Mysore
27
few clouds

Social Media

ಸೋಮವಾರ, 29 ಡಿಸೆಂಬರ್ 2025
Light
Dark

ಕೋಟೆ: ೩ ದಿನಗಳಿಂದ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತ; ತೋಟಗಾರಿಕೆ ಬೆಳೆಗಳಿಗೆ ಅನುಕೂಲ

ಧಾರಾಕಾರ ಮಳೆಯಿಂದ ಶುಂಠಿ, ತೊಗರಿ ಬೆಳೆಗೆ ಹಾನಿ

ಮಂಜು ಕೋಟೆ

ಎಚ್.ಡಿ.ಕೋಟೆ: ಫೆಂಗಲ್ ಚಂಡಮಾರುತದ ಪರಿಣಾಮ ೨-೩ ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ತಾಲ್ಲೂಕಿನಲ್ಲಿ ರೈತರು ಬೆಳೆದಿದ್ದ ಶುಂಠಿ ತೊಗರಿ, ಭತ್ತದ ಬೆಳೆಗೆ ಹಾನಿಯಾಗಿದೆ.

ಇನ್ನೊಂದು ಕಡೆ ತೋಟಗಾರಿಕೆ ಬೆಳೆಗಳು ಮತ್ತು ಹುರುಳಿ, ರಾಗಿ ಇನ್ನಿತರ ಬೆಳೆಗಳಿಗೆ ಅನುಕೂಲವಾಗಿದೆ.

ಭಾನುವಾರ ರಾತ್ರಿಯಿಂದ ಶುರುವಾದ ಜಿಟಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿತ್ತಲ್ಲದೆ, ರೈತರು ಬೆಳೆದಿದ್ದ ಶುಂಠಿ, ತೊಗರಿ, ಭತ್ತದ ಬೆಳೆಗಳಿಗೆ ಹಾನಿಯಾಗಿದೆ. ಕಳೆದ ವರ್ಷ ಶುಂಠಿ ಬೆಳೆಗೆ ಬಂಪರ್ ಬೆಲೆ ಸಿಕ್ಕಿದ್ದರಿಂದ ಈ ವರ್ಷ ತಾಲ್ಲೂಕಿನ ಅನೇಕ ರೈತರು ಶುಂಠಿ ಬೆಳೆಯನ್ನು ಸಾಲ ಮಾಡಿ ಬೆಳೆದಿದ್ದರು. ಈ ಬಾರಿ ಶುಂಠಿ ಬೆಳೆ ಫಲವತ್ತಾಗಿ ಬಂದಿದ್ದರೂ ದಾಖಲೆ ಮಟ್ಟದಲ್ಲಿ ಶುಂಠಿ ದರ ಇಳಿಮುಖಗೊಂಡಿದೆ. ಇದರಿಂದ ಮುಂಬರುವ ದಿನಗಳಲ್ಲಿ ಬೆಲೆ ಏರಿಕೆ ಆಗುವ ನಿರೀಕ್ಷೆಯಲ್ಲಿ ಬೆಳೆಯನ್ನು ಹಾಗೆಯೇ ಬಿಟ್ಟುಕೊಂಡು ಕಾಯುತ್ತಿದ್ದರು. ಈ ನಡುವೆ ಫೆಂಗಲ್ ಸೈಕ್ಲೋನ್ ಮಳೆ ಸುರಿದಿದ್ದರಿಂದ ಬೆಳೆಗೆ ರೋಗ ಕಾಣಿಸಿಕೊಂಡು ಕೊಳೆಯುವ ಸಾಧ್ಯತೆ ಹೆಚ್ಚಾಗಿದೆ. ಅಲ್ಲದೆ, ಅವರೆ, ತೊಗರಿ ಬೆಳೆಗಳಿಗೂ ತೊಂದರೆಯಾಗಿದೆ.

ಮಳೆ ಎಡೆಬಿಡದೆ ಸುರಿಯುತ್ತಿದ್ದುದರಿಂದ ಜನರು ಮನೆಯಿಂದ ಹೊರ ಬಾರದಂತಾಗಿತ್ತು. ಪಟ್ಟಣದ ಹೋಟೆಲ್‌ಗಳು, ಅಂಗಡಿಗಳಲ್ಲಿ ಗ್ರಾಹಕರು ಹೆಚ್ಚಾಗಿ ಕಂಡುಬರಲಿಲ್ಲ. ರಸ್ತೆಯಲ್ಲಿ ಜನಸಂಚಾರ ವಿರಳವಾಗಿತ್ತು. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಒಟ್ಟಾರೆ ತಾಲ್ಲೂಕಿನಲ್ಲಿ ಜನಜೀವನ ಅಸ್ತವ್ಯಸ್ತವಾಗಿತ್ತು.

ಸುತ್ತೂರು ಸುತ್ತಮುತ್ತ ಸತತ ಮಳೆಗೆ ನೆಲ ಕಚ್ಚಿದ ಭತ್ತದ ಬೆಳೆ

ಸುತ್ತೂರು: ಧಾರಾಕಾರ ಮಳೆಗೆ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದು ಕಟಾವಿಗೆ ಬಂದಿದ್ದ ಭತ್ತದ ಬೆಳೆ ನೆಲ ಕಚ್ಚಿದೆ. ಸುತ್ತೂರು, ಹೊಸಕೋಟೆ, ಬಿಳುಗಲಿ, ಜೀಮಾರಳ್ಳಿ, ಮೂಡಳ್ಳಿ, ಆಲತ್ತೂರು, ಸಾಲುಂಡಿ, ಹರಿಹರಪುರ, ತಾಯೂರು ಮುಂತಾದ ಗ್ರಾಮಗಳಲ್ಲಿ ರೈತರು ಉತ್ತಮವಾಗಿ ಭತ್ತ ಬೆಳೆದಿದ್ದು, ಮೂರು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಕಟಾವಿಗೆ ಬಂದಿದ್ದ ಬೆಳೆಗಳು ನೀರಿನಲ್ಲಿ ಸಿಲುಕಿ ಸಂಪೂರ್ಣ ನೆಲಕಚ್ಚಿವೆ. ಕಳೆದ ವರ್ಷ ರೈತರು ಮಳೆ, ಬೆಳೆ ಇಲ್ಲದೆ ನಷ್ಟ ಅನುಭವಿಸಿದ್ದರು. ಈ ಬಾರಿ ಉತ್ತಮವಾಗಿ ಬಂದಿದ್ದ ಬೆಳೆ ಮಳೆಯಿಂದ ಹಾನಿಗೀಡಾಗಿರುವುದರಿಂದ ರೈತರು ಕಂಗಾಲಾಗಿದ್ದಾರೆ. ನಷ್ಟ ಹೊಂದಿದ ರೈತರಿಗೆ ಬೆಳೆ ಪರಿಹಾರ ಕೊಡಿಸಬೇಕೆಂದು ಈ ಭಾಗದ ರೈತ ಮುಖಂಡರಾದ ಸಾಲುಂಡಿ ಜಯಪ್ಪ, ಸುತ್ತೂರು ಲಿಂಗರಾಜು, ಲಕ್ಷ್ಮಣನಾಯಕ ಒತ್ತಾಯ ಮಾಡಿದ್ದಾರೆ.

ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಕಳೆದ ೨ ದಿನಗಳಿಂದ ೫೫ ಮಿಲಿ ಮೀಟರ್ ಮಳೆಯಾಗಿದೆ. ಶುಂಠಿ, ಭತ್ತ, ತೊಗರಿ ಬೆಳೆಗಳಿಗೆ ಮಾತ್ರ ಸ್ವಲ್ಪ ಹಾನಿಯಾಗಿದ್ದು, ಇನ್ನುಳಿದ ಎಲ್ಲಾ ಬೆಳೆಗಳಿಗೂ ಈ ಮಳೆಯಿಂದ ಅನುಕೂಲವಾಗಿದೆ.

-ಜಯರಾಮಯ್ಯ, ತಾಲ್ಲೂಕು ಕೃಷಿ ನಿರ್ದೇಶಕರು.

Tags:
error: Content is protected !!