Mysore
30
few clouds

Social Media

ಶನಿವಾರ, 21 ಮಾರ್ಚ್ 2026
Light
Dark

ಪಾಳು ಬಿದ್ದ ಪಾರ್ಕ್.. ಶುಚಿ ಇಲ್ಲದ ಶೌಚಾಲಯ..

ಕಸ, ಕೊಳಚೆ ಮತ್ತು ಕಟ್ಟಡ ತ್ಯಾಜ್ಯದಿಂದ ವಾಯುವಿಹಾರಿಗಳಿಗೆ ತೊಂದರೆ 

ಮೈಸೂರು: ನಗರದ ಸರಸ್ವತಿಪುರಂನ ವಾರ್ಡ್ ಸಂಖ್ಯೆ ೨೧ರಲ್ಲಿ ಇರುವ ಪಾರ್ಕ್ ಸೂಕ್ತ ನಿರ್ವಹಣೆ ಇಲ್ಲದೆ ಪಾಳು ಕೊಂಪೆಯಂತಾಗಿದೆ. ಪಾರ್ಕ್‌ನಲ್ಲಿ ಎಲ್ಲೆಂದರಲ್ಲಿ ಕಸ ಬಿದ್ದಿದ್ದು, ಪಾರ್ಕ್‌ನಲ್ಲಿರುವ ಸಾರ್ವಜನಿಕ ಶೌಚಾಲಯವೂ ನಿರ್ವಹಣೆ ಕೊರತೆಯಿಂದ ಉಪಯೋಗಕ್ಕೆ ಬಾರದಂತಾಗಿದೆ.

ಶೌಚಾಲಯಕ್ಕೆ ನೀರು ಪೂರೈಕೆ ಇಲ್ಲದೆ ವರ್ಷಗಳೇ ಕಳೆದಿವೆ. ಇದರಿಂದ ಗೋಡೆಗಳಲ್ಲಿ ಬಿರುಕು ಬಿದ್ದು ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿದೆ. ಕಿಟಕಿ ಹಾಗೂ ಬಾಗಿಲುಗಳು ಮುರಿದು ಬಿದ್ದಿದ್ದು, ಬೇಸಿನ್ ಮತ್ತು ಪೈಪ್‌ಲೇನ್ ಒಡೆದು ಹೋಗಿವೆ. ಇದರಿಂದ ಅನೈರ್ಮಲ್ಯ ಉಂಟಾಗಿದೆ. ಶೌಚಾಲಯದ ಒಳಗೆ ಪ್ಲಾಸ್ಟಿಕ್ ಬಾಟಲಿಗಳು ಹಾಗೂ ಮದ್ಯಪಾನ ಮಾಡಿದವರು ಬಿಸಾಡಿದ ಬಾಟಲಿಗಳು ತುಂಬಿ ಹೋಗಿವೆ. ಕಸ, ಕಡ್ಡಿ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ಹಾಕಿರುವುದರಿಂದ ನೀರು ಒಂದೇ ಕಡೆ ನಿಂತು ದುರ್ವಾಸನೆ ಬೀರುತ್ತಿದೆ. ಇದರಿಂದ ಕ್ರಿಮಿಕೀಟಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಪ್ರತಿದಿನ ನೂರಾರು ಜನರು ವಾಯುವಿಹಾರಕ್ಕೆ ಈ ಪಾರ್ಕ್ಗೆ ಬರುತ್ತಾರೆ. ಮಕ್ಕಳ ಜೊತೆಗೆ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹೆಚ್ಚಿನ ವಯಸ್ಕರು ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವುದರಿಂದ ಶೌಚಾಲಯ ಬಳಸುವ ಅಗತ್ಯ ಹೆಚ್ಚಿದೆ. ಆದರೆ, ಶೌಚಾಲಯದದುಸ್ಥಿತಿಯಿಂದ ಬಳಸಲು ಹೋದರೆ ಕಾಯಿಲೆ ಬರುವ ಪರಿಸ್ಥಿತಿ ಇದೆ ಎಂದು ಹಿರಿಯ ನಾಗರಿಕರು ಆರೋಪಿಸುತ್ತಾರೆ.

ನೀರು, ಕರೆಂಟ್ ಇಲ್ಲ: ಶೌಚಾಲಯಕ್ಕೆ ಸರಿಯಾಗಿ ನೀರು ಸರಬರಾಜು ಆಗುತ್ತಿಲ್ಲ. ಜೊತೆಗೆ ವಿದ್ಯುತ್ ಸಂಪರ್ಕವೂ ಇಲ್ಲದ ಕಾರಣ ರಾತ್ರಿ ವೇಳೆಯಲ್ಲಿ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಅನಾರೋಗ್ಯದ ಭೀತಿ: ನಿಂತಿರುವ ಕೊಳಚೆ ನೀರು ಸೊಳ್ಳೆಗಳ ಸಂತಾನೋತ್ಪತ್ತಿಗೆ ಕಾರಣವಾಗಿದ್ದು, ಇದು ಸಾಂಕ್ರಾಮಿಕ ರೋಗಗಳಿಗೆ ದಾರಿ ಮಾಡಿಕೊಡುತ್ತಿದೆ. ಅಧಿಕಾರಿಗಳಿಗೆ ದೂರವಾಣಿ ಮೂಲಕ ತಿಳಿಸಿದರೂ ಸ್ಪಂದಿಸುತ್ತಿಲ್ಲ ಎಂದು ನಿವಾಸಿಗಳ ಆರೋಪವಾಗಿದೆ.

ಗ್ರಂಥಾಲಯಕ್ಕೆ ಬರುವವರಿಗೆ ತೊಂದರೆ: ಪಾರ್ಕ್‌ನಲ್ಲಿ ಸಾರ್ವಜನಿಕ ಗ್ರಂಥಾಲಯವಿದ್ದು, ಪ್ರತಿದಿನ ಅನೇಕರು ಬರುತ್ತಾರೆ. ಆದರೆ, ಗ್ರಂಥಾಲಯದ ಒಳಗೂ ಶೌಚಾಲಯವಿಲ್ಲದ ಕಾರಣ ಮನೆಗಳಿಗೆ ಅಥವಾ ಸಾರ್ವಜನಿಕ ಶೌಚಾಲಯಗಳಿಗೆ ಹೋಗುವ ಪರಿಸ್ಥಿತಿ ಎದುರಾಗಿದೆ ಎಂದು ವಿದ್ಯಾರ್ಥಿ ಚೇತನ್ ದೂರಿದರು.

ಕಸದ ರಾಶಿ: ಉದ್ಯಾನವೆಲ್ಲ ಪ್ಲಾಸ್ಟಿಕ್ ತ್ಯಾಜ್ಯದಿಂದ ತುಂಬಿದೆ. ಕಸದ ರಾಶಿಯನ್ನು ಒಂದೇ ಕಡೆ ಸುರಿದಿರುವುದು ಕಂಡುಬರುತ್ತಿದೆ. ಪಾರ್ಕ್‌ಗೆ ಬರುವವರು ತಿಂಡಿ-ತಿನಿಸುಗಳನ್ನು ಸೇವಿಸಿ ಕಸವನ್ನು ಅಲ್ಲಿಯೇ ಎಸೆಯುವುದರಿಂದ ನಿರ್ವಹಣೆ ಕೊರತೆಯಿಂದ ಪಾರ್ಕ್ ಕಸಮಯವಾಗಿದೆ.

ಕಟ್ಟಡ ತ್ಯಾಜ್ಯ: ಪಾರ್ಕ್‌ನಲ್ಲಿ ಕಟ್ಟಡ ತ್ಯಾಜ್ಯ ಹಾಗೂ ತುಕ್ಕು ಹಿಡಿದ ಕಬ್ಬಿಣದ ರಾಶಿಗಳು ವರ್ಷಗಳಿಂದ ಹಾಗೆಯೇ ಬಿದ್ದಿವೆ. ಇದರಿಂದ ಗಿಡ-ಗಂಟಿಗಳು ಬೆಳೆದು ನಿಂತಿದ್ದು, ಮಕ್ಕಳು ಆಟವಾಡಲು ಬಂದಾಗ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ.

” ಪಾರ್ಕ್‌ನಲ್ಲಿರುವ ಸಮಸ್ಯೆಯನ್ನು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಹಿಂದೆ ೧ ಕೋಟಿ ರೂ. ಅನುದಾನದಿಂದ ಪಾರ್ಕ್‌ನ್ನು ನಿರ್ಮಾಣ ಮಾಡಲಾಗಿತ್ತು. ಆದರೆ, ಸರಿಯಾದ ನಿರ್ವಹಣೆ ಇಲ್ಲದೆ ಪಾರ್ಕ್ ಹಾಳಾಗಿದೆ. ಪಾಲಿಕೆ ಸದಸ್ಯರಿಲ್ಲದೆ ಅಧಿಕಾರಿಗಳ ದರ್ಬಾರು ಹೆಚ್ಚಾಗಿದೆ. ಸಾರ್ವಜನಿಕರ ಸಮಸ್ಯೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ.”

-ಸಿ.ವೇದಾವತಿ, ನಗರಪಾಲಿಕೆ ಮಾಜಿ ಸದಸ್ಯೆ

” ಮನುಷ್ಯನ ಮೂಲ ಅವಶ್ಯಕತೆಗಳಲ್ಲಿ ಶೌಚಾಲಯವೂ ಒಂದು. ಉದ್ಯಾನವನಗಳಿಗೆ ಹಿರಿಯರು ಬೆಳಿಗ್ಗೆ ಹಾಗೂ ಸಂಜೆ ವೇಳೆ ಆಗಮಿಸುತ್ತಾರೆ. ಅವರಿಗೆ ಸೂಕ್ತ ಶೌಚಾಲಯ ವ್ಯವಸ್ಥೆಯನ್ನು ನಗರಪಾಲಿಕೆ ಕಲ್ಪಿಸಬೇಕು. ಈ ವಿಷಯದಲ್ಲಿ ಯಾರೂ ರಾಜಿಯಾಗುವುದಿಲ್ಲ.”

-ಪ್ರೀತಮ್, ವಾಯುವಿಹಾರಿ

 

 

Tags:
error: Content is protected !!