ಕೆ.ಬಿ.ರಮೇಶನಾಯಕ
ಮೈಸೂರು: ದಸರಾ ಮಹೋ ತವದ ಬಳಿಕ ಮುಡಾ ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿ ದಂತೆ ಇಡಿ ಅಧಿಕಾರಿಗಳು ಬುಡಕ್ಕೆ ಕೈ ಹಾಕಿದ್ದು, ಜಾರಿನಿರ್ದೆಶನಾಲಯದ ಇಕ್ಕಳಕ್ಕೆ ಸಿಲುಕಿರುವ ಅಧಿಕಾರಿಗಳು ಹೊರ ಬರಲಾಗದೆ ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಎರಡು ದಿನಗಳಿಂದ ಇಡಿ ಅಧಿಕಾರಿಗಳು ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಮತ್ತು ದಾಖಲೆಗಳನ್ನು ಒದಗಿಸಲು ಪರದಾಡಿ ರುವುದನ್ನು ನೋಡಿದರೆ ಇಡಿ ಕುಣಿಕೆಗೆ ಸಿಕ್ಕಿ ಬೀಳುವುದು ಗ್ಯಾರಂಟಿ ಎನ್ನುವಂತಾಗಿದೆ.
ಮುಡಾ ಕಚೇರಿಯ ಒಳಗೆ ಇಡಿ ಅಧಿಕಾರಿ ಗಳು ನಿವೇಶನಗಳ ಅಕ್ರಮದ ಬಗ್ಗೆ ಇಂಚಿಂಚೂ ಮಾಹಿತಿ ಸಂಗ್ರಹಿಸುತ್ತಿದ್ದರೆ, ಹೊರಗಿರುವ ನಿರ್ಗಮಿತ ಅಧಿಕಾರಿಗಳು, ಶಿಫಾರಸು ಪತ್ರ ಕೊಟ್ಟಿರುವ ಸದಸ್ಯರ ಮನದಲ್ಲಿ ಆತಂಕದ ಛಾಯೆ ಮತ್ತಷ್ಟು ಗಟ್ಟಿಯಾಗುವ ಎಲ್ಲ ಲಕ್ಷಣಗಳೂ ಕಾಣಿಸಿಕೊಂಡಿವೆ.
ಮೈಸೂರು ನಗರದ ಹೊರ ವಲಯದ ಕೆಸರೆ ಬಳಿಯ ಭೂಮಿಗೆ ಬದಲಾಗಿ ವಿಜಯನಗರ ಬಡಾವಣೆಯಲ್ಲಿ ನೀಡಲಾಗಿದ್ದ 14 ನಿವೇಶನಗಳ ಮಂಜೂರಾತಿಗೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು. ಆದರೆ, ಹಣಕಾಸಿನ ವಹಿವಾಟಿಗೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ದೂರು ದಾಖಲಿಸಿಕೊಂಡಿದ್ದರೂ ಸದ್ದಿಲ್ಲದೆ ತನಿಖೆಯ ಮೂಲಕ್ಕೆ ಇಳಿಯುತ್ತಾರೆಂದು ಯಾರೂ ನಿರೀಕ್ಷಿಸಿರಲಿಲ್ಲ.
ಹಲವು ದಿನಗಳಿಂದ ಮುಡಾದಲ್ಲಿ ನಡೆದಿರುವ ಎಲ್ಲ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ತಮ್ಮದೇ ಆದ ತಂಡ ದಿಂದ ಮಾಹಿತಿಗಳನ್ನು ಕಲೆ ಹಾಕಿ ದಿಢೀರನೆ ಮುಡಾ ಕಚೇರಿಗೆ ಆಗಮಿಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ಶುರು ಮಾಡುತ್ತಿದ್ದಂತೆ ಎಲ್ಲರೂ ಕಕ್ಕಾಬಿಕ್ಕಿಯಾಗಿದ್ದಾರೆ.
ಮುಡಾ ಸಭೆಯಲ್ಲಿ ಆಗಿರುವ ನಿರ್ಣಯ ಗಳ ಪ್ರತಿಯೊಂದು ಮಾಹಿತಿ, ದಾಖಲೆಗಳನ್ನು ಪರಿಶೀಲಿಸಿ ತಮ್ಮ ವಶಕ್ಕೆ ಪಡೆದುಕೊಂಡಿರುವ ಅಧಿಕಾರಿಗಳು, ಮತ್ತಷ್ಟು ಮಾಹಿತಿ ಹೊರ ತೆಗೆಯಲು ಪೂರಕ ದಾಖಲೆಗಳನ್ನು ಕೊಡು ವಂತೆ ಸೂಚನೆ ನೀಡಿದ್ದಾರೆ.
ನಿವೇಶನಗಳ ಹಂಚಿಕೆ, ಬದಲಿ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಮುಡಾ ಸದಸ್ಯರು ಯಾವ್ಯಾವ ನಿವೇಶನಗಳನ್ನು ಮಂಜೂರು ಶಿಫಾರಸು ಮಾಡಿದ್ದಾರೆಂಬ ದಾಖಲೆಗಳು ಅಧಿಕಾರಿಗಳ ಕೈಗೆ ಸಿಕ್ಕಿದೆ.
ಇದನ್ನು ಮುಂದಿಟ್ಟುಕೊಂಡು ಮತ್ತಷ್ಟು ಜನರನ್ನು ವಿಚಾರಣೆ ನಡೆಸುವ ಸಾಧ್ಯತೆ ಇದೆ ಮಾಡಲು ಎಂದು ಮೂಲಗಳು ಹೇಳಿವೆ.
ಒಂದು ದಶಕದಿಂದ ಮುಡಾದಲ್ಲಿ ಸದಸ್ಯ ರಾಗಿರುವ ಶಾಸಕರು, ವಿಧಾನಪರಿಷತ್ ಸದಸ್ಯರು, ಸರ್ಕಾರಿ ನಾಮನಿರ್ದೇಶಿತ ಸದಸ್ಯರು ಕೊಟ್ಟಿರುವ ಶಿಫಾರಸು ಪತ್ರಗಳಲ್ಲಿ ಅನೇಕ ನಿವೇಶನಗಳ ಹಂಚಿಕೆ ಪತ್ತೆಯಾಗಿದ್ದು, ಇವರೆಲ್ಲರಿಗೂ ಸಂಕಷ್ಟ ಎದುರಾಗುವ ಸಂಭವ ದಟ್ಟವಾಗಿದೆ.
• ಮುಡಾ ಸಭೆಯ ಪ್ರತಿಯೊಂದೂ ಕಡತದ ಪರಿಶೀಲನೆ
• ಮುಡಾ ಸದಸ್ಯರು ಕೊಟ್ಟಿದ್ದ ಶಿಫಾರಸು ಪತ್ರವೂ ಅಧಿಕಾರಿಗಳ ಕೈಗೆ
• ಸಿಎಂಗೆ ಕಂಟಕವಾಗುವುದೇ ಅದೊಂದು ವೈಟ್ನರ್ ಹಚ್ಚಿದ ಪ್ರಕರಣ?
ಹಲವರ ನಿದ್ರೆ ಕೆಡಿಸಿದ ಇಡಿ:
ಮುಡಾದಲ್ಲಿ ಇಡಿ ಅಧಿಕಾರಿಗಳು ದಾಖಲೆ ಗಳನ್ನು ಪರಿಶೀಲಿಸುತ್ತಿರುವುದನ್ನು ನೋಡಿ ಕೆಲವರು ಬೆವರಿಳಿಸುತ್ತಿದ್ದರೆ, ಮತ್ತೊಂದೆಡೆ ಹಲವರ ನಿದ್ರಾಭಂಗವಾಗಿದೆ. ಇಡಿ ಅಧಿಕಾರಿಗಳು ದಾಳಿಗೂ ಮುನ್ನ ಸಿದ್ಧಪಡಿಸಿಕೊಂಡು ಬಂದಿದ್ದ ಪ್ರಶ್ನೆಗಳಿಗೆ ಉತ್ತರ ಕೊಡಲಾಗದೆ ಪೇಚಾಟಕ್ಕೆ ಸಿಲುಕಿದ್ದರೆ, ಹಲವರು ಹಿಂದಿನ ಆಯುಕ್ತರ ನಿರ್ದೇಶನದಂತೆ ನಾವು ಮಾಡಿದ್ದೇವೆಂದು ಬಾಯ್ದಿಟ್ಟಿದ್ದಾರೆ.
ಸಿಎಂಗೆ ಕಂಟಕವಾಗುವುದೇ ವೈಟ್ನರ್?:
ಮುಡಾ ನಿವೇಶನ ಹಂಚಿಕೆಯಲ್ಲಿ ತಮ್ಮ ಪಾತ್ರವಿಲ್ಲವೆಂದು ಹೇಳುತ್ತಲೇ ಇರುವ ಸಿಎಂ ಸಿದ್ದರಾಮಯ್ಯ ಅವರಿಗೆ ಒಂದೊಂದೇ ಕಂಟಕ ಸುತ್ತಿಕೊಳ್ಳುತ್ತಿರುವುದು ಗೋಚರವಾಗಿದೆ. ನಿವೇಶನ ಮಂಜೂರು ಮಾಡುವಾಗ ಸಲ್ಲಿಸಿದ್ದ ಅರ್ಜಿಗೆ ಹಾಕಿರುವ ವೈಟ್ನರ್ ಹಿಂದಿರುವ ಅಕ್ಷರಗಳನ್ನು ಪತ್ತೆ ಮಾಡಿರುವುದು ಗಮನಾರ್ಹವಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಮುಡಾ ವಿಚಾರದ ದಾಖಲೆಗಳನ್ನು ಪ್ರದರ್ಶಿಸುವಾಗ ನಗರಾಭಿವೃದ್ಧಿ ಸಚಿವರಾಗಿದ್ದ ಬಿ.ಎನ್.ಬಚ್ಚೇಗೌಡರು ನಿವೇಶನ ಮಂಜೂರು ಮಾಡಬಹುದೆಂದು ಹೇಳಿ ಪತ್ರ ನೀಡಿದ್ದನ್ನು ಹೇಳಿದ್ದು, ಮುಡಾ ಕಚೇರಿಯಲ್ಲಿ ಇರಬೇಕಾದ ಪತ್ರ ಸಿಎಂ ಕಚೇರಿ ಯಲ್ಲಿ ಇರಲು ಹೇಗೆ ಸಾಧ್ಯ ಎನ್ನುವ ವಿಚಾರ ಇದೀಗ ಕಾಡುತ್ತಿದೆ. ಅಲ್ಲದೆ, ಮುಡಾಕ್ಕೆ 14 ನಿವೇಶನಗಳನ್ನು ವಾಪಸ್ ಮಾಡಿದ್ದರೂ ಹಿಂದಿನ ಆಯುಕ್ತರಿಬ್ಬರ ಮೇಲೂ ಈವರೆಗೆ ಯಾವುದೇ ಕ್ರಮ ಜರುಗಿಸದೆ ಹಾಗೆಯೇ ಬಿಟ್ಟಿರುವುದು ಕೂಡ ಸಿಎಂ ತಲೆಗೆ ಸುತ್ತಿಕೊಳ್ಳುತ್ತಿದೆ ಎಂದು ಹೇಳಲಾಗಿದೆ.