Mysore
16
overcast clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಸಂಖ್ಯಾ ಫಲಕ ಮರೆಮಾಚಿ ವಾಹನ ಚಾಲನೆ!

ಸಂಚಾರ ನಿಯಮ ಉಲ್ಲಂಘನೆ ದಂಡ ತಪ್ಪಿಸಕೊಳ್ಳಲು ಅಡ್ಡ ದಾರಿ

ಎಚ್. ಎಸ್. ದಿನೇಶ್‌ಕುಮಾರ್
ಮೈಸೂರು: ಸಂಚಾರ ನಿಯಮ ಉಲ್ಲಂಘನೆ ಸಂಬಂಧ ದಂಡವನ್ನು ತಪ್ಪಿಸಿಕೊಳ್ಳುವ ದುರುದ್ದೇಶದಿಂದ ಸಂಖ್ಯಾಫಲಕದ ಅಂಕಿ ಗಳನ್ನು ಸ್ಟಿಕ್ಕರ್ ಬಳಸಿ ಮುಚ್ಚಿ ವಾಹನ ಚಾಲನೆ ಮಾಡುವ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದ ಎರಡು ತಿಂಗಳುಗಳಲ್ಲಿ ೫ ಮಂದಿ ವಾಹನ ಸವಾರರ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಆದರೆ ಪೊಲೀಸರ ಕಣ್ತಪ್ಪಿಸಿ, ಕ್ಯಾಮೆರಾಗಳ ಕಣ್ಣಿಗೆ ಬೀಳದೆ ಸಂಚರಿಸುತ್ತಿರುವ ಪ್ರಕರಣಗಳು ನೂರಾರು ಎಂದು ಹೇಳಲಾಗಿದೆ.

ನಗರದಾದ್ಯಂತ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರನ್ನು ಪತ್ತೆ ಹಚ್ಚುವ ಸಲುವಾಗಿ ಸುಮಾರು ೫೦ ವಿವಿಧ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅಲ್ಲಿ ಹಾದು ಹೋಗುವ ವಾಹನಗಳು ಸಂಚಾರ ನಿಯಮ ಉಲ್ಲಂಘಿಸಿದಲ್ಲಿ ನಿಯಂತ್ರಣ ಕೇಂದ್ರದಲ್ಲಿ ದಾಖಲಾಗುತ್ತದೆ. ನಂತರ ಅಲ್ಲಿನ ಸಿಬ್ಬಂದಿಗಳು ವಾಹನ ಸಂಖ್ಯೆಗಳನ್ನು ಗಮನಿಸಿ ಸವಾರರಿಗೆ ದಂಡದ ನೋಟಿಸ್ ಜಾರಿಗೊಳಿಸುವ ಪ್ರಕ್ರಿಯೆ ನಡೆಸುತ್ತಾರೆ. ದಂಡದ ಮೊತ್ತ ಇದೀಗ ಭಾರೀ ಹೆಚ್ಚಳವಾಗಿರುವ ಕಾರಣ ದಂಡ ತಪ್ಪಿಸಿಕೊಳ್ಳಲು ಕೆಲವರು ಅನ್ಯ ದಾರಿಗಳನ್ನು ಹುಡುಕಿಕೊಂಡಿದ್ದಾರೆ. ಅದರಲ್ಲಿ ಮುಖ್ಯವಾಗಿ ಸಂಖ್ಯಾಫಲಕದಲ್ಲಿನ ಅಂಕಿಗಳನ್ನು ಬದಲಿಸುವುದು ಹಾಗೂ ಸಂಖ್ಯಾ ಫಲಕದಲ್ಲಿನ ಒಂದು ಅಥವಾ ಎರಡು ಅಂಕಿ ಗಳನ್ನು ಸ್ಟಿಕ್ಕರ್ ಬಳಸಿ ಮುಚ್ಚುವುದು. ಇದು ಸಂಚಾರ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಹೀಗಾಗಿ ನಗರ ಪೊಲೀಸ್ ಆಯುಕ್ತರು ವಾಹನ ತಪಾಸಣೆ ವೇಳೆ ಏನಾದರೂ ಸಂಖ್ಯಾ ಫಲಕವನ್ನು ಬದಲಿಸಿರುವುದು ಗಮನಕ್ಕೆ ಬಂದಲ್ಲಿ ಯಾವುದೇ ಮುಲಾಜಿಲ್ಲದೇ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಸೂಚನೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಸಂಚಾರ ಪೊಲೀಸರು, ವಾಹನ ತಪಾಸಣೆ ವೇಳೆ ಸಂಖ್ಯಾ ಫಲಕದ ಅಂಕಿಗಳನ್ನು ಮುಚ್ಚಿರುವುದು ಅಥವಾ ಸಂಖ್ಯೆಗಳನ್ನೇ ತಪ್ಪಾಗಿ ನಮೂದು ಮಾಡಿರುವುದು ಕಂಡುಬಂದಲ್ಲಿ ಪ್ರಕರಣ ದಾಖಲಿಸುತ್ತಿದ್ದಾರೆ.

ಕಳೆದ ಬುಧವಾರ ಇಂತಹದ್ದೇ ಪ್ರಕರಣ ದಾಖಲಾಗಿದೆ. ದಂಡ ಹಾಕುವುದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ದ್ವಿಚಕ್ರ ವಾಹನದ ಸಂಖ್ಯಾಫಲಕದ ಒಂದು ಸಂಖ್ಯೆಯನ್ನು ಮುಚ್ಚಿ ವಾಹನ ಚಾಲನೆ ಮಾಡುತ್ತಿದ್ದ ಯುವಕನೊಬ್ಬನ ವಿರುದ್ಧ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಗುಂಡ್ಲುಪೇಟೆ ತಾಲ್ಲೂಕಿನ ಮಂಟಿಪುರ ಗ್ರಾಮದ ನಿವಾಸಿ ಮಧು ಎಂಬಾತ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಅತನಿಗೆ ಠಾಣಾ ಜಾಮೀನು ನೀಡಿ ಕಳುಹಿಸಿದ್ದಾರೆ. ಡಿ. ೧೭ರಂದು ವಿವಿಪುರಂ ಸಂಚಾರ ಪೊಲೀಸರು ವಿಜಯನಗರದ ಬಸವನಹಳ್ಳಿ ಬಳಿ ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಮಧು ತನ್ನ ಬೈಕ್‌ನಲ್ಲಿ ತೆರಳುತ್ತಿದ್ದನು. ಆತನ ವಾಹನವನ್ನು ತಡೆದು ಸಂಖ್ಯೆಯನ್ನು ಪರಿಶೀಲಿಸಿದ್ದಾರೆ. ಈ ವೇಳೆ ವಾಹನದ ಸಂಖ್ಯಾಫಲಕದಲ್ಲಿ ಕೊನೆಯ ಅಂಕಿಯನ್ನು ಸ್ಟಿಕ್ಕರ್‌ನಿಂದ ಮುಚ್ಚಿದ್ದುದು ಪೊಲೀಸರ ಗಮನಕ್ಕೆ ಬಂದಿದೆ. ವಿಚಾರಣೆ ವೇಳೆ ಆತ ದಂಡ ತಪ್ಪಿಸಿಕೊಳ್ಳುವ ಸಲುವಾಗಿ ಅಂಕಿಯನ್ನು ಮುಚ್ಚಿರುವುದಾಗಿ ಒಪ್ಪಿಕೊಂಡಿದ್ದಾರೆ. ಇದೀಗ ಆತನ ವಿರುದ್ಧ ಪ್ರಕರಣ ದಾಖಲಾಗಿದೆ.

 

Tags:
error: Content is protected !!