ಪ್ರವಾಸಿಗರ ಅಸಮಾಧಾನ; ವಿಡಿಯೋ ವೈರಲ್
ಮಡಿಕೇರಿ: ಕೊಡಗು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಮಾಂದಲ್‌ಪಟ್ಟಿ ಜೀಪ್ ಸಫಾರಿಗೆ ಪ್ರವಾಸಿಗರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವ ಬಗ್ಗೆ ಪ್ರವಾಸಿಗರೊಬ್ಬರು ವಿಡಿಯೋವೊಂದನ್ನು ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಬೆಂಗಳೂರು ಮೂಲದ ಅಂಕಿತ್ ಎಂಬವರು ಕುಟುಂಬದೊಂದಿಗೆ ಜ.೨೫, ೨೬, ೨೭ ಕೊಡಗಿಗೆ ಪ್ರವಾಸ ಬಂದಿದ್ದರು. ಜ.೨೫ರ ಭಾನುವಾರ ಬೆಳಿಗ್ಗೆ ೪.೩೦ ಗಂಟೆಗೆ ಮಾಂದಲ್‌ಪಟ್ಟಿಗೆ ಜೀಪ್ ಸಫಾರಿಗೆ ತೆರಳಲು ನಿರ್ಧರಿಸಿದ್ದರು. ಜೀಪ್ ನಿಲ್ದಾಣದಲ್ಲಿ ಮಾಂದಲ್ ಪಟ್ಟಿಗೆ ೨,೫೦೦ ರೂ. ಎಂದು ಬೋರ್ಡ್ ಹಾಕಿದ್ದರೂ ಅಂಕಿತ್ ಕುಟುಂಬವನ್ನು ಕರೆದೊಯ್ದಿದ್ದ ಜೀಪ್ ಚಾಲಕ ೪,೦೦೦ ರೂ. ನೀಡಬೇಕೆಂದು ಪಟ್ಟುಹಿಡಿದಿದ್ದಾರೆ.
ಬಳಿಕ ಮಾಂದಲ್‌ಪಟ್ಟಿ ಬಳಿ ಒಳಗೆ ತೆರಳಲು ನಮ್ಮಿಂದ ಮತ್ತೆ ೫೦೦ ರೂ. ಪಡೆದುಕೊಂಡಿದ್ದಾರೆ. ಅಲ್ಲಿ ಜೀಪ್ ಚಾಲಕ ಸನ್‌ರೈಸ್ ನೋಡಲು ೪೦ ನಿಮಿಷ ಸಮಯವನ್ನು ನೀಡಿದ್ದರು. ಆದರೆ, ೧೦ ನಿಮಿಷ ತಡವಾಗಿ ಬಂದಿದ್ದರಿಂದ ಮತ್ತೆ ೧,೦೦೦ ರೂ. ಹೆಚ್ಚಿಗೆ ನೀಡಬೇಕೆಂದು ಜೀಪ್ ಚಾಲಕ ಹೇಳಿದ್ದ ಎನ್ನಲಾಗಿದೆ. ಆದರೆ, ಇದಕ್ಕೆ ಒಪ್ಪದೆ ಒಟ್ಟು ೪,೫೦೦ ರೂ.ಗಳನ್ನು ಅಂಕಿತ್ ಪಾವತಿಸಿದ್ದರು. ಜೀಪ್ ಚಾಲಕ ಏರುದ್ವನಿಯಲ್ಲಿ ಮಾತನಾಡಿದಲ್ಲದೆ, ರ‍್ಯಾಶ್ ಆಗಿ ಜೀಪ್ ಚಲಾಯಿಸಿದ್ದರು.
ಈ ಸಂಬಂಧ ವೀಡಿಯೋ ಮೂಲಕ ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿಕೊಂಡಿರುವ ಅಂಕಿತ್ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೆ, ಪ್ರವಾಸಿಗರು ಜೀಪ್ ಸಫಾರಿ ಹೋಗುವ ಮುನ್ನ ೨ ಬಾರಿ ಯೋಚಿಸುವಂತೆ ಮನವಿ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆ ಬಳಿಕ ಜೀಪ್ ಚಾಲಕ ಅಂಕಿತ್‌ಗೆ ಹೆಚ್ಚುವರಿಯಾಗಿ ಪಡೆದಿದ್ದ ಹಣವನ್ನು ಹಿಂತಿರುಗಿಸಿದ್ದಾರೆ ಎನ್ನಲಾಗಿದೆ.
ಸದ್ಯ ವೀಡಿಯೋ ವೈರಲ್ ಬೆನ್ನಲ್ಲೇ ಪೊಲೀಸರು ಕ್ರಮಕ್ಕೆ ಮುಂದಾಗಿದ್ದು, ಮಾಂದಲ್‌ಪಟ್ಟಿಗೆ ತೆರಳುವ ಜೀಪ್‌ಗಳ ದಾಖಲೆ ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದ್ದಾರೆ. ಈ ವೇಳೆ ಪ್ರವಾಸಿಗ ಆರೋಪ ಮಾಡಿದ್ದ ಜೀಪ್ ಚಾಲಕ ವೈಟ್ ಬೋರ್ಡ್ ವಾಹನಕ್ಕೆ ಯೆಲ್ಲೋ ಸ್ಟಿಕ್ಕರ್ ಹಾಕಿ ಚಲಾಯಿಸುತ್ತಿದ್ದದ್ದುದು ಬೆಳಕಿಗೆ ಬಂದಿದ್ದು, ಆರೋಪಿ ಶವಿನ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿ ವಾಹನ ಹಾಗೂ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸ್, ಆರ್‌ಟಿಒ ಅಧಿಕಾರಿಗಳ ಎಚ್ಚರಿಕೆ: ಈ ವಿಚಾರ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಬುಧವಾರ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಆರ್ ಟಿಒ, ಜೀಪ್ ಚಾಲಕರ ಸಭೆ ನಡೆದಿದ್ದು, ನಿಗದಿತ ದರಕ್ಕಿಂತ ಹೆಚ್ಚಿನ ಹಣ ಪಡೆಯದಂತೆ ಸೂಚನೆ ನೀಡಲಾಗಿದೆ. ಜೊತೆಗೆ ಜೀಪ್ ಚಾಲಕರು ನಿಯಮವನ್ನು ಪಾಲಿಸಬೇಕೆಂದು ಸೂಚಿಸಲಾಗಿದೆ. ರ‍್ಯಾಶ್ ಡ್ರೈವಿಂಗ್, ಸಾರ್ವಜನಿಕರಿಗೆ ತೊಂದರೆ ನೀಡುವುದು, ಪ್ರವಾಸಿಗರೊಂದಿಗೆ ಉದ್ಧಟತನದಿಂದ ವರ್ತಿಸಿದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.





