ಅನುಚೇತನ್ ಕೆ.ಎಂ.
ಬಳಕೆ ಬಾರದಂತಿರುವ ಶೌಚಾಲಯಗಳು; ಪಾಲಿಕೆ ವಿರುದ್ಧ ಸಾರ್ವಜನಿಕರ ಆಕ್ರೋಶ
ಹಲವು ಕಡೆಗಳಲ್ಲಿ ಶೌಚಾಲಯಗಳಿಗೆ ಬೀಗ
ಕಿಡಿಗೇಡಿಗಳಿಂದ ವಿರೂಪಗೊಳಿಸುವ ಕೃತ್ಯ
ಸ್ವಚ್ಛ ನಗರಿ ಯೋಜನೆಗೆ ಬೀಳುತ್ತಿದೆ ಹೊಡೆತ
ಮೈಸೂರು: ನಗರದಲ್ಲಿ ಜನರ ವಾಸ್ತವ್ಯ ಹೆಚ್ಚಾದಂತೆ ನಗರದ ಬೆಳವಣಿಗೆಯೂ ಹೆಚ್ಚಾಗುತ್ತಿದೆ. ಹಾಗಾಗಿ ಜನರ ಮೂಲ ಸಮಸ್ಯೆಗಳನ್ನು ಪರಿಹರಿಸಲು ಸಾರ್ವಜನಿಕರಿಗಾಗಿ ಮಹಾ ನಗರ ಪಾಲಿಕೆಯು ನಗರದ ಹಲವೆಡೆ ಹಾಗೂ ವಾರ್ಡ್ ಗಳಲ್ಲಿ ವಿವಿಧ ಯೋಜನೆಗಳಡಿ ಸಾರ್ವಜನಿಕ ಶೌಚಾಲಯ ಕಟ್ಟಡಗಳನ್ನು ನಿರ್ಮಿಸಿದೆ. ಆದರೆ ಪಾಲಿಕೆಯ ನಿರ್ಲಕ್ಷ್ಯವೋ,ನಿರ್ವಹಣೆಯ ಕೊರತೆ ಯಿಂದಲೋ ನಗರದ ಹಲವು ಕಡೆಗಳಲ್ಲಿ ಶೌಚಾಲಯಗಳನ್ನು ಸಾರ್ವಜನಿಕ ಬಳಕೆಗಾಗಿ ತೆರೆಯದೆ ಬೀಗ ಜಡಿಯಲಾಗಿದೆ.
ಪಾಲಿಕೆ ವಿರುದ್ಧ ಜನರ ಆಕ್ರೋಶ: ನಗರದ ಸ್ವಚ್ಛತೆಯ ದೃಷ್ಟಿಯಿಂದ ನಗರ ಹಾಗೂ ಗ್ರಾಮಾಂತರ ಬಸ್ ನಿಲ್ದಾಣಗಳು, ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಹಲವು ಕಡೆ ಸಾರ್ವಜನಿಕರಿಗಾಗಿ ಸುಲಭ ಶೌಚಾಲಯಗಳನ್ನು ನಿರ್ಮಿಸಿ ಉಚಿತವಾಗಿ ಹಾಗೂ ಹಣ ಪಾವತಿಸಿ ಶೌಚಾಲಯಗಳ ಬಳಕೆಗೆ ಅನುವು ಮಾಡಿಕೊಡಲಾಗಿದೆ. ಆದರೆ ನಿರ್ಮಾಣವಾದ ಶೌಚಾಲಯಗಳನ್ನು ಜನರ ಅನುಕೂಲಕ್ಕೆ ನೀಡದೆ ವರ್ಷಗಳಿಂದ ನಿರ್ಲಕ್ಷ್ಯ ವಹಿಸಿ ಬೀಗ ಹಾಕಲಾಗಿದೆ. ಕನ್ನೇಗೌಡನ ಕೊಪ್ಪಲು, ವಿಜಯನಗರ ಮೊದಲನೇ ಹಂತ, ಲಕ್ಷ್ಮೀಪುರಂ ಪೋಲೀಸ್ ಠಾಣೆ ಬಳಿ ಇರುವ ಶೌಚಾಲಯ ಸೇರಿದಂತೆ ನಗರದ ವಿವಿಧೆಡೆ ೩೦ಕ್ಕೂ ಹೆಚ್ಚು ಶೌಚಾಲಯಗಳನ್ನು ತೆರೆಯಲು ಪಾಲಿಕೆ ಮುಂದಾಗಿಲ್ಲ. ಕೆಲವು ಶೌಚಾಲಯ ಕಟ್ಟಡಗಳು ನಿರ್ವಹಣೆ, ಜನರ ಬಳಕೆಗೂ ಲಭ್ಯವಾಗದೆ ಪಾಳುಬಿದ್ದಿವೆ.
ಸುತ್ತಲೂ ಗಿಡಗಂಟಿ, ಹುಲ್ಲು ಬೆಳೆದಿದೆ. ಪಾಲಿಕೆಯ ಕ್ರಮ, ನಿರ್ಲಕ್ಷ್ಯ ಧೋರಣೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಸಾರ್ವಜನಿಕರ ತೆರಿಗೆ ಹಣವನ್ನು ಪಾಲಿಕೆ ಅಧಿಕಾರಿಗಳು ಶೌಚಾಲಯದ ಹೆಸರಿನಲ್ಲಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸಾರ್ವಜನಿಕ ಶೌಚಾಲಯಗಳು ಲಭ್ಯವಿಲ್ಲದ ಕಾರಣದಿಂದ ಇನ್ನೂ ಕೆಲವು ಸಾರ್ವಜನಿಕ ಸ್ಥಳಗಳಲ್ಲಿ ಜನರು ಮೂತ್ರವಿಸರ್ಜನೆ ಮಾಡುತ್ತಿದ್ದಾರೆ.
ಕಿಡಿಗೇಡಿಗಳ ಹಾವಳಿ, ಪಾಲಿಕೆ ನಿರ್ಲಕ್ಷ್ಯ: ನಗರದ ಹಲವು ಸಾರ್ವಜನಿಕ ಶೌಚಾಲಯಗಳು ಇನ್ನೂ ಬಳಕೆಗೆ ಲಭ್ಯವಾಗದ ಕಾರಣದಿಂದ ಕಾರಣ ಕಿಡಿಗೇಡಿಗಳು ಶೌಚಾಲಯ ಕಟ್ಟಡಗಳ ಕಿಟಕಿ ಗಾಜು, ಬಾಗಿಲುಗಳನ್ನು ವಿರೂಪಗೊಳಿಸಿದ್ದಾರೆ. ಅನೈತಿಕ ಚಟುವಟಿ ಕೆಗಳಿಗೆ ಬಳಕೆಯಾಗುತ್ತಿದೆ ಎಂದು ಸಾರ್ವಜನಿಕರು ದೂರು ನೀಡಿ, ಸೂಕ್ತ ಕ್ರಮಕ್ಕೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಪಾಲಿಕೆ ಅಧಿಕಾರಿಗಳು ಕೂಡಲೇ ಜನರ ಅನುಕೂಲಕ್ಕಾಗಿ ನಿರ್ಮಿಸಿರುವ ಶೌಚಾಲಯಗಳನ್ನು ಉಪಯೋಗಕ್ಕೆ ನೀಡಿ, ಸರಿಯಾದ ರೀತಿಯಲ್ಲಿ ನಿರ್ವಹಣೆಯ ಜವಾಬ್ದಾರಿ ವಹಿಸಬೇಕಾಗಿದೆ. ಇದರಿಂದ ನೂರಾರು ಸಾರ್ವಜನಿಕರಿಗೆ ಅನುಕೂಲವಾದಂತಾಗುತ್ತದೆ.
” ಹಳೆಯ ಕಟ್ಟಡಗಳು ೬ ಮಾತ್ರ ಇವೆ. ಉಳಿದ ಕಟ್ಟಡಗಳನ್ನು ನೂತನವಾಗಿ ನಿರ್ಮಿಸಲಾಗಿದೆ. ಪಾಲಿಕೆಯಿಂದ ಈಗಾಗಲೇ ೨ ಬಾರಿ ಶೌಚಾಲಯ ನಿರ್ವಹಣೆಗಾಗಿ ಟೆಂಡರ್ ಕರೆಯಲಾಗಿದ್ದರೂ ಯಾರೂ ಭಾಗವಹಿಸುವ ಆಸಕ್ತಿ ತೋರಿಲ್ಲ. ಮತ್ತೊಂದು ಬಾರಿ ಟೆಂಡರ್ ಕರೆಯಲಾಗುತ್ತದೆ. ತದ ನಂತರ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಲಾಗುತ್ತದೆ. ಕಿಡಿಗೇಡಿಗಳನ್ನು ಪತ್ತೆ ಮಾಡಿ ಕ್ರಮ ಜರುಗಿಸುತ್ತೇವೆ.”
-ಅಶ್ವಿನ್, ಕಾರ್ಯನಿರ್ವಾಹಕ ಇಂಜಿನಿಯರ್, ಮೈಸೂರು ಮಹಾ ನಗರಪಾಲಿಕೆ.
” ಈ ವಿಷಯವಾಗಿ ಹಿಂದೆ ಪಾಲಿಕೆಯ ಸಭೆಯಲ್ಲಿ ಪ್ರಸ್ತಾಪಿಸಿದ್ದೇನೆ. ಆದರೂ ಸಮಸ್ಯೆ ಸರಿಪಡಿಸುವ ಕೆಲಸವಾಗಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯ ತೋರುತಿದ್ದಾರೆ. ಲಾಭದ ಸ್ಥಳಗಳಲ್ಲಿ ಮಾತ್ರ ಉಪಯೋಗಕ್ಕೆ ಅನುವು ಮಾಡಿಕೊಟ್ಟು ನಿರ್ವಹಣೆ ಮಾಡಲಾಗುತ್ತಿದೆ. ಸಾರ್ವಜನಿಕರಿಗಾಗಿ ನಿರ್ಮಿಸಿ ಅವರ ಉಪಯೋಗಕ್ಕೆ ನೀಡದಿರುವುದು. ಸರಿಯಲ್ಲ. ಇನ್ನಾದರೂ ಅಧಿಕಾರಿಗಳು, ಆಯುಕ್ತರು ಈ ಬಗ್ಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು.”
-ಶಿವಕುಮಾರ್, ಮಾಜಿ ಮೇಯರ್, ನಗರಪಾಲಿಕೆ
” ಮೈಸೂರನ್ನು ಸ್ವಚ್ಛ ನಗರವನ್ನಾಗಿ ರೂಪಿಸಲೆಂದು ನೂರಾರು ಕೋಟಿ ರೂ. ವೆಚ್ಚ ಮಾಡಿ ಸಾರ್ವಜನಿಕರಿಗಾಗಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ ಕಾಮಗಾರಿ ಪೂರ್ಣಗೊಂಡರೂ ಜನರ ಬಳಕೆಗೆ ಲಭ್ಯವಾಗಿಲ್ಲ. ಸಾವಿರಾರು ಜನರು ಶೌಚಾಲಯಕ್ಕಾಗಿ ಪರದಾಡು ವಂತಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಿಡಿಗೇಡಿಗಳು ಕಟ್ಟಡಗಳನ್ನು ವಿರೂಪಗೊಳಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಜರುಗಿಸಬೇಕು.”
-ಚಂದ್ರು ಅದಮ್ಯ, ನಗರ ನಿವಾಸಿ.