Mysore
18
broken clouds

Social Media

ಬುಧವಾರ, 14 ಜನವರಿ 2026
Light
Dark

ಜನೌಷಧ ಕೇಂದ್ರದಲ್ಲಿ ಅಗತ್ಯ ಔಷಧ ಅಲಭ್ಯ

ಎ.ಎಚ್.ಗೋವಿಂದ

ರಿಯಾಯಿತಿ ದರದಲ್ಲಿ ಸಿಗುತ್ತಿದ್ದ ಕೆಲವು ಔಷಧಗಳ ಕೊರತೆ; ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ 

ಕೊಳ್ಳೇಗಾಲ: ಪಟ್ಟಣದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿರುವ ಜನೌಷಧ ಕೇಂದ್ರದಲ್ಲಿ ಬಿಪಿ, ಶುಗರ್, ಕಿಡ್ನಿಗೆ ಸಂಬಂಧಿಸಿದಂತಹ ಔಷಧಗಳು ಸಮರ್ಪಕವಾಗಿ ದಾಸ್ತಾನು ಇಲ್ಲದೆ ರೋಗಿಗಳು ಪರದಾಡುವ ಸ್ಥಿತಿ ಉಂಟಾಗಿದೆ.

ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ (ಎಂಎಸ್ ಐಎಲ್) ವತಿಯಿಂದ ನಡೆಯುತ್ತಿರುವ ಈ ಜನೌಷಧ ಕೇಂದ್ರದಲ್ಲಿಸಕ್ಕರೆ ಕಾಯಿಲೆ, ಮೂತ್ರಪಿಂಡ ಕಾಯಿಲೆ ರೋಗಿಗಳಿಗೆ ಕಡಿಮೆ ದರದಲ್ಲಿ ಔಷಧಗಳು ಸಿಗುತ್ತಿದ್ದವು. ಖಾಸಗಿಮೆಡಿಕಲ್ ಸ್ಟೋರ್ ಗಳಿಗಿಂತ ಶೇ.೫೦ ಕ್ಕೂ ಕಡಿಮೆ ದರದಲ್ಲಿ ಔಷಧಗಳು ಸಿಗುತ್ತಿದ್ದವು. ಎಂಎಸ್‌ಐಎಲ್ ಬೇಡಿಕೆಯಿರುವ ಔಷಧಗಳನ್ನು ಖರೀದಿಸಿ ಪಟ್ಟಣದ ಜನೌಷಧ ಕೇಂದ್ರಕ್ಕೆ ಸರಬರಾಜು ಮಾಡುತ್ತಿತ್ತು. ಇದರಿಂದ ಬಡ ವರ್ಗದ ರೋಗಿಗಳಿಗೆ ಅನುಕೂಲವಾಗಿತ್ತು. ಆದರೆ, ಈಗ ಸರ್ಕಾರದ ಆದೇಶದಂತೆ ನಿಲ್ಲಿಸಿದ್ದು ರೋಗಿಗಳು ದುಪ್ಪಟ್ಟು ಹಣ ನೀಡಿ ಖರೀದಿಸಬೇಕಿದೆ.

ಈಗ ಜನೌಷಧ ಅಂಗಡಿಯಲ್ಲಿ ಔಷಧಗಳು ಸಿಗದ ಕಾರಣ ರೋಗಿಗಳು ಖಾಸಗಿ ಮೆಡಿಕಲ್ ಸ್ಟೋರ್‌ಗಳಲ್ಲಿ ಹೆಚ್ಚು ಬೆಲೆನೀಡಿ ಸಕ್ಕರೆ, ರಕ್ತದೊತ್ತಡ, ಮೂತ್ರ ಪಿಂಡ ಹಾಗೂ ಇತರೆ ಕಾಯಿಲೆಗಳ ಸಂಬಂಧದ ಔಷಧಗಳನ್ನು ದುಪ್ಪಟ್ಟು ಹಣ ನೀಡಿ ಖರೀದಿಸುವ ಪರಿಸ್ಥಿತಿ ಉಂಟಾಗಿದೆ.

ಸಕ್ಕರೆ, ರಕ್ತದೊತ್ತಡದಂತಹ ಕಾಯಿಲೆಗಳ ಸಂಬಂಧಿತ ಮಾತ್ರೆಗಳಿಗೆ ಮೆಡಿಕಲ್ ಸ್ಟೋರ್‌ಗಳಲ್ಲಿ ಒಂದೊಂದು ಬಗೆಯ ಬೆಲೆಯಿದೆ. ಬಡವರ್ಗದ ರೋಗಿಗಳು ಖರೀದಿಸಲು ಕಷ್ಟ ಪಡಬೇಕಿದೆ. ಈ ಬಗ್ಗೆ ಸಂಬಂಧಪಟ್ಟ ಆರೋಗ್ಯ ಇಲಾಖೆಯವರು ಪರಿಶೀಲಿಸಿ ಕ್ರಮ ವಹಿಸಬೇಕು ಎಂದು ರೋಗಿಗಳು ಮನವಿ ಮಾಡಿದ್ದಾರೆ. ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿರುವ ಜನೌಷಧ ಕೇಂದ್ರಗಳನ್ನು ತೆರವು ಮಾಡಬೇಕೆಂಬುದು ರಾಜ್ಯ ಸರ್ಕಾರದ ಆದೇಶವಾಗಿದೆ. ಈ ಹಿನ್ನೆಲೆಯಲ್ಲಿ ಎಂಎಸ್ ಐಎಲ್‌ನಿಂದ ನಮಗೆ ಔಷಧಗಳ ಪೂರೈಕೆ ನಿಂತಿದೆ ಎಂದು ಕೇಂದ್ರದ ಮೇಲ್ವಿಚಾರಕರು ತಿಳಿಸಿದ್ದಾರೆ. ಪಟ್ಟಣದಲ್ಲಿ ಇದೊಂದೆ ಜನೌಷಧ ಕೇಂದ್ರ ಇರುವುದರಿಂದ ರೋಗಿಗಳು ಪರದಾಡುವಂತಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಸ್ಥಳೀಯ ಶಾಸಕರಾದ ಎ.ಆರ್.ಕೃಷ್ಣಮೂರ್ತಿ ಅವರು ಈ ಜನೌಷಧ ಕೇಂದ್ರವನ್ನು ಸರ್ಕಾರಿ ಆಸ್ಪತ್ರೆಯ ಆವರಣದಲ್ಲೇ ಉಳಿಸಿಕೊಳ್ಳಬೇಕೆಂದು ರೋಗಿಗಳು ಒತ್ತಾಯಿಸಿದ್ದಾರೆ.

” ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಜನೌಷಧ ಕೇಂದ್ರ ನಡೆಸುವಂತಿಲ್ಲ ಎಂದು ರಾಜ್ಯ ಸರ್ಕಾರವೇ ಆದೇಶ ಹೊರಡಿಸಿದೆ. ಆದರೆ, ಕೇಂದ್ರವನ್ನು ಹೊರಗಡೆ ನಡೆಸಲು ಅವಕಾಶವಿದೆ. ಹಿಂದೆ ಹೊರಗಿನವರು ಕೂಡ ಆಸ್ಪತ್ರೆಯ ಆವರಣದಲ್ಲಿದ್ದ ಜನೌಷಧ ಕೇಂದ್ರದಲ್ಲಿ ಔಷಧಗಳನ್ನು ಖರೀದಿಸುತ್ತಿದ್ದರು. ಈಗ ಅವರಿಗೆ ತೊಂದರೆಯಾಗಿದೆ. ಸಕ್ಕರೆ, ರಕ್ತದೊತ್ತಡ ಹಾಗೂ ಇತರೆ ಕಾಯಿಲೆಗಳಿಗೆ ತುತ್ತಾಗಿರುವವರು ನಮ್ಮ ಸರ್ಕಾರಿ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿಕೊಂಡರೆ ಸಂಬಂಧಪಟ್ಟ ಔಷಧಗಳು ಉಚಿತವಾಗಿ ದೊರಕುತ್ತಿವೆ. ಈ ಪ್ರಯೋಜನವನ್ನು ರೋಗಿಗಳು ಪಡೆದುಕೊಳ್ಳಬೇಕು.”

ಡಾ.ಚಿದಂಬರ, ಜಿಲ್ಲಾ ಆರೋಗ್ಯಾಧಿಕಾರಿ

Tags:
error: Content is protected !!