Mysore
18
broken clouds

Social Media

ಬುಧವಾರ, 14 ಜನವರಿ 2026
Light
Dark

ಬರದಿಂದ ಗಣೇಶ ಮೂರ್ತಿ ವ್ಯಾಪಾರ ಕುಸಿತ

ಅಣ್ಣೂರು ಸತೀಶ್

ವ್ಯಾಪಾರಿಗಳು ಕಂಗಾಲು; ಮನೆಯಲ್ಲೇ ಪರಿಸರ ಸ್ನೇಹಿ ಗಣೇಶಮೂರ್ತಿ ಪ್ರತಿಷ್ಠಾಪಿಸಿ ಪೂಜೆ 

ಭಾರತೀನಗರ: ಕಳೆದ ವರ್ಷ ಮಂಡ್ಯ ಜಿಲ್ಲಾದ್ಯಂತ ಆವರಿಸಿದ ‘ಬರ’ದ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಉದ್ಯಮಗಳೂ ಕುಸಿದಿದ್ದು, ರೈತರು ಕೂಡ ಬೆಳೆ ಇಲ್ಲದೆ ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಗಣೇಶ ಹಬ್ಬದ ಮೇಲೂ ಪರಿಣಾಮ ಬೀರಿದಂತಾಗಿದೆ.

ಶ್ರಾವಣ ಮಾಸ ಮುಗಿಯುತ್ತಿದ್ದಂತೆ ಎಲ್ಲ ಕಡೆಯೂ ಗೌರಿ-ಗಣೇಶ ಹಬ್ಬದ ಸಡಗರ ಮನೆಮಾಡುತ್ತದೆ. ನಗರ ಹಾಗೂ ಪಟ್ಟಣಗಳಲ್ಲಿ ಗೌರಿ-ಗಣೇಶ ಮೂರ್ತಿಗಳನ್ನು ಮಾರಾಟ ಮಾಡಲು ವ್ಯಾಪಾರಸ್ಥರು ಮುಂದಾಗಿದ್ದಾರೆ. ಒಂದು ವರ್ಷದಿಂದ ನಾಲೆಗಳಲ್ಲಿ ನೀರು ಹರಿಯದೆ, ವ್ಯವಸಾಯ ಮಾಡದೆ ಬರದ ಛಾಯೆಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪ್ರಸಕ್ತ ವರ್ಷ ಸಮರ್ಪಕವಾಗಿ ಮಳೆಯಾಗಿ ಕನ್ನಂಬಾಡಿ ಅಣೆಕಟ್ಟೆ ತುಂಬಿದರೂ ಕೂಡ ನಾಲೆಗಳ ಆಧುನೀಕರಣ ಹೆಸರಿನಲ್ಲಿ ನೀರನ್ನು ಹರಿಸದಿದ್ದರಿಂದ ವಿ.ನಾಲೆಯ ಕೊನೆಯ ಭಾಗದ ಮದ್ದೂರು-ಭಾರತೀನಗರ- ಮಳವಳ್ಳಿ ವ್ಯಾಪ್ತಿಯ ರೈತರು ಬೆಳೆಗಳನ್ನು ಒಡ್ಡದೆ ಕಂಗಾಲಾಗಿದ್ದಾರೆ. ಇದರಿಂದ ದೊಡ್ಡ ದೊಡ್ಡ ಗಣೇಶಮೂರ್ತಿಗಳನ್ನು ತಂದಿದ್ದ ಅಂಗಡಿ ಮಾಲೀಕರಿಗೆ ವ್ಯಾಪಾರವಾಗದೆ ನಷ್ಟ ಅನುಭವಿಸುವಂತಾಗಿದೆ. ಅಲ್ಲದೆ, ಕೆಲವು ಅಂಗಡಿಗಳಲ್ಲಿ ಚಿಕ್ಕಚಿಕ್ಕ ಮಣ್ಣಿನ ಗಣೇಶಮೂರ್ತಿ ಹಾಗೂ ಅಲಂಕಾರಿಕ ಗಣಪನನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಆದರೂ ಗಣಪನನ್ನು ಕೊಂಡುಕೊಳ್ಳುವವರ ಸಂಖ್ಯೆ ಕಡಿಮೆ ಎಂದು ಚಿಕ್ಕರಸಿನಕೆರೆ ರಘು ತಿಳಿಸಿದ್ದಾರೆ.

೫ ಅರ್ಜಿಗಳು: ಕಳೆದ ವರ್ಷ ಕೆ. ಎಂ.ದೊಡ್ಡಿ ಪೊಲೀಸ್ ಠಾಣೆ ವ್ಯಾಪ್ತಿಯ ೫೮ ಹಳ್ಳಿಗಳಲ್ಲಿ ೧೩೦ ಅರ್ಜಿಗಳು ಗಣಪತಿ ಪ್ರತಿಷ್ಠಾಪಿಸುವುದಾಗಿ ಬಂದಿದ್ದವು. ಆದರೆ ಈ ವರ್ಷ ಬರದ ಕರಿನೆರಳಿನಿಂದ ಸದ್ಯಕ್ಕೆ ಕೇವಲ ೫ ಅರ್ಜಿಗಳು ಬಂದಿವೆ. ಗೌರಿ-ಗಣೇಶ ಹಬ್ಬದ ಹಿಂದಿನ ದಿನ ಅರ್ಜಿಗಳು ಬರಬಹುದೆಂದು ಪೊಲೀಸರು ತಿಳಿಸಿದ್ದಾರೆ.

” ಒಂದು ವರ್ಷದಿಂದ ರೈತರು ಬೆಳೆಗಳಿಲ್ಲದೆ ಪರಿತಪಿಸುತ್ತಿದ್ದಾರೆ. ಪ್ರಸಕ್ತ ವರ್ಷವು ಕೂಡ ನಾಲೆಗಳಿಗೆ ನೀರಿಲ್ಲದೆ ಬೆಳೆಗಳನ್ನು ಒಡ್ಡಲಾಗದೆ, ಇತ್ತ ಹಣವೂ ಇಲ್ಲದೆ ದೊಡ್ಡದೊಡ್ಡ ಗಣೇಶಮೂರ್ತಿಗಳನ್ನು ಕೊಂಡುಕೊಳ್ಳಲಾಗದಿರುವುದರಿಂದ ವ್ಯಾಪಾರಿಗಳಿಗೆ ದೊಡ್ಡಪೆಟ್ಟು ಬಿದ್ದಿದೆ.”

-ರಾಘು, ಚಿಕ್ಕರಸಿನಕೆರೆ, ವ್ಯಾಪಾರಿ

” ಜನತೆ ಬಣ್ಣಬಣ್ಣದ ಗಣೇಶ ಮೂರ್ತಿಗಳನ್ನು ಕೊಂಡುಕೊಳ್ಳುವ ವ್ಯಾಮೋಹಕ್ಕೆ ಒಳಗಾಗಬೇಡಿ. ಪರಿಸರ ಸ್ನೇಹಿ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸುವುದರಿಂದ ಪರಿಸರ ಸಂರಕ್ಷಿಸಿದಂತಾಗುತ್ತದೆ. ಪಿಒಪಿ ಗಣೇಶಮೂರ್ತಿಗಳನ್ನು ನದಿ-ಕೆರೆ, ನಾಲೆಗಳಲ್ಲಿ ವಿಸರ್ಜನೆ ಮಾಡುವುದರಿಂದ ನೀರು ಕಲುಷಿತಗೊಂಡು ಜನ-ಜಾನುವಾರುಗಳಿಗೂ ಹಾನಿಯಾಗುತ್ತದೆ.”

-ಶಿವಪ್ಪ, ಮನ್‌ಮುಲ್ ಅಧ್ಯಕ್ಷ. ಗೆಜ್ಜಲಗೆರೆ

” ಗೌರಿ-ಗಣೇಶ ಹಬ್ಬವನ್ನು ಪ್ರತಿ ಹಳ್ಳಿಗಳಲ್ಲೂ ಪ್ರತಿ ಬೀದಿಗಳಲ್ಲೂ ಆಚರಣೆ ಮಾಡಲು ಮುಂದಾಗಿದ್ದಾರೆ. ಇದರಿಂದ ಶಬ್ದ ಮಾಲಿನ್ಯ, ಜಲಮಾಲಿನ್ಯ ಉಂಟಾಗುತ್ತದೆ. ಹಾಗಾಗಿ ಗಣೇಶಮೂರ್ತಿ ಪ್ರತಿಷ್ಠಾಪಿಸುವವರಿಗೆ ಸರಳವಾಗಿ ಆಚರಣೆ ಮಾಡಬೇಕು ಎಂದು ತಿಳಿಹೇಳಬೇಕಿದೆ.”

-ಪ್ರಿಯಾಂಕ ಅಪ್ಪುಗೌಡ, ಪುರಸಭೆ ಸದಸ್ಯೆ, ಮದ್ದೂರು

Tags:
error: Content is protected !!