Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಕಣ್ಣಿಗೆ ನಾಟುವ ಕೊಡಗಿನ ತಾಣಗಳು

ಬೆರಗು ಮೂಡಿಸುವ ಬೆಟ್ಟದ ಸೊಬಗು, ಮೈಮನ ಮುದಗೊಳಿಸುವ ಜಲರಾಶಿ ನರ್ತನ
ಮಡಿಕೇರಿ: ವೈವಿಧ್ಯಗಳ ತವರೂರು ಕೊಡಗು ಪ್ರವಾಸಿಗರ ಆಡಂಬೊಲ, ಕಾಡು, ನದಿ, ಝರಿ, ತೊರೆ, ಕಣಿವೆ, ಜೀವ ವೈವಿಧ್ಯತೆ, ಬಗೆಬಗೆಯ ತಿಂಡಿಗಳು ಹೀಗೆ ಎಲ್ಲ ಕಾಲದಲ್ಲೂ ಎಲ್ಲರಿಗೂ ಒಪ್ಪುವ ತಾಣ. ಹಿಂದೆ ಮೂರು ತಾಲ್ಲೂಕುಗಳಿದ್ದ ಕೊಡಗು ಜಿಲ್ಲೆ ಇಂದು 5 ತಾಲ್ಲೂಕುಗಳಾಗಿ ವಿಂಗಡಿಸಲ್ಪಟ್ಟಿದೆ. 5 ತಾಲ್ಲೂಕುಗಳಲ್ಲಿಯೂ ಪ್ರವಾಸಿಗರಿಗೆ ಆಹ್ಲಾದ ನೀಡುವ ತಾಣಗಳಿರುವುದು ವಿಶೇಷ. ಅಂತಹ ತಾಣಗಳಲ್ಲಿ ಹೆಚ್ಚು ಪ್ರಚಾರಕ್ಕೆ ಬಾರದ ಪ್ರತಿ ತಾಲ್ಲೂಕಿನ
ಒಂದೊಂದು ತಾಣಗಳ ಮಾಹಿತಿ ಇಲ್ಲಿದೆ.

ಮಡಿಕೇರಿ-ನಾಲ್ಕುನಾಡು ಅರಮನೆ
ಕ್ರಿ.ಶ.1782ರಲ್ಲಿ ಅಂದಿನ ಅರಸ ದೊಡ್ಡ ವೀರರಾಜೇಂದ್ರ ಅವರು ನಿರ್ಮಿಸಿದ ಅರಮನೆ, ಕೊಡಗು ಜಿಲ್ಲೆಯ ಮಹತ್ವದ ಕೆಲವೇ ಕೆಲವು ಸ್ಮಾರಕಗಳಲ್ಲಿ ನಾಲ್ಕುನಾಡು ಅರಮನೆಯೂ ಒಂದು ಎರಡು ಅಂತಸ್ತಿನ ಈ ಅರಮನೆಯನ್ನು ಕ್ರಿ.ಶ.1782ರಲ್ಲಿ ಅಂದಿನ ಅರಸ ದೊಡ್ಡ ವೀರರಾಜೇಂದ್ರ ಅವರು ನಿರ್ಮಿಸಿದರು. ದೊಡ್ಡ ವೀರರಾಜೇಂದ್ರ ಅವರು ಮಹಾದೇವಮ್ಮಾಜಿಯನ್ನು ವಿವಾಹವಾದ ವಿವಾಹ ಮಂಟಪವೂ ಅರಮನೆಯ ಮುಂಭಾಗದಲ್ಲಿದೆ. ಎರಡು ಶತಮಾನಗಳಷ್ಟು ಹಳೆಯದಾದ ಈ ಅರಮನೆ ತನ್ನ ಅಪೂರ್ವ ವಾಸ್ತುವಿನ್ಯಾಸ, ಚಿತ್ರಕಲಾ ವೈಭವದಿಂದ ಮನಸೆಳೆಯುತ್ತಿದ್ದು, ಕೊಡಗಿನ ಪ್ರವಾಸಿತಾಣಗಳಲ್ಲಿ ಒಂದೆನಿಸಿದೆ. ಈ ಅರಮನೆ ಮಡಿಕೇರಿಯಿಂದ ಸುಮಾರು 40 ಕಿ.ಮೀ. ದೂರದಲ್ಲಿದೆ. ಬಹುತೇಕ ಮರದಿಂದಲೇ ನಿರ್ಮಿತವಾಗಿರುವ ಅರಮನೆಗೆ ಐತಿಹಾಸಿಕ ಮಹತ್ವವಿದೆ. ಅರಮನೆಯಲ್ಲಿ 14 ಚಿಕ್ಕ ಕೋಣೆಗಳಿವೆ. ಹಿಂಭಾಗದಲ್ಲಿ ಅಪರಾಧಿಗಳನ್ನು ಕೂಡಿ ಹಾಕುತ್ತಿದ್ದ 4 ಕತ್ತಲೆ ಕೋಣೆಗಳಿವೆ. ಎರಡು ಪ್ರವೇಶದ್ವಾರಗಳನ್ನು ಹೊಂದಿರುವ ಎರಡಂತಸ್ತಿನ ಅರಮನೆಯಲ್ಲಿ ಸುಂದರ ಕೆತ್ತನೆಗಳಿವೆ. ಇದರ ವರ್ಣಲೇಪಿತ ಚಾವಣಿಯನ್ನೂ ಮರದಿಂದ ನಿರ್ಮಿಸಲಾಗಿದೆ. ಕಂಬದ ಅರಮನೆಯ ಮುಂಭಾಗದಲ್ಲಿ ವಿವಾಹ ಮಂಟಪವೂ ಇದೆ.

ಸೋಮವಾರಪೇಟೆ-ಮಕ್ಕಳ ಗುಡಿ ಬೆಟ್ಟ
ಪ್ರವಾಸಿಗರಿಗೆ ಆಗುಂಬೆಯ ಅನುಭವ ನೀಡುತ್ತದೆ. ಕೋಟೆ ಬೆಟ್ಟ, ಚೌಡ್ಲು ಬೆಟ್ಟ, ಹಾರಂಗಿ ಜಲಾಶಯದ ಹಿನ್ನೀರು ಪ್ರದೇಶ ಸೇರಿದಂತೆ ಬೆಟ್ಟಗುಡ್ಡಗಳ ಶ್ರೇಣಿ ನಿಸರ್ಗ ರಮಣೀಯ ಸೊಬಗನ್ನು ಒಳಗೊಂಡಿರುವ, ಹೃನ್ಮನ ತಣಿಸುವ, ಕಣ್ಣು ಹಾಯಿಸಿದಷ್ಟೂ ಪ್ರಕೃತಿ ಸೌಂದರ್ಯ ಹೊಂದಿರುವ ಮಕ್ಕಳ ಗುಡಿ ಬೆಟ್ಟ ಜಿಲ್ಲೆಯ ಪ್ರವಾಸಿ ತಾಣಗಳಲ್ಲೊಂದು. ಮಡಿಕೇರಿ-ಸೋಮವಾರಪೇಟೆ ಮಾರ್ಗದ ನಡುವೆ ಇರುವ ಕುಂಬೂರು ಜಂಕ್ಷನ್‌ನಿಂದ 5 ಕಿ.ಮೀ. ಒಳರಸ್ತೆಯಲ್ಲಿ ತೆರಳಿದರೆ ಬಿಳಿಗೇರಿ ಗ್ರಾಮ ಎದುರಾಗುತ್ತದೆ. ಮಕ್ಕಳ ಗುಡಿ ಬೆಟ್ಟದ ತುದಿಗೆ ತಲುಪಿದರೆ ಪ್ರಕೃತಿ ಸೌಂದರ್ಯದ ವಿಸ್ಮಯಲೋಕ ಕಾಣ ಸಿಗುತ್ತದೆ. ಇಲ್ಲಿಂದ ಪ್ರಕೃತಿ ವೀಕ್ಷಣೆ ಮಾಡಿದರೆ ಮನಸ್ಸಿಗೆ ಮುದ ನೀಡುತ್ತದೆ. ಸೋಮವಾರಪೇಟೆ ನಗರ ಸೇರಿದಂತೆ ಬಜೆಗುಂಡಿ ಗ್ರಾಮ, ಕೋಟೆ ಬೆಟ್ಟ, ಚೌಡ್ಲು ಬೆಟ್ಟ, ಹಾರಂಗಿ ಜಲಾಶ ಯದ ಹಿನ್ನೀರು ಪ್ರದೇಶ ಸೇರಿದಂತೆ ಬೆಟ್ಟಗುಡ್ಡಗಳ ಶ್ರೇಣಿ ಇಲ್ಲಿಂದ ಕಾಣಸಿಗುತ್ತದೆ. ಈ ಬೆಟ್ಟದ ಮೇಲೆ ಆಯಕಟ್ಟು ಪ್ರದೇಶದಲ್ಲಿ ಪ್ರಕೃತಿ ಸೌಂದರ್ಯದ ವೀಕ್ಷಣೆಗೆ ಸ್ಥಳ ಕಲ್ಪಿಸಲಾಗಿದೆ. ಬೆಟ್ಟದ ಮೇಲೆ ಪುಟ್ಟ ಕೆರೆಯೊಂದಿದ್ದು, ಪ್ರವಾಸಿಗರಿಗೆ ಆಗುಂಬೆಯ ಅನುಭವ ನೀಡುತ್ತದೆ.

ಪೊನ್ನಂಪೇಟೆ-ಕುಂದಬೆಟ್ಟ
ಸಮುದ್ರ ಮಟ್ಟದಿಂದ 3,200 ಅಡಿ ಎತ್ತರದ ತಾಣ. ಕೊಡಗಿನಲ್ಲಿರುವ ಬೆಟ್ಟಗಳು ತಮ್ಮದೇ ಆದ ನಿಸರ್ಗ ಸೌಂದರ್ಯ, ಪೌರಾಣಿಕ ಐತಿಹ್ಯ ಹೊಂದಿ ಗಮನ ಸೆಳೆಯುತ್ತವೆ. ಆ ಪೈಕಿ ದಕ್ಷಿಣ ಕೊಡಗಿನ ಪೊನ್ನಂಪೇಟೆ ಬಳಿಯಿರುವ ಕುಂದಬೆಟ್ಟವೂ ಒಂದು. ಚಾರಣ ತಾಣವಾಗಿಯೂ ಧಾರ್ಮಿಕ ಕ್ಷೇತ್ರವಾಗಿಯೂ ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುವ ಕುಂದ ಬೆಟ್ಟವನ್ನೇರಿದರೆ ನಿಸರ್ಗ ಸೌಂದರ್ಯವನ್ನು ಸವಿಯಬಹುದು. ಕುಂದಬೆಟ್ಟವು ಮಡಿಕೇರಿಯಿಂದ 60 ಕಿ.ಮೀ. ದೂರದಲ್ಲಿದೆ. ಸಮುದ್ರ ಮಟ್ಟದಿಂದ 3,200 ಅಡಿ ಎತ್ತರವಿರುವ ಈ ತಾಣ ತನ್ನ ಸೌಂದರ್ಯದಿಂದ ಜನರನ್ನು ಬೆರಗುಗೊಳಿಸುತ್ತದೆ. ಕೊಡವ ಭಾಷೆಯಲ್ಲಿ ಕುಂದ್ ಎಂಬ ಪದವು ಬೆಟ್ಟ ಎಂಬ ಅರ್ಥವನ್ನು ನೀಡುತ್ತದೆ ಬೆಟ್ಟವೊಂದು ಗ್ರಾಮದ ಹೃದಯ ಭಾಗದಲ್ಲಿ ಮೈದಾಳಿ ನಿಂತಿದ್ದರಿಂದಲೋ ಏನೋ ಈ ಗ್ರಾಮವನ್ನು ಕುಂದವೆಂದೇ ಕರೆಯುತ್ತಾರೆ. ಗ್ರಾಮದ ಕಣ್ಮಣಿಯೇ ಕುಂದಬೆಟ್ಟ.

ವಿರಾಜಪೇಟೆ-ಇರ್ಪು ಜಲಪಾತ
ಪಶ್ಚಿಮಘಟ್ಟ ಸಾಲಿನ ಬ್ರಹ್ಮಗಿರಿ ಅರಣ್ಯ ಪ್ರದೇಶದಲ್ಲಿರುವ ಮುನಿಕಾಡು ಜಲಪಾತದ ಉಗಮ ಸ್ಥಾನ. 170 ಅಡಿ ಎತ್ತರದಿಂದ ಬಂಡೆಗಳ ನಡುವೆ ಧುಮ್ಮಿಕ್ಕಿ ಹರಿಯುವ ಜಲಪಾತ ಪ್ರವಾಸಿ ತಾಣವಷ್ಟೇ ಅಲ್ಲ ಶಿವರಾತ್ರಿ ಯಂದು ಶಿವಭಕ್ತರಿಗೆ ಶ್ರದ್ದಾಭಕ್ತಿಯ ಧಾರ್ಮಿಕ ಕೇಂದ್ರ, ಪಶ್ಚಿಮಘಟ್ಟ ಸಾಲಿನ ಬ್ರಹ್ಮಗಿರಿ ಅರಣ್ಯ ಪ್ರದೇಶದಲ್ಲಿರುವ ಮುನಿಕಾಡು ಸ್ಥಳ ಜಲಪಾತದ ಉಗಮ ಸ್ಥಾನ. ಸುಮಾರು 170 ಅಡಿ ಎತ್ತರ ದಿಂದ ಬಂಡೆಗಳ ನಡುವೆ ಧುಮ್ಮಿಕ್ಕಿ ನದಿಯಾಗಿ ಹರಿಯುತ್ತದೆ. ಜಲಪಾತಕ್ಕೆ ತೆರಳುವ ದಾರಿಯಲ್ಲಿ ಇರ್ಪು ರಾಮೇಶ್ವರ ದೇವ ಸ್ಥಾನವಿದೆ. ಇಲ್ಲಿಂದ ಚಾರಣದ ಮೂಲಕ ಸುಮಾರು 1 ಕಿ.ಮೀ. ತೆರಳಬೇಕು. ವಿರಾಜಪೇಟೆಯಿಂದ ಇರ್ಪು ಜಲಪಾತ 48 ಕಿ.ಮೀ. ದೂರದಲ್ಲಿದೆ. ವಿರಾಜಪೇಟೆ- ಗೋಣಿಕೊಪ್ಪ ಮಾರ್ಗವಾಗಿ ಶ್ರೀಮಂಗಲ ತಲುಪಿ ಅಲ್ಲಿಂದ 5 ಕಿ.ಮೀ. ದೂರ ಸಾಗಿದರೆ ಕುರ್ಚಿ ಎಂಬ ಗ್ರಾಮದ ಬಳಿ ಇರ್ಪು ಜಲಪಾತ ಇದೆ. ಇಲ್ಲಿಗೆ ಬಸ್ ವ್ಯವಸ್ಥೆ ಇಲ್ಲ, ಸ್ವಂತ ವಾಹನ ಇಲ್ಲವೇ ಬಾಡಿಗೆ ವಾಹನದಲ್ಲಿ ಹೋಗಬಹುದು.

ಕುಶಾಲನಗರ-ಚಿಕ್ಲಿಹೊಳೆ ಜಲಾಶಯ
ಕುಶಾಲನಗರದಿಂದ 13 ಕಿ.ಮೀ., ಮಡಿಕೇರಿಯಿಂದ ಕೊಡಗರಹಳ್ಳಿ ಮಾರ್ಗವಾಗಿ 25 ಕಿ.ಮೀ. ದೂರದಲ್ಲಿ ಈ ಜಲಾಶಯವಿದೆ. 0.18 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಸುಂದರ ಕಾನನದ ಮಧ್ಯೆ ಕಡಿಮೆ ನೀರು ಸಂಗ್ರಹ ಹೊಂದಿರುವ ಈ ಜಲಾಶಯದಿಂದ ನೂರಾರು ಎಕರೆಗಳಷ್ಟು ಕೃಷಿಗೆ ನೀರು ಬಳಕೆಯಾಗುತ್ತದೆ. ಮಳೆಗಾಲ ದಲ್ಲಿ ಚಿಕ್ಲಿಹೊಳೆ ತುಂಬಿ ಚಂದ್ರಾಕಾರದಲ್ಲಿ ನೀರು ಹರಿಯುವುದನ್ನು ನೋಡುವ ಅನುಭವ ಸುಂದರವಾಗಿರುತ್ತದೆ. ಈ ಜಲಾಶಯವನ್ನು ಕೃಷಿ ಉದ್ದೇಶದಿಂದ 1982ರಲ್ಲಿ ನಿರ್ಮಿಸಲಾ ಯಿತು. ಆದರೆ ಬ್ರಿಟಿಷರ ಕಾಲದಲ್ಲಿಯೇ ಕೃಷಿಗೆ ನೀರು ಹರಿಸಲು ಇಲ್ಲಿ ಹೊಳೆಗೆ ಅಡ್ಡಲಾಗಿ ಕಟ್ಟೆ ನಿರ್ಮಿಸಲಾಗಿತ್ತು ಎನ್ನಲಾ ಗಿದೆ. ಸ್ವಾತಂತ್ರ್ಯ ನಂತರ 1978ರಲ್ಲಿ ಶಂಕುಸ್ಥಾಪನೆ ನೆರವೇರಿಸಿ 1982ರಲ್ಲಿ ಜಲಾಶಯ ಕಾಮಗಾರಿಯನ್ನು ಪೂರ್ಣ ಗೊಳಿಸಲಾಯಿತು. ಈ ಜಲಾಶಯದಿಂದ ಸುತ್ತಮುತ್ತಲಿನ ವಿರೂಪಾಕ್ಷಪುರ, ರಸೂಲ್‌ಪುರ, ರಂಗಸಮುದ್ರ, ಬೊಳ್ಳೂರು, ಬಸವನಹಳ್ಳಿ, ಚಿಕ್ಕಬೆಟ್ಟಗೇರಿ, ದೊಡ್ಡಬೆಟ್ಟಗೇರಿ, ಹೊಸಪಟ್ಟಣ ಮುಂತಾದ ಗ್ರಾಮಗಳ ಸುಮಾರು 2 ಸಾವಿರ ಎಕರೆಗೂ ಹೆಚ್ಚಿನ ಕೃಷಿ ಭೂಮಿಗೆ ನೀರನ್ನು ಒದಗಿಸಲಾಗುತ್ತಿತ್ತು.

Tags: