ಪಿ.ಶಿವಕುಮಾರ್
ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಗ್ರಾಮಸ್ಥರ ಆಗ್ರಹ
ದೊಡ್ಡ ಕವಲಂದೆ: ಬೇಸಿಗೆ ಹಿನ್ನೆಲೆಯಲ್ಲಿ ಕುಡಿಯುವ ನೀರಿಗಾಗಿ ಜನ, ಜಾನುವಾರುಗಳು ತತ್ತರಿಸುವಂತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ದಾಸನೂರು ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪರದಾಡುವಂತಾಗಿದೆ.
ದಾಸನೂರು ಗ್ರಾಮದಲ್ಲಿ ೩ ಸಾವಿರ ಜನಸಂಖ್ಯೆ ಇದ್ದು, ಎರಡು ಓವರ್‌ಹೆಡ್ ಟ್ಯಾಂಕ್‌ಗಳಿಂದ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಕಪಿಲಾ ನದಿಯಿಂದ ಶುದ್ಧೀಕರಿಸುವ ನೀರು ಬರುತ್ತಿಲ್ಲ. ದಾಸನೂರು, ದೊಡ್ಡಹೊಮ್ಮ, ಚಿಕ್ಕಹೊಮ್ಮ, ಕಾರೇಮೊಳೆ, ತೊರವಳ್ಳಿ, ಅಂಕುಶರಾಯನಪುರ, ತೊರವಳ್ಳಿ ಮೋಳೆ ಗ್ರಾಮಗಳಲ್ಲಿಯೂ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಕಾರ್ಯನಿರ್ವಹಿಸದೆ ಕೆಟ್ಟು ನಿಂತಿದೆ. ತೊಂಬೆ ನಲ್ಲಿಗಳಿಗೂ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ.
ಕುಡಿಯುವ ನೀರನ್ನು ನಾಲ್ಕು ದಿನಕ್ಕೆ ಒಂದು ಬಾರಿ ಮಾತ್ರ ಬಿಡುತ್ತಾರೆ. ಇದರಿಂದ ಗ್ರಾಮದಲ್ಲಿ ಜನರಿಗೆ ಮತ್ತು ಜಾನುವಾರುಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಕಳೆದ ೨-೩ ತಿಂಗಳುಗಳಿಂದಲೂ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. ಸ್ಥಗಿತಗೊಂಡಿರುವ ಕಪಿಲಾ ನದಿ ನೀರನ್ನು ಸರಬರಾಜು ಮಾಡಬೇಕು. ಕೆಟ್ಟು ನಿಂತಿರುವ ಗೇಟ್ ವಾಲ್ವ್ ಮತ್ತು ಶುದ್ಧ ಕುಡಿ ಯುವ ನೀರಿನ ಘಟಕವನ್ನು ದುರಸ್ತಿ ಮಾಡಿಸಬೇಕು ಎಂದು ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುವುದು ಗ್ರಾಮಸ್ಥರ ಆರೋಪ.ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಲ್ಲಿ ಗ್ರಾಮ ಪಂಚಾಯಿತಿ ಆಡಳಿತ ವಿಫಲವಾಗಿದೆ. ಇನ್ನಾದರೂ ತಾಲ್ಲೂಕು ಆಡಳಿತ ಎಚ್ಚೆತ್ತುಕೊಂಡು ಸಮರ್ಪಕವಾಗಿ ಕುಡಿಯುವ ನೀರನ್ನು ಪೂರೈಕೆ ಮಾಡಬೇಕಿದೆ.
ಮನೆ ಮನೆಗೆ ಬಾರದ ಗಂಗೆ: ಸರ್ಕಾರದ ಮಹತ್ವಾಕಾಂಕ್ಷೆಯ ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮಸ್ಥರಿಗೆ ಮನೆ ಮನೆಗೆ ಗಂಗೆ ಯೋಜನೆಯಡಿ ನೀರು ಇನ್ನೂ ತಲುಪಿಲ್ಲ. ಕಪಿಲಾ ನದಿ ನೀರನ್ನು ಶುದ್ಧೀಕರಿಸಿ, ಕುಡಿಯಲು ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ಕಬಿನಿ ನೀರು ಪೂರೈಕೆ ಆಗುತ್ತಿಲ್ಲ. ಇದರಿಂದ ಕುಡಿಯುವ ನೀರಿಗೆ ತೊಂದರೆಯಾಗಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂಬ ಅಸಮಾಧಾನವಿದೆ.
” ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ಕ್ಷೇತ್ರ ಇದು. ಕಪಿಲಾ ನದಿಯಿಂದ ಶುದ್ಧೀಕರಿಸಿ ಬರುವ ನೀರು ದಾಸನೂರು ಗ್ರಾಮಕ್ಕೆ ಬರುತ್ತಿಲ್ಲ. ಗೇಟ್‌ಗಳು ಕೆಟ್ಟು ನಿಂತಿವೆ. ಗ್ರಾಮ ಪಂಚಾಯಿತಿ ಮುಂಭಾಗದಲ್ಲಿರುವ ಕುಡಿಯುವ ನೀರಿನ ಘಟಕ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಗ್ರಾಮದಲ್ಲಿ ಕುಡಿಯುವ ನೀರಿಗೆ ತೊಂದರೆ ಉಂಟಾಗಿದ್ದು, ಇದನ್ನು ಸರಿಪಡಿಸಿ ನೀರನ್ನು ಪೂರೈಕೆ ಮಾಡಬೇಕು.”
-ಪ್ರಮೋದ್, ದಾಸನೂರು ಗ್ರಾಮಸ್ಥರು.
” ಕಪಿಲಾ ನದಿ ನೀರಿನ ಗೇಟ್ ವಾಲ್ವ್‌ಗಳು ಕೆಟ್ಟು ನಿಂತಿವೆ. ಇದರಿಂದ ನೀರು ಬರುತ್ತಿಲ್ಲ. ಈಗಾಗಲೇ ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಇನ್ನೆರಡು ದಿನಗಳಲ್ಲಿ ದುರಸ್ತಿ ಮಾಡಿಸಿ ಕುಡಿಯುವ ನೀರಿಗೆ ತೊಂದರೆ ಯಾಗದಂತೆ ಕ್ರಮ ವಹಿಸಲಾಗುವುದು.”
-ನಾರಾಯಣ ನಾಯಕ, ಪಿಡಿಒ, ದಾಸನೂರು





