ಚಿರಂಜೀವಿ ಸಿ.ಹುಲ್ಲಹಳ್ಳಿ
ಮೈಸೂರು: ೨೦೨೫-೨೬ನೇ ಶೈಕ್ಷಣಿಕ ಸಾಲಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಮೈಸೂರು ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಹೆಚ್ಚಳಕ್ಕೆ ಶಾಲಾ ಶಿಕ್ಷಣ ಇಲಾಖೆ ಕಸರತ್ತು ನಡೆಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲೇ ೨೦೨೪-೨೫ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಶೇ.೬೮.೨೨ಕ್ಕೆ ಕುಸಿದು, ೧೫ನೇ ಸ್ಥಾನಕ್ಕೆ ತೃಪ್ತಿಪಡುವಂತಾಗಿದ್ದರಿಂದ ಶಾಲಾ ಶಿಕ್ಷಣ ಇಲಾಖೆ ತೀವ್ರ ಮುಜುಗರ ಅನುಭವಿಸಿತ್ತು. ಹೀಗಾಗಿ, ಈ ಬಾರಿ ಫಲಿತಾಂಶ ಸುಧಾರಣೆಗೆ ಸಂಕಲ್ಪ ಮಾಡಿದೆ. ಶೇಕಡಾವಾರು ಫಲಿತಾಂಶವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಕಾರ್ಯೋನ್ಮುಖವಾಗಿದೆ. ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿರುವಂತಹ ೨೫ ಅಂಶಗಳ ಕ್ರಿಯಾ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಇಲಾಖೆಯ ಕೇಂದ್ರ ಕಚೇರಿಯಿಂದ ಬಂದಿರುವ ೨೦ ಅಂಶಗಳ ಸೂಚನೆಯನ್ನೂ ಪಾಲನೆ ಮಾಡಲಾಗುತ್ತಿದೆ.
ಪರೀಕ್ಷೆಗೆ ಇನ್ನು ೫೦ ದಿನಗಳಿದ್ದು, ದಿನ ಒಂದು ವಿಷಯದ ಮೇಲೆ ಗಮನಹರಿಸುವುದು, ಭಾನುವಾರದ ತರಗತಿಗಳು, ಓಪನ್ ಬುಕ್ ಎಕ್ಸಾಮ್ ಸೇರಿದಂತೆ ಹಲವಾರು ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ತಯಾರು ಮಾಡಲಾಗುತ್ತಿದೆ. ಈ ಬಾರಿ ೩೬,೦೯೦ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುತ್ತಿದ್ದು, ೧೭,೮೦೦ ಬಾಲಕಿಯರಿದ್ದಾರೆ.
ನಿರಂತರ ಕಲಿಕಾ ಚಟುವಟಿಕೆಗಳಿಂದ ವಿದ್ಯಾರ್ಥಿಗಳು ವಿಮುಖರಾಗದಂತೆ ಗಮನಹರಿಸಲಾಗುತ್ತಿದೆ. ಪ್ರತಿ ವಿದ್ಯಾರ್ಥಿಗೂ ವಿಷಯ ಶಿಕ್ಷಕರ ಮಾರ್ಗದರ್ಶನ ಲಭ್ಯವಾಗುವಂತೆ ಶಾಲಾ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. ಜತೆಗೆ, ಬ್ಲಾಕ್ ಹಂತದಲ್ಲಿ ಸ್ಥಳೀಯ ಅಗತ್ಯತೆಗೆ ಅನುಗುಣವಾಗಿ ಯೋಜನೆ ತಯಾರಿಸಿ ಜಾರಿಗೊಳಿಸಲು ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳೂ ಕ್ರಮ ಕೈಗೊಂಡಿದ್ದಾರೆ. ಕಳೆದ ಸಾಲಿನ ಫಲಿತಾಂಶ ಪರಿಶೀಲನೆ ಮಾಡಿ ಪ್ರತಿ ಶಾಲೆಯಿಂದ ಹಿಡಿದು ತಾಲ್ಲೂಕು, ಜಿಲ್ಲಾ ಹಂತದಲ್ಲೂ ವಿಶ್ಲೇಷಣೆ ಮಾಡಲಾಗಿದೆ. ಶೇ.೬೦ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಶಾಲೆಗಳ ಮುಖ್ಯಶಿಕ್ಷಕರ ಸಭೆಯನ್ನು ತಾಲ್ಲೂಕು ಮಟ್ಟದಲ್ಲಿ ಮಾಸಿಕವಾಗಿ ನಡೆಸಿ ಅಗತ್ಯ ಸಲಹೆ, ಮಾರ್ಗದರ್ಶನಗಳನ್ನು ನೀಡಲಾಗುತ್ತಿದೆ.
ಸದ್ಯ ಶಾಲೆಗಳನ್ನು ಇಲಾಖಾ ಅಧಿಕಾರಿಗಳಿಗೆ ದತ್ತು ನೀಡಲಾಗುತ್ತಿದೆ. ತಿಂಗಳಿಗೆ ೨ ಬಾರಿ ಕಡ್ಡಾಯವಾಗಿ ಭೇಟಿ ನೀಡಿ ಬೋಧನಾ, ಕಲಿಕಾ ಪ್ರಗತಿ ಪರಿಶೀಲಿಸಿ ದಾಖಲಿಸಲಾಗುತ್ತಿದೆ. ಜತೆಗೆ, ಈ ಸಂಬಂಧ ಅನು ಪಾಲನಾ ಅಧಿಕಾರಿಗಳು ಸಹ ತಿಂಗಳಿಗೊಮ್ಮೆ ಆನ್ ಲೈನ್ ಸಭೆ ನಡೆಸುತ್ತಿದ್ದಾರೆ. ಮಾಸಾಂತ್ಯಕ್ಕೆ ಜಿಲ್ಲಾ ಕಚೇರಿಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ.
ಸಂಪನ್ಮೂಲ ಶಿಕ್ಷಕರಿಂದ ಜಿಲ್ಲಾ ಹಂತದಲ್ಲಿ ಪ್ರಶ್ನೆ ಪತ್ರಿಕೆ ತಯಾರಿಕಾ ಕಾರ್ಯಾಗಾರ ನಡೆಸಿ, ವಿದ್ಯಾರ್ಥಿಗಳ ಅಭ್ಯಾಸಕ್ಕಾಗಿ ಮಾದರಿ ಪ್ರಶ್ನೆಗಳನ್ನು ನೀಡಲಾಗುತ್ತಿದೆ. ಬ್ಲಾಕ್ ಹಂತದಲ್ಲಿ ಶಿಕ್ಷಕರಿಗೂ ಸಂಪನ್ಮೂಲ ವ್ಯಕ್ತಿಗಳ ಮೂಲಕ ವಿಷಯ ಸಂಪದೀಕರಣಕ್ಕಾಗಿ ಕಾರ್ಯಾಗಾರ ನಡೆಸಲು ಕ್ರಮ ತೆಗೆದುಕೊಳ್ಳಲಾಗಿದೆ.
ಮನೆ ಮನೆ ಭೇಟಿ: ಮಕ್ಕಳ-ಶಿಕ್ಷಕರ ಬಾಂಧವ್ಯ ಉತ್ತಮವಾಗಿದ್ದರೆ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. ಆದ್ದರಿಂದ ಮಕ್ಕಳನ್ನು ಸ್ನೇಹಯುತವಾಗಿ ಮಾತನಾಡಿಸುವುದು, ಆಗಾಗ ಪಾಲಕರ ಸಮ್ಮುಖದಲ್ಲಿ ಮನೆಗೆ ಭೇಟಿ ನೀಡುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಇದರಿಂದ ಶಾಲೆಗೆ ಗೈರಾಗುವುದೂ ಕಡಿಮೆಯಾಗಲಿದೆ. ಪಾಲಕರಿಗೆ ಮಕ್ಕಳ ಕಲಿಕೆಯ ಕುರಿತು ನಿಯಮಿತವಾಗಿ ಕರೆ ಮಾಡುವ ಮೂಲಕ ವಿದ್ಯಾರ್ಥಿಯ ಕಲಿಕೆಯ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತದೆ.
ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯ ಸರಳ ಕಲಿಕೆಗೆ ಮಾರ್ಗೋಪಾಯ ಹಾಕಿಕೊಳ್ಳಲಾಗಿದೆ. ಮಕ್ಕಳ ಗೈರು ಹಾಜರಿ ತಪ್ಪಿಸಲು ಶಾಲಾ, ತಾಲ್ಲೂಕು, ಜಿಲ್ಲಾ ಹಂತದಲ್ಲಿ ಕ್ರಮ ಕೈಗೊಳ್ಳಲಾಗಿದೆ. ಕಳೆದ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಅನುತ್ತೀರ್ಣವಾಗಿರುವ ಬಾಲಕರ ಫಲಿತಾಂಶ ಸುಧಾರಣೆಗೂ ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ. ಅನುದಾನಿತ ಶಾಲೆಗಳ ಬೋಧನಾ ಮತ್ತು ಫಲಿತಾಂಶ ಗುಣಮಟ್ಟ ಸುಧಾರಿಸಲಾಗುತ್ತಿದೆ. ಈ ಬಗ್ಗೆ ವಿಶೇಷ ಅಧಿಕಾರಿಗಳು, ಸಂಪನ್ಮೂಲ ವ್ಯಕ್ತಿಗಳ ಭೇಟಿ, ಮಾರ್ಗದರ್ಶನವನ್ನು ಕೊಡಿಸಲಾಗುತ್ತಿದೆ. ಬೆಳಿಗ್ಗೆ ವಿಶೇಷ ತರಗತಿಗಳು, ಸಂಜೆ ಗುಂಪು ಅಧ್ಯಯನಕ್ಕಾಗಿ ವೇಳಾಪಟ್ಟಿ ಮತ್ತು ಪ್ರಗತಿ ಚಾರ್ಟ್ ಶಾಲೆಯಲ್ಲಿ ಸಿದ್ಧಪಡಿಸಲಾಗಿದೆ. ಆಕಾಶವಾಣಿ, ದಿನಪತ್ರಿಕೆಗಳ ಮೂಲಕ ವಿಷಯವಾರು ತಜ್ಞರಿಂದ ಎಲ್ಲ ಮಕ್ಕಳಿಗೆ ಕ್ಲಿಷ್ಟ ವಿಷಯಗಳಿಗೆ ಅಗತ್ಯ ಮಾರ್ಗದರ್ಶನ ನೀಡಲು ಕ್ರಮ ತೆಗೆದುಕೊಳ್ಳಲಾಗಿದೆ.
” ವಾಟ್ಸಾಪ್ ಗ್ರೂಪ್ ರಚನೆ: ಶಿಕ್ಷಕರು ದೂರವಾಣಿ ಮೂಲಕ ವಿದ್ಯಾರ್ಥಿಗಳು ಮತ್ತು ಅವರ ಪಾಲಕರೊಂದಿಗೆ ಸಂಪರ್ಕದಲ್ಲಿದ್ದು, ಮಕ್ಕಳ ಕಲಿಕೆ ಸಂಬಂಧ ನಿರಂತರವಾಗಿ ಮಾಹಿತಿ ಪಡೆದುಕೊಳ್ಳಲಾಗುತ್ತದೆ. ಜತೆಗೆ, ವಿಷಯವಾರು ಶಿಕ್ಷಕರ ವಾಟ್ಸಾಪ್ ಗುಂಪು ರಚಿಸಿ, ವಿಷಯಕ್ಕೆ ಸಂಬಂಽಸಿದ ಸಂಪನ್ಮೂಲಗಳನ್ನು ಹಂಚಿಕೆ ಮಾಡಲಾಗಿದೆ. ವಿಜ್ಞಾನ, ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದಂತಹ ನಕ್ಷೆ, ಚಿತ್ರಗಳನ್ನು ನಿತ್ಯ ಬರೆದು ಅಭ್ಯಾಸ ಮಾಡಿ ಶಿಕ್ಷಕರಿಗೆ ವಾಟ್ಸಾಪ್ ಮೂಲಕ ಕಳುಹಿಸಲು ಸೂಚಿಸಲಾಗಿದೆ.
ಗಣಿತ ವಿಷಯಕ್ಕೆ ಹೆಚ್ಚಿನ ಒತ್ತು: ಕಬ್ಬಿಣದ ಕಡಲೆಯಾಗಿರುವ ಗಣಿತ ವಿಷಯಕ್ಕೆ ಸಂಬಂಽಸಿದಂತೆ ಶಾಲೆಯ ಹಿರಿಯ ವಿದ್ಯಾರ್ಥಿಗಳಿಂದ ಲೆಕ್ಕ ಬಿಡಿಸುವ ಕ್ರಮವನ್ನು ಹೇಳಿಕೊಡಲಾಗುತ್ತಿದ್ದು, ಅದಕ್ಕಾಗಿ ಪ್ರದೇಶವಾರು ಗುಂಪು ರಚನೆ ಮಾಡಲಾಗಿದೆ. ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಗುರುತಿಸಲಾಗಿದ್ದು, ವಿದ್ಯಾರ್ಥಿಗಳನ್ನು ಶಾಲೆಯತ್ತ ಮುಖ ಮಾಡುವಂತೆ ಮಾಡಲಾಗುತ್ತಿದೆ. ಮಕ್ಕಳ ರಕ್ಷಣಾ ಘಟಕ ಸಹಕಾರ ನೀಡಿದೆ. ಪೋಷಕರಿಗೆ ಕರೆ ಮಾಡಿ ಮಕ್ಕಳ ಚಟುವಟಿಕೆಗಳನ್ನು ತಿಳಿದುಕೊಳ್ಳುವ ಕೆಲಸವೂ ನಡೆಯುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಉದಯಕುಮಾರ್ ತಿಳಿಸಿದರು.





