ಎಸ್‌ಎಂಎ ಎಂಬ ಮಾರಣಾಂತಿಕ ಕಾಯಿಲೆಗೆ ತುತ್ತಾದ ಮಗು; ಚಿಕಿತ್ಸೆಗೆ ಬೇಕು 16 ಕೋಟಿ ರೂ
ಅನಿಲ್ ಅಂತರಸಂತೆ
ಅಂತರಸಂತೆ: ಅಪರೂಪದ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಮಗುವೊಂದಕ್ಕೆ ಚಿಕಿತ್ಸೆಗಾಗಿ ಬರೋಬ್ಬರಿ ೧೬ ಕೋಟಿ ರೂ. ವೆಚ್ಚವಾಗಲಿದ್ದು, ಪೋಷಕರು ದಾನಿಗಳಿಂದ ನೆರವು ಅಪೇಕ್ಷಿಸಿದ್ದಾರೆ.
ಎಚ್. ಡಿ. ಕೋಟೆ ತಾಲ್ಲೂಕಿನ ಹೆಬ್ಬಲಗುಪ್ಪೆ ಗ್ರಾಮದವರಾದ, ಈಗ ಮೈಸೂರಿನಲ್ಲಿ ನೆಲೆಸಿರುವ ಎಚ್. ನಾಗಶ್ರೀ ಮತ್ತು ಎನ್. ಕಿಶೋರ್ ದಂಪತಿಯ ಪುತ್ರಿ ಒಂದು ವರ್ಷ ಹತ್ತು ತಿಂಗಳಿನ ಕೆ. ಕೀರ್ತನ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದಾಳೆ.
ಕೀರ್ತನಾ ಎಸ್‌ಎಂಎ (ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ) ಅಂದರೆ ಬೆನ್ನು ಮೂಳೆಯ ಸ್ನಾಯು ಕ್ಷೀಣತೆಯಾಗುವ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದು, ಸಂಪೂರ್ಣ ಚಿಕಿತ್ಸೆಗೆ ೧೬ ಕೋಟಿ ರೂ. ವೆಚ್ಚವಾಗಲಿದೆ ಎಂದು ವೈದ್ಯರು ಸೂಚಿಸಿದ್ದಾರೆ.
ಮಗುವಿಗೆ ಬಂದಿರುವ ಕಾಯಿಲೆಯಿಂದ ಕುಟುಂಬ ಸ್ಥರು ಕಂಗಾಲಾಗಿದ್ದು, ಅಷ್ಟೊಂದು ಮೊತ್ತವನ್ನು ಭರಿಸಲು ಸಾಧ್ಯವಾಗದೆ, ಮಗುವಿನ ಚಿಕಿತ್ಸೆಗೆ ದಾನಿಗಳು ಸಹಾಯ ಮಾಡುವಂತೆ ಅಂಗಲಾಚಿದ್ದಾರೆ.
ಕಾಯಿಲೆಗೆ ತುತ್ತಾಗಿರುವ ಕೀರ್ತನಾಗೆ ದಿನೇ ದಿನೇ ಉಸಿರಾಟದ ಸಮಸ್ಯೆ ಹೆಚ್ಚಾಗುತ್ತಿದೆ. ಮೂಳೆಯ ಸ್ನಾಯು ಕ್ಷೀಣಿಸುತ್ತಾ ಬಂದಿದ್ದು, ಮಗುವನ್ನು ಉಳಿಸಿ ಕೊಳ್ಳಲು ಕುಟುಂಬ ಹರಸಾಹಸ ಪಡುತ್ತಿದೆ. ಮಗುವಿನ ತಾಯಿ ನಾಗಶ್ರೀ ಎಚ್. ಡಿ. ಕೋಟೆಯ ಹುಣಸೇಕುಪ್ಪೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ತಂದೆ ಕಿಶೋರ್ ಸರ್ಕಾರಿ ನೌಕರರಾಗಿದ್ದಾರೆ.
ಸದ್ಯ ಕಾಯಿಲೆಯಿಂದ ಬಳಲುತ್ತಿರುವ ಮಗುವಿಗೆ ಸೊಂಟದಿಂದ ಕೆಳಗಿನ ಅವಯವಗಳು ಕಾರ್ಯ ನಿರ್ವಹಿಸುತ್ತಿಲ್ಲ. ಕೆಲವೇ ತಿಂಗಳೊಳಗೆ ಚಿಕಿತ್ಸೆ ಮತ್ತು ಔಷಧ ಸಿಗದಿದ್ದರೆ ಇನ್ನಿತರ ಅಂಗಗಳೂ ಸಾಮರ್ಥ್ಯ ಕಳೆದುಕೊಳ್ಳಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಇದರೊಂದಿಗೆ ಸ್ನಾಯು ದುರ್ಬಲಗೊಂಡು, ಚಲನೆ ಕಷ್ಟವಾಗುತ್ತಿದೆ. ಮಿದುಳಿನ ಕೋಶ ಮತ್ತು ಬೆನ್ನೆಲುಬಿನ ರಕ್ತನಾಳ ಕೊಳೆಯಲು ಆರಂಭಿಸುತ್ತವೆ. ಇದರಿಂದ ಉಸಿರಾಟಕ್ಕೆ ತೊಂದರೆಯಾಗುತ್ತದೆ.
ಇಂತಹ ಮಾರಣಾಂತಿಕ ಕಾಯಿಲೆಗೆ ಅಮೆರಿಕಾದಿಂದ ಜೆಲ್‌ಜೆನ್ಸ್‌ಮಾ ಎಂಬ ಔಷಧಿಯನ್ನು ತರಿಸಿ ಚಿಕಿತ್ಸೆ ಕೊಡಿಸಬೇಕಿದೆ. ಇದರ ಬೆಲೆ ೧೬ ಕೋಟಿ ರೂ. ಗಳಾಗಿದೆ. ಮಗುವಿನ ಉಳಿವಿಗಾಗಿ ತಂದೆ, ತಾಯಿ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ. ಸಹಾಯ ಮಾಡ ಬಯಸುವ ದಾನಿಗಳ ನೆರವಿನಿಂದ ಮಗುವಿನ ಜೀವ ಉಳಿಸಬಹುದಾಗಿದೆ.
ನಮ್ಮ ಒಬ್ಬಳೇ ಮಗಳಾದ ಕೆ. ಕೀರ್ತನ ಸ್ಪೈನಲ್ ಮಸ್ಕ್ಯುಲರ್ ಆಟ್ರೋಫಿ ಎಂಬ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದು, ಅವಳ ಲೋಯರ್ ಲಿಂಬ್ಸ್ ಸಂಪೂರ್ಣವಾಗಿ ದುರ್ಬಲವಾಗುತ್ತಿದೆ. ಓರಲ್ ಚಿಕಿತ್ಸೆಗೆ ಪ್ರತಿ ವರ್ಷಕ್ಕೆ ೫೦ ಲಕ್ಷ ರೂ. ಬೇಕಾಗಿದ್ದು, ಸಂಪೂರ್ಣ ಗುಣವಾಗಲು ಶಾಶ್ವತ ಜೀನ್ ಥೆರಪಿ ಮಾಡಿಸಬೇಕಿದೆ. ಇದಕ್ಕಾಗಿ ೧೬ ಕೋಟಿ ರೂ. ವೆಚ್ಚ ತಗುಲಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇಷ್ಟು ಹಣವನ್ನು ನಮ್ಮಿಂದ ಹೊಂದಿಸಲು ಸಾಧ್ಯವಿಲ್ಲ. ದಾನಿಗಳು ತಮ್ಮ ಸಹಾಯಸ್ತ ಚಾಚಿದರೆ ನಾವು ನಮ್ಮ ಮಗುವನ್ನು ಉಳಿಸಿಕೊಳ್ಳುತ್ತೇವೆ.
ಎಚ್. ನಾಗಶ್ರೀ ಮತ್ತು ಎನ್. ಕಿಶೋರ್, ಮೈಸೂರು.
ಸಹಾಯ ಮಾಡಲು ಇಚ್ಛಿಸುವವರು ಸ್ಟೇಟ್ ಬ್ಯಾಂಕ್ ಆ- ಇಂಡಿಯಾ ಶಾಖೆ: ದೇವರಾಜ ಅರಸ್ ರಸ್ತೆ, ಮೈಸೂರು. ಖಾತೆದಾರರ ಹೆಸರು: ಕೆ. ಕೀರ್ತನಾ ಖಾತೆ ಸಂಖ್ಯೆ: ೪೩೫೩೨೫೮೮೪೨೯ ಐಎಫ್ಎಸ್‌ಸಿ ಕೋಡ್: ಎಸ್‌ಬಿಐಎನ್ ೦೦೭೦೨೭೦ ಸಂಪರ್ಕ ಸಂಖ್ಯೆ: ೯೯೮೦೬೯೦೨೩೪, ೯೯೦೧೨೬೨೨೦೬