ನವೀನ್ ಡಿಸೋಜ
ಕೊಡಗು ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಿಂದ ತನಿಖೆ ಚುರುಕು
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ವಲಸೆ ಕಾರ್ಮಿಕರ ಸೇವೆ ಅನಿವಾರ್ಯವಾಗಿದೆ. ಈ ನಡುವೆ ಜಿಲ್ಲೆಯ ಕಾಫಿ ತೋಟಗಳಲ್ಲಿ ಅಸ್ಸಾಂ ಮೂಲದ ಕಾರ್ಮಿಕರ ಹೆಸರಿನಲ್ಲಿ ಬಾಂಗ್ಲಾ ದೇಶಿಗರು ಕೆಲಸ ಮಾಡುತ್ತಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಕೊಡಗು ಜಿಲ್ಲಾ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಕೊಡಗಿನಲ್ಲಿ ವಲಸೆ ಕಾರ್ಮಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ತೋಟ ಕಾರ್ಮಿಕರು, ರೆಸಾರ್ಟ್‌ಗಳಲ್ಲಿ ಹೌಸ್ ಕೀಪಿಂಗ್, ಗಾರ್ಡನಿಂಗ್, ರಿಸೆಪ್ಷನ್‌ನಿಂದ ಹಿಡಿದು ಚೆಫ್‌ಗಳವರೆಗೂ ಹೊರ ರಾಜ್ಯದ ಮಂದಿಯೇ ಅಧಿಕವಾಗಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ಬಹುತೇಕ ಕಟ್ಟಡಗಳಲ್ಲಿ ಬಹುಪಾಲು ಈಶಾನ್ಯ ರಾಜ್ಯಗಳ ಕಾರ್ಮಿಕರೇ ಕಾರ್ಯನಿರ್ವಹಿಸುತ್ತಿದ್ದಾರೆ.
ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ, ಅಸ್ಸಾಂಮತ್ತು ಉತ್ತರ ಪ್ರದೇಶದ ವಲಸೆ ಕಾರ್ಮಿಕರು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಂತೆಗಳಲ್ಲಿ, ಸಾರ್ವಜನಿಕ ಆಸ್ಪತ್ರೆ, ಬಸ್ ನಿಲ್ದಾಣಗಳಲ್ಲಿ ಸ್ಥಳೀಯರಿಗಿಂತ ಅವರೇ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸುತ್ತಾರೆ. ಕೆಲವೆಡೆ ಅವರೇ ಸಂತೆ ವ್ಯಾಪಾರವನ್ನೂ ನಡೆಸುತ್ತಾರೆ.
ಕೊಡಗಿನಲ್ಲಿ ಈಶಾನ್ಯ ಮತ್ತು ಉತ್ತರ ಭಾರತ ಭಾಗದ ಸಾವಿರಾರು ಕಾರ್ಮಿಕರು ನಾನಾ ಕೆಲಸಗಳಲ್ಲಿ ತೊಡಗಿದ್ದಾರೆ. ಇಲ್ಲಿಯೇ ಲೈನ್ ಮನೆ, ಬಾಡಿಗೆ ಮನೆಗಳಲ್ಲಿ ವಾಸವಿರುವ ಇವರು ೬ ತಿಂಗಳುಗಳಿಗೆ, ವರ್ಷಕ್ಕೊಮ್ಮೆ ತಮ್ಮೂರಿಗೆ ಹೋಗಿ ಮತ್ತೆ ಕೆಲಸಕ್ಕಾಗಿ ಇಲ್ಲಿಗೆ ಬರುತ್ತಾರೆ. ಕೆಲವು ಕಡೆ ಒಂದಷ್ಟು ಮಂದಿ ಗುಂಪಾಗಿ ಬಾಡಿಗೆ ಮನೆಯಲ್ಲಿ ವಾಸವಿದ್ದರೆ, ಮತ್ತೆ ಕೆಲವರು ಕುಟುಂಬ ಸಹಿತ ಜಿಲ್ಲೆಯಲ್ಲಿಯೇ ವಾಸವಿದ್ದಾರೆ. ಇವರಾರಿಗೂ ಕನ್ನಡ ಬರುವುದಿಲ್ಲ. ಹೀಗಾಗಿ ಸ್ಥಳೀಯರೊಂದಿಗೆ ಹಿಂದಿಯಲ್ಲಿಯೇ ಮಾತನಾಡುತ್ತಾರೆ. ಭಾಷೆ ಬಾರದ ಹಿನ್ನೆಲೆಯಲ್ಲಿ ಅವರು ಎಲ್ಲಿಯವರು ಎಂದು ತಿಳಿಯದ ಸ್ಥಳೀಯರು ಅವರನ್ನು ಅಸ್ಸಾಮಿಗಳು ಎಂದೇ ಭಾವಿಸಿದ್ದಾರೆ.
ಕೆಲ ವಲಸೆ ಕಾರ್ಮಿಕರು ಇತ್ತೀಚೆಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಪರಾಧ ಪ್ರಕರಣಗಳಲ್ಲಿಯೂ ಭಾಗಿಯಾಗುತ್ತಿದ್ದಾರೆ. ಹೀಗಾಗಿಯೇ ಕಾರ್ಮಿಕರೊಬ್ಬರನ್ನು ಸ್ಥಳೀಯರೊಬ್ಬರು ನೀನು ಎಲ್ಲಿಯವನು ಎಂದು ಕೇಳಿದ್ದಾರೆ. ಈ ವೇಳೆ ಆತ ನಾನು ಬಾಂಗ್ಲಾ ದೇಶದವನು ಎಂದು ಹೇಳಿಕೊಂಡಿದ್ದು, ಈ ವಿಡಿಯೋವೊಂದು ಜಿಲ್ಲೆಯಲ್ಲಿ ಸಂಚಲನ ಸೃಷ್ಟಿಸಿದೆ. ಜಿಲ್ಲೆಯ ಕಾಫಿ ತೋಟಗಳಲ್ಲಿ ಭಾರೀ ಸಂಖ್ಯೆಯಲ್ಲಿ ನೆಲೆಸಿರುವ ಅಸ್ಸಾಂ ಕಾರ್ಮಿಕರನ್ನು ತೀವ್ರ ಅನುಮಾನದಿಂದ ನೋಡುವಂತೆ ಮಾಡಿರುವುದು ಒಂದೆಡೆಯಾದರೆ ಕಾಫಿ ತೋಟಗಳಲ್ಲಿ ಬಾಂಗ್ಲಾ ದೇಶಿಗರುಇರುವ ಸಾಧ್ಯತೆ ಇದೆ ಎನ್ನುವ ಅನುಮಾನ ಕೂಡ ಕಾಡುತ್ತಿದೆ.
ಪೊನ್ನಂಪೇಟೆ ತಾಲ್ಲೂಕಿನ ಶ್ರೀಮಂಗಲ ಸಮೀಪದಲ್ಲಿ ಮದ್ಯದ ಅಂಗಡಿಗೆ ಬಂದಿದ್ದ ಅಸ್ಮತ್ ಅಲಿ ಎಂಬ ವ್ಯಕ್ತಿ ನಾನು ಬಾಂಗ್ಲಾದಿಂದ ಕೆಲಸಕ್ಕಾಗಿ ಬಂದಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಮೊದಲು ಪಶ್ಚಿಮ ಬಂಗಾಳಕ್ಕೆ ಬಂದು, ಅಲ್ಲಿಂದ ಕರ್ನಾಟಕಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾನೆ. ಸ್ಥಳೀಯ ಏಜೆಂಟ್ ಒಬ್ಬರು ನಮ್ಮನ್ನು ಕರೆತಂದಿದ್ದಾರೆ ಎಂದು ಕೂಡ ಹೇಳಿದ್ದಾನೆ. ಅಲ್ಲದೇ ಪೊನ್ನಂಪೇಟೆಯ ಹರಿಹರ ಗ್ರಾಮದಲ್ಲಿ ವಾಸವಾಗಿದ್ದೇನೆ ಎಂದು ಹೇಳಿದ್ದಾನೆ. ಹೀಗಾಗಿ ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ಆತಂಕ ಹೆಚ್ಚಾಗಿದೆ.
ಈ ಸಂಬಂಧ ವಿಡಿಯೋ ವೈರಲ್ ಆಗಿರುವುದನ್ನು ಗಮನಿಸುತ್ತಿದ್ದಂತೆ ಕೊಡಗು ಪೊಲೀಸರು ತೀವ್ರ ತಪಾಸಣೆಗೆ ಮುಂದಾಗಿದ್ದಾರೆ. ಕರೆತಂದಿರುವ ರಂಜಿತ್ ಯಾರೆಂದು ಪರಿಶೀಲಿಸುತ್ತಿದ್ದಾರೆ. ಪೊನ್ನಂಪೇಟೆ ತಾಲ್ಲೂಕಿನ ಕಾಫಿ ತೋಟಗಳಲ್ಲಿ ಪರಿಶೀಲನೆಗೆ ಮುಂದಾಗಿದ್ದಾರೆ. ಎಲ್ಲೇ ಆಗಲಿ ಹೊರ ರಾಜ್ಯದ ಕಾರ್ಮಿಕರು ಕೆಲಸ ಮಾಡುತ್ತಿರುವ ಕಡೆಗಳಲ್ಲಿ ಸ್ಥಳೀಯ ಜನರಿಗೆ ಜವಾಬ್ದಾರಿ ಇದೆ. ಸ್ಥಳೀಯರು ಜವಾಬ್ದಾರಿ ತೆಗೆದುಕೊಂಡು ಅಂತಹವರು ಯಾರಾದರೂ ಇದ್ದರೆ ಮಾಹಿತಿ ನೀಡಬೇಕು. ಇಲ್ಲದಿದ್ದರೆ, ಸ್ಥಳೀಯರು ಇದಕ್ಕೆ ಉತ್ತರ ನೀಡಬೇಕಾಗುತ್ತದೆ. ಕೆಲಸಕ್ಕೆಸೇರುವಾಗ ಅಗತ್ಯ ದಾಖಲೆಗಳನ್ನು ಪಡೆದು ಕೊಳ್ಳಬೇಕು ಎಂದು ಎಸ್.ಪಿ. ಕೆ. ರಾಮರಾಜನ್ ಸೂಚನೆ ನೀಡಿದ್ದಾರೆ.
” ದೇಶದ ರಕ್ಷಣೆಯ ಕೆಲಸ ಮೊದಲ ಆದ್ಯತೆ. ಅಸ್ಸಾಂ ಕಾರ್ಮಿಕರು ಬಂದು ಕೆಲಸ ಮಾಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಅವರ ಹೆಸರಿನಲ್ಲಿ ಬಾಂಗ್ಲಾ ಅಥವಾ ರೋಹಿಂಗ್ಯಾಗಳು ಬಂದಿದ್ದರೆ ಅದು ಸರಿಯಲ್ಲ, ಕೆಲವರು ಬಾಂಗ್ಲಾ ದೇಶಿಗರು ಇದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ನಮಗೂ ಕೆಲವು ಅನುಮಾನಗಳಿದ್ದು, ತನಿಖೆ ಮಾಡುತ್ತಿದ್ದೇವೆ. ಯಾವುದೇ ಅನುಮಾನ ಬಂದರೂ ನಮ್ಮ ಗಮನಕ್ಕೆ ತನ್ನಿ. ಇದು ರಾಷ್ಟ್ರೀಯ ಭದ್ರತೆಯ ವಿಷಯವಾಗಿದ್ದು, ಮಾಹಿತಿ ನೀಡಲು ಯಾರೂ ಹಿಂದೇಟು ಹಾಕಬಾರದು.”
-ಕೆ.ರಾಮರಾಜನ್, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ





