Mysore
17
scattered clouds

Social Media

ಸೋಮವಾರ, 12 ಜನವರಿ 2026
Light
Dark

ಆಶಾಕಿರಣ ಯೋಜನೆಯಡಿ ೬,೧೦೪ ಮಂದಿಗೆ ಕಣ್ಣಿನ ತಪಾಸಣೆ

ಎಸ್.ಎ.ಹುಸೇನ್

ಕೊಡಗು ಜಿಲ್ಲೆಯ ೮ ಕಡೆಗಳಲ್ಲಿ ದೃಷ್ಟಿಕೇಂದ್ರ; ಯೋಜನೆ ಸದುಪಯೋಗಪಡಿಸಿಕೊಳ್ಳಲು ಮನವಿ

ಮಡಿಕೇರಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಮರು ವಿನ್ಯಾಸಗೊಳಿಸಿದ ಆಶಾಕಿರಣ ಯೋಜನೆಯಡಿ ಜಿಲ್ಲೆಯಲ್ಲಿ ೬,೧೦೪ ಮಂದಿ ಕಣ್ಣಿನ ತಪಾಸಣೆ ಮಾಡಿಸಿಕೊಂಡಿದ್ದು, ೧೧೪ ಮಂದಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಮತ್ತು ೧,೪೫೭ ಮಂದಿಗೆ ಕನ್ನಡಕ ವಿತರಿಸಲಾಗಿದೆ.

ಜು.೩ರಂದು ರಾಜ್ಯಾದ್ಯಂತ ಜಾರಿಯಾದ ಈ ಆಶಾಕಿರಣ ಯೋಜನೆಯಡಿ ಕೊಡಗು ಜಿಲ್ಲೆಯ ೮ ಕಡೆಗಳಲ್ಲಿ ದೃಷ್ಟಿಕೇಂದ್ರಗಳನ್ನು ಆರಂಭಿಸಲಾಗಿದೆ. ಆದರೆ ಅದಕ್ಕೂ ಮೊದಲೇ ಜಿಲ್ಲಾ ಆಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಕಣ್ಣಿನ ಪರೀಕ್ಷೆ ನಡೆಸಿ ಕನ್ನಡಕ ವಿತರಿಸಲಾಗುತ್ತಿತ್ತು. ಏಪ್ರಿಲ್ ತಿಂಗಳಿನಿಂದ ಈ ಕೇಂದ್ರಗಳಲ್ಲಿ ಒಟ್ಟು ೬,೧೦೪ ಮಂದಿ ಕಣ್ಣಿನ ತಪಾಸಣೆ ಮಾಡಿಕೊಂಡಿದ್ದು, ಇವರಲ್ಲಿ ೧,೪೫೭ ಮಂದಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಗಿದೆ. ಇದರೊಂದಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಯನ್ನೂ ನಡೆಸಲಾಗಿದೆ.

ಈ ಹಿಂದೆ ಕೇವಲ ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳಲ್ಲಿ ಮಾತ್ರವೇ ದೃಷ್ಟಿದೋಷದ ಪರೀಕ್ಷೆ ನಡೆಯುತ್ತಿತ್ತು. ಉಚಿತವಾಗಿ ಕನ್ನಡಕ ವಿತರಿಸಲಾಗುತ್ತಿತ್ತು. ಆದರೆ, ಇದರಲ್ಲಿ ಪಾರದರ್ಶಕತೆ ತರಲು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲೇ ದೃಷ್ಟಿದೋಷ ಪರೀಕ್ಷೆ ಮತ್ತು ಉಚಿತ ಕನ್ನಡಕ ವಿತರಣೆಗೆ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸೇರಿದ ಬೋಧಕ ಆಸ್ಪತ್ರೆ (ಜಿಲ್ಲಾ ಆಸ್ಪತ್ರೆ), ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳು, ನಾಪೋಕ್ಲು, ಕುಶಾಲನಗರ, ಶನಿವಾರಸಂತೆ, ಸಿದ್ದಾಪುರ, ಗೋಣಿಕೊಪ್ಪಲಿನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಈಗಾಗಲೇ ದೃಷ್ಟಿಕೇಂದ್ರಗಳನ್ನು ತೆರೆಯಲಾಗಿದೆ.

ಈ ಕೇಂದ್ರಗಳಲ್ಲಿ ಒಬ್ಬರು ನೇತ್ರ ಸಹಾಯಕರಿದ್ದು, ದೃಷ್ಟಿಪರೀಕ್ಷೆ ನಡೆಸಿ, ದೃಷ್ಟಿ ಸಮಸ್ಯೆ ಇದ್ದರೆ ಉಚಿತವಾಗಿ ಕನ್ನಡಕ ವಿತರಿಸಲಿದ್ದಾರೆ. ಒಂದು ವೇಳೆ ಕಣ್ಣಿನ ಕಾಯಿಲೆಗಳು ಕಂಡುಬಂದಲ್ಲಿ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸುತ್ತಾರೆ. ಇನ್ನು ಪಾಲಿಬೆಟ್ಟ ಮತ್ತು ಕುಟ್ಟ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ದೃಷ್ಟಿ ಕೇಂದ್ರ ತೆರೆಯುವುದು ಬಾಕಿ ಇದೆ. ಈ ಆಶಾಕಿರಣ ಯೋಜನೆ ಹೊಸದಲ್ಲ. ೨೦೨೨ರಲ್ಲೇ ಇದು ಆರಂಭವಾಗಿತ್ತು. ಆಗ ೮ ಜಿಲ್ಲೆಗಳಲ್ಲಿ ಮಾತ್ರ ಮನೆ ಮನೆಗೆ ತೆರಳಿ ಕಣ್ಣಿನ ತಪಾಸಣೆ ನಡೆಸಿ ಕನ್ನಡಕ ವಿತರಿಸಲಾಗಿತ್ತು.

ಆದರೆ, ಈಗ ಈ ಯೋಜನೆಯನ್ನೇ ಮರುವಿನ್ಯಾಸಗೊಳಿಸಿ, ಆಸ್ಪತ್ರೆಗಳಲ್ಲಿ ಶಾಶ್ವತ ದೃಷ್ಟಿಕೇಂದ್ರಗಳನ್ನು ಸ್ಥಾಪಿಸಲಾಗಿದೆ.ದೃಷ್ಟಿ ಪರೀಕ್ಷೆ ಮತ್ತು ಕನ್ನಡಕ ವಿತರಣೆಯಲ್ಲಿ ಪಾರದರ್ಶಕತೆ ಇರಬೇಕೆಂಬ ಕಾರಣಕ್ಕೆ ಸ್ಪೆಕ್ಟಿಕಲ್ ಡಿಸ್ಟ್ರಿಬ್ಯೂನ್ ಆಪ್ ಅನ್ನು ರೂಪಿಸಲಾಗಿದೆ. ನೇತ್ರ ಪರೀಕ್ಷೆ ಮಾಡುತ್ತಿರುವ ಚಿತ್ರ ಹಾಗೂ ಅವರು ಕನ್ನಡಕ ಹಾಕಿಕೊಂಡಿರುವ ಚಿತ್ರ ಎರಡನ್ನೂ ಆಪ್ನಲ್ಲಿ ಅಪ್‌ಲೋಡ್ ಮಾಡಲೇಬೇಕಿದೆ. ಇದರಿಂದ ದೃಷ್ಟಿಪರೀಕ್ಷೆ ಮತ್ತು ಕನ್ನಡಕ ವಿತರಣೆಯಲ್ಲಿ ಪಾರದರ್ಶಕತೆ ಬರಲಿದೆ.

” ಆಶಾಕಿರಣ ಯೋಜನೆ  ಹಿಂದಿನಿಂದಲೂ ಇದ್ದು, ಇದೀಗ ಜಿಲ್ಲೆಯಲ್ಲಿ ೮ ದೃಷ್ಟಿಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಯೋಜನೆಯಿಂದ ಸಾವಿರಾರು ಮಂದಿಗೆ ಅನುಕೂಲವಾಗುತ್ತಿದೆ. ದೃಷ್ಟಿದೋಷ ಇರುವವರು ಸಮೀಪದ ತಾಲ್ಲೂಕು ಆಸ್ಪತ್ರೆ, ಸಮುದಾಯ ಆಸ್ಪತ್ರೆಗಳಿಗೆ ಭೇಟಿ ನೀಡಿ ಉಚಿತವಾಗಿ ದೃಷ್ಟಿ ಪರೀಕ್ಷೆ ಮಾಡಿಸಿಕೊಂಡು, ಕನ್ನಡಕ ಪಡೆಯಬಹುದಾಗಿದೆ.”

ಡಾ.ಕೆ.ಎಂ.ಸತೀಶ್‌ಕುಮಾರ್, ಕೊಡಗು ಜಿಲ್ಲಾ ಆರೋಗ್ಯಾಧಿಕಾರಿ

Tags:
error: Content is protected !!