ಮಹಾದೇಶ್ ಎಂ.ಗೌಡ,
ಹನೂರು: ಕುಡಿಯುವ ನೀರಿಗೂ ಪರ ದಾಡುತ್ತಿರುವ ಜನತೆ, ಒಣಗಿ ನಿಂತು ಹನಿ ನೀರಿಗಾಗಿ ಕಾಯುತ್ತಿರುವ ಬೆಳೆಗಳು… ಇದು ನಮ್ಮೂರಿನಲ್ಲಿ ಕೆರೆ- ಕಟ್ಟೆಗಳು ನೀರಿಲ್ಲದೆ ಬರಿ ದಾಗಿವೆ. ಕುಡಿಯುವ ನೀರು, ಬೇಸಾಯಕ್ಕೆ ನೀರು ಇಲ್ಲದಂತಾಗಿದೆ. ನೀರು ಒದಗಿಸಲು ಕ್ರಮಕೈಗೊಳ್ಳಿ ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದ ಹಾಗೂ ವಿಡಿಯೋ ಮೂಲಕ ಮನವಿ ಮಾಡಿದ ಐವರು ವಿದ್ಯಾರ್ಥಿಗಳ ಗ್ರಾಮವಾದ ಕೆಂಪಯ್ಯನಹಟ್ಟಿ (ಪಳನಿಮೇಡು) ಸೇರಿದಂತೆ ರಾಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಊರುಗಳ ದುಸ್ಥಿತಿ.
ವಿದ್ಯಾರ್ಥಿಗಳ ಪತ್ರವು ತಾಲ್ಲೂಕು ವ್ಯಾಪ್ತಿಯಲ್ಲಿ ಸಂಚಲನ ಉಂಟುಮಾಡಿದೆ. ಪರಿಣಾಮವಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮೋನ ರೋತ್ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ರಾಮಾಪುರ ಕೆಂಪಯ್ಯನಹಟ್ಟಿ ಗ್ರಾಮಕ್ಕೆ ಮಂಗಳ ವಾರ ಭೇಟಿ ನೀಡಿ ಪರಿಶೀಲಿಸಿದ್ದಲ್ಲದೆ, ನೀರಿನ ಸಮಸ್ಯೆ ಕುರಿತು ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದರು.
ವಿದ್ಯಾರ್ಥಿನಿಯು ಕುಡಿಯುವ ನೀರಿಗಾಗಿ ಮನವಿ ಮಾಡಿರುವ ಬಗ್ಗೆ ಮಾಹಿತಿ ಪಡೆದು ಕೊಳ್ಳಲು ಘಟನಾ ಸ್ಥಳಕ್ಕೆ ‘ಆಂದೋಲನ’ ತಂಡ ತೆರಳಿ ಪರಿಶೀಲನೆ ನಡೆಸಿದಾಗ, ಸ್ಥಳೀಯರು ಹನಿ ಹನಿ ನೀರಿಗೂ ಕಷ್ಟಪಡುತ್ತಿರುವುದು ಕಂಡುಬಂತು.
ಹನೂರು ತಾಲ್ಲೂಕು ವ್ಯಾಪ್ತಿಯಲ್ಲಿ ೨೫ ಗ್ರಾಮ ಪಂಚಾಯಿತಿಗಳು ಇವೆ. ಕಳೆದ ಎರಡು ವರ್ಷಗಳಿಂದ ಸಮರ್ಪಕ ಮಳೆಯಾಗದ ಹಿನ್ನೆಲೆ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಜಲಕ್ಷಾಮವೇ ಉಂಟಾಗಿದೆ.
ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಚಾಮರಾಜನಗರ ಜಿಲ್ಲೆಯಲ್ಲಿಯೇ ಅತಿದೊಡ್ಡ ಗ್ರಾಮ ಪಂಚಾಯಿತಿಯಾಗಿದ್ದು, ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ಶೇ.೭೦ರಷ್ಟು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದೆ. ಈಗಾಗಲೇ ಗ್ರಾಮ ಪಂಚಾಯಿತಿ ವತಿಯಿಂದ ಕಳೆದ ತಿಂಗಳು ಎಂಟು ಕೊಳವೆ ಬಾವಿಗಳನ್ನು ಕೊರೆಸಲಾಗಿದ್ದು, ಈ ಪೈಕಿ ಮೂರು ಬೋರ್‌ವೆಲ್‌ಗಳು ವಿಫಲವಾಗಿವೆ.
ಉಳಿದ ೫ ಬೋರ್‌ವೆಲ್‌ಗಳಲ್ಲಿ ಕುಡಿಯುವ ನೀರು ಸಮರ್ಪಕವಾಗಿ ಬರುತ್ತಿತ್ತು. ಆದರೆ ಕಳೆದ ೧೫ ದಿನಗಳಿಂದ ಈ ಕೊಳವೆ ಬಾವಿಗಳಲ್ಲಿಯೂ ಸಮರ್ಪಕ ನೀರು ಪೂರೈಕೆಯಾಗದ ಹಿನ್ನೆಲೆಯಲ್ಲಿ ಕಡಬೂರು, ಕೊಂಬೈ ನಗರ, ಬಿದರಳ್ಳಿ ಗ್ರಾಮಗಳಿಗೆ ಕಳೆದ ೩ ತಿಂಗಳುಗಳಿಂದ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.
ಖಾಸಗಿ ಬೋರ್‌ವೆಲ್‌ಗಳ ಮುಖಾಂತರ ನೀರು ಪೂರೈಕೆ: ತಾಲ್ಲೂಕಿನ ದೊಡ್ಡ ಆಲತ್ತೂರು ಮಾರ್ಟಳ್ಳಿ, ಕೌದಳ್ಳಿ, ಗ್ರಾಮ ಪಂಚಾಯಿತಿ ವ್ಯಾಪ್ತಿಗಳ ಗ್ರಾಮಗಳಿಗೆ ಆರು ಖಾಸಗಿ ಬೋರ್‌ವೆಲ್‌ಗಳ ಮುಖಾಂತರ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಕೆಂಪಯ್ಯನ ಹಟ್ಟಿ ಗ್ರಾಮದ ಭರತ್ ಅವರ ಖಾಸಗಿ ಜಮೀನಿನಿಂದ ಕಳೆದ ೩ ತಿಂಗಳುಗಳಿಂದ ನೀರು ಪೂರೈಕೆ ಮಾಡಲಾಗುತ್ತಿದೆ
ಮಾರ್ಟಳ್ಳಿ ಗ್ರಾಮ ಪಂಚಾಯಿತಿಯ ಬಿದರಳ್ಳಿ, ಅನ್ನೈತೆರೆಸಾ ನಗರ, ವಡ್ಡರದೊಡ್ಡಿ, ಶಿಲುಬೆ ನಗರ, ಕೌದಳ್ಳಿ ಗ್ರಾಮ ಪಂಚಾ ಯಿತಿಯ ಹೊಸದೊಡ್ಡಿ ಗ್ರಾಮಕ್ಕೆ ಖಾಸಗಿ ಬೋರ್‌ವೆಲ್‌ಗಳ ಮುಖಾಂತರ ನೀರು ಪೂರೈಕೆ ಮಾಡಲಾಗುತ್ತಿದೆ.
ಸಾವಿರ ಅಡಿ ಕೊರೆದರೂ ಬಾರದ ನೀರು: ಬಿದರಳ್ಳಿ, ವಡ್ಡರದೊಡ್ಡಿ, ಕೌದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೌದಳ್ಳಿ, ಮಲೆ ಮಹದೇಶ್ವರ ಬೆಟ್ಟ ಮುಖ್ಯರಸ್ತೆ, ದೊಡ್ಡ ಆಲತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಪಯ್ಯನ ಹಟ್ಟಿ ಗ್ರಾಮದಲ್ಲಿ ೮೦೦ ಅಡಿಗಳು ಕೊರೆದರೂ ಅಂತರ್ಜಲ ಮಟ್ಟ ಕಡಿಮೆಯಾಗಿರುವುದರಿಂದ ನೀರು ಬಾರದೆ ವಿಫಲವಾಗಿದೆ.
ನೀರಿನ ಸಮಸ್ಯೆ ಇರುವ ಗ್ರಾಮಗಳು: ಹನೂರು ತಾಲ್ಲೂಕಿನ ದೊಮ್ಮನಗದ್ದೆ, ಬಂಡಳ್ಳಿ, ಗೊಲ್ಲರ ದಿಂಬ, ಸತ್ಯಮಂಗಲ, ಕೆಂಪಯ್ಯನ ಹಟ್ಟಿ, ಎಂ.ಟಿ.ದೊಡ್ಡಿ, ಪಳನಿಸ್ವಾಮಿ ದೊಡ್ಡಿ, ಕಾರಗೇರಿ ದೊಡ್ಡಿ, ಬೋಡ ಮುತ್ತುನೂರು, ಚಂಗವಾಡಿ ಕೆವಿನ್ ದೊಡ್ಡಿ, ತೆಂಗಾಕೋಂಬು, ಪೋಂಗೋಬು, ಅಪ್ಪು ಕಂಪಟ್ಟಿ, ಜಂಬೂಟ್ ಪಟ್ಟಿ, ಮಾರಿಕೊಟ್ಟಾಯಿ, ಜಲ್ಲಿ ಪಾಳ್ಯ, ಕೊಟ್ಟನ ಮೂಲೆ, ಕೂಡ್ಲೂರು, ಕೌದಳ್ಳಿಯ ೩ ವಾಡ್ ಗಳು, ಹೊಸ ದೊಡ್ಡಿ, ದಂಟಳ್ಳಿ ಮೇಗನೂರು, ಕೆಳಗನೂರು, ಮೆದಗನಾಣೆ, ಕೊಂಬೈ ನಗರ, ಆಲದ ಮರ ಬಿದರಳ್ಳಿ, ಸುಳ್ವಾಡಿ, ಸಂದನಪಾಳ್ಯ ಅಂತೋನಿಯರ್ ಕೋವಿಲ್, ಮಾಮರದೊಡ್ಡಿ, ರಾಮಪುರ ಎರಡನೇ ವಾರ್ಡ್‌ಗೋಪಿ ಶೆಟ್ಟಿಯೂರು, ಅರಬಗೆರೆ, ಹೊಸಳ್ಳಿ ಗ್ರಾಮ ಸೇರಿದಂತೆ ೩೮ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.
ಜಿಪಂ ಸಿಇಒ ಭೇಟಿ : ಈಗಾಗಲೇ ಜಿಲ್ಲಾ ಪಂಚಾಯಿತಿಯ ಸಿಇಒ ಮೋನ ರೋತ್ ಅವರು ಮಂಗಳವಾರ ಹನೂರು ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಸೂಕ್ತ ಕ್ರಮವಹಿಸಲು ಅಽಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದಲ್ಲದೆ, ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿನ ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಹೋಗಿದ್ದರೆ, ಖಾಸಗಿ ಬೋರ್‌ವೆಲ್‌ಗಳ ಮುಖಾಂತರ ಕುಡಿಯುವ ನೀರು ಪೂರೈಕೆ ಮಾಡುವಂತೆ ಇಒ ಉಮೇಶ್ ಹಾಗೂ ಸಂಬಂಧಪಟ್ಟ ಪಿಡಿಒಗಳಿಗೆ ಖಡಕ್ ನಿರ್ದೇಶನ
‘ಆಟವಾಡುತ್ತಿದ್ದವರು ಜಲಕ್ಷಾಮದ ಪಾಠವನ್ನೆ ಮಾಡಿದ್ದಾರೆ!’:
ಹನೂರು: ಏನೋ ಆಡಿಕೊಳ್ಳುತ್ತಿದ್ದಾರೆ… ಸ್ನೇಹಿತರು ಸೇರಿ ಪಾಠದ ಬಗ್ಗೆ ಮಾತನಾಡಿಕೊಳ್ಳುತ್ತಿರಬೇಕು… ಅಂದ್ಕೊಂಡಿದ್ದೆವು. ಆದರೆ, ಹೀಗೆ ನೀರಿಗಾಗಿ ಮುಖ್ಯಮಂತ್ರಿಗಳಿಗೇ ಕಾಗದ ಬರೀತಾರೆ ಎಂಬುದನ್ನು ಕನಸು-ಮನಸ್ಸಿನಲ್ಲೂ ಕಂಡಿರಲಿಲ್ಲ… ಇವು ತಮ್ಮೂರಿನ ನೀರಿನ ಬರದ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆಯಲು ಪತ್ರದ ಹಾದಿ ಕಂಡುಕೊಂಡ ಐವರು ವಿದ್ಯಾರ್ಥಿಗಳ ಕುಟುಂಬದವರ ಸಂತಸ ಬೆರೆತ ಆಶ್ಚರ್ಯ ತುಂಬಿದ ಮಾತುಗಳು. ತಾಲ್ಲೂಕಿನ ಕೆಂಪಯ್ಯನಹಟ್ಟಿ (ಪಳನಿವೀಡು) ಗ್ರಾಮದ ಸರ್ಕಾರಿ ಹಾಗೂ ಖಾಸಗಿ ಶಾಲೆಯ ವಿದ್ಯಾರ್ಥಿಗಳಾದ ವರ್ಣಿಕ – ಋಷಿಕೇಶ್, ಮೀನಾ – ಧನುಷ್ ಮತ್ತು ಶ್ರೀಕಂಠ ಅವರು ತಮ್ಮೂರನ್ನು ಕಾಡುತ್ತಿರುವ ಜಲಸಂಕಟದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಲ್ಲದೆ, ವಿಡಿಯೋ ಕೂಡ ಕಳುಹಿಸಿದ್ದರ ಬಗ್ಗೆ ‘ಆಂದೋಲನ’ದೊಂದಿಗೆ ಮನದಾಳದ ಮಾತುಗಳನ್ನು ಹಂಚಿಕೊಂಡರು.
‘ನೀರಿಗಾಗಿ ಸಿಎಂಗೆ ಪತ್ರ ಬರೆದಿದ್ದು ಸಂತಸ’:
ಕಳೆದ ಮೂರು ವರ್ಷಗಳಿಂದ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ಹನಿ ಹನಿ ನೀರಿಗೂ ತೊಂದರೆಯಾಗಿದೆ. ನಮಗೆ ಎರಡು ಎಕರೆ ಜಮೀನಿದ್ದು, ಒಂದು ಬೋರ್‌ವೆಲ್ ಕೊರೆಸಲಾಗಿತ್ತು. ಬೋರ್‌ವೆಲ್‌ನಲ್ಲಿ ಅಂತರ್ಜಲ ಮಟ್ಟ ಕಡಿಮೆಯಾಗಿ ನೀರು ಸಂಪೂರ್ಣ ಬತ್ತಿ ಹೋಗಿದೆ ಇದರಿಂದ ಕುಡಿಯಲು ನೀರಿಲ್ಲದೆ ತೊಂದರೆ ಅನುಭವಿಸುತ್ತಿದ್ದೇನೆ. ವ್ಯವಸಾಯವನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ದೆ. ನಮ್ಮ ಕಷ್ಟವನ್ನು ನೋಡಿದ ನನ್ನ ಮಗಳಾದ ವರ್ಣಿಕ ಮತ್ತು ಮಗ ಋಷಿಕೇಶ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ನನ್ನ ಮಗಳು ಬರೆದಿರುವ ಪತ್ರ ಸರ್ಕಾರದ ಗಮನ ಸೆಳೆಯುತ್ತಿರುವುದು ಸಂತಸ ತಂದಿದೆ.
ರವಿಚಂದ್ರ, ವಿದ್ಯಾರ್ಥಿಗಳಾದ ವರ್ಣಿಕ – ಋಷಿಕೇಶ್ ತಂದೆ
‘ಪತ್ರ ಸುಮ್ಮನೆ ಬರೆಯುತ್ತಿದ್ದಾರೆ ಅನಿಸಿತ್ತು’: ನಮ್ಮ ಕಷ್ಟವನ್ನು ನೋಡಿ ಮಗಳು ಮತ್ತು ಮಗ ಪತ್ರ ಬರೆಯುತ್ತಿದ್ದರು. ಆದರೆ ಅವರು ಸುಮ್ಮನೆ ಬರೆದು ಕೊಳ್ಳುತ್ತಿದ್ದಾರೆ ಅಂದುಕೊಂಡಿದ್ದೆ. ಆದರೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಪೋಸ್ಟ್ ಮಾಡಿರುವುದು ಸಂತೋಷ ತಂದಿದೆ. ಇದಲ್ಲದೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ನಮ್ಮ ಮನೆಯ ಬಾಗಿಲಿಗೆ ಬಂದು ನಮ್ಮ ಕಷ್ಟವನ್ನು ಆಲಿಸಿರುವುದು ಮತ್ತಷ್ಟು ಖುಷಿ ತಂದಿದೆ. ಒಟ್ಟಾರೆ ಸಮಸ್ಯೆ ಬಗೆಹರಿದರೆ ಎಲ್ಲರಿಗೂ ಅನುಕೂಲವಾಗಲಿದೆ.
ಕಸ್ತೂರಿ, ವಿದ್ಯಾರ್ಥಿಗಳ ವರ್ಣಿಕ ಮತ್ತು ಋಷಿಕೇಶ್ ತಾಯಿ
‘ಮಕ್ಕಳು ಪತ್ರ ಬರೆದಿರುವುದು ಗೊತ್ತೇ ಇರಲಿಲ್ಲ’: ನಮಗೆ ಸ್ವಂತ ಜಮೀನು ಇಲ್ಲದೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದೇವೆ. ಉತ್ತಮ ಮಳೆಯಾಗುತ್ತಿದ್ದಾಗ ನಮ್ಮ ಗ್ರಾಮದಲ್ಲಿಯೇ ಬೇರೆಯವರ ಜಮೀನಿಗೆ ಹೋಗಿ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಆದರೆ ಎರಡು ಮೂರು ವರ್ಷಗಳಿಂದ ಮಳೆ ಬಾರದೆ ಇರುವ ಹಿನ್ನೆಲೆಯಲ್ಲಿ ಕೆಲಸಕ್ಕಾಗಿ ಹನೂರು ಹಾಗೂ ತಮಿಳುನಾಡಿಗೆ ಹೋಗುತ್ತಿದ್ದೇವೆ. ಪ್ರತಿದಿನ ಕುಡಿಯುವ ನೀರನ್ನು ಬೇರೆಯವರ ಜಮೀನಿನಿಂದ ತೆಗೆದುಕೊಂಡು ಬರುತ್ತಿರುವುದನ್ನು ಗಮನಿಸಿದ ನಮ್ಮ ಮಕ್ಕಳಾದ ಮೀನಾ, ಧನುಷ್ ಮುಖ್ಯಮಂತ್ರಿಗಳಿಗೆ ಸ್ನೇಹಿತರ ಜೊತೆಗೂಡಿ ಪತ್ರ ಬರೆದಿದ್ದಾರೆ. ನಮ್ಮ ಮಕ್ಕಳು ಬರೆದಿರುವ ಪತ್ರ ಹಾಗೂ ವಿಡಿಯೋ ಪೇಪರ್‌ನಲ್ಲಿ ಬಂದಿರುವ ವಿಚಾರ ನಮಗೆ ಗೊತ್ತಿರಲಿಲ್ಲ. ಇದೀಗ ನಿಮ್ಮಿಂದ ನಮಗೆ ಗೊತ್ತಾಗಿದೆ. ನಮಗೆ ಕುಡಿಯಲು ನೀರುಕೊಟ್ಟರೆ ಅಷ್ಟೇ ಸಾಕು.
ಮಂಜು, ವಿದ್ಯಾರ್ಥಿಗಳಾದ ಮೀನಾ – ಧನುಷ್‌ರ ತಾಯಿ
‘ಕೊಳವೆ ಬಾವಿ ವಿ-ಲವಾಗಿದ್ದಕ್ಕೆ ಪತ್ರ ಬರೆದಿರಬೇಕು’:
ನಮಗೆ ೨.೫ ಎಕರೆ ಜಮೀನಿದ್ದು, ಎರಡು ಕೊಳವೆ ಬಾವಿ ಕೊರೆಸಿದ್ದೇವೆ. ಪ್ರಾರಂಭದಲ್ಲಿ ಉತ್ತಮವಾಗಿ ನೀರು ಬಂತು. ಆದರೆ ಇದೀಗ ನೀರು ಸಂಪೂರ್ಣ ಬತ್ತಿ ಹೋಗಿದೆ. ಕಳೆದ ತಿಂಗಳು ೭೦೦ ಅಡಿ ಒಂದು ಕೊಳವೆ ಬಾವಿ ಕೊರೆಸಿದೆವು. ಆದರೆ ನೀರು ಬರಲಿಲ್ಲ.ಎರಡೂವರೆ ಲಕ್ಷ ರೂ.ಗಳಷ್ಟು ನಷ್ಟವಾಗಿದೆ. ಉತ್ತಮ ಮಳೆಯಾಗುತ್ತಿದ್ದಾಗ ಜೋಳ, ಮೆಣಸಿನ ಕಾಯಿ, ಸೌತೆಕಾಯಿ ಬೆಳೆ ಬೆಳೆಯುತ್ತಿದ್ದೆವು. ಇದೀಗ ನೀರಿಲ್ಲದೆ ನಮ್ಮ ಜಮೀನು ಸಂಪೂರ್ಣ ಪಾಳು ಬಿದ್ದಿದೆ. ನನ್ನ ಮೊಮ್ಮಗ ಶ್ರೀಕಂಠ ಹಾಗೂ ಸ್ನೇಹಿತರು ಎಲ್ಲರೂ ಏನೇನೋ ಮಾತನಾಡಿಕೊಳ್ಳುತ್ತಿದ್ದರು. ಅದನ್ನು ನಾವು ಗಮನಿಸಿರಲಿಲ್ಲ. ಎಂದಿನಂತೆ ಆಟವಾಡುತ್ತಿದ್ದಾರೆ ಎಂದುಕೊಂಡಿದ್ದೆವು. ಆದರೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎಂದು ಹೇಳುತ್ತಿದ್ದಾರೆ. ಇದನ್ನು ನನಗೆ ನಂಬಲು ಅಸಾಧ್ಯವಾಗಿ ಕಾಣುತ್ತಿದೆ.
ಜ್ಯೋತಿ, ವಿದ್ಯಾರ್ಥಿ ಶ್ರೀಕಂಠನ ಅಜ್ಜಿ
” ರಾಮಪುರ ಹೋಬಳಿ ವ್ಯಾಪ್ತಿಯಲ್ಲಿ ವಾಡಿಕೆಗಿಂತ ಶೇ ೪೦ರಷ್ಟು ಮಳೆ ಕಡಿಮೆಯಾಗಿರುವುದರಿಂದ ಅಂತರ್ಜಲ ಮಟ್ಟ ಕುಸಿದು ನೀರಿನ ಸಮಸ್ಯೆಯಾಗಿದೆ. ಈಗಾಗಲೇ ಖಾಸಗಿ ಬೋರ್ವೆಲ್ ಗಳ ಮುಖಾಂತರ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಕೆಲವು ಕಡೆ ಬೋರ್ವೆಲ್ ಗಳು ವಿಫಲವಾಗಿದ್ದರೆ ಇನ್ನೂ ಕೆಲವು ಕಡೆ ನಿರೀಕ್ಷೆ ಪ್ರಮಾಣದಲ್ಲಿ ನೀರು ದೊರಕಿಲ್ಲ, ಮಾಟಳ್ಳಿ ಭಾಗದಲ್ಲಿನ ಸಮಸ್ಯೆ ಬಗೆಹರಿಸಲು ಅಧಿಕಾರಿಗಳನ್ನು ಕಳುಹಿಸಿ ಪರೀಕ್ಷೆ ಮಾಡಲಾಗಿದೆ. ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಿ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ.ಹನೂರು ತಾಲೂಕು ವ್ಯಾಪ್ತಿಯಲ್ಲಿ ಕುಡಿಯುವ ನೀರು ಹಾಗೂ ರೈತರ ನೀರಾವರಿ ಯೋಜನೆಗಳಿಗೆ ಶಾಶ್ವತ ನೀರಿನ ಸೌಲಭ್ಯ ಕಲ್ಪಿಸಿಕೊಡಲು ಜಲಸಂಪನ್ಮೂಲ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾಸ್ಟರ್ ಪ್ಲಾನ್ ರೂಪಿಸಲಾಗುತ್ತಿದೆ. ಪೂರ್ಣಗೊಳ್ಳಲು ಹೆಚ್ಚಿನ ಕಾಲಾವಕಾಶ ಬೇಕಾಗುತ್ತದೆ. ಅಲ್ಲಿಯವರೆಗೆ ತಾತ್ಕಾಲಿಕವಾಗಿ ಕೊಳವೆ ಬಾವಿಗಳ ಮೂಲಕ ನೀರು ಪೂರೈಕೆಗೆ ಕ್ರಮ ವಹಿಸಲಾಗಿದೆ.”
-ಎಂ. ಆರ್. ಮಂಜುನಾಥ್ ಶಾಸಕರು ಹನೂರು ವಿಧಾನಸಭಾ ಕ್ಷೇತ್ರ
ಉಡುತೊರೆ ಹಳ್ಳ ಜಲಾಶಯ ಭರ್ತಿ: ಅನುದಾನ ಸಿಕ್ಕಿಲ್ಲ:
ಉಡುತೊರೆ ಹಳ್ಳ ಜಲಾಶಯ ನಿರ್ಮಾಣ ಮಾಡಿ ಸುಮಾರು ೨೦ ವರ್ಷಗಳು ಪೂರ್ಣಗೊಂಡಿವೆ. ಒಮ್ಮೆ ಮಾತ್ರ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಉಳಿದ ೧೯ ವರ್ಷಗಳಲ್ಲಿ ಮಳೆಯಾದಾಗ ಮಾತ್ರ ಜಲಾಶಯಕ್ಕೆ ನೀರು ಬರುತ್ತಿತ್ತು. ಇದರಿಂದ ರೈತರಿಗೆ ಅನನುಕೂಲ ಆಗುತ್ತಿತ್ತು. ಆರ್.ನರೇಂದ್ರ ಶಾಸಕರಾಗಿದ್ದಾಗ, ಸರ್ಕಾರದ ಗಮನ ಸೆಳೆದು ಉಡುತೊರೆ ಹಳ್ಳ ಜಲಾಶಯಕ್ಕೆ ನೀರು ತುಂಬಿಸಲು ಜಲ ಸಂಪನ್ಮೂಲ ಇಲಾಖೆ ಸರ್ಕಾರದ ಕಾರ್ಯದರ್ಶಿ ಗಮನ ಸೆಳೆದು, ೧೭೦ ಕೋಟಿ ರೂ. ವೆಚ್ಚದಲ್ಲಿ ನೀರು ತುಂಬಿಸಲು ಅಂದಾಜು ಪಟ್ಟಿ ತಯಾರಿಸಿ ೨೦೨೩ರ ಜನವರಿಯಲ್ಲಿ ಡಿಪಿಆರ್ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಮಂಜೂರು ಆಗದೇ ಇರುವುದರಿಂದ ತೊಂದರೆಯಾಗಿದೆ.
ಹನೂರು ತಾಲ್ಲೂಕಿನ ಸರಗೂರು ಗ್ರಾಮದ ಬಳಿ ಕಾವೇರಿ ನದಿಯಿಂದ ಕುಡಿಯುವ ನೀರಿನ ಸಲುವಾಗಿ ಕೊತ್ತನೂರುಕೆರೆ, ಹಲಗಾಪುರ ಮಾರ್ಟಳ್ಳಿ ಕೆರೆ ಸೇರಿದಂತೆ ೧೦ ಕೆರೆಗಳು ೧೬ ಪಿಕ್ ಅಪ್‌ಗಳಿಗೆ ನೀರು ತುಂಬಿಸುವ ಕಾಮಗಾರಿಯ ೧೮೫ ಕೋಟಿ ರೂ. ಮೊತ್ತದ ಡಿಪಿಆರ್ ಪ್ರಸ್ತಾವನೆಗೆ ೨೦೨೧ರ ಜುಲೈನಲ್ಲಿ ಅನುಮೋದಿಸಿ ಮುಂದಿನ ಕ್ರಮಕೈಗೊಳ್ಳಲು ಸೂಚಿಸಲಾಗಿದೆ.
ಯೋಜನೆ ನನೆಗುದಿಗೆ: ಗುಂಡಾಲ್ ಜಲಾಶಯ, ರಾಮನಗುಡ್ಡ, ಹುಬ್ಬೆ ಹುಣಸೆ ಜಲಾಶಯಗಳಿಗೆ ಕಾವೇರಿ ನದಿ ಮೂಲದಿಂದ ಕೆರೆ ನೀರು ತುಂಬಿಸುವ ಯೋಜನೆಗೆ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯರವರು ೧೩೨ ಕೋಟಿ ರೂ. ವೆಚ್ಚದ ಕಾಮಗಾರಿಗೆ ೨೦೧೮ರಲ್ಲಿ ಒಪ್ಪಿಗೆ ಸೂಚಿಸಿ ಅನುಮೋದನೆ ನೀಡಿದ್ದರು. ಈಗಾಗಲೇ ಗುಂಡಾಲ್ ಜಲಾಶಯಕ್ಕೆ ಕಾವೇರಿ ನದಿಮೂಲಗಳಿಂದ ನೀರು ತುಂಬಿಸಲಾಗುತ್ತಿದೆ. ಆದರೆ ರಾಮನಗುಡ್ಡ ಹಾಗೂ ಹುಬ್ಬೆಹುಣಸೆ ಜಲಾಶಯಗಳ ಪೈಪ್‌ಲೈನ್ ಕಾಮಗಾರಿಗಳಿಗೆ ಹೆಚ್ಚುವರಿ ಅನುದಾನ ಬಿಡುಗಡೆ ಆಗಬೇಕಾಗಿದ್ದು, ಪ್ರಮುಖ ಯೋಜನೆ ನನೆಗುದಿಗೆ ಬಿದ್ದಿದೆ.
” ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಸಮರ್ಪಕ ಮಳೆಯಾಗದೆ ಅಂತರ್ಜಲ ಮಟ್ಟ ಕುಸಿದಿದ್ದು, ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಕುಡಿಯುವ ನೀರಿನ ಸಮಸ್ಯೆ ಇರುವ ಬಗ್ಗೆ, ಈಗಾಗಲೇ ಶಾಸಕ ಎಂ.ಆರ್. ಮಂಜುನಾಥ್ ಹಾಗೂ ಸಿಇಒ ರವರ ಗಮನಕ್ಕೆ ತರಲಾಗಿದೆ. ಮೂರು ದಿನಗಳ ಹಿಂದೆ ಅಽಕಾರಿಗಳು ಕೊಳವೆ ಬಾವಿ ಕೊರೆಸಲು ಸ್ಥಳ ನಿಗದಿ ಮಾಡಿದ್ದಾರೆ. ಆದರೆ ಇದುವರೆಗೂ ಬೋರ್‌ವೆಲ್ ಕೊರಸದೇ ಇರುವುದರಿಂದ ತೊಂದರೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಮಳೆಯಾಗದಿದ್ದರೆ ಇನ್ನಷ್ಟು ತೊಂದರೆಯಾಗಲಿದೆ. ಸರ್ಕಾರ ಮಾರ್ಟಳ್ಳಿ ಭಾಗದ ಕೆರೆಗಳಿಗೆ ನೀರು ತುಂಬಿಸಿದರೆ ಅಂತರ್ಜಲ ಮಟ್ಟ ಹೆಚ್ಚಳವಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ.”
ಇಗ್ನೇಶಿ ಮುತ್ತು, ಅಧ್ಯಕ್ಷ, ಮಾರ್ಟಳ್ಳಿ ಗ್ರಾಮ ಪಂಚಾಯಿತಿ
” ಬಂಡಳ್ಳಿ ಗ್ರಾಮ ಪಂಚಾಯಿತಿಯ ಒಂದನೇ ವಾರ್ಡಿನ ಕೆಲವು ಮನೆಗಳಿಗೆ ಕಳೆದ ಮೂರು ತಿಂಗಳುಗಳಿಂದ ಸಮರ್ಪಕ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಈ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದರೂ ಪ್ರಯೋಜನವಾಗಿಲ್ಲ. ಇದಲ್ಲದೆ ಮಧ್ಯರಾತ್ರಿ ನೀರು ಬಿಡುತ್ತಿರುವುದರಿಂದ ನೀರು ಸಂಗ್ರಹಣೆ ಮಾಡಲು ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮವಹಿಸಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು.”
ಸದಾಶಿವ ಬೆಟ್ಟಪ್ಪ, ಬಂಡಳ್ಳಿ ನಿವಾಸಿ
” ಕೌದಳ್ಳಿ ಗ್ರಾಮ ಪಂಚಾಯಿತಿಕೇಂದ್ರಸ್ಥಾನ ಸೇರಿದಂತೆ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ವಾರ್ಡ್ ಸದಸ್ಯರಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದೇವೆ. ಆದರೆ ನಮ್ಮ ಸಮಸ್ಯೆಗಳಿಗೆ ಕ್ಯಾರೆ ಎನ್ನುತ್ತಿಲ್ಲ. ನಮಗೆ ಬೆಳ್ಳಿ, ಬಂಗಾರ ಕೊಡಬೇಡಿ ಕುಡಿಯಲು ನೀರು, ಮೂಲಭೂತ ಸೌಲಭ್ಯ ಒದಗಿಸಿ ಕೊಟ್ಟರೆ ಅಷ್ಟೇ ಸಾಕು ನಿಮ್ಮಿಂದ ಬೇರೇನು ನಿರೀಕ್ಷೆ ಮಾಡುವುದಿಲ್ಲ.”
ವಸಂತ, ೧ ನೇ ವಾರ್ಡ್ ನಿವಾಸಿ, ಕೌದಳ್ಳಿ ಗ್ರಾಪಂ
” ಕಳೆದ ಮೂರು ತಿಂಗಳುಗಳಿಂದ ನಮ್ಮ ಗ್ರಾಮಕ್ಕೆ ಸರಿಯಾಗಿ ಕುಡಿಯುವ ನೀರು ಬಿಡುತ್ತಿಲ್ಲ, ಹಳ್ಳದಲ್ಲಿ ನೀರು ಹರಿಯುತ್ತಿದ್ದಾಗ ನಮ್ಮ ಬಾವಿಯಲ್ಲಿಯೇ ನೀರು ಸಿಗುತ್ತಿತ್ತು. ಆದರೆ, ಇದೀಗ ಬಾವಿಯಲ್ಲಿ ನೀರು ಇಲ್ಲದೆ ಇರುವುದರಿಂದ ಕುಡಿಯಲು ನೀರು ಸಿಗುತ್ತಿಲ್ಲ. ನೀರಿಲ್ಲದೆ ಟೀ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ, ಮೂರು ನಾಲ್ಕು ದಿನಗಳಿಗೊಮ್ಮೆ ಸ್ನಾನ ಮಾಡುವಂತಹ ಪರಿಸ್ಥಿತಿ ಬಂದಿದೆ.”
ರಾಧಾ, ಕೆಂಪಯ್ಯನ ಹಟ್ಟಿ ಗ್ರಾಮ
” ಪ್ರತಿವರ್ಷ ಉತ್ತಮ ಮಳೆಯಾಗಿ ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯಗಳಿಂದ ನೀರು ಹರಿಯಬಿಟ್ಟರೆ ನಮ್ಮ ಗ್ರಾಮದ ಸಮೀಪದಲ್ಲಿರುವ ಕಾವೇರಿ ನದಿಯ ಮೂಲಕ ತಮಿಳುನಾಡಿಗೆ ಲಕ್ಷಾಂತರ ಕ್ಯೂಸೆಕ್ಸ್ ನೀರು ಹರಿದು ಹೋಗುತ್ತಿದೆ. ಆದರೆ ಕೇವಲ ಎರಡು – ಮೂರು ಕಿಲೋಮೀಟರ್ ಸಮೀಪವಿರುವ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ನಮ್ಮ ಗ್ರಾಮದಲ್ಲಿರುವ ಸಮಸ್ಯೆಯನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶಾಶ್ವತವಾಗಿ ಬಗೆಹರಿಸುವ ಮೂಲಕ ಕಾವೇರಿ ಕುಡಿಯುವ ನೀರು ಪೂರೈಕೆ ಮಾಡಲು ಕ್ರಮವಹಿಸಬೇಕು.”
ಕಾರ್ತಿಕ್, ಮಾರಿಕೊಟ್ಟಾಯಿ ನಿವಾಸಿ
ಜಲಾಶಯಗಳಿಂದ ನೀರು ತುಂಬಿಸಬೇಕು: ಹನೂರು ತಾಲ್ಲೂಕಿನ ಬಹುತೇಕರು ಮಳೆಯಾಶ್ರಿತ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗುಂಡಾಲ್ಜಲಾಶಯ, ರಾಮನಗುಡ್ಡ, ಹುಬ್ಬೆ ಹುಣಸೆ, ಕೌಳಿಹಳ್ಳ ಡ್ಯಾಮ್, ಉಡುತೂರೆ ಜಲಾಶಯ, ಹೂಗ್ಯಂಜಲಾಶಯ, ಗೋಪಿನಾಥಂ ಜಲಾಶಯ, ಕೀರೆಪಾತಿ,ಹಾಲಾರೆ ಹಳ್ಳಗಳಿದ್ದು, ರೈತರ ಜೀವನಾಡಿಯಾಗಿದೆ. ಮಳೆಗಾಲದ ಸಂದರ್ಭದಲ್ಲಿ ಈ ಜಲಾಶಯಗಳು ಭರ್ತಿಯಾಗಲಿವೆ. ಮಳೆ ಇಲ್ಲದಿದ್ದರೆ ಸಂಪೂರ್ಣ ಬತ್ತಿ ಹೋಗುವುದರಿಂದ ಜಾನುವಾರುಗಳಿಗೆ ಕುಡಿಯುವ ನೀರು ಸಿಗದೆ ತೊಂದರೆಯಾಗುತ್ತದೆ.





