Mysore
19
clear sky

Social Media

ಗುರುವಾರ, 05 ಮಾರ್ಚ್ 2026
Light
Dark

ಕರಿನಂಜನಪುರ ರಸ್ತೆಗೆ ಕೊನೆಗೂ ಕಾಂಕ್ರೀಟ್ ಭಾಗ

ಪ್ರಸಾದ್‌ ಲಕ್ಕೂರು 

ಕುಂಟುತ್ತ, ತೆವಳುತ್ತ ಸಾಗಿದ್ದ ಕಾಮಗಾರಿಗೆ ಮುಕ್ತಿ 

ಚಾಮರಾಜನಗರ: ನಗರದ ಕರಿನಂಜನಪುರ ರಸ್ತೆಗೆ ಕೊನೆಗೂ ಕಾಂಕ್ರಿಟೀಕರಣ ಭಾಗ್ಯ ದೊರಕಿದೆ. ಕುಂಟುತ್ತ, ತೆವಳುತ್ತಾ ಸಾಗಿದ್ದ ಕಾಮಗಾರಿ ಕೊನೆಗೂ ಮುಕ್ತಾಯದ ಹಂತ ತಲುಪಿದೆ.

ಡಿವೈಎಸ್ಪಿ ಕಚೇರಿ ಬಳಿಯಿಂದ ಆರಂಭವಾಗುವ ನ್ಯಾಯಾಲಯದ ರಸ್ತೆ ಕರಿನಂಜನಪುರ ರಸ್ತೆ ಮಾರ್ಗವಾಗಿ ಸತ್ಯಮಂಗಲ ರಸ್ತೆಯನ್ನು ಸಂಪರ್ಕಿಸುತ್ತದೆ. ಡಿವೈಎಸ್ಪಿ ಕಚೇರಿಯಿಂದ ನ್ಯಾಯಾಲಯದ ತನಕ ಕಾಂಕ್ರಿಟೀಕರಣ ಆಗಿದೆ. ಸತ್ಯಮಂಗಲ ರಸ್ತೆಯಿಂದ ನಿಜಗುಣ ರೆಸಾರ್ಟ್ ಸಮೀಪದ ಸೇತುವೆತನಕ ಕಾಂಕ್ರಿಟೀಕರಣವಾಗಿದೆ. ಈ ಎರಡರ ನಡುವೆ ಇರುವ ೨೧೭ ಮೀಟರ್ ಅಂತರದ ರಸ್ತೆ ಕಾಂಕ್ರಿಟೀಕರಣ ಆಗಿರಲಿಲ್ಲ.

೬ ತಿಂಗಳ ಹಿಂದೆ ಡಾ.ಬಿ.ಆರ್.ಅಂಬೇಡ್ಕರ್ ಭವನ, ನಿಜಗುಣ ರೆಸಾರ್ಟ್ ಮುಂಭಾಗ ಸುಮಾರು ೧೦೦ ಮೀಟರ್ ರಸ್ತೆ ಕಾಂಕ್ರಿಟೀಕರಣವಾಯಿತು. ನ್ಯಾಯಾಲಯದ ಮುಂಭಾಗ ಒಂದು ತಿಂಗಳ ಹಿಂದೆ ೪-೫ ಮೀಟರ್ ಕಾಂಕ್ರಿಟೀಕರಣಗೊಂಡಿತು. ವಿವಿಧ ಕಾರಣಗಳಿಂದ ಕಾಮಗಾರಿ ಮುಂದಕ್ಕೆ ಹೋಗಲಿಲ್ಲ. ಈ ರಸ್ತೆಯನ್ನು ೧೦ ಮೀಟರ್ ಅಗಲಕ್ಕೆ ಕಾಂಕ್ರಿಟೀಕರಣ ಮಾಡಬೇಕು ಎಂದು ನಗರಸಭೆ ಮುಂದಾಗಿತ್ತು. ಆದರೆ, ರಸ್ತೆಯ ಅಕ್ಕಪಕ್ಕದ ಜಾಗದವರು ಹಿಂದೆ ರಸ್ತೆ ಎಷ್ಟು ಅಗಲಿವಿತ್ತು ಅಷ್ಟಕ್ಕೇ ಮಾಡಬೇಕು. ನಮ್ಮ ಜಾಗ ಬೇಕಾದರೆ ನ್ಯಾಯಯುತ ಪರಿಹಾರ ನೀಡಿ ಎಂದು ತಕರಾರು ತೆಗೆದರು. ಆದ್ದರಿಂದಲೇ ಕಾಮಗಾರಿ ಆಮೆಗತಿಯಲ್ಲಿ ಸಾಗಿತ್ತು.

ಕೇವಲ ೮ರಿಂದ ೧೦ ಮೀಟರ್ ಅಗಲಕ್ಕೆ ರಸ್ತೆ ಕಾಂಕ್ರಿಟೀಕರಣವಾಗಿದೆ. ಈ ರಸ್ತೆಯನ್ನು ಪೂರ್ಣಗೊಳಿಸಲು ೭ ವರ್ಷ ಬೇಕಾಯಿತು. ಈ ರಸ್ತೆಯನ್ನು ೮೦ ಅಡಿಗಳ ರಸ್ತೆ ಮಾಡಲು ಡಿಪಿಆರ್‌ನಲ್ಲಿ ಉಲ್ಲೇಖಿಸಲಾಗಿತ್ತು. ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ, ರಸ್ತೆ ಅಕ್ಕಪಕ್ಕದ ಭೂಮಿಯನ್ನು ಕಾನೂನುಬದ್ಧವಾಗಿ ಸ್ವಾಧಿನ ಮಾಡಿಕೊಳ್ಳದ ಕಾರಣ ಇಷ್ಟೊಂದು ವಿಳಂಬವಾಯಿತು ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ನಗರಸಭೆಯ ವಿಶೇಷ ಅನುದಾನ ೩.೫೦ ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಕೊಪ್ಪಳ ಜಿಲ್ಲೆಯ ಗಂಗಾವತಿಯ ರವೀಂದ್ರನಾಥ್ ಕನ್ಸ್‌ಟ್ರಕ್ಷನ್ ಅಂಡ್ ಪ್ರೈವೇಟ್ ಲಿಮಿಟೆಡ್ ಈ ರಸ್ತೆ ಕಾಮಗಾರಿಯನ್ನು ಗುತ್ತಿಗೆಗೆ ಪಡೆದಿದೆ. ಒಂದು ವರ್ಷದ ಹಿಂದೆ ಕಾಮಗಾರಿ ಆರಂಭವಾಗಿತ್ತು.

ಚರಂಡಿ, ಲೈಟ್, ಫುಟ್‌ಪಾತ್ ಇಲ್ಲ: 

ಡಿವೈಎಸ್ಪಿ ಕಚೇರಿಯಿಂದ ನ್ಯಾಯಾಲಯಗಳ ಸಂಕೀರ್ಣದ ತನಕ ರಸ್ತೆ ಕಾಂಕ್ರಿಟೀಕರಣಗೊಂಡಿದೆ. ಚರಂಡಿ ವ್ಯವಸ್ಥೆಯೂ (ಎಡಬದಿ) ಆಗಿದೆ. ಇಲ್ಲಿಂದ ಮುಂದಕ್ಕೆ ಅಂಬೇಡ್ಕರ್ ಭವನದತನಕ ಚರಂಡಿ, ಪಾದಚಾರಿ ರಸ್ತೆ (ಫುಟ್‌ಪಾತ್) ಆಗಿಲ್ಲ. ಬೀದಿ ದೀಪ ಅಳವಡಿಸಿಲ್ಲ. ಇದೇ ರಸ್ತೆಯ (ಬಲ ಬದಿ) ಜಿಲ್ಲಾ ಕಾರಾಗೃಹದಿಂದ ನಿಜಗುಣ ರೆಸಾರ್ಟ್‌ತನಕ ಚರಂಡಿ ಆಗಿಲ್ಲ. ಬೀದಿ ದೀಪ ಅಳವಡಿಸಿಲ್ಲ. ಪಾದಚಾರಿ ರಸ್ತೆಯೂ ಆಗಿಲ್ಲ.

” ರಸ್ತೆಯ ಬದಿಯಲ್ಲಿ ಅಗತ್ಯವಿರುವ ಭೂಮಿಯನ್ನು ಪಡೆದು ದೊಡ್ಡದಾಗಿ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿತ್ತು. ಕಾರಣಾಂತರಗಳಿಂದ ಇರುವ ರಸ್ತೆಯನ್ನು ಕಾಂಕ್ರಿಟೀಕರಣ ಮಾಡುತ್ತಿದ್ದೇವೆ.”

-ಪ್ರಕಾಶ್, ಎಇಇ, ನಗರಸಭೆ 

 

 

Tags:
error: Content is protected !!