Mysore
16
broken clouds

Social Media

ಭಾನುವಾರ, 28 ಡಿಸೆಂಬರ್ 2025
Light
Dark

ಮುದ್ದಿನ ಹಸುವಿಗೆ ಸೀಮಂತ ನೆರವೇರಿಸಿದ ರೈತ ಮಹಿಳೆ!

ಭೇರ್ಯ ಮಹೇಶ್

ಶಾಸೋಕ್ತವಾಗಿ ನಡೆದ ಕಾರ್ಯಕ್ರಮ; ಮುತ್ತೈದೆಯರ ಮೂಲಕ ಹಸುವಿಗೆ ಸೀರೆ ತೊಡಿಸಿ, ಹಣ್ಣು, ಸಿಹಿ ನೀಡಿP

ಕೆ.ಆರ್.ನಗರ : ಮನೆಯ ಮಗಳು ಚೊಚ್ಚಲ ಗರ್ಭಿಣಿಯಾದರೆ ಮನೆಯ ಮಂದಿಯಲ್ಲಿ ಎಲ್ಲಿಲ್ಲದ ಸಂಭ್ರಮ, ಸಡಗರ ಕಂಡುಬರುತ್ತದೆ. ಅದೇ ರೀತಿಯಲ್ಲಿ ಇಲ್ಲಿ ರೈತ ಮಹಿಳೆಯೊಬ್ಬರು ತಮ್ಮ ಚೊಚ್ಚಲ, ತುಂಬಿದ ಗರ್ಭಿಣಿಯ ಹಸುವಿನ ಸೀಮಂತವನ್ನು ಶಾಸ್ತ್ರೋಕ್ತವಾಗಿ ಮಾಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಪಟ್ಟಣದ ಹೊರವಲಯದ ಕೆಂಪನಕೊಪ್ಪಲು ಗ್ರಾಮದ ರೈತ ಮಹಿಳೆ ರೇಣುಕಾ ಕೃಷ್ಣೇಗೌಡ ಅವರು ತಮ್ಮ ಮನೆಯಲ್ಲಿಯೇ ಹುಟ್ಟಿದ ಕರುವನ್ನು ಬಹಳ ಪ್ರೀತಿ ಪಟ್ಟು ಸಾಕಿದ್ದರು. ಅದು ದೊಡ್ಡದಾಗಿ ಬೆಳೆದು ಚೊಚ್ಚಲ ಗರ್ಭ ಧರಿಸಿದ್ದು ಗ್ರಾಮದ ಮುತ್ತೈದೆಯರನ್ನು ಕರೆಸಿ ಪ್ರೀತಿಯ ಹಸುವಿನ ಸೀಮಂತ ಶಾಸ್ತ್ರ ಮಾಡಿ ಸಂಭ್ರಮ ಆಚರಣೆ ಮಾಡಿರುವುದು ಈಗ ಮನೆ ಮಾತಾಗಿದೆ.

ರೈತ ಮಹಿಳೆ ರೇಣುಕಾ ಕೃಷ್ಣೇಗೌಡ ಅವರು ತಮ್ಮ ಪ್ರೀತಿ ಪಾತ್ರವಾದ ಹಸುವಿಗೆ ಒಂಬತ್ತು ತಿಂಗಳು ತುಂಬಿದ್ದು ಸೀಮಂತ ಮಾಡಲು ಅಕ್ಕಪಕ್ಕದ ಮನೆಯವರಿಗೆ ಗ್ರಾಮಸ್ಥರಿಗೆ ಸುದ್ದಿ ತಿಳಿಸಿ ಸೀಮಂತ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರು.

ಮನೆಯ ಮುಂದೆ ಶಾಮಿಯಾನ ಹಾಕಿಸಿ ಎಲ್ಲರೂ ಮನೆಯ ಮಗಳು ಗರ್ಭಿಣಿಯಾದಾಗ ನಡೆಸುವ ಸೀಮಂತ ಕಾರ್ಯದಂತೆಯೇ ಹಸುವಿಗೆ ರೇಷ್ಮೆ ಸೀರೆ, ಹಸಿರುಬಳೆ ತೊಡಿಸಿ, ಕೊರಳಿಗೆ ಹೂ ಮಾಲೆ ಹಾಕಿ, ಕಾಲಿಗೆ ಗೆಜ್ಜೆ ಕಟ್ಟಿ ಶೃಂಗಾರ ಮಾಡಿದ ಬಳಿಕ ಐದು ಬಗೆಯ ಸಿಹಿ ತಿಂಡಿಗಳು, ಐದು ಬಗೆಯ ಹಣ್ಣುಗಳನ್ನು ನೀಡಿ, ಆರತಿ ಬೆಳಗಲಾಯಿತು.

ಊರಿನ ಮುತ್ತೈದೆಯರಾದ ಪವಿತ್ರ, ಮಂಜುಳ, ಮಮತ, ಶಾಲಿನಿ, ರಶ್ಮಿ ಮಹೇಶ್ ಅವರುಗಳನ್ನು ಕರೆಸಿ ಶಾಸ್ತ್ರೋಕ್ತ ವಾಗಿ ಸೀಮಂತ ಮಾಡಿದರು. ಹಸುವಿಗೆ ತಮ್ಮ ಮನೆಯ ಮಗಳಂತೆ ಸೀಮಂತ ಕಾರ್ಯ ಮಾಡಿ ಗ್ರಾಮಸ್ಥರಿಗೆ ಸಿಹಿ ಊಟ ಹಾಕಿಸಿದರು. ಈ ಕಾರ್ಯಕ್ರಮದಲ್ಲಿ ಗ್ರಾಮದ ಅನೇಕ ಮಹಿಳೆಯರು, ಗ್ರಾಮದ ಮಂದಿ ಭಾಗವಹಿಸಿ ಗರ್ಭಿಣಿ ಹಸುವಿಗೆ ಹಾರೈಸಿದ್ದಾರೆ.

” ಹಸುವಿಗೆ ಕಾಮಧೇನು ಅನ್ನುವ ಮಾತು ಇದೆ. ಇತ್ತೀಚಿನ ದಿನಗಳಲ್ಲಿ ಹಾಲು ಹಿಂಡಿ ಹಣ ಮಾಡಿಕೊಳ್ಳುವ ಜನರೇ ಹೆಚ್ಚು. ಆದರೆ ಈ ರೈತ ಮಹಿಳೆ ರೇಣುಕಾ ಅವರು ತಮ್ಮ ಹಸುವಿನ ಸೀಮಂತ ಮಾಡಿ, ಈ ಸಮಾಜಕ್ಕೆ ಮೂಕ ಪ್ರಾಣಿಗಳಿಗೂ ಭಾವನೆಗಳು ಇವೆ ಎಂದು ತೋರಿಸಿಕೊಟ್ಟಿದ್ದಾರೆ.”

-ಮಮತ ಜಗದೀಶ್, ಗ್ರಾ.ಪಂ. ಮಾಜಿ ಸದಸ್ಯೆ, ಕೆಂಪನಕೊಪ್ಪಲು ಗ್ರಾಮ

Tags:
error: Content is protected !!