Mysore
19
overcast clouds

Social Media

ಮಂಗಳವಾರ, 13 ಜನವರಿ 2026
Light
Dark

ಡಾ.ಅಂಬೇಡ್ಕರ್‌ ಪ್ರತಿಮೆ ಸ್ಥಾಪನೆ ನೆನೆಗುದಿಗೆ

ಪುನೀತ್ ಮಡಿಕೇರಿ

ಜಿಲ್ಲಾ ಕೇಂದ್ರದಲ್ಲಿ ದಶಕಗಳಿಂದಲೂ ನನಸಾಗದ ಕನಸು

ಮಡಿಕೇರಿ: ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಸ್ಥಾಪಿಸಿರುವುದನ್ನು ದೇಶ ಹಾಗೂ ವಿದೇಶಗಳಲ್ಲೂ ಕಾಣಬಹುದು. ಆದರೆ, ಕೊಡಗು ಜಿ ಕೇಂದ್ರ ಮಡಿಕೇರಿಯಲ್ಲಿ ಮಾತ್ರ ಅಂಬೇಡ್ಕರ್ ಪ್ರತಿಮೆ ನಿರ್ಮಾಣದ ಕನಸು ದಶಕಗಳಿಂದಲೂ ಕನಸಾಗಿಯೇ ಉಳಿದಿದೆ. ಕರ್ನಾಟಕದ ಬಹುತೇಕ ಜಿ ಕೇಂದ್ರಗಳಲ್ಲಿ ದೇಶದ ಮಹಾನ್ ನಾಯಕ ಅಂಬೇಡ್ಕರ್ ಅವರ ಪ್ರತಿಮೆ, ಪುತ್ಥಳಿಗಳು ಕಾಣಸಿಗುತ್ತವೆ. ಆದರೆ, ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕು ಕೇಂದ್ರದಲ್ಲಿ ಹೊರತು ಪಡಿಸಿದರೆ, ಜಿ ಕೇಂದ್ರ ಮಡಿಕೇರಿ ಸೇರಿದಂತೆ ಮತ್ತೆಲ್ಲಿಯೂ ಪ್ರತಿಮೆ ಇಲ್ಲದಿರುವುದು ನಾಗರಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಮಡಿಕೇರಿಯಲ್ಲಿ ಪ್ರತಿಮೆ ನಿರ್ಮಿಸಬೇಕೆಂದು ಹಲವು ವರ್ಷಗಳಿಂದ ದಲಿತ ಸಂಘಟನೆಗಳು ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು, ಸಭೆ-ಸಮಾರಂಭಗಳಿಗೆ ಆಗಮಿ ಸುವ ಮಂತ್ರಿ-ಮಹೋದಯರಿಗೆ ಮನವಿ ಸಲ್ಲಿಸಿ ಒತ್ತಾಯ ಮಾಡುತ್ತಾ ಬಂದಿದ್ದರೂ ಫಲಪ್ರದವಾಗಿರಲಿಲ್ಲ.

ಆದರೆ, ಕೆಲ ತಿಂಗಳುಗಳ ಹಿಂದೆ ಮಡಿಕೇರಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡು ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು. ಇದಕ್ಕಾಗಿ ನಗರಸಭೆ ವ್ಯಾಪ್ತಿಯಲ್ಲಿ ಜಾಗ ಇರುವುದರಿಂದ ಜನಪ್ರತಿನಿಧಿಗಳ ಒಮ್ಮತ ಬೇಕಾಗಿತ್ತು. ನಗರಸಭೆ ಕೌನ್ಸಿಲ ವಿಶೇಷ ಸಾಮಾನ್ಯ ಸಭೆಯಲ್ಲಿ ಠರಾವು ಮಂಡಿಸಿ, ಸದಸ್ಯರು ಒಮ್ಮತ ಸೂಚಿಸಿ ನಿರ್ಣಯಿಸಿದ ಹಿನ್ನೆಲೆಯಲ್ಲಿ ಪ್ರತಿಮೆ ನಿರ್ಮಾಣಕ್ಕೆ ಒಪ್ಪಿಗೆ ದೊರೆತು ನಗರದ ಫೀ.ಮಾ. ಕಾರ್ಯಪ್ಪ ವೃತ್ತದ ಬಳಿಯ ಗುಡ್ಡೆಮನೆ ಅಪ್ಪಯ್ಯ ಗೌಡರ ಪ್ರತಿಮೆ ಸಮೀಪದ ಉದ್ಯಾನವನದಲ್ಲಿ ಜಾಗ ಗುರುತು ಮಾಡಿ, ಸಲಹೆ ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಆನಂತರ ಜಾಗದ ಕುರಿತು ಕೆಲ ಆಕ್ಷೇಪಣೆಗಳು ಬಂದಿದ್ದವು. ಬಂದಿರುವ ಆಕ್ಷೇಪಣೆಗಳನ್ನು ಸದಸ್ಯರು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಪ್ರತಿಮೆ ನಿರ್ಮಾಣಕ್ಕೆ ಇದೇ ಜಾಗ ಅಂತಿಮವಾಗಿತ್ತು. ಮೊದಲು ನಗರದ ಅಂಬೇಡ್ಕರ್ ಭವನದ ಎದುರು ಪ್ರತಿಮೆ ನಿರ್ಮಿಸಬೇಕೆಂಬ ಬೇಡಿಕೆ ಇತ್ತು. ಇದು ಖಾಸಗಿ ಜಾಗ ಎಂಬ ಕಾರಣಕ್ಕೆ ಪ್ರಸ್ತಾಪಿತ ಜಾಗವನ್ನು ಬದಿಗಿರಿಸಿ, ಇದೀಗ ಆಯ್ಕೆಗೊಂಡಿರುವ ಜಾಗವನ್ನು ಅಂತಿಮಗೊಳಿಸಲಾಯಿತು. ಪ್ರತಿಮೆ ನಿರ್ಮಾಣಕ್ಕೆ ಸಂಬಂಧಪಟ್ಟ ಇಲಾಖೆಯಿಂದ ಅನುಮೋದನೆ ಪಡೆಯಲಾಗಿದ್ದು, ನಗರಸಭೆ ನಿರ್ಮಾಣದ ಮೇಲುಸ್ತುವಾರಿಯನ್ನು ಹೊತ್ತುಕೊಂಡಿದೆ. ಆದರೆ, ಪ್ರಕ್ರಿಯೆ ಮುಂದುವರಿಯದೆ ಸರ್ಕಾರದಿಂದಲೇ ನಡೆಯಬೇಕಿದ್ದ ಪ್ರತಿಮೆ ಸ್ಥಾಪನೆ ಕಾರ್ಯ ನನೆಗುದಿಗೆ ಬಿದ್ದಿದೆ. ಇದಕ್ಕಾಗಿ ಜಾಗ ಗುರುತು ಮಾಡಿದ್ದನ್ನು ಹೊರತುಪಡಿಸಿದರೆ, ಕ್ರಿಯಾ ಯೋಜನೆಯಾಗಲಿ, ಅಂದಾಜು ಮೊತ್ತವನ್ನಾಗಲಿ ನಿಗದಿಪಡಿಸುವ ಗೋಜಿಗೆ ಇದುವರೆಗೆ ಯಾರೂ ಹೋಗಿಲ್ಲ. ಇವೆಲ್ಲದರ ಪರಿಣಾಮ ಪ್ರತಿಮೆ ನಿರ್ಮಾಣ ಯೋಜನೆ ಸಾಕಾರಗೊಳ್ಳಲು ಸಾಧ್ಯವಾಗಿಲ್ಲ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿದೆ.

ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಸೂಚನೆ: ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾಧಿಕಾರಿ  ಅವರ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ದೌರ್ಜನ್ಯ ನಿಯಂತ್ರಣ ಜಿ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಸೂಚಿಸಲಾಗಿತ್ತು. ಸಭೆಯಲ್ಲಿ ಜಿಲ್ಲಾಧಿಕಾರಿಗಳು ಮಾತನಾಡಿ, ಮಡಿಕೇರಿ ನಗರದಲ್ಲಿ ಇದುವರೆಗೆ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಆಗಿಲ್ಲ. ಈ ಬಗ್ಗೆ ತಕ್ಷಣ ಕ್ರಮವಹಿಸಬೇಕು. ಪ್ರತಿಮೆ ಸ್ಥಾಪನೆಗೆ ಜಾಗ ಗುರುತಿಸಲಾಗಿದ್ದು, ನಗರಸಭೆ ಪೌರಾಯುಕ್ತರ ಗಮನ ಸೆಳೆಯುವಂತೆ ಸಲಹೆ ನೀಡಿದ್ದರು. ಆದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

” ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಜಾಗ ಗುರುತಿಸಲಾಗಿದೆ. ಆಕ್ಷೇಪಣೆಗಳು ತಿರಸ್ಕಾರಗೊಂಡಿದ್ದು, ಅನುದಾನವನ್ನು ಮೀಸಲಿಡುವ ಸಂಬಂಧ ಮುಂದಿನ ಸಭೆಯಲ್ಲಿ ಚರ್ಚಿಸಿ, ನಿರ್ಧಾರ ಕೈಗೊಳ್ಳಲಾಗುವುದು. ಪ್ರತಿಮೆಯ ನಿರ್ಮಾಣಕ್ಕೆ ಶೀಘ್ರ ಕ್ರಮವಹಿಸಲಾಗುವುದು.”

-ಎಚ್.ಆರ್.ರಮೇಶ್, ಪೌರಾಯುಕ್ತ, ನಗರಸಭೆ

” ಪ್ರತಿಮೆ ನಿರ್ಮಾಣಕ್ಕೆ ಹಲವು ವರ್ಷಗಳಿಂದಬೇಡಿಕೆ ಸಲ್ಲಿಸಲಾಗುತ್ತಿತ್ತು. ಇದೀಗ ನಮ್ಮ ಕನಸು ನನಸಾಗುವ ಹಂತಕ್ಕೆ ಬಂದಿದೆ. ನಗರಸಭೆಯ ಒಪ್ಪಿಗೆ ದೊರೆತು ಆಡಳಿತಾತ್ಮಕ ಪ್ರಕ್ರಿಯೆ ಆರಂಭವಾಗಿದೆ. ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಜಿಯ ಶಾಸಕರ ಗಮನಕ್ಕೂ ತರಲಾಗಿದೆ. ಶಾಸಕರು ಇದರ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದಾರೆ. ಸರ್ಕಾರದಿಂದ ತ್ವರಿತವಾಗಿ ಅನುದಾನ ಬಿಡುಗಡೆಯಾಗಿ ಶೀಘ್ರದಲ್ಲೇ ಪ್ರತಿಮೆ ನಿರ್ಮಾಣವಾಗುವ ವಿಶ್ವಾಸವಿದೆ.”

-ಟಿ.ಈ.ಸುರೇಶ್, ಅಧ್ಯಕ್ಷ,  ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಸಮಿತಿ

Tags:
error: Content is protected !!