Mysore
16
clear sky

Social Media

ಶುಕ್ರವಾರ, 30 ಜನವರಿ 2026
Light
Dark

ಭ್ರೂಣ ಹತ್ಯೆ ಕಳಂಕ; ಲಿಂಗಾನುಪಾತ ಆಶಾದಾಯಕ

ಚಿರಂಜೀವಿ ಹುಲ್ಲಹಳ್ಳಿ

ಹೆಣ್ಣು ಭ್ರೂಣ ಹತ್ಯೆ ನಿರ್ಮೂಲನೆಗೆ ಆರೋಗ್ಯ ಇಲಾಖೆ ದಿಟ್ಟ ಹೆಜ್ಜೆ

ಭ್ರೂಣ ಹತ್ಯೆ ಮಾಡಿದರೆ ೫ ವರ್ಷ ಜೈಲು ಶಿಕ್ಷೆ, ೧ ಲಕ್ಷ ರೂ. ದಂಡ 

ಅನಧಿಕೃತ ಸ್ಕ್ಯಾನಿಂಗ್ ಸೆಂಟರ್, ನಕಲಿ ವೈದ್ಯರ ಮೇಲೆ ಹದ್ದಿನ ಕಣ್ಣು

ಮೈಸೂರು: ಕಳೆದ ಎರಡ್ಮೂರು ವರ್ಷಗಳಿಂದ ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆಯ ಸದ್ದು ಮಾಡಿ ರಾಜ್ಯವನ್ನೇ ಬೆಚ್ಚಿ ಬೀಳಿಸುತ್ತಿರುವ ನಡುವೆಯೂ ಮೈಸೂರು-ಮಂಡ್ಯ ಜಿಲ್ಲೆಗಳಲ್ಲಿ ಲಿಂಗಾನುಪಾತದ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಿರುವ ಆಶಾದಾಯಕ ಬೆಳವಣಿಗೆ ನಡೆದಿದೆ.

ಸಾಮಾಜಿಕ ಪಿಡುಗಾಗಿರುವ ಹೆಣ್ಣು ಭ್ರೂಣ ಹತ್ಯೆ ನಿರ್ಮೂಲನೆಗೆ ಆರೋಗ್ಯ ಇಲಾಖೆ ದಿಟ್ಟ ಹೆಜ್ಜೆಗಳನ್ನಿಟ್ಟ ಪರಿಣಾಮ ಮೈಸೂರಿನಲ್ಲಿ ಕಳೆದ ೬  ವರ್ಷಗಳಲ್ಲಿ ಲಿಂಗಾನುಪಾತ ಏರಿಕೆ ಕಂಡರೆ ಹಲವು ಏರುಪೇರುಗಳ ನಡುವೆಯೂ ಮಂಡ್ಯದಲ್ಲಿ ಏರಿಕೆ ಕಂಡು ನಿಟ್ಟಿಸಿರುವ ಬಿಡುವಂತೆ ಮಾಡಿದೆ. ೨೦೧೯ರಲ್ಲಿ ಸಾವಿರ ಗಂಡು ಮಕ್ಕಳಿಗೆ ೯೨೩ ಇದ್ದ ಹೆಣ್ಣು ಮಕ್ಕಳ ಸಂಖ್ಯೆ ೨೦೨೪ರ ವೇಳೆ ೯೪೦ರಷ್ಟು ಏರಿಕೆಯಾಗಿರುವುದು ಸಂತಸದ ವಿಚಾರವಾಗಿದೆ.

ಇತ್ತೀಚೆಗೆ ಮಂಡ್ಯದ ನಾಗಮಂಗಲದಲ್ಲಿ ಸದ್ದು ಮಾಡಿದ ಭ್ರೂಣ ಹತ್ಯೆ ಜಾಡು ಮೈಸೂರು ಜಿಲ್ಲೆಗೂವ್ಯಾಪಿಸಿತ್ತು. ಇಲ್ಲಿನ ಕೆಲವು ಆಸ್ಪತ್ರೆಗಳು, ಕಾನೂನು ಬಾಹಿರವಾಗಿ ನಡೆಯುತ್ತಿದ್ದ ಸ್ಕ್ಯಾನಿಂಗ್ ಸೆಂಟರ್ ಹಾಗೂ ನಕಲಿ ವೈದ್ಯರನ್ನು ವಿರುದ್ಧ ಪ್ರಕರಣಗಳು ಕುಕೃತ್ಯ ನಡೆಸುವ ಕಿಡಿಗೇಡಿಗಳಿಗೆ ಎಚ್ಚರಿಕೆಯ ಗಂಟೆಯಾಗಿ ಲಿಂಗಾನುಪಾತದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಳವಾಗಲು ಸಹಕರಿಯಾಗಿವೆ.

೨೦೨೧ರಲ್ಲಿ ಬನ್ನೂರು ರಸ್ತೆಯಲ್ಲಿರುವ ಖಾಸಗಿ ಸ್ಕ್ಯಾನಿಂಗ್ ಸೆಂಟರ್ ಮೇಲೆ ದಾಳಿ ನಡೆಸಿದ ಪ್ರಕರಣ ಮತ್ತು ಕಳೆದ ವರ್ಷ ಭ್ರೂಣ ಹತ್ಯೆ ಕೃತ್ಯ ನಡೆಸುತ್ತಿದ್ದ ನಗರದ ಮಾತಾಂಗ ಆಸ್ಪತ್ರೆಯಲ್ಲಿ ಬೀಗ ಜಡಿದ ಪ್ರಕರಣಗಳು ಸದ್ದು ಮಾಡಿದ್ದವು. ಇದರ ಜೊತೆಗೆ ಕೆಪಿಎಂಇ ಕಾಯ್ದೆಯಡಿ ನಕಲಿ ವೈದ್ಯರು ಪತ್ತೆ ಹಚ್ಚಿ ಜೈಲಿಗಟ್ಟಿರುವ ಪ್ರಕರಣಗಳಿಂದ ಎರಡೂ ಜಿಲ್ಲೆಗಳಲ್ಲಿಯೂ ಭ್ರೂಣ ಹತ್ಯೆಗೆ ಕಡಿವಾಣ ಬಿದ್ದಿದೆ.

ಹೆಣ್ಣು ಭ್ರೂಣ ಹತ್ಯೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ಮುಂದಾಗಿರುವ ಆರೋಗ್ಯ ಇಲಾಖೆ ಭ್ರೂಣ ಹತ್ಯೆ ಸುಳಿವು ನೀಡಿದವರಿಗೆ ನಗದು ಬಹುಮಾನ. ಸಾರ್ವಜನಿಕ ಸಹಾಯಕ್ಕಾಗಿ ಆರೋಗ್ಯ ಇಲಾಖೆ ಸಹಾಯವಾಣಿ ತೆರೆದಿದ್ದು, ಹೆಣ್ಣು ಭ್ರೂಣ ಹತ್ಯೆ ತಡೆಗೆ ರಾಜ್ಯ ಸರ್ಕಾರ ಕಾನೂನು ತಿದ್ದುಪಡಿ, ರಾಜ್ಯಮಟ್ಟದ ಕಾರ್ಯಪಡೆ ರಚನೆ ಹಲವು ಕ್ರಮಗಳನ್ನು ಕೈಗೆತ್ತಿಕೊಂಡು ಹೆಣ್ಣು ಭ್ರೂಣ ಹತ್ಯೆಯ ನಿರ್ಮೂಲನೆಗೆ ಟೊಂಕ ಕಟ್ಟಿ ನಿಂತಿದೆ.

೨೨೬ ಸ್ಕ್ಯಾನಿಂಗ್ ಸೆಂಟರ್‌ಗಳ ಪರಿಶೀಲನೆ: ನಂಜನಗೂಡು, ಪಿರಿಯಾಪಟ್ಟಣ, ಹುಣಸೂರು, ಎಚ್.ಡಿ.ಕೋಟೆ, ಕೆ.ಆರ್.ನಗರ, ತಿ.ನರಸೀಪುರ ಸೇರಿದಂತೆ ಜಿಲ್ಲೆಯ ಒಟ್ಟು ೨೨೦ ಸ್ಕ್ಯಾನಿಂಗ್ ಸೆಂಟರ್‌ಗಳಿದ್ದು, ಇವುಗಳ ಮೇಲೆ ಸದಾ ಎಚ್ಚರಿಕೆ ವಹಿಸಿರುವ ಆರೋಗ್ಯ ಇಲಾಖೆಯ ತಂಡವೂ ಮುನ್ಸೂಚನೆ ನೀಡದೆ ಸೆಂಟರ್‌ಗಳನ್ನು ತಪಾಸಣೆ ನಡೆಸಿ ಕಾನೂನು ಬಾಹಿರ ಚಟುವಟಿಕೆ ಮೇಲೆ ಕಣ್ಣಿಟ್ಟಿರುವ ಕ್ರಮವೂ ಭ್ರೂಣ ಹತ್ಯೆಗೆ ನಿಯಂತ್ರಣ ಸಾಧ್ಯವಾಗಿದೆ.

ಗರ್ಭಿಣಿಯರ ಮೇಲೆ ನಿಗಾ: ಹೆಣ್ಣು ಭ್ರೂಣ ಹತ್ಯೆ ಮೊದಲು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಕಂಡು ಬರುತ್ತಿತ್ತು. ಇದೀಗ ಇದು ನಗರ ಪ್ರದೇಶದಲ್ಲಿಯೂ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಗ್ರಾಮೀಣ ಮತ್ತು ಪಟ್ಟಣದಲ್ಲಿ ವಾಸವಿರುವ ಗರ್ಭಿಣಿಯರು ಅದರಲ್ಲಿಯೂ ಮೊದಲ ಹೆಣ್ಣು ಮಗು ಆದ ಗರ್ಭಿಣಿಯರು ಮತ್ತು ಎರಡನೇ ಮಗು ಪಡೆಯಲು ಗರ್ಭ ಧರಿಸಿರುವಂತವರ ಮೇಲೆ ನಿಗಾ ವಹಿಸಲಾಗುತ್ತಿದೆ. ಇದರಿಂದ ಹೆಣ್ಣು ಭ್ರೂಣ ಹತ್ಯೆಗಳಿಗೆ ಕಡಿವಾಣ ಬೀಳುತ್ತಿದೆ. ಆದರೆ, ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಆರೋಗ್ಯ ಇಲಾಖೆ ಶ್ರಮಿಸುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಪಿ.ಕುಮಾರಸ್ವಾಮಿ ಹೇಳಿದರು.

ಎಷ್ಟು ವರ್ಷ ಶಿಕ್ಷೆ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ನಿರ್ಮೂಲನೆ ಪಿಸಿ ಮತ್ತು ಪಿಎನ್‌ಡಿಟಿ ಕಾಯ್ದೆಗೆ ತಿದ್ದುಪಡಿ ತಂದು ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಳ ಮಾಡಿದೆ. ಈ ಮೊದಲು ಶಿಕ್ಷೆ ಪ್ರಮಾಣ ೩ ವರ್ಷ ಜೈಲು, ೧೦ ಸಾವಿರ ರೂ. ದಂಡ ಇತ್ತು. ಇದರೊಂದಿಗೆ ೧ ಲಕ್ಷ ರೂ. ದಂಡ, ೫ ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ.

” ರೆಡಿಯೋಲಾಜಿಸ್ಟ್, ಡೈನಕಾಲೋಜಿಸ್ಟ್, ಎನ್‌ಜಿಓ ಒಳಗೊಂಡ ಡಿಇಐಸಿ ತಂಡ ರಚನೆ ಮಾಡಿ ಗರ್ಭಿಣಿಯರ ಮೇಲೆ ನಿಗಾ ವಹಿಸಲಾಗಿದೆ. ಕಾನೂನು ಬಾಹಿರ ಸ್ಕ್ಯಾನಿಂಗ್ ಸೆಂಟರ್ ಬಂದ್ ಮಾಡಿಸಿ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ನಡೆಸಲಾಗುತ್ತಿದೆ. ಇದರ ಜೊತೆಗೆ ಕೆಪಿಎಂಇಡಿ ತಪಾಸಣೆ ನಡೆಸಲಾಗುತ್ತಿದೆ. ಎರಡು ವರ್ಷಗಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಗಣನೀಯ ಏರಿಕೆ ಕಂಡಿದೆ.”

ಡಾ.ಸಿ.ಪಿ.ಕುಮಾರಸ್ವಾಮಿ, ಜಿಲ್ಲಾ ಆರೋಗ್ಯಾಧಿಕಾರಿ

ಡೆಕಾಯ್ ಕಾರ್ಯಾಚರಣೆ ಯಶಸ್ಸು:  ಎರಡು ಜಿಲ್ಲೆಗಳಲ್ಲಿ ನಡೆಯುವ ಭ್ರೂಣ ಪತ್ತೆಯ ಮಾಹಿತಿ ಸಂಗ್ರಹಿಸುವ ಇಲಾಖೆ. ಆರೋಪಿಗಳನ್ನು ಬಯಲಿಗೆಳೆಯಲು ಆರೋಗ್ಯ ಇಲಾಖೆ ನಡೆಸುವ ತಂತ್ರ ‘ಡೆಕಾಯ್’ ಕಾರ್ಯಾಚರಣೆ. ಇದು ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿದೆ. ಡೆಕಾಯ್ ಎಂದರೆ ಇಲಾಖೆಯಿಂದಲೇ ಮಹಿಳೆಯೊಬ್ಬರನ್ನು ನೇಮಿಸಿ, ಅವರಿಗೆ ಭ್ರೂಣ ಪತ್ತೆ ಮಾಡುವಂತೆ ಆರೋಪಿಗಳಿಗೆ ಪುಸಲಾಯಿಸಿ ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ದಾಳಿ ನಡೆಸಿ ಕಿಡಿಗೇಡಿಗಳನ್ನು ಬಂದಿಸುವುದು. ಪೊಲೀಸರು ಹಾಗೂ ಸಾರ್ವಜನಿಕರ ಸಹಾಯದಿಂದ ದಂಧೆಗೆ ಕಡಿವಾಣ ಹಾಕುವಲ್ಲಿ ಆರೋಗ್ಯ ಇಲಾಖೆ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ‘ಡೆಕಾಯ್’ ಸೇರಿದಂತೆ ಕೆಲ ತಂತ್ರ ಅನುಸರಿಸಿದ ಪರಿಣಾಮ ಎಗ್ಗಿಲ್ಲದೆ ನಡೆಯುತ್ತಿದ್ದ ಭ್ರೂಣ ಪತ್ತೆ ಹಾಗೂ ಹತ್ಯೆಯನ್ನು ತಡೆಯುವಲ್ಲಿ ಸಫಲವಾಗಿದೆ.

Tags:
error: Content is protected !!