Mysore
25
haze

Social Media

ಶನಿವಾರ, 06 ಡಿಸೆಂಬರ್ 2025
Light
Dark

ಲೆಕ್ಕ ತಪ್ಪಿದ ಶಿಕ್ಷಕರು; ಮಕ್ಕಳಿಗೆ ಅಂಕ ಖೋತ 

sslc evaluation

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮೌಲ್ಯಮಾಪನದಲ್ಲಿ ಎಡವಟ್ಟು
ಒಬ್ಬ ವಿದ್ಯಾರ್ಥಿಗೆ ೭೫ರ ಬದಲು ೪೫ ಅಂಕ; ಮತ್ತೊಬ್ಬ ವಿದ್ಯಾರ್ಥಿಗೆ ೯೪ರ ಬದಲು ೮೪ ಅಂಕ ನಮೂದು

ಶ್ರೀಧರ್ ಆರ್.ಭಟ್

ನಂಜನಗೂಡು: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳು ವಿದ್ಯಾರ್ಥಿ ಜೀವನದಲ್ಲಿ ದಡ ಸೇರಬೇಕೆಂದರೆ ಬರಿ ಓದೊಂದಿದ್ದರೆ ಸಾಲದು, ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನೂ ಗಳಿಸಬೇಕಿದೆ. ಹಾಗಾಗಿ ಪ್ರಸ್ತುತ ಕಾಲದಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಬೇಕು ಎಂದು ಮಕ್ಕಳು ಹಗಲು-ರಾತ್ರಿ ಎನ್ನದೆ ನಿರಂತರವಾಗಿ ಓದಿ ಪರೀಕ್ಷೆ ಬರೆಯುತ್ತಾರೆ. ಆದರೆ, ಮೌಲ್ಯಮಾಪಕರ ಎಡವಟ್ಟಿನಿಂದ ಆ ಮಕ್ಕಳಿಗೆ ನ್ಯಾಯವಾಗಿ ಬರಬೇಕಾದ ಅಂಕಗಳು ಸಿಗದಿದ್ದರೆ ಮಕ್ಕಳ ಭವಿಷ್ಯ ಕಮರಿ ಹೋದಂತೆಯೇ ಸರಿ.

ಅಂತಹದೊಂದು ಎಡವಟ್ಟು ೨೦೨೪-೨೫ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೌಲ್ಯ ಮಾಪನದಲ್ಲಿ ನಡೆದಿದ್ದು, ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ನ್ಯಾಯಯುತವಾಗಿ ಬರಬೇಕಾದ ಅಂಕಗಳಿಗೆ ಶಿಕ್ಷಕರು ಕನ್ನ ಹಾಕಿದರೆ ಅಥವಾ ಲೆಕ್ಕ ಬಾರದ ಶಿಕ್ಷಕರಿಂದ ಮೌಲ್ಯಮಾಪನ ನಡೆಯಿತೆ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.

೨೦೨೪-೨೫ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಮೌಲ್ಯ ಮಾಪನ ಮಾಡಿದ ಶಿಕ್ಷಕರು ಬೇಕಾಬಿಟ್ಟಿ ಮೌಲ್ಯಮಾಪನ ಮಾಡಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

ಶಿಕ್ಷಕರು ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿ ಅಂಕ ನೀಡಿದ ನಂತರ ಎರಡು ಹಂತಗಳಲ್ಲಿ ಅದನ್ನು ಪರಿಶೀಲಿಸಿ ಅಂತಿಮವಾಗಿ ಆಯಾ ವಿದ್ಯಾರ್ಥಿ ಪಡೆದ ಅಂಕಗಳನ್ನು ನಮೂದಿಸಲಾಗುತ್ತದೆ. ಆದರೆ ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತರಪತ್ರಿಕೆಯನ್ನು ಮೌಲ್ಯಮಾಪನ ಮಾಡಿದ ಶಿಕ್ಷಕ ಮಹಾಶಯರೊಬ್ಬರು ಸರಿ ಉತ್ತರಗಳಿಗೆ ತಾನೇ ನೀಡಿದ ಅಂಕಗಳನ್ನು ಒಟ್ಟುಗೂಡಿಸುವಾಗ ಮಾಡಿದ ಎಡವಟ್ಟಿನಿಂದಾಗಿ ೭೫ ಅಂಕಗಳು ಬರಬೇಕಾದ ವಿದ್ಯಾರ್ಥಿಗೆ ೪೫ ಅಂಕಗಳು ಬಂದಿದ್ದು, ೩೦ ಅಂಕ ವಂಚನೆಯಾಗಿದೆ.

ಆ ಮೌಲ್ಯಮಾಪಕ ಪ್ರತಿ ಸರಿ ಉತ್ತರಕ್ಕೂ ನೀಡಿರುವ ಅಂಕಗಳನ್ನು ಕೂಡಿಸಿ ಲೆಕ್ಕ ಹಾಕಿದರೆ ೭೫ ಅಂಕಗಳಾಗುತ್ತವೆ. ಪ್ರತಿ ಉತ್ತರಗಳಿಗೆ ನೀಡಿರುವ ಅಂಕಗಳನ್ನು ಎಣಿಸುವಾಗ ೧ರಿಂದ ೩೦ರವರೆಗಿನ ಪ್ರಶ್ನೆಗಳಿಗೆ ಬರೆದಿರುವ ಉತ್ತರಗಳಿಗೆ ನೀಡಿರುವ ೪೫ ಅಂಕಗಳನ್ನು ಮಾತ್ರ ಎಣಿಕೆ ಮಾಡಿ ೩೧ರಿಂದ ೩೮ರವರೆಗಿನ ಪ್ರಶ್ನೆಗಳ ಉತ್ತರಗಳಿಗೆ ನೀಡಿರುವ ೩೦ ಅಂಕಗಳನ್ನು ಕೈಬಿಟ್ಟಿದ್ದಾರೆ. ಇದರಿಂದ ಸಂತ್ರಸ್ತ ವಿದ್ಯಾರ್ಥಿಗೆ ೭೫ ಅಂಕಗಳಿಗೆ ಬದಲು ಕೇವಲ ೪೫ ಅಂಕಗಳು ಬಂದಿದೆ. ಮೌಲ್ಯಮಾಪನ ಮಾಡಿದ ಶಿಕ್ಷಕರ ಬೇಜವಾಬ್ದಾರಿಯಿಂದ ಒಬ್ಬ ವಿದ್ಯಾರ್ಥಿಗೆ ಒಂದೇ ವಿಷಯದಲ್ಲಿ ೩೦ ಅಂಕಗಳು ಕೈತಪ್ಪಿಹೋಗಿವೆ.

ಇನ್ನೊಬ್ಬ ವಿದ್ಯಾರ್ಥಿಯ ಉತ್ತರ ಪತ್ರಿಕೆ ಮೌಲ್ಯಮಾಪನದಲ್ಲೂ ಇಂತಹದ್ದೇ ಎಡವಟ್ಟು ಮಾಡಲಾಗಿದೆ. ಆ ವಿದ್ಯಾರ್ಥಿಯು ಬರೆದಿರುವ ಸರಿ ಉತ್ತರಗಳಿಗೆ ನೀಡಿರುವ ಅಂಕಗಳನ್ನು ಒಟ್ಟುಗೂಡಿಸಿದರೆ ಒಟ್ಟು ೯೪ ಅಂಕಗಳಾಗುತ್ತವೆ. ಆದರೆ ಮೌಲ್ಯಮಾಪಕರು ಒಟ್ಟು ಅಂಕಗಳನ್ನು ಎಣಿಕೆ ಮಾಡುವಾಗ ತಪ್ಪು ಲೆಕ್ಕ ಹಾಕಿದ್ದು, ೯೪ ಅಂಕಗಳ ಬದಲಿಗೆ ೮೪ ಅಂಕಗಳನ್ನು ನಮೂದಿಸಿದ್ದಾರೆ. ಇದರಿಂದ ಸಂತ್ರಸ್ತ ವಿದ್ಯಾರ್ಥಿಗೆ ೧೦ ಅಂಕಗಳು ವಂಚನೆಯಾಗಿವೆ. ಒಂದು ಉತ್ತರಪತ್ರಿಕೆಗೆ ೪೧೦ ರೂ.ಗಳನ್ನು ನೀಡಿ ಉತ್ತರ ಪತ್ರಿಕೆಯ ಫೋಟೋ ಪ್ರತಿಗಳನ್ನು ತರಿಸಿ ನೋಡಿದಾಗ ಮೌಲ್ಯಮಾಪಕರು ಮಾಡಿದ ಎಡವಟ್ಟು ಬೆಳಕಿಗೆ ಬಂದಿದೆ.

ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಲಿ

ಮೈಸೂರು: ಹೇಳಿ ಕೇಳಿ ಅಂಕಗಳ ಮಾನದಂಡದಲ್ಲೇ ನಿಂತಿರುವ ಈ ಯುಗದಲ್ಲಿ ವಿದ್ಯಾರ್ಥಿಯು ಹೆಚ್ಚು ಅಂಕಗಳು ಪಡೆದಿದ್ದರೆ ಮಾತ್ರ ಮುಂದೆ ಒಳ್ಳೆಯ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾವಕಾಶ ಲಭಿಸುತ್ತದೆ. ಇಲ್ಲದಿದ್ದರೆ ಹೆಚ್ಚಿನ ಡೊನೇಶನ್ ನೀಡಬೇಕು. ಒಂದು ವೇಳೆ ಶೇಕಡಾವಾರು ಅಂಕ ಗಳಿಕೆ ಸ್ಪರ್ಧೆ ಹೆಚ್ಚಾದರೆ ಪ್ರವೇಶಾ ವಕಾಶವೂ ಕೈತಪ್ಪಿಹೋಗಬಹುದು. ಹೀಗಿರುವಾಗ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿದ ಶಿಕ್ಷಕರೇ ಅಂಕಗಳಿಗೆ ಕನ್ನ ಹಾಕಿದರೆ ಆ ವಿದ್ಯಾರ್ಥಿಗಳ ಪರಿಸ್ಥಿತಿ ಏನಾಗಬೇಡ. ಈ ವಿಚಾರವನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಬೇಕಿದೆ.

Tags:
error: Content is protected !!