ದೊಡ್ಡಕವಲಂದೆ: ಮನೆ ತೊರೆಯುವ ಎಚ್ಚರಿಕೆ ನೀಡಿದ ನಿವಾಸಿಗಳು; ಅಽಕಾರಿಗಳ ವಿರುದ್ಧ ಆಕ್ರೋಶ
ದೊಡ್ಡ ಕವಲಂದೆ: ಗಬ್ಬೆದ್ದು ನಾರುತ್ತಿರುವ ಚರಂಡಿ ಕೊಳಚೆ ನೀರಿನ ದುರ್ವಾಸನೆಯಿಂದ ಬೇಸತ್ತ ಕುಟುಂಬಗಳು ಮನೆಗಳನ್ನೇ ತೊರೆಯಲು ನಿರ್ಧಾರ ಮಾಡಿವೆ.
ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮದ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವದೊಡ್ಡ ಮೋರಿಯ ಸಮಸ್ಯೆ ಹೇಳತೀರದಾಗಿದೆ. ಗ್ರಾಮದ ಕೊಳಚೆ ನೀರೆಲ್ಲ ಈ ಚರಂಡಿಯಲ್ಲೇ ಹರಿದು ಹೋಗುತ್ತದೆ. ಕೇವಲ ೨೦ ಅಡಿ ಚರಂಡಿಯನ್ನು ನಿರ್ಮಾಣ ಮಾಡಿ ಅಧಿಕಾರಿಗಳು ಕೈ ತೊಳೆದುಕೊಂಡಿದ್ದಾರೆ. ಮಳೆ ಬಂದ ಸಂದರ್ಭದಲ್ಲಿ ಕೊಳಚೆ ನೀರು, ಮನೆಗೆ ನುಗ್ಗುತ್ತದೆ. ಅಲ್ಲದೆ ದುರ್ವಾಸನೆ ಬೀರುತ್ತಿದೆ.
ಹಗಲು ರಾತ್ರಿ ಎನ್ನದೆ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ನಿವಾಸಿಗಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ನಿವಾಸಿಗಳು ಸುಮಾರು ಹತ್ತು ವರ್ಷಗಳಿಂದ ಸಮಸ್ಯೆಯನ್ನು ಎದುರಿಸುತ್ತಿದ್ದು, ಸಮಸ್ಯೆ ಬಗೆಹರಿಸುವಂತೆ ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ೨೦೨೩ರಲ್ಲಿಯೇ ಲಿಖಿತವಾಗಿ ದೂರು ನೀಡಿದ್ದಾರೆ. ಆದರೆ, ದೂರಿಗೆ ಸ್ಪಂದಿಸದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಚರಂಡಿ ನೀರಿನ ದುರ್ವಾಸನೆಯಿಂದ ಮನೆಯಲ್ಲಿ ವಾಸಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ಮನೆಯಲ್ಲಿ ಕುಟುಂಬಸ್ಥರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಕೂಡಲೇ ಚರಂಡಿಯನ್ನು ನಿರ್ಮಾಣ ಮಾಡಿಕೊಡಬೇಕು. ಇಲ್ಲವಾದಲ್ಲಿ ನಾವು ಮನೆ ತೊರೆದು ತಾಲ್ಲೂಕು ಪಂಚಾಯಿತಿ ಕಚೇರಿಗೆ ಕುಟುಂಬಗಳ ಸಮೇತ ಆಗಮಿಸಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿನಿತ್ಯ ಸಾರ್ವಜನಿಕರು ಇದೇ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಚರಂಡಿಯ ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಪಕ್ಕದಲ್ಲಿರುವ ಬೇಕರಿಗಳು, ಅಂಗಡಿ ಮಳಿಗೆಗಳಿಗೂ ತೊಂದರೆಯಾಗುತ್ತಿದ್ದು, ಸೊಳ್ಳೆ ಮತ್ತು ನೊಣಗಳ ಕಾಟ ಹೆಚ್ಚಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈಗಲಾದರೂ ಇತ್ತ ಗಮನಹರಿಸಿ ಈ ಸಮಸ್ಯೆಗೆ ಮುಕ್ತಿ ಹಾಡಬೇಕಿದೆ.
” ಗ್ರಾಮದ ಕೊಳಚೆ ನೀರು ಈ ಚರಂಡಿ ಯಲ್ಲಿ ಹರಿದು ಹೋಗುತ್ತದೆ. ಮಳೆ ಬಂದ ಸಂದರ್ಭದಲ್ಲಿ ಕೊಳಚೆ ನೀರು ಮನೆಗೆ ನುಗ್ಗುತ್ತದೆ. ಚರಂಡಿ ನೀರಿನ ದುರ್ವಾಸನೆಯಿಂದ ನಮ್ಮ ಮನೆ ಯವರು ಅನಾರೋಗ್ಯದಿಂದ ಬಳಲುತ್ತಿದ್ದೇವೆ. ಗ್ರಾಪಂ ಅಧಿಕಾರಿಗಳು ಮತ್ತು ತಾಪಂ ಅಧಿಕಾರಿಗಳಿಗೆ ಅರ್ಜಿ ನೀಡಿದರೂ ಪ್ರಯೋಜನವಾಗಿಲ್ಲ. ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡದಿದ್ದಲ್ಲಿ ಮನೆಯನ್ನು ತೊರೆದು ಕುಟುಂಬ ಸಮೇತ ತಾಪಂ ಕಚೇರಿಗೆ ಬಂದು ಪ್ರತಿಭಟನೆ ನಡೆಸಬೇಕಾಗುತ್ತದೆ.”
-ಕಿಜರ್ ಅಹಮ್ಮದ್, ನೊಂದವರು
” ದೊಡ್ಡಕವಲಂದೆ ಗ್ರಾಮದಲ್ಲಿನ ಚರಂಡಿ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಕಾಮಗಾರಿಯ ಅಂದಾಜು ಪಟ್ಟಿಯನ್ನು ತಯಾರಿಸಿ, ಅತಿ ಶೀಘ್ರದಲ್ಲೇ ಕಾಮಗಾರಿಗೆ ಅನುದಾನವನ್ನು ಬಿಡುಗಡೆ ಮಾಡಿ ಚರಂಡಿ ಮತ್ತು ರಸ್ತೆಯನ್ನು ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುತ್ತೇನೆ.”
-ಜೆರಾಲ್ಡ್ ರಾಜೇಶ್, ತಾ.ಪಂ. ಇಒ, ನಂಜನಗೂಡು





