‘ಆಂದೋಲನ’ ವರದಿಗೆ ಎಚ್ಚೆತ್ತುಕೊಂಡ ವಿವಿ ಆಡಳಿತ ಮಂಡಳಿ
ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಇಂಜಿನಿಯರಿಂಗ್‌ನ ೨೦೨೪-೨೫ನೇ ಶೈಕ್ಷಣಿಕ ಸಾಲಿನ ೨, ೪ ಹಾಗೂ ೬ನೇ ಸೆಮಿಸ್ಟರ್ಗಳ ಫಲಿತಾಂಶ ಬುಧವಾರ ಬಿಡುಗಡೆಯಾಗಿದೆ.
‘ಆಂದೋಲನ’ ದಿನ ಪತ್ರಿಕೆ ನ.೧೨ರಂದು ‘ಪರೀಕ್ಷೆ ಮುಗಿದು ನಾಲ್ಕು ತಿಂಗಳು; ಫಲಿತಾಂಶ ಗೋಜಲು’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ವರದಿ ಪ್ರಕಟಗೊಂಡ ಕೂಡಲೇ ಎಚ್ಚೆತ್ತುಕೊಂಡು ವಿವಿಯ ಆಡಳಿತ ಮಂಡಳಿ ರೆಗ್ಯುಲರ್ ಮತ್ತು ಬಾಕಿ ವಿಷಯಗಳ ಫಲಿತಾಂಶ ಬಿಡುಗಡೆ ಮಾಡಿದೆ.
ಕಾಲೇಜಿನ ಪ್ರಾಂಶುಪಾಲ ಎಂ.ಎಸ್.ಗೋವಿಂದೇ ಗೌಡ ಅವರು ಫಲಿತಾಂಶ ಪ್ರಕಟಣೆಯ ಸುತ್ತೋಲೆ ಹೊರಡಿಸಿದ್ದು, ಕಾಲೇಜಿನ ಸೂಚನಾ ಫಲಕದಲ್ಲಿ ಫಲಿತಾಂಶ ಪಟ್ಟಿ ಪ್ರಕಟಿಸಿದ್ದಾರೆ.
ಮುಗಿಯದ ಡೇಟಾ ಎಂಟ್ರಿ ಸಮಸ್ಯೆ: ನಾಲ್ಕು ತಿಂಗಳ ಬಳಿಕ ಫಲಿತಾಂಶ ಬಿಡುಗಡೆಗೊಂಡಿರುವುದು ಸಂತಸವೇ. ಆದರೆ, ಆನ್ ಲೈನ್‌ನಲ್ಲಿ ಫಲಿತಾಂಶ ಬಿಡುಗಡೆಯಾಗದಿರುವುದು ಡೇಟಾ ಎಂಟ್ರಿ ಸಮಸ್ಯೆಗೆ ಹಿಡಿದ ಕನ್ನಡಿಯಾಗಿದೆ.
ಫಲಿತಾಂಶ ಆನ್ ಲೈನ್‌ನಲ್ಲಿ ಬಿಡುಗಡೆಗೊಂಡಿದ್ದರೆ ತಾತ್ಕಾಲಿಕ ಅಂಕಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಲು ಅನುಕೂಲವಾಗುತ್ತಿತ್ತು. ಆದರೆ, ಈಗ ಮತ್ತೆ ಅಂಕಪಟ್ಟಿಗಾಗಿ ಕಾಯಬೇಕಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶೀಘ್ರದಲ್ಲಿ ಆನ್‌ಲೈನ್‌ನಲ್ಲಿ ಫಲಿತಾಂಶ ಬಿಡುಗಡೆ ಮಾಡಬೇಕು ಎಂಬುದು ವಿದ್ಯಾರ್ಥಿಗಳ ಆಗ್ರಹವಾಗಿದೆ.
” ತಾಂತ್ರಿಕ ಸಮಸ್ಯೆಯಿಂದ ಫಲಿತಾಂಶವನ್ನು ಆನ್ ಲೈನ್‌ನಲ್ಲಿ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ. ಕೂಡಲೇ ಸಮಸ್ಯೆ ಬಗೆಹರಿಸಲಾಗುವುದು. ಅಂಕಪಟ್ಟಿ ಅತ್ಯಂತ ಅವಶ್ಯವಾಗಿರುವ ವಿದ್ಯಾರ್ಥಿಗಳು ಕಾಲೇಜಿನ ಆಡಳಿತ ಮಂಡಳಿಯನ್ನು ಸಂಪರ್ಕಿಸಿದರೆ ತಾತ್ಕಾಲಿಕ ಅಂಕಪಟ್ಟಿ ನೀಡಲಾಗುವುದು.”
-ಎಂ.ಎಸ್.ಗೋವಿಂದೇಗೌಡ, ಪ್ರಾಂಶುಪಾಲ, ಮೈಸೂರು ವಿವಿ ಸ್ಕೂಲ್ ಆಫ್ ಇಂಜಿನಿಯರಿಂಗ್





