Mysore
20
few clouds

Social Media

ಶನಿವಾರ, 24 ಜನವರಿ 2026
Light
Dark

ಬೆಳೆಗಳ ಕುರಿತು ಮಾಹಿತಿ ಪಡೆದ ಇಂಜಿನಿಯರಿಂಗ್ ವಿದ್ಯಾರ್ಥಿಗಳು

ಕೆಂಪನಕೊಪ್ಪಲು ಗ್ರಾಮದ ಪ್ರಗತಿಪರ ರೈತ ಕೆ.ಪಿ.ಜಗದೀಶ್ ಅವರ ಜಮೀನಿಗೆ ಭೇಟಿ 

ಕೆ.ಆರ್.ನಗರ: ತೋಟಗಾರಿಕೆ ಹಾಗೂ ಕೃಷಿ ಕ್ಷೇತ್ರದ ಬಗ್ಗೆ ಅವಗಣನೆಹೆಚ್ಚುತ್ತಿರುವ ಕಾಲಘಟ್ಟದಲ್ಲಿ ಮೈಸೂರಿನ ಜಿ.ಎಸ್.ಎಸ್.ಎಸ್. ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಬಗ್ಗೆ ಮಾಹಿತಿ ಪಡೆಯಲು ಪಟ್ಟಣದ ಹೊರವಲಯದ ಕೆಂಪನಕೊಪ್ಪಲು ಗ್ರಾಮದ ಪ್ರಗತಿಪರ ರೈತ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಪಿ.ಜಗದೀಶ್ ಅವರ ಜಮೀನಿಗೆ ಭೇಟಿ ನೀಡಿ ಅಧ್ಯಯನ ನಡೆಸಿದರು.

ಮೈಸೂರಿನ ಜಿ.ಎಸ್.ಎಸ್.ಎಸ್. ಇಂಜಿನಿಯರಿಂಗ್ ಕಾಲೇಜಿನ ಎರಡನೇ ವರ್ಷದ ಎಲೆಕ್ಟ್ರಾನಿಕ್- ಕಮ್ಯೂನಿ ಕೇಷನ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಮೋನಿಕಾ, ಮೋನಿಶಾ, ಎಸ್. ಕೆ.ಕೀರ್ತನಾ, ಎನ್.ಪೂಜಾ, ಆರ್. ಕೀರ್ತನಾ, ನಂದಿನಿ, ಖುಷಿ, ಎಂ. ಕೋಮಲ ಅವರನ್ನು ಒಳಗೊಂಡ ತಂಡ ಆಗಮಿಸಿ ಜಮೀನಿನಲ್ಲಿ ಬೆಳೆದಿರುವ ಸಮಗ್ರ ಬೆಳೆಗಳ ಬಗ್ಗೆ ಜಗದೀಶ್ ಅವರಿಂದ ಮಾಹಿತಿ ಪಡೆದುಕೊಂಡಿತು.

ತೋಟಗಾರಿಕೆ ಬೆಳೆಗಳ ಸಸ್ಯಾಭಿವೃದ್ಧಿ ವಿಧಾನ, ಸಸಿ ಮಡಿ ಮಾಡುವ ವಿಧಾನ, ಮಣ್ಣಿನ ಫಲವತ್ತತೆ ಬಗ್ಗೆ, ಹೈಡೋಪೋನಿಕ್ಸ್, ಎರೆಹುಳು ಗೊಬ್ಬರ ಹಾಗೂ ಸುಧಾರಿತ ಕಾಂಪೋಸ್ಟ್ ತಯಾರಿಕಾ ವಿಧಾನಗಳ ಬಗ್ಗೆ ಕೆ.ಪಿ.ಜಗದೀಶ್ ಅವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ತೋಟಗಾರಿಕೆ ಬೆಳೆಗಳಾದ ಅಡಕೆ, ತೆಂಗು, ಮೆಣಸು, ಏಲಕ್ಕಿ, ಕಾಫಿ, ಚಕ್ಕೋತ, ಬಾಳೆ, ರಾಮಫಲ, ಸೀತಾಫಲ, ಲಕ್ಷಣ ಫಲ, ಹನುಮ ಫಲ, ಬಟರ್‌ ಫ್ರೂಟ್, ವಾಟರ್ ಆಪಲ್, ಆಸ್ಟ್ರೇಲಿಯಾ ಅಂಜೂರ, ಖರ್ಜೂರ, ಸೇಬು, ದಾಳಿಂಬೆ, ವರ್ಷಪೂರ್ತಿ ಬಿಡುವ ಮಾವಿನ ಹಣ್ಣು, ಇಂಗು, ಮೋಸಂಬಿ, ಕಿತ್ತಳೆ, ಡ್ರಾಗನ್, ಮೈಸೂರು ವೀಳ್ಯದೆಲೆ, ದ್ರಾಕ್ಷಿ, ಆಲ್ ಸೈಸಿ, ನಿಂಬೆ, ಹೇರಳೆಕಾಯಿ, ಪಚ್ಚ ಬಾಳೆಗಳನ್ನು ಹೇಗೆ ಬೆಳೆಯಲಾಗುತ್ತದೆ ಎಂಬುದರ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ಪಡೆದುಕೊಂಡರು. ಜಮೀನಿನ ಬದುವಿನಲ್ಲಿ ವಿವಿಧ ಮಾದರಿಯ ಹೂಗಿಡಗಳು, ಪಪ್ಪಾಯಿ ಸೇರಿದಂತೆ ಹಣ್ಣಿನ ಗಿಡಗಳನ್ನು ಬೆಳೆಸಿದ್ದು, ಅವುಗಳ ಕುರಿತೂ ಮಾಹಿತಿ ಪಡೆದರು. ಕೃಷಿ ಬೆಳೆಗಳಾದ ಭತ್ತ ಮತ್ತು ರಾಗಿ, ಜೋಳದ ಬೆಳೆಗಳ ಬಗ್ಗೆ ಕೂಡ ಅರಿತರು.

ಬಳಿಕ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೋನಿಕಾ ಪತ್ರಿಕೆಯೊಂದಿಗೆ ಮಾತನಾಡಿ, ಪ್ರಸ್ತುತ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ದಿನನಿತ್ಯ ಸೇವಿಸುವ ಆಹಾರ ಪದಾರ್ಥಗಳನ್ನು ಹೇಗೆ ಬೆಳೆಯುತ್ತಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲವಾಗಿದೆ. ಈ ಬಗ್ಗೆ ತೋಟಗಾರಿಕೆ ಹಾಗೂ ಕೃಷಿ ಬೆಳೆಗಳನ್ನು ಹೇಗೆ ಬೆಳೆಯುತ್ತಾರೆ ಎಂಬುದರ ಬಗ್ಗೆ ಅರಿವು ಮೂಡಿಸಲು ಮತ್ತು ಎಲೆಕ್ಟ್ರಾನಿಕ್-ಕಮ್ಯೂನಿಕೇಷನ್ ವಿಭಾಗದಲ್ಲಿ ಕೃಷಿ ಮತ್ತು ತೋಟಗಾರಿಕೆ ಬಗ್ಗೆ ೧೦೦ ಅಂಕಗಳ ಪ್ರಶ್ನೆ ಇದ್ದು ಈ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಪ್ರಗತಿಪರ ರೈತರಾದ ಕೆ.ಪಿ.ಜಗದೀಶ್ ಅವರ ಜಮೀನಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ಮಾಹಿತಿ ಪಡೆದೆವು ಎಂದು ತಿಳಿಸಿದರು.

” ಮಂಡ್ಯ, ಮತ್ತಿತರ ಜಿಲ್ಲೆಗಳಲ್ಲಿ ರೈತರು ಏಕ ಬೆಳೆ ಬೆಳೆಯುವುದರಿಂದ ನಿಗದಿತ ಬೆಂಬಲ ಬೆಲೆ ಸಿಗದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ರೈತರು ಈಗಲಾದರೂ ಎಚ್ಚತ್ತು ಸಮಗ್ರ ಬೆಳೆ ಬೆಳೆಯುವುದರಿಂದ ಒಂದಲ್ಲ ಒಂದು ಬೆಳೆಯಿಂದ ಬೆಲೆ ದೊರೆಯುತ್ತದೆ. ಈ ಬಗ್ಗೆ ರೈತರಲ್ಲಿ ಸರ್ಕಾರ ಅರಿವು ಮೂಡಿಸಬೇಕಿದೆ.”

-ಕೆ.ಪಿ.ಜಗದೀಶ್, ಪ್ರಗತಿಪರ ರೈತ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತರು, ಕೆಂಪನಕೊಪ್ಪಲು.

Tags:
error: Content is protected !!