ಎಸ್.ಎಸ್.ಭಟ್
ಗಣತಿಗೆ ತೆರಳುವ ಶಿಕ್ಷಕರಿಗೆ ಕುಟುಂಬದವರ ಸಾಥ್
ನಂಜನಗೂಡು: ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ಕೈಗೆತ್ತಿಕೊಂಡಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ನಡೆಸುವ ಒತ್ತಡಕ್ಕೆಸಿಲುಕಿರುವ ಶಿಕ್ಷಕರು ಸಮೀಕ್ಷೆ ಮಾಡಲು ತಮ್ಮ ಕುಟುಂಬದವರ ನೆರವು ಪಡೆಯುತ್ತಿರುವ ವಿಷಯ ಬೆಳಕಿಗೆ ಬಂದಿದೆ.
ಹಲವು ಮಹಿಳಾ ಗಣತಿದಾರರು ತಮ್ಮ ಇಡೀ ಕುಟುಂಬವನ್ನೇ ಗಣತಿ ಕಾರ್ಯಕ್ಕೆ ಬಳಸಲಾರಂಭಿಸಿದ್ದಾರೆ. ಹೀಗಾಗಿ ಈಗ ಗಣತಿ ಶಿಕ್ಷಕರೊಂದಿಗೆ ಅವರ ಪದವೀಧರ ಮಕ್ಕಳು, ಮೊಮ್ಮಕ್ಕಳು, ಹಳೆಯ ಶಿಷ್ಯರು ಕೂಡ ಗಣತಿ ಮಾಡುವಂತಾಗಿದೆ.
ಗಣತಿ ಮಾಡಲು ಮನೆಗೆ ಹೋಗಿ ಅವರಿಂದ ೬೦ ಪ್ರಶ್ನೆಗಳಿಗೆ ಉತ್ತರ ಪಡೆದು ಅದನ್ನು ಅಪ್‌ಲೋಡ್ ಮಾಡುವ ವೇಳೆಗೆ ಕೈಕೊಡುವ ಸರ್ವರ್‌ನಿಂದಾಗಿ ದಿನಕ್ಕೆ ೧೦ ಮನೆ ಗಣತಿ ಮಾಡುವುದಿರಲಿ, ದಿನಕ್ಕೆ ಒಂದು ಮನೆಯನ್ನು ಪೂರ್ಣಗೊಳಿಸುವುದೂ ಕಷ್ಟವಾಗ ತೊಡಗಿದೆ. ನಿಗದಿತ ಅವಧಿಯಲ್ಲಿ ಗಣತಿ ಮುಗಿಸುವುದು ಹೇಗೆ ಎಂಬ ಭಯ ಶಿಕ್ಷಕರನ್ನು ಕಾಡತೊಡಗಿದೆ.
ಅಮಾನತ್ತಿನ ಆತಂಕದಿಂದಲೆ ಗಣತಿ ಆರಂಭಿಸಿರುವ ತಾಲ್ಲೂಕಿನ ಶಿಕ್ಷರೊಬ್ಬರಿಗೆ ಅವರ ಪದವೀಧರ ಮಕ್ಕಳು ಸಾಥ್ ನೀಡುತ್ತಿದ್ದು, ಬೆಳಿಗ್ಗೆ ೭ ಗಂಟೆಗೆ ಮನೆಯಿಂದ ಹೊರಡುವ ಈ ಕುಟುಂಬ ಗಣತಿ ಮುಗಿಸಿ ಮನೆಗೆ ತೆರಳುವಷ್ಟರಲ್ಲಿ ಸಂಜೆಯಾಗಿರುತ್ತದೆ. ಮತ್ತೊಬ್ಬ ಶಿಕ್ಷಕಿ ತನ್ನ ಹಳೆಯ ಶಿಷ್ಯರ ನೆರವು ಪಡೆದರೆ ಮತ್ತೊಂದು ಕಡೆ ಪತಿ ಪತ್ನಿಯ ಪರದಾಟ ನೋಡಲಾಗದೆ ಗಣತಿಗೆ ಇಳಿದಿದ್ದಾರೆ.
ಈ ಮಧ್ಯ ೩ ಜನರಿರುವ ಒಂದು ಮನೆಗೆ ಗಣತಿಗೆ ಹೋದರೆ, ಅಲ್ಲಿ ೩ ಆಹಾರ ಪಡಿತರ ಚೀಟಿಗಳು ಎದುರಾಗಿದ್ದು, ಮೂವರೂ ಬೇರೆ ಬೇರೆ ಕುಟುಂಬ ಎನ್ನುವುದನ್ನು ಕೇಳಿ ಗಣತಿದಾರರು ಮೂರ್ಛೆ ಬೀಳುವುದೊಂದೇ ಬಾಕಿಯಾಗಿದೆ. ವಿದ್ಯುತ್ ಮೀಟರ್ ಎಷ್ಟಿದೆ ಎಂದರೆ ಇರುವುದೊಂದೆ. ಮೀಟರ್‌ಗೆ ಬಣ್ಣ ಬಳಿಯಲಾಗಿದ್ದು, ವಿದ್ಯುತ್ ಬಿಲ್ ಕಾಣೆಯಾಗಿದೆ ಎಂಬ ಸಿದ್ಧ ಉತ್ತರ ಎದುರಾದಾಗ ಕಕ್ಕಾ ಬಿಕ್ಕಿಯಾಗುವ ಸಂಗತಿ ಶಿಕ್ಷಕರದ್ದಾಗಿದೆ. ಇಂತಹ ಸಂಗತಿಗಳೇ ಅನೇಕ ಮನೆಗಳಲ್ಲಿ ಕಂಡುಬರುತ್ತಿದೆ ಎನ್ನುತ್ತಾರೆ ಶಿಕ್ಷಕರು.
ಪ್ರಾಥಮಿಕ ಶಿಕ್ಷಕರಿಗೆ ಗಣತಿ ಮಾಡುವುದು ಕಡ್ಡಾಯ ಎಂದು ಸರ್ಕಾರ ಫಾರ್ಮಾನು ಹೊರಡಿಸಿದ್ದರೂ ತಾಲ್ಲೂಕು ಶಿಕ್ಷಕರ ಸಂಘದ ಪದಾಧಿಕಾರಿಗಾಳ್ಯಾರೂ ಗಣತಿ ಕಾರ್ಯದಲ್ಲಿ ಭಾಗಿಯಾಗದೇ ಇರುವ ಅಚ್ಚರಿಯ ಸಂಗತಿಯೂ ಬೆಳಕಿಗೆ ಬಂದಿದೆ.
ಹೀಗಿರುವಾಗ ಅ.೧೨ರೊಳಗೆ ನಿಗದಿತ ಅವಧಿಯಲ್ಲಿ ಸಮೀಕ್ಷೆಯನ್ನು ಮುಗಿಸುವ ಬಗೆ ಹೇಗೆ ಎಂಬುದು ಪ್ರತಿಯೊಬ್ಬ ಗಣತಿದಾರ ಶಿಕ್ಷಕರ ಅಳಲಾಗಿದೆ. ಜತೆಗೆ ಎರಡನೇ ಹಂತದಲ್ಲಿ ಗಣತಿ ಕಾರ್ಯಕ್ಕೆ ನಿಯೋಜನೆಗೊಂಡ ಶಿಕ್ಷಕರಿಗೆ ಯಾವುದೇ ತರಬೇತಿಯೂ ಇಲ್ಲವಾಗಿದೆ.





