ಕೆ. ಬಿ. ರಮೇಶನಾಯಕ
ಮೈಸೂರು: ಮುಡಾದಿಂದ ಖಾತೆಯಾಗದೆ ಹಲವು ತಿಂಗಳುಗಳಿಂದ ಅಸಹಾಯಕರಾಗಿ ಕುಳಿತಿದ್ದ ಖಾಸಗಿ ಬಡಾವಣೆಗಳ ನಿವೇಶನದಾರರಿಗೆ ಕೊನೆಗೂ ಖಾತೆ ಭಾಗ್ಯ ದೊರಕುತ್ತಿದೆ.
ಮುಡಾದಿಂದ ಅನುಮೋದನೆ ಪಡೆದು ರಚಿಸಲಾಗಿದ್ದ ಬಡಾವಣೆಗಳ ಪೈಕಿ ಮುಡಾದಿಂದ ಹಸ್ತಾಂತರಗೊಂಡಿರುವ ೪೬ ಬಡಾವಣೆಗಳಲ್ಲಿ ದಾಖಲೆ ಗಳನ್ನು ಒದಗಿಸಿರುವಂತಹ ನಿವೇಶನಗಳ ಮಾಲೀಕರಿಗೆ ಹೂಟಗಳ್ಳಿ ನಗರಸಭೆಯಲ್ಲಿ ಖಾತೆ ಮಾಡಿಕೊಡುವ ಪ್ರಕ್ರಿಯೆ ಆರಂಭಿಸಲಾಗಿದ್ದು, ನಿವೇಶನದಾರರಲ್ಲಿ ಸಂತಸ ಮನೆ ಮಾಡಿದೆ.
ಮುಡಾದಿಂದ ಪೂರ್ಣ ಪ್ರಮಾಣದ ದಾಖಲೆಗಳು ಬರುವ ತನಕ ಕಾಯದೆ ದಾಖಲೆ ಲಭ್ಯ ಇರುವ ನಿವೇಶನಗಳ ಕ್ರಮಸಂಖ್ಯೆಗೆ ತಕ್ಕಂತೆ ಕಡತವನ್ನು ತಯಾರಿಸಿ ಖಾತೆ ಮಾಡಲಾಗುತ್ತಿದೆ.
ಮುಡಾ ಹಗರಣ ಬೆಳಕಿಗೆ ಬಂದು ರಾಜಕೀಯ ತಿರುವು ಪಡೆಯುತ್ತಿದ್ದಂತೆ ಮುಡಾದಿಂದ ಖಾತೆ ಮಾಡುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಸ್ಥಳೀಯ ಸಂಸ್ಥೆಗಳಿಗೆ ಜವಾಬ್ದಾರಿ ವಹಿಸಲು ತೀರ್ಮಾನ ಮಾಡಲಾಗಿತ್ತು. ಇದರ ಬೆನ್ನಲ್ಲೇ ಖಾಸಗಿ ಬಡಾವಣೆಗಳನ್ನು ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸುವ ನಿರ್ಣಯ ಕೈಗೊಂಡು ಸರ್ಕಾರದಿಂದಲೂ ಅನುಮೋದನೆ ಪಡೆಯಲಾಗಿತ್ತು.
೨ ತಿಂಗಳ ಸತತ ಪರಿಶ್ರಮ: ಹಲವಾರು ವರ್ಷಗಳಿಂದ ನಿವೇಶನದಾರರಿಗೆ ಖಾತೆ ಮಾಡಿಕೊಡುತ್ತಿದ್ದನ್ನು ಸ್ಥಗಿತಗೊಳಿಸುವಂತೆ ನೋಡಿಕೊಂಡ ಆಯುಕ್ತ ಎ. ಎನ್. ರಘನಂದನ್ ಅವರು, ಮತ್ತೊಮ್ಮೆ ಕಾನೂನುಬಾಹಿರ ಕ್ರಮಗಳು ನಡೆಯದಂತೆ ಕಟ್ಟುನಿಟ್ಟಿನ ನಿರ್ಧಾರ ಮಾಡಿದ್ದರು. ಮುಡಾ ಅಧ್ಯಕ್ಷ ಜಿ. ಲಕ್ಷ್ಮಿಕಾಂತ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ೨೪೬ ಬಡಾವಣೆಗಳನ್ನು ಹಸ್ತಾಂತರಿಸಲು ತೀರ್ಮಾನಿಸಿ ಪರಸ್ಪರ ನಿರಾಕ್ಷೇಪಣಾ ಪತ್ರ ನೀಡ ಲಾಗಿತ್ತು. ಎರಡು ತಿಂಗಳಿಂದ ಆಯುಕ್ತರು ಸತತ ಎರಡು ತಿಂಗಳಿಂದ ಪ್ರತಿನಿತ್ಯ ಖಾತೆ ವಿಭಾಗ, ತಾಂತ್ರಿಕ ವಿಭಾಗ ಹಾಗೂ ಭೂಸ್ವಾಽನ ವಿಭಾಗದ ಅಽಕಾರಿಗಳು, ಸಿಬ್ಬಂದಿಗೆ ಜವಾಬ್ದಾರಿ ನೀಡಿದ್ದರು. ಅದರಂತೆ, ಹೂಟಗಳ್ಳಿ ನಗರಸಭೆಯಲ್ಲಿ ಖಾತೆ ಮಾಡಿಕೊಡುವ ಕೆಲಸ ಮಾಡಿದ್ದು, ಜ. ೧ರಿಂದ ಈ ತನಕ ೬ ಖಾತೆಗಳನ್ನು ಮಾಡಿಕೊಡಲಾಗಿದೆ.
ಚಟುವಟಿಕೆ ಕೇಂದ್ರ: ಹೂಟಗಳ್ಳಿ ನಗರಸಭೆಯಲ್ಲಿ ಖಾತೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಬಿರುಸಿನ ಚಟುವಟಿಕೆ ನಡೆದಿದೆ. ನಿವೇಶನದಾರರು ಖಾತೆಗೆ ಅರ್ಜಿ ಸಲ್ಲಿಸಲು ಬಂದು ಹೋಗುತ್ತಿದ್ದರೆ, ಬಡಾವಣೆಗಳನ್ನು ರಚಿಸಿರುವ ಮಾಲೀಕರು ಕಡತಗಳನ್ನು ಹಿಡಿದುಕೊಂಡು ನಗರಸಭೆ ಕಚೇರಿಗೆ ಎಡತಾಕುತ್ತಿದ್ದಾರೆ.
ಮುಡಾದಲ್ಲಿ ಮೊದಲ ಹಂತದಲ್ಲಿ ಶೇ. ೬೦, ಎರಡನೇ ಹಂತದಲ್ಲಿ ಶೇ. ೪೦ರಷ್ಟು ನಿವೇಶನಗಳನ್ನು ಬಿಡುಗಡೆ ಮಾಡಿದ್ದರೂ ದಾಖಲೆಗಳ ಹಸ್ತಾಂತರಕ್ಕೆ ಸಮಯ ಬೇಕಿದೆ. ಇದರಿಂದಾಗಿ ಬಂದಿರುವ ದಾಖಲೆಗಳ ನಿವೇಶನಗಳಿಗೆ ಸಂಬಂಽಸಿದಂತೆ ಖಾತೆಯಷ್ಟೇ ಮಾಡಿಕೊಡಲಾಗುತ್ತಿದೆ ಎಂದು ಪೌರಾಯುಕ್ತ ಚಂದ್ರಶೇಖರ್ ಹೇಳಿದರು.
ಖಾಸಗಿ ಬಡಾವಣೆಗಳ ದಾಖಲೆಗಳನ್ನು ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸುವ ಕೆಲಸ ನಡೆಯುತ್ತಿದೆ. ಪ್ರತಿಯೊಂದು ವಿಚಾರವನ್ನೂ ಸೂಕ್ಷ್ಮವಾಗಿ ಗಮನಿಸಿ ಎಲ್ಲ ದಾಖಲೆಗಳನ್ನೂ ಒದಗಿಸುತ್ತಿದ್ದೇವೆ. ಮುಡಾದಿಂದ ಖಾತೆ ಮಾಡದಿರಲು ತೀರ್ಮಾನಿಸಿದ ಮೇಲೆ ನಾವು ಮತ್ತೆ ಖಾತೆ ಮಾಡುವ ಪ್ರಮೇಯವಿಲ್ಲ. ಬಡಾವಣೆಗಳನ್ನು ಅನುಮೋದಿಸಿರುವ ಕಾರಣ ಅದಕ್ಕೆ ಸಂಬಂಽಸಿದ ದಾಖಲೆ ನೀಡುತ್ತಿದ್ದೇವೆ. ಎ. ಎನ್. ರಘುನಂದನ್, ಆಯುಕ್ತರು, ಮುಡಾ.





