೫೫ ಲಕ್ಷ ರೂ. ವೆಚ್ಚದ ಕಟ್ಟಡಗಳನ್ನು ಸುಪರ್ದಿಗೆ ಪಡೆಯದ ಪ್ರವಾಸೋದ್ಯಮ ಇಲಾಖೆ
ಆನಂದ್ ಹೊಸೂರು
ಹೊಸೂರು: ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ ಸರ್ಕಾರ ಕೋಟ್ಯಂತರ ರೂ. ವ್ಯಯಿಸುವುದು ಒಂದೆಡೆಯಾದರೆ ಇಲ್ಲಿ ಸುಮಾರು ೫೫ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಕಟ್ಟಡಗಳು ಪಾಳುಬಿದ್ದಿರುವುದು ಶೋಚನೀಯ ಸಂಗತಿ.
ಸಾಲಿಗ್ರಾಮ ತಾಲ್ಲೂಕಿನ ಪ್ರವಾಸಿ ತಾಣ ಚುಂಚನಕಟ್ಟೆಯಲ್ಲಿರುವ ಕಟ್ಟಡಗಳು ಪಾಳುಬೀಳುತ್ತಿವೆ. ಈ ಹಿಂದೆ ಪ್ರವಾಸೋದ್ಯಮ ಸಚಿವರಾಗಿದ್ದ ಸಾ.ರಾ.ಮಹೇಶ್ ಅವರು ಸುಮಾರು ೮ ಕೋಟಿ ರೂ. ವಿಶೇಷ ಅನುದಾನ ನೀಡಿ ಗ್ರಾಮದಲ್ಲಿ ದ್ವಿಪಥ ರಸ್ತೆ, ಬೃಹತ್ ಆಂಜನೇಯ ಮೂರ್ತಿ, ಪಾರ್ಕ್, ವೀಕ್ಷಣಾ ಗೋಪುರ, ಪ್ರವಾಸಿ ಮಂದಿರದ ಬಳಿ ೫೫ ಲಕ್ಷ ರೂ. ವೆಚ್ಚದಲ್ಲಿ ಉಪಾಹಾರ ಗೃಹ, ಶೌಚಾಲಯ ನಿರ್ಮಾಣ, ಕುಡಿಯುವ ನೀರು ಸರಬರಾಜು ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ನಡೆಸಿದ್ದರು.
೨೦೧೯ರಲ್ಲೇ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿ ದ್ದರೂ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಇನ್ನೂ ತಮ್ಮ ಸುಪರ್ದಿಗೆ ತೆಗೆದುಕೊಂಡಿಲ್ಲ. ಇದೇ ಜಾಗದಲ್ಲಿರುವ ಜಲಪಾತ ವೀಕ್ಷಣಾ ಗೋಪುರವೂ ಪಾಳು ಬಿದ್ದು, ಗಿಡ ಗಂಟಿಗಳು ಬೆಳೆದು ಹಾವು-ಚೇಳುಗಳ ಆವಾಸಸ್ಥಾನವಾಗಿ ಮಾರ್ಪಟ್ಟಿದೆ.
ಸರ್ಕಾರ ಸಾಕಷ್ಟು ಅನುದಾನ ನೀಡಿ ಕಟ್ಟಡಗಳು ನಿರ್ಮಾಣಗೊಂಡರೂ ಇಲಾಖೆ ತನ್ನ ಸುಪರ್ದಿಗೆ ತೆಗೆದುಕೊಳ್ಳಲು೬ ವರ್ಷಗಳು ಬೇಕೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಉಪಾಹಾರ ಕೇಂದ್ರವೆನಿಸಿಕೊಂಡಿರುವ ಈ ಕಟ್ಟಡವನ್ನು ಪ್ರವಾಸಿಗರಿಗೆ ಊಟದ ವ್ಯವಸ್ಥೆಗಾಗಿ ನಿರ್ಮಾಣ ಮಾಡಲಾಗಿದೆ.
ಸದ್ಯ ಕಟ್ಟಡಕ್ಕೆ ಹಾಕಲಾಗಿರುವ ಕಿಟಕಿ ಬಾಗಿಲುಗಳನ್ನು ಗೆದ್ದಲುಗಳು ತಿನ್ನುತ್ತಿದ್ದು ಕಿಟಕಿಗಳಿಗೆ ಹಾಕಲಾಗಿರುವ ಗಾಜುಗಳು ಒಡೆದು ಹೋಗಿವೆ. ಕಟ್ಟಡದ ಒಳಗೆ ಅನೈತಿಕ ಚಟುವಟಿಕೆಗಳು ನಡೆಯುತ್ತವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
” ಉಪಾಹಾರ ಗೃಹಸೇರಿದಂತೆ ಈಗಾಗಲೇ ಕಾಮಗಾರಿ ಮುಗಿದಿರುವ ಕಟ್ಟಡಗಳು ನಮ್ಮ ಇಲಾಖೆಯ ಸುಪರ್ದಿಗೆ ಇನ್ನೂ ಬಂದಿಲ್ಲ. ಸದ್ಯದಲ್ಲಿಯೇ ಭೇಟಿ ನೀಡಿ ಮಾಹಿತಿ ಪಡೆದು ಉತ್ತಮ ಕ್ಯಾಂಟೀನ್ ತೆರೆಯಲು ಕ್ರಮ ಕೈಗೊಳ್ಳಲಾಗುವುದು.”
-ಪ್ರಭುಸ್ವಾಮಿ, ಸಹಾಯಕ ನಿರ್ದೇಶಕರು,
” ಪ್ರವಾಸೋದ್ಯಮ ಇಲಾಖೆ ಸರ್ಕಾರ ಇರುವ ಸೌಲಭ್ಯಗಳನ್ನು ಬಳಸಿ ಗುಣಮಟ್ಟದ ಸೇವೆ ನೀಡಲಾಗದೇ ಇರುವುದಕ್ಕೆ ಚುಂಚನಕಟ್ಟೆಯೇ ಸಾಕ್ಷಿಯಾಗಿದೆ. ಕಳೆದ ೬ ವರ್ಷಗಳಿಂದ ಈ ಕಟ್ಟಡಗಳು ಅನಾಥವಾಗಿದ್ದು, ಈಗಲಾದರೂ ಜನಪ್ರತಿನಿಽಗಳು, ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಬೇಕಿದೆ.”
-ಹೆಚ್.ಆರ್.ಕೃಷ್ಣಮೂರ್ತಿ, ಡೇರಿ ಅಧ್ಯಕ್ಷ, ಹಳಿಯೂರು ಬಡಾವಣೆ





