Mysore
16
overcast clouds

Social Media

ಗುರುವಾರ, 18 ಡಿಸೆಂಬರ್ 2025
Light
Dark

ಅಧಿಕಾರಿಗಳ ನಿರ್ಲಕ್ಷ್ಯ; ಬರಿದಾದ ಕೆರೆಕಟ್ಟೆಗಳು

ಮಂಜು ಕೋಟೆ

ಹಂಪಾಪುರ ಹೋಬಳಿ ವ್ಯಾಪ್ತಿಯ ರೈತರಲ್ಲಿ ಆತಂಕ; ನೀರು ತುಂಬಿಸದಿದ್ದರೆ ಹೋರಾಟದ ಎಚ್ಚರಿಕೆ

ಎಚ್.ಡಿ.ಕೋಟೆ: ತಾಲ್ಲೂಕಿನ ಹಂಪಾಪುರ ಹೋಬಳಿ ವ್ಯಾಪ್ತಿಯಲ್ಲಿ ಬರಿದಾಗಿರುವ ಕೆರೆಗಳಿಗೆ ನೀರು ತುಂಬಿಸಲು ಅಽಕಾರಿಗಳು ಮುಂದಾಗದೇ ಇರುವುದರಿಂದ ರೈತರು ಮತ್ತು ಜನಸಾಮಾನ್ಯರು ಕಂಗಾಲಾಗಿದ್ದಾರೆ.

ಕೋಟೆ ತಾಲ್ಲೂಕು ಅರೆ ಮಲೆನಾಡು ಎಂದು ಹೆಸರಾದರೂ ಹಂಪಾಪುರ ಹೋಬಳಿ ಬರ ಪೀಡಿತ ಪ್ರದೇಶವಾಗಿದೆ. ಕಳೆದ ೪-೫ ವರ್ಷಗಳ ಹಿಂದೆ ಸರ್ಕಾರ ಹಂಪಾಪುರ ಮತ್ತು ಜಯಪುರ ಹೋಬಳಿಗಳ ವ್ಯಾಪ್ತಿಯ ೩೦ ಕೆರೆಗಳಿಗೆ ಕಬಿನಿ ನದಿಯ ನೀರನ್ನು ತುಂಬಿಸುವ ಯೋಜನೆಗೆ ೬೦ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲಾಗಿದೆ. ಆದರೆ, ರೈತರು ಮತ್ತು ಸಾರ್ವಜನಿಕರ ಅನುಕೂಲಕ್ಕೆ ಬಾರದಿರುವುದು ಈ ಭಾಗದ ಜನರಲ್ಲಿ ಆತಂಕ ಮೂಡಿಸಿದೆ.

ತಾಲ್ಲೂಕಿನ ಹಂಪಾಪುರ ಹೋಬಳಿ ವ್ಯಾಪ್ತಿಯ ೧೪ ಕೆರೆಗಳಲ್ಲೂ ನೀರಿಲ್ಲದೆ ಬರಿದಾಗಿದ್ದು, ಜಾನುವಾರು, ರೈತರು, ಗ್ರಾಮಸ್ಥರಿಗೆ ನೀರಿನ ಸಮಸ್ಯೆ ಎದುರಾಗಿದೆ. ಮತ್ತೊಂದೆಡೆ ಕಬಿನಿ ಜಲಾಶಯ ವರ್ಷದಲ್ಲಿ ೨-೩ ಬಾರಿ ಭರ್ತಿ ಯಾಗಿ ನದಿಗೆ ಭಾರಿ ಪ್ರಮಾಣದ ನೀರನ್ನು ಹರಿಯಬಿಡಲಾಗುತ್ತಿದೆ.

ಆದರೆ ಹೊರಹೋಗುತ್ತಿರುವ ಇದೇ ನೀರಿನ ಬಳಿ ಏತ ನೀರಾವರಿ ಮೂಲಕ ತಾಲ್ಲೂಕಿನ ಹಂಪಾಪುರ ಮತ್ತು ಮೈಸೂರು ತಾಲ್ಲೂಕಿನ ಜಯಪುರ ವ್ಯಾಪ್ತಿಯ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಕೆಲಸವನ್ನು ನೀರಾವರಿ ಇಲಾಖೆ ಅಽಕಾರಿಗಳು ಮಾಡಿದ್ದರೆ ಈ ಭಾಗದ ಕೆರೆಕಟ್ಟೆಗಳು ನೀರುಕಾಣುತ್ತಿದ್ದವು. ಇದರಿಂದ ರೈತರಿಗೆ ಅನುಕೂಲವಾಗುತ್ತಿತ್ತು.

ಈ ಭಾಗದ ರೈತರುಗಳು ಕೆರೆಕಟ್ಟೆಗಳಿಗೆ ನೀರು ತುಂಬಿಸುವಂತೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಇಂದು, ನಾಳೆ ಎಂದು ಕಾಲ ಕಳೆಯುತ್ತಿರುವುದರಿಂದ ಕೆರೆಗಳು ಬರಿದಾಗಿದ್ದು, ರೈತರು ಕೆರೆಯ ಬಳಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ್ದಾರೆ. ಕೆರೆಗಳಿಗೆ ನೀರು ತುಂಬಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಲು ಮುಂದಾಗಿದ್ದಾರೆ.

” ಹಂಪಾಪುರ ಮತ್ತು ಜಯಪುರ ಹೋಬಳಿಯ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಕಾರ್ಯ ಪ್ರಾರಂಭಿಸಲಾಗಿತ್ತು. ಕೆಲವೊಂದು ಸಮಸ್ಯೆಗಳು ಎದುರಾಗಿದ್ದರಿಂದ ದುರಸ್ತಿ ಕಾರ್ಯ ನಡೆಯುತ್ತಿದೆ. ಶೀಘ್ರದಲ್ಲೇ ಕಬಿನಿ ಏತ ನೀರಾವರಿ ಮೂಲಕ ನೀರು ತುಂಬಿಸಲು ಕ್ರಮ ಕೈಗೊಳ್ಳಲಾಗುವುದು.”

-ಅವಿನಾಶ್, ನೀರಾವರಿ ಇಲಾಖೆ ಅಧಿಕಾರಿ

” ಎಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ ಜಲಾಶಯದ ನೀರಿನಿಂದ ಹಂಪಾಪುರ ಹೋಬಳಿ ವ್ಯಾಪ್ತಿಯಲ್ಲಿರುವ ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ಮುಂದಾಗಿಲ್ಲ. ಈ ಭಾಗದಲ್ಲಿ ಕೆರೆಗಳಲ್ಲಿ ನೀರಿಲ್ಲದೆ ದನ-ಕರುಗಳು, ರೈತರು, ಸಾರ್ವಜನಿಕರು ಪರದಾಡುವಂತಾಗಿದೆ. ಕೆರೆಗಳಿಗೆ ನೀರುತುಂಬಿಸುವಂತೆ ಮನವಿ ಮಾಡಿದರೂ ಸಬೂಬು ಹೇಳುತ್ತಿದ್ದಾರೆ. ೨-೩ ದಿನಗಳಲ್ಲಿ ಕೆರೆಗೆ ನೀರು ತುಂಬಿಸುವ ಕಾರ್ಯ ಮಾಡದಿದ್ದರೆ ಈ ಭಾಗದ ರೈತರ ಜತೆಗೂಡಿ ರಸ್ತೆ ತಡೆ ಪ್ರತಿಭಟನೆ ನಡೆಸಲಾಗುವುದು.”

-ಯತೀಶ್ ಕುಮಾರ್, ರೈತ, ಶಿಂಡೇನಹಳ್ಳಿ 

Tags:
error: Content is protected !!