Mysore
19
scattered clouds

Social Media

ಭಾನುವಾರ, 11 ಜನವರಿ 2026
Light
Dark

ಮೂಲಸೌಕರ್ಯ ವಂಚಿತ ಮುನಿಯಪ್ಪನ ದೊಡ್ಡಿ ಗ್ರಾಮ

ಮಹಾದೇಶ್ ಎಂ.ಗೌಡ

ಕುಡಿಯುವ ನೀರು, ಚರಂಡಿ, ಸಾರಿಗೆ ವ್ಯವಸ್ಥೆ ಕಲ್ಪಿಸಲು ಗ್ರಾಮಸ್ಥರ ಆಗ್ರಹ 

ಹನೂರು: ಕುಡಿಯುವ ನೀರಿಗೆ ಹಾಹಾಕಾರ, ಶಾಲೆಗೆ ಪ್ರತಿನಿತ್ಯ ಎರಡು ಕಿ.ಮೀ. ಕಾಲ್ನಡಿಗೆಯಲ್ಲಿ ತೆರಳುವ ಮಕ್ಕಳು… ಇದು ಹನೂರು ತಾಲ್ಲೂಕಿನ ರಾಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುನಿಯಪ್ಪನ ದೊಡ್ಡಿ ಗ್ರಾಮದ ದುಸ್ಥಿತಿ.

ರಾಮಾಪುರ ಗ್ರಾಪಂ ವ್ಯಾಪ್ತಿಯ ಗೆಜ್ಜಲನತ್ತ ವಾರ್ಡ್‌ಗೆ ಸೇರಿದ ಮುನಿಯಪ್ಪನ ದೊಡ್ಡಿ ಗ್ರಾಮದಲ್ಲಿ ೨೫ರಿಂದ ೩೦ ಮನೆಗಳು ಇದ್ದು ನೂರಕ್ಕೂ ಹೆಚ್ಚು ಜನರು ವಾಸ ಮಾಡುತ್ತಿದ್ದಾರೆ. ಆದರೆ ಇದುವರೆಗೂ ಯಾವುದೇ ಮೂಲಸೌಲಭ್ಯ ಸಿಗದೇ ಪ್ರತಿನಿತ್ಯ ಕಷ್ಟದಲ್ಲಿಯೇ ಜೀವನ ನಡೆಸುತ್ತಿದ್ದಾರೆ.

ಗ್ರಾಮದಲ್ಲಿ ಇದುವರೆಗೂ ಸುಸಜ್ಜಿತವಾದ ಚರಂಡಿಯನ್ನೇ ನಿರ್ಮಾಣ ಮಾಡಿಲ್ಲ. ಇದರಿಂದ ರಸ್ತೆಯಲ್ಲಿಯೇ ಚರಂಡಿ ನೀರು ಹರಿಯುತ್ತದೆ. ಅಧಿಕಾರಿಗಳು ಗ್ರಾಮಕ್ಕೆ ಅಗತ್ಯ ಸೌಲಭ್ಯ ಒದಗಿಸುವಲ್ಲಿ ವಿಫಲವಾಗಿದ್ದಾರೆ ಎನ್ನುವುದು ಗ್ರಾಮಸ್ಥರ ಆರೋಪ.

ಗ್ರಾಮದಿಂದ ರಾಮಾಪುರ ಗ್ರಾಮದ ಶಾಲಾ ಕಾಲೇಜುಗಳಿಗೆ ೩೦ಕ್ಕೂ ಹೆಚ್ಚು ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಪ್ರತಿನಿತ್ಯ ಹೋಗುವಾಗ ೨ ಕಿ.ಮೀ., ಬರುವಾಗ ೨ ಕಿ.ಮೀ. ನಡೆದುಕೊಂಡು ಬರಬೇಕಿದೆ. ಅನೇಕರು ಶಾಲೆ ಬಿಡುವಂತಹ ಸನ್ನಿವೇಶ ಸೃಷ್ಟಿಯಾಗಿದೆ. ಹಾಗಾಗಿ ತಾತ್ಕಾಲಿಕವಾಗಿಯಾದರೂ ವಾಹನ ವ್ಯವಸ್ಥೆಯನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಾಡಬೇಕೆನ್ನುವುದು ಗ್ರಾಮಸ್ಥರ ಆಗ್ರಹ.

ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ ಎದುರಾಗಿದೆ. ಒಂದು ಮನೆಗೆ ಐದು ಬಿಂದಿಗೆ ನೀರು ಸಿಗುವುದೇ ಕಷ್ಟಕರವಾಗಿದೆ. ಜೆಜೆಎಂ ಕಾಮಗಾರಿ ಪೂರ್ಣಗೊಳ್ಳದೆ ಇರುವುದರಿಂದ ಕುಡಿಯುವ ನೀರಿಗೂ ತೊಂದರೆಯಾಗಿದೆ.

ಗ್ರಾಮವು ರಾಮಾಪುರ ಗ್ರಾಪಂ ಕೇಂದ್ರ ಸ್ಥಾನದಿಂದ ಕೇವಲ ೨-೩ ಕಿ.ಮೀ. ದೂರದಲ್ಲಿದ್ದರೂ ಅಗತ್ಯ ಸೌಲಭ್ಯಗಳಿಂದ ವಂಚಿತವಾಗಿದೆ. ಮುಂದಿನ ದಿನಗಳಲ್ಲಿ ಸೌಲಭ್ಯ ಕಲ್ಪಿಸದಿದ್ದರೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

” ನಮ್ಮ ಗ್ರಾಮಕ್ಕೆ ಜನಪ್ರತಿನಿಧಿಗಳು ಮೂಲಸೌಲಭ್ಯ ಕಲ್ಪಿಸಿಕೊಡದೆ ಇರುವುದರಿಂದ ಬಹಳ ತೊಂದರೆಯಾಗುತ್ತಿದೆ. ಈ ಬಗ್ಗೆ ಹಲವಾರು ಬಾರಿ ಗ್ರಾಪಂಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸಾರಿಗೆ ವ್ಯವಸ್ಥೆ ಇಲ್ಲದೆ ನಮ್ಮ ಮಕ್ಕಳು ಶಾಲೆಗೆ ನಡೆದುಕೊಂಡೇ ಹೋಗಬೇಕಿದೆ.”

ಸೆಲ್ವರಾಜ್, ಗ್ರಾಮಸ್ಥ.

” ಮುನಿಯಪ್ಪನ ದೊಡ್ಡಿ ಗ್ರಾಮದಲ್ಲಿ ಮೂಲಸೌಲಭ್ಯ ಇಲ್ಲದಿರುವುದು ನನ್ನ ಗಮನಕ್ಕೆ ಬಂದಿರಲಿಲ್ಲ. ಗ್ರಾಮಕ್ಕೆ ಭೇಟಿ ನೀಡಿ ಅಗತ್ಯ ಸೌಲಭ್ಯವನ್ನು ಕಲ್ಪಿಸಲು ಕ್ರಮ ವಹಿಸಲಾಗುವುದು.”

ಉಮೇಶ್, ತಾಪಂ ಇಒ

Tags:
error: Content is protected !!