ವೈದ್ಯಕೀಯ ಉಪಕರಣಗಳು, ತಜ್ಞ ವೈದ್ಯರು, ತಾಂತ್ರಿಕ ಸಿಬ್ಬಂದಿ ಕೊರತೆ
ಮೈಸೂರು: ನಗರದ ದೊಡ್ಡಾಸ್ಪತ್ರೆ ಎಂದೇ ಹೆಸರಾಗಿರುವ ಕೆ.ಆರ್.ಆಸ್ಪತ್ರೆಗೆ ಪರ್ಯಾಯವಾಗಿ ಕೆಆರ್‌ಎಸ್ ರಸ್ತೆಯಲ್ಲಿರುವ ಜಿಲ್ಲಾ ಆಸ್ಪತ್ರೆಯು ಕಾರ್ಯಾರಂಭಗೊಂಡು ೫ ವರ್ಷಗಳು ಕಳೆದರೂ ಪೂರ್ಣಪ್ರಮಾಣದಲ್ಲಿ ರೋಗಿಗಳಿಗೆ ಆರೋಗ್ಯ ಸೇವೆ ದೊರಕುತ್ತಿಲ್ಲ.
ಬೆಳೆಯಬೇಕಿದ್ದ ಜಿಲ್ಲಾಸ್ಪತ್ರೆಯಲ್ಲಿ ಮೂಲ ಸೌಕರ್ಯಗಳ ಕೊರತೆ ಕಾಡುತ್ತಿರುವುದರಿಂದ ಸಾರ್ವಜನಿಕರಲ್ಲಿ ನಿರಾಸೆ ಮೂಡಿಸಿದೆ. ನಗರದ ಕೆಆರ್‌ಎಸ್ ರಸ್ತೆಯಲ್ಲಿರುವ ಮಹಾರಾಣಿ ಕೃಷ್ಣರಾಜಮ್ಮಣ್ಣಿಯವರ ಕ್ಷಯ ರೋಗ(ಪಿಕೆಟಿಬಿ) ಆಸ್ಪತ್ರೆ ಆವರಣದಲ್ಲಿರುವ ಜಿಲ್ಲಾಸ್ಪತ್ರೆ ಬಹು ವರ್ಷಗಳ ಕನಸಾಗಿತ್ತು.
ಆದರೆ, ಇದು ಸಾಕಾರಗೊಂಡರೂ ಪರಿಪೂರ್ಣ ಸೇವಾ ಕಾರ್ಯ ಇನ್ನೂಲಭ್ಯವಾಗಿಲ್ಲ. ತ್ವರಿತವಾಗಿ ವೈದ್ಯಕೀಯ ಉಪಕರಣಗಳು, ವೈದ್ಯರು, ತಜ್ಞ ವೈದ್ಯರು, ತಾಂತ್ರಿಕ ಸಿಬ್ಬಂದಿ, ಅರೆವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ಜಿಲ್ಲಾಸ್ಪತ್ರೆಯ ಸಮಸ್ಯೆಗಳಿಗೆ ‘ತುರ್ತು ಚಿಕಿತ್ಸೆ’ ಕೊಡಬೇಕಾಗಿದೆ.
ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿಯಾದ ವೇಳೆ ಮಂಡಿಸಿದ ೨೦೧೬-೧೭ನೇ ಸಾಲಿನ ಆಯವ್ಯಯದಲ್ಲಿ ೫ ಅಂತಸ್ತಿನ ಜಿಲ್ಲಾಸ್ಪತ್ರೆ ಕಟ್ಟಡ ನಿರ್ಮಾಣದ ಕುರಿತು ಘೋಷಣೆ ಮಾಡಿದರು. ೧೩.೧೧ ಎಕರೆ ಜಾಗದಲ್ಲಿ ೭೫ ಕೋಟಿ ರೂ. ವೆಚ್ಚದಲ್ಲಿ ೨೦೧೭ರ ಜೂನ್ ೨೯ರಂದು ನಿರ್ಮಾಣ ಕಾರ್ಯ ಆರಂಭವಾಗಿ, ೨೦೧೮ರ ಅಂತ್ಯಕ್ಕೆ ಪೂರ್ಣ ಗೊಂಡಿತು. ಅಷ್ಟರ ಹೊತ್ತಿಗೆ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ ಬಳಿಕ ಬಂದ ಬಿಜೆಪಿ ಸರ್ಕಾರ ಜಿಲ್ಲಾಸ್ಪತ್ರೆ ಪ್ರಗತಿಗೆ ಶ್ರಮಿಸಲಿಲ್ಲ. ಪೂರ್ಣಪ್ರಮಾಣದಲ್ಲಿ ಮೂಲಸೌಕರ್ಯ ಕಲ್ಪಿಸಲಿಲ್ಲ.
ಈ ನಡುವೆಯೂ ನಿರ್ಮಾಣಗೊಂಡ ಎರಡು ವರ್ಷಗಳ ಬಳಿಕ ಕಾರ್ಯಾರಂಭಗೊಂಡಿತು. ಕೊರೊನಾ ರೋಗಿಗಳ ಒತ್ತಡ ನಿರ್ವಹಣೆಗೆ ಅನಿವಾರ್ಯವಾಗಿ ೨೦೨೦ರ ಜ.೨೩ರಂದು ಉದ್ಘಾಟನೆಗೊಂಡ ಕಟ್ಟಡ ‘ಕೋವಿಡ್ ಜಿಲ್ಲಾಸ್ಪತ್ರೆ’ಯಾಗಿ ಪರಿವರ್ತನೆಗೊಂಡಿತು. ಕೊರೊನಾ ಕಾಲದಲ್ಲಿ ಕೈ ಹಿಡಿದ ಇದಕ್ಕೆ ಪೂರ್ಣಪ್ರಮಾಣದ ಸೌಲಭ್ಯವನ್ನು ಇನ್ನೂ ಕಲ್ಪಿಸಲಾಗಿಲ್ಲ. ಅರೆಬರೆ ಕೊರತೆಗಳ ನಡುವೆ ಮುನ್ನಡೆಯುತ್ತಿದೆ.
ಸಿಟಿ, ಎಂಆರ್‌ಐ ಸೌಲಭ್ಯ ಇಲ್ಲ: ಈ ಜಿಲ್ಲಾಸ್ಪತ್ರೆಗೆ ಅತಿ ಅವಶ್ಯ ವಾಗಿ ಬೇಕಾಗಿರುವ ಸೌಲಭ್ಯಗಳ ಪಟ್ಟಿ ದೊಡ್ಡದಿದೆ. ವಿವಿಧ ರೋಗ ಪತ್ತೆಗೆ ಅಗತ್ಯವಾಗಿರುವ ಸಿಟಿ ಸ್ಕ್ಯಾನ್ (ಕಂಪ್ಯೂಟರೈಸ್ಡ್ ಟೊಮೊಗ್ರಫಿ) ಮತ್ತು ಎಂಆರ್‌ಐ (ಮ್ಯಾಗ್ನೆಟಿಕ್ ರೆಸನೆನ್ಸ್ ಇಮೇಜಿಂಗ್) ಉಪಕರಣಗಳ ಅಗತ್ಯವಿದೆ. ಈ ಸೇವೆಗಳ ಅಲಭ್ಯದಿಂದ ಪರದಾಡುತ್ತಿರುವ ರೋಗಿಗಳು ಹೊರಗೆ ಖಾಸಗಿ ಕೇಂದ್ರಗಳಲ್ಲಿ ದುಬಾರಿ ಹಣ ತೆತ್ತು ಸ್ಕ್ಯಾನಿಂಗ್ ಮಾಡಿಸಿಕೊಂಡು ಬರಬೇಕಾದ ಅನಿವಾರ್ಯ ಎದುರಾಗಿದೆ.
ತಜ್ಞ ವೈದ್ಯರು, ಉಪಕರಣಗಳಿಲ್ಲ ಇಲ್ಲ: ಅಗ್ನಿ ಅವಘಡಗಳಿಂದ ಸುಟ್ಟು ಹೋದ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ವಾರ್ಡ್‌ನೊಂದಿಗೆ ಇಬ್ಬರು ಶಸಚಿಕಿತ್ಸಕರ ಅವಶ್ಯವಿದೆ. ಇದರೊಂದಿಗೆ ತಲಾ ಇಬ್ಬರು ಸಿರೋಗ ತಜ್ಞರು, ವೈದ್ಯಕೀಯ ತಜ್ಞರು (ಫಿಜಿಷಿಯನ್), ತುರ್ತು ನಿಗಾ ಘಟಕದ ತಜ್ಞ ವೈದ್ಯರು ಹಾಗೂ ಇದಕ್ಕೆ ಸಂಬಂಧಿಸಿದ ವೈದ್ಯರೂ ಬೇಕಾಗಿದ್ದಾರೆ. ವಿಶೇಷ ನವಜಾತ ಶಿಶು ಆರೈಕೆ ಘಟಕ, ಮಕ್ಕಳ ತೀವ್ರ ನಿಗಾ ಘಟಕವನ್ನು ನಿರ್ವಹಣೆಗಾಗಿ ನುರಿತ ಶುಶ್ರೂಷಾಧಿಕಾರಿಗಳು (ನರ್ಸಿಂಗ್ ಆಫೀಸರ್) ಮತ್ತು ನುರಿತ ಮಕ್ಕಳ ವೈದ್ಯರ ಅಗತ್ಯವಿದೆ.
ಪೂರ್ಣ ಪ್ರಮಾಣದಲ್ಲಿ ಬಳಕೆಯಾಗುತ್ತಿಲ್ಲ: ಈ ಆಸ್ಪತ್ರೆ ೩೦೦ ಹಾಸಿಗೆಗಳ ಸಾಮರ್ಥ್ಯ ಹೊಂದಿದ್ದು, ಇದರಲ್ಲಿ ೨೦೦ ಹಾಸಿಗಳನ್ನಷ್ಟೇ ಬಳಸಲಾಗುತ್ತಿದೆ. ಪೂರ್ಣ ಪ್ರಮಾಣದಲ್ಲಿ ಉಪಯೋಗಕ್ಕಾಗಿ ಬಹಳಷ್ಟು ವೈದ್ಯರು, ತಜ್ಞರು, ತಾಂತ್ರಿಕ ಸಿಬ್ಬಂದಿ ಸೇರಿದಂತೆ ೧೦೮ ಸಿಬ್ಬಂದಿ ನಿಯೋಜಿಸಿ ಕೊಳ್ಳಬೇಕಾಗಿದೆ. ೫೦ ಶುಶ್ರೂಷಾಧಿಕಾರಿಗಳು, ೫ ಪ್ರಯೋಗಶಾಲೆಯ ತಂತ್ರಜ್ಞರು, ಕ್ಷ ಕಿರಣ ತಂತ್ರಜ್ಞರು, ೧೦ ಡೇಟಾ ಎಂಟ್ರಿ ಆಪರೇಟರ್ಗಳು, ೨ ಒಟಿ ತಾಂತ್ರಿಕ ಸಿಬ್ಬಂದಿ, ಒಬ್ಬ ಇಸಿಜಿ ತಂತ್ರಜ್ಞ, ೧೦ ಭದ್ರತಾ ಸಿಬ್ಬಂದಿ, ೩೦ ಡಿ ದರ್ಜೆ ಸಿಬ್ಬಂದಿ ಬೇಕಾಗಿದ್ದಾರೆ.
ವೈದ್ಯಕೀಯ ಕಾಲೇಜಿನ ವೈದ್ಯರ ನೆರವಿನ ಕೋರಿಕೆ: ಮೆಡಿಸಿನ್, ಸರ್ಜರಿ, ಒಬಿಜಿ, ಮೂಳೆ ವಿಭಾಗಕ್ಕೆ ನುರಿತ ವೈದ್ಯರು ತುರ್ತಾಗಿ ಬೇಕಾಗಿದ್ದಾರೆ. ಮೈಸೂರು ವೈದ್ಯಕೀಯ ಕಾಲೇಜುಗಳಿಂದ ಸ್ನಾತಕೋತ್ತರ ಪದವಿ ವೈದ್ಯರನ್ನು ನಿಯೋಜಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆಅನುಮೋದನೆಗಾಗಿ ಕಾಯಲಾಗುತ್ತಿದೆ.
ಬಿಎಸ್ಸಿ ನರ್ಸಿಂಗ್ ಕಾಲೇಜು ಪ್ರಾರಂಭಿಸಿ: ಅರೆ ವೈದ್ಯಕೀಯ (ಪ್ಯಾರಾಮೆಡಿಕಲ್) ಕೋರ್ಸ್ ಮತ್ತು ಬಿಎಸ್ಸಿ ನರ್ಸಿಂಗ್ ಕಾಲೇಜು ಪ್ರಾರಂಭಿಸಲು ಅನುಮತಿ ಕೊಡಬೇಕಾಗಿದೆ. ಇಲ್ಲಿನ ಕಾಲೇಜುಗಳಲ್ಲಿ ಕಲಿಯುವ ವಿದ್ಯಾರ್ಥಿಗಳ ಸೇವೆ ಈ ಆಸ್ಪತ್ರೆಗೆ ಲಭ್ಯವಾಗಲಿದ್ದು, ಇದರಿಂದ ಸಿಬ್ಬಂದಿ ಕೊರತೆ, ಅಗತ್ಯ ಸೇವೆ ಮತ್ತು ಕಾರ್ಯ ಒತ್ತಡ ಕಡಿಮೆ ಮಾಡಲು ಅವಕಾಶ ದೊರೆಯಲಿದೆ.
೩ ಲಕ್ಷ ದಾಟಿರುವ ಒಪಿಡಿ ಸಂಖ್ಯೆ: ಜಿಲ್ಲಾಸ್ಪತ್ರೆ ಮತ್ತು ಸಾಂಕ್ರಾಮಿಕ ರೋಗಿಗಳ ಆಸ್ಪತ್ರೆಗೆ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೊರರೋಗಿಗಳ ದಟ್ಟಣೆ ತೀವ್ರವಾಗಿದೆ. ವರ್ಷಕ್ಕೆ ೩ ಲಕ್ಷ ಹೊರರೋಗಿಗಳು ಇಲ್ಲಿಗೆ ಬಂದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅಂದಾಜು ೧೦ ಸಾವಿರ ಒಳರೋಗಿಗಳು ಇಲ್ಲಿ ದಾಖಲಾಗಿ ವೈದ್ಯಕೀಯ ಸೇವೆ ಪಡೆದುಕೊಳ್ಳುತ್ತಿದ್ದಾರೆ. ಶಸಚಿಕಿತ್ಸೆಯೂ ನಾಲ್ಕು ಅಂಕಿ ದಾಟಿದೆ. ೨೦೨೪ರಿಂದ ಆರಂಭವಾಗಿರುವ ಡಯಾಲಿಸಿಸ್ ಸೇವೆಯನ್ನು ಕಿಡ್ನಿ ಸಮಸ್ಯೆ ಯಿಂದ ಬಳಲುತ್ತಿರುವ ೬,೫೨೭ ರೋಗಿಗಳು ಪ್ರಸ್ತಕ ಸಾಲಿನಲ್ಲಿ ಪಡೆದುಕೊಂಡಿದ್ದಾರೆ. ಇದೇ ವರ್ಷದಲ್ಲಿ ಕಾರ್ಯಾರಂಭಗೊಂಡಿರುವ ಕಿಮೋಥೆರಪಿಯನ್ನೂ ೩೨ ರೋಗಿಗಳು ಮಾಡಿಸಿಕೊಂಡಿದ್ದಾರೆ.
” ಮೈಸೂರು ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ರೋಗಿಗಳು ಚಿಕಿತ್ಸೆ ಹಾಗೂ ಪ್ರಮುಖ ಶಸಚಿಕಿತ್ಸೆಗೆ ಕೆ.ಆರ್.ಆಸ್ಪತ್ರೆ ಯನ್ನೇ ಅವಲಂಬಿಸಿದ್ದಾರೆ. ಆದರೆ, ಈ ದೊಡ್ಡಾಸ್ಪತ್ರೆ’ ಒಂದರಿಂದಲೇ ಎಲ್ಲ ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗದೆ ವೈದ್ಯರ ಮೇಲೆ ಒತ್ತಡ ಹೆಚ್ಚಾಗಿತ್ತು. ಪರ್ಯಾಯವಾಗಿ ಮತ್ತೊಂದು ಜಿಲ್ಲಾಸ್ಪತ್ರೆ ಬೇಕೆಂಬುದು ಬಹುದಿನಗಳ ಬೇಡಿಕೆಯಾಗಿತ್ತು. ಸದ್ಯಕ್ಕೆ ಈ ಬೇಡಿಕೆಈಡೇರಿದೆ. ಆದರೆ, ಜಿಲ್ಲಾಸ್ಪತ್ರೆಗೆ ಬೇಕಾದ ಅಗತ್ಯ ಮೂಲಸೌಲಭ್ಯಗಳಿಲ್ಲದೇ ಇದು ಬಡವಾಗಿದೆ.”





