Mysore
22
haze

Social Media

ಸೋಮವಾರ, 29 ಡಿಸೆಂಬರ್ 2025
Light
Dark

ರಾಗಿ ಖರೀದಿಗೆ ಎದುರು ನೋಡುತ್ತಿರುವ ರೈತರು

ಹುಣಸೂರು ತಾಲ್ಲೂಕಿನಲ್ಲಿ ೮೬,೮೧೨ ಕ್ವಿಂಟಾಲ್‌ಗೂ ಹೆಚ್ಚು ರಾಗಿ ಮಾರಾಟಕ್ಕೆ ನೋಂದಣಿ

ದಾ.ರಾ.ಮಹೇಶ್

ವೀರನಹೊಸಹಳ್ಳಿ: ರಾಗಿ ಮಾರಾಟಕ್ಕೆ ನೋಂದಣಿ ಮಾಡಿಕೊಂಡಿರುವ ಹುಣಸೂರು ತಾಲ್ಲೂಕಿನ ರೈತರು ಖರೀದಿ ಕೇಂದ್ರದ ಕಾರ್ಯಾರಂಭಕ್ಕಾಗಿ ಎದುರು ನೋಡುತ್ತಿದ್ದಾರೆ.

ತಾಲ್ಲೂಕಿನಲ್ಲಿ ಒಟ್ಟು ೩,೮೯೬ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿದೆ. ಒಂದು ತಿಂಗಳಿಂದ ರಾಗಿ ಮಾರಾಟಕ್ಕಾಗಿ ನೋಂದಣಿ ಮಾಡಲಾಗುತ್ತಿದೆ. ಈಗಾಗಲೇ ೮೬,೮೧೨ ಕ್ವಿಂಟಾಲ್‌ಗೂ ಹೆಚ್ಚು ರಾಗಿ ಮಾರಾಟಕ್ಕೆ ನೋಂದಣಿಯನ್ನು ರೈತರು ಮಾಡಿದ್ದಾರೆ.

ನೋಂದಣಿ ಕಾರ್ಯ ಮುಂದುವರಿದಿದೆ. ಪ್ರತಿ ವರ್ಷ ಜನವರಿ ತಿಂಗಳ ಆರಂಭದಲ್ಲಿಯೇ ಖರೀದಿ ಕಾರ್ಯಕ್ಕೆ ಚಾಲನೆ ದೊರೆಯುತ್ತಿತ್ತು. ಆದರೆ ಈವರೆಗೂ ಖರೀದಿ ಪ್ರಕ್ರಿಯೆ ಶುರುವಾಗದ ಕಾರಣ ರೈತರು ಸಮಸ್ಯೆಯಲ್ಲಿ ಸಿಲುಕಿದ್ದಾರೆ.

ಪ್ರಮುಖ ಬೆಳೆಯಾಗಿರುವ ರಾಗಿಗೆ ಮಾರುಕಟ್ಟೆಯಲ್ಲಿ ಉತ್ತಮ ದರವಿದೆ. ಬೇಡಿಕೆ ಕೂಡ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗಿದೆ. ಇದರ ಜತೆಗೆ ಖರೀದಿ ಕೇಂದ್ರದಲ್ಲೂ ಕೂಡ ಖರೀದಿ ದರ ಹೆಚ್ಚಳವಾಗಿರುವುದರಿಂದ ರೈತರು ನೋಂದಣಿ ಕಾರ್ಯದಲ್ಲಿ ತೊಡಗುತ್ತಿದ್ದಾರೆ.

ಆದರೆ ಖರೀದಿ ಈವರೆಗೂ ಕೂಡ ಆರಂಭವಾಗಿಲ್ಲ. ಇಲಾಖೆ ಮಾಹಿತಿ ಅನುಸಾರ ರಾಗಿ ಸಂಗ್ರಹಣೆಯ ಚೀಲದ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಖರೀದಿ ತಡವಾಗುತ್ತಿದೆ ಎಂದು ತಿಳಿದು ಬಂದಿದ್ದು, ಇನ್ನೆಷ್ಟು ದಿನ ಖರೀದಿಗೆ ಕಾಯಬೇಕೆಂಬ ಪ್ರಶ್ನೆ ರೈತರಲ್ಲಿ ಮೂಡಿದೆ.

ಕಾಡುಪ್ರಾಣಿಗಳ ಹಾವಳಿಯಿಂದ ರೈತರಿಗೆ ತಮ್ಮ ಫಸಲು ಉಳಿಸಿಕೊಳ್ಳುವುದು ಸವಾಲಾಗಿದೆ. ಹಾಗಾಗಿ ಆದಷ್ಟು ಬೇಗ ಖರೀದಿಯನ್ನು ಆರಂಭಿಸಿ ರೈತರಿಗೂ ಅನುಕೂಲ ಮಾಡಿಕೊಡ ಬೇಕು ಎಂದು ರೈತರು ಮನವಿ ಮಾಡಿದ್ದಾರೆ.

ರಾಗಿ ಕಟಾವು ಮುಗಿಸಿ ರಾಗಿ ಫಸಲನ್ನು ಸಂಗ್ರಹಿಸಲಾಗಿದೆ. ಈಗಾಗಲೇ ರಾಗಿ ಖರೀದಿಗೆ ನೋಂದಾಯಿಸಲಾಗಿದ್ದು, ಆದಷ್ಟು ಬೇಗ ಖರೀದಿ ಆರಂಭವಾದರೆ ಅನುಕೂಲವಾಗುತ್ತದೆ. ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ತಿಳಿಸಿದ್ದಾರೆ.

” ರಾಗಿ ಖರೀದಿ ಕೇಂದ್ರರಲ್ಲಿ ರೈತರಿಗೆ ಅಗತ್ಯ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಅನುಕೂಲ ಮಾಡಿಕೊಡಲು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸುತ್ತೇನೆ. ರೈತರಿಗೆ ಕುಡಿಯುವ ನೀರು, ಬೀದಿ ದೀಪ, ಶೌಚಾಲಯ ಸೇರಿದಂತೆ ನಾನಾ ಮೂಲಸೌಕರ್ಯ ಒದಗಿಸಬೇಕಿದೆ. ಜತೆಗೆ ರಾಗಿ ಮಾರಾಟಕ್ಕಾಗಿ ರೈತರು ಗಂಟೆಗಟ್ಟಲೇ ಕಾಯುವುದನ್ನು ತಪ್ಪಿಸಲು ಕ್ರಮವಹಿಸುವಂತೆ ಸೂಚಿಸುತ್ತೇನೆ”

-ಜಿ.ಡಿ.ಹರೀಶ್ ಗೌಡ, ಶಾಸಕ

” ರಾಗಿ ಖರೀದಿ ನೋಂದಣಿ ಕಾರ್ಯ ಪ್ರಗತಿಯಲ್ಲಿದೆ. ಖರೀದಿಸಲಾದ ರಾಗಿಯನ್ನು ಸಂಗ್ರಹಿಸುವ ಚೀಲಗಳಿಗೆ ಟೆಂಡರ್ ಪಕ್ರಿಯೆ ಪ್ರಗತಿಯಲ್ಲಿದ್ದು, ಅದು ಮುಗಿದ ನಂತರ ಖರೀದಿ ಆರಂಭವಾಗಲಿದೆ. ನಮ್ಮಲ್ಲಿ ಈಗ ೧೦ ಸಾವಿರ ಚೀಲಗಳು ಲಭ್ಯವಿದ್ದು, ಈ ಚೀಲಗಳಿಗೆ ಆಗುವಷ್ಟು ರಾಗಿ ಖರೀದಿಯನ್ನು ಬುಧವಾರ  ಆರಂಭಿಸುತ್ತೇವೆ.”

-ಸುರೇಶಬಾಬು, ರಾಗಿ ಖರೀದಿ ಅಧಿಕಾರಿ

Tags:
error: Content is protected !!