ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ. ಬೌದ್ಧ ಗುರು ದಲೈಲಾಮಾ ಇಲ್ಲಿಗೆ ವಿಶ್ರಾಂತಿಗಾಗಿ ಆಗಮಿಸಿರುವುದರಿಂದ ಕೆಲಸದ ಒತ್ತಡವಿತ್ತು. ಅವರು ಮೂಲ ಸ್ಥಾನಕ್ಕೆ ತೆರಳಿದ ಕೂಡಲೇ ಟಿಬೆಟಿಯನ್ ಕೋ ಆಪರೇಟಿವ್ ಸೊಸೈಟಿಯ ಕಚೇರಿಯಲ್ಲಿ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.”
-ಬೋರೇಗೌಡ, ಪಿಡಿಒ, ಬೈಲಕುಪ್ಪೆ ಗ್ರಾಪಂ





