Mysore
16
overcast clouds

Social Media

ಬುಧವಾರ, 01 ಜನವರಿ 2025
Light
Dark

ಡಿಜಿಟಲ್ ವಂಚನೆ: ಕೋಟ್ಯಂತರ ರೂ. ಲೂಟಿ

ಕೆ.ಬಿ.ರಮೇಶನಾಯಕ

ಮೆಸೇಜ್ ಪರಿಶೀಲಿಸಲು ಕಳುಹಿಸಿದ ಸ್ನೇಹಿತರ ಖಾತೆಯಿಂದಲೂ ಹಣ ಡ್ರಾ

೧೧ತಿಂಗಳಲ್ಲಿ ಮೈಸೂರು ಸೇರಿ ರಾಜ್ಯದಲ್ಲಿ ೨,೦೪೭ ಕೋಟಿ ರೂ. ವಂಚನೆ

ಮೈಸೂರು: ಸೈಬರ್ ವಂಚನೆ ಬಗ್ಗೆ ಪೊಲೀಸರು, ಕೇಂದ್ರ ಗೃಹ ಸಚಿವಾಲಯ ಜಾಗೃತಿ ಮೂಡಿಸುವ ಜತೆಗೆ ಅನಾಮಧೇಯ, ಅಪರಿಚಿತ ಕರೆ, ಮೆಸೇಜ್‌ಗಳಿಗೆ ಪ್ರತಿಕ್ರಿಯಿಸದಂತೆ ಎಚ್ಚರಿಕೆ ಕೊಡುತ್ತಲೇ ಇದ್ದರೂ ವಂಚಕರು ಬೀಸುತ್ತಿರುವ ಹೊಸ ಹೊಸ ಮಾದರಿಯ ಜಾಲಕ್ಕೆ ಶಿಕ್ಷಿತರೇ ಸಿಲುಕುತ್ತಿದ್ದು, ವಾಟ್ಸಾಪ್, ಟೆಲಿಗ್ರಾಮ್‌ನಲ್ಲಿ ಬರುತ್ತಿರುವ ಅನಾಮಧೇಯ ಚಾಟಿಂಗ್ ಮೆಸೇಜ್‌ಅನ್ನು ಕ್ಲಿಕ್ ಮಾಡಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.

ಸೈಬರ್ ವಂಚನೆ ಬಗ್ಗೆ ಜಾಗೃತಿ ಮೂಡಿಸಬೇಕಾದ ಶಿಕ್ಷಿತ ಮತ್ತು ಪ್ರಜ್ಞಾವಂತರೇ ಚಾಟಿಂಗ್ ಮಾಡುವ ಭರದಲ್ಲಿ ಹಿಂದೆ-ಮುಂದೆ ಯೋಚಿಸದೆ ರಿಪ್ಲೇ ಕೊಡಲು ಹೋಗಿ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಕಳೆದುಕೊಂಡು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.

ಕೇಂದ್ರ ಗೃಹ ಸಚಿವಾಲಯವು ಕಳೆದ ಒಂದು ತಿಂಗಳಿಂದ ಗ್ರಾಹಕರು ದೂರವಾಣಿ ಕರೆ ಮಾಡಿದಾಗ ಅನಾಮಧೇಯ ಮತ್ತು ಅಪರಿಚಿತ ವ್ಯಕ್ತಿಗಳಿಂದ ಬರುವ ಸಂದೇಶ, ಕರೆಯನ್ನು ಸ್ವೀಕರಿಸಬೇಡಿ. ಸ್ವೀಕರಿಸಿದರೂ ಗಾಬರಿಯಾಗದೆ ೧೯೩೦ಸಂಖ್ಯೆಗೆ ಕರೆ ಮಾಡಿ ಎನ್ನುವ ಸಂದೇಶ ನೀಡುತ್ತಾ ಎಚ್ಚರಿಸುವ ಕೆಲಸ ಮಾಡುತ್ತಿದೆ. ಹೀಗಿದ್ದರೂ, ಸೈಬರ್ ಕ್ರೈಂನಲ್ಲಿ ನಿಪುಣತೆಯನ್ನು ಹೊಂದಿರುವ ಚಾಲಾಕಿಗಳು ಹೊಸ ಹೊಸ ತಂತ್ರಜ್ಞಾನದ ವಿಧಾನವನ್ನು ಬಳಸಿಕೊಂಡು ಜನರಿಗೆ ವಂಚಿಸಿ ಬ್ಯಾಂಕ್ ಖಾತೆ ಯಲ್ಲಿ ಇರುವ ಹಣವನ್ನು ದೋಚುತ್ತಿರುವುದರಿಂದ ಜನತೆ ಬೆಚ್ಚಿಬಿದ್ದಿದ್ದಾರೆ.

ಏನಿದು ಚಾಟಿಂಗ್ ಮೆಸೇಜ್?

ಖಾಸಗಿ ಕಂಪೆನಿಯಲ್ಲಿ ಇಂಜಿನಿಯರ್ ಆಗಿರುವ ವ್ಯಕ್ತಿಯೊಬ್ಬರಿಗೆ ವಾಟ್ಸಾಪ್, ಟೆಲಿಗ್ರಾಂ ಮೂಲಕ ಮೆಸೇಜ್ ಬರುತ್ತದೆ. ಇದೇನು ಹೊಸಬರಿಂದ ಯಾವುದೋ ಮೆಸೇಜ್ ಬಂದಿದೆಯಲ್ಲಾ ಎನ್ನುವಂತೆ ನೋಡುವ ಹೊತ್ತಿಗೆ ಕ್ಷಣಾರ್ಧದಲ್ಲಿ ಖಾತೆಯಿಂದ ೧ ಸಾವಿರ ರೂ. ಹಣ ಮೊದಲು ಕಡಿತವಾಗುತ್ತದೆ. ನಂತರ, ೩ ಸಾವಿರ ರೂ. ಮೂರನೇ ಬಾರಿಗೆ ೫ ಸಾವಿರ ರೂ. ಕಡಿತವಾಗುತ್ತದೆ. ನನ್ನ ಖಾತೆಯಿಂದ ಹಣ ಕಡಿತವಾಗು ತ್ತಿದೆಯಲ್ಲಾ ಎಂದು ಮತ್ತೆ ನೋಡುವ ಹೊತ್ತಿಗೆ ಎರಡು ಲಕ್ಷ ರೂ.ನಷ್ಟು ಹಣವನ್ನು ಗೂಗಲ್‌ಪೇ, ಎಸ್‌ಬಿಐ ಯೋನೋ ಮೂಲಕ ಡ್ರಾ ಮಾಡಲಾಗಿರುತ್ತದೆ.

ಇತ್ತೀಚೆಗೆ ಇದೇ ರೀತಿ ಮೋಸಕ್ಕೊಳಗಾದ ವ್ಯಕ್ತಿ ತಮ್ಮ ಖಾತೆಯನ್ನು ಬಂದ್ ಮಾಡಿಸಿದ್ದಾರೆ. ನಂತರ, ತಮಗೆ ಯಾವುದೋ ಟೆಲಿಗ್ರಾಂ ಮೂಲಕ ಬಂದಿರುವ ಮೆಸೇಜ್ ಪರಿಶೀಲಿಸುವಂತೆ ಮೂವರು ಸ್ನೇಹಿತರಿಗೆ ಕಳುಹಿಸಿದ್ದಾರೆ. ಇವರು ಕೂಡ ಈ ಮೆಸೇಜ್ ಕ್ಲಿಕ್ ಮಾಡುತ್ತಿದ್ದಂತೆ ಒಬ್ಬರ ಖಾತೆಯಿಂದ ೫೦ ಸಾವಿರ ರೂ. ಎರಡನೇ ವ್ಯಕ್ತಿಯ ಖಾತೆಯಿಂದ ೫೫ ಸಾವಿರ ರೂ. ಮತ್ತು ಮೂರನೇ ಸ್ನೇಹಿತನ ಖಾತೆಯಿಂದ ೪೯ ಸಾವಿರ ರೂ. ಹಣವನ್ನು ಡ್ರಾ ಮಾಡಲಾಗಿದೆ. ಈ ಮೂವರೂ ಯಾವುದೋ ಸಂದೇಶ ಇರಬೇಕೆಂದು ಉತ್ತರ ಕೊಡಲು ಹೋಗಿಯೇ ಈ ರೀತಿ ಹಣ ಕಳೆದುಕೊಂಡಿದ್ದಾರೆ. ಇದೀಗ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಖಾತೆಗಳಿಂದ ಹಣ ಡ್ರಾ ಮಾಡಿಕೊಳ್ಳುವ ವಂಚಕರು ಬೇನಾಮಿ ವ್ಯಕ್ತಿಗಳ ಹೆಸರಿನಲ್ಲಿ ತೆರೆದಿರುವ ಖಾತೆಗಳಿಗೆ ಒಬ್ಬರಿಂದ ಒಬ್ಬರಿಗೆ ಟ್ರಾನ್ಸ್-ರ್ ಮಾಡಿಕೊಂಡು ಕೊನೆಯಲ್ಲಿ ಡ್ರಾ ಮಾಡಿಕೊಳ್ಳುವುದರಿಂದ ಹಣ ಖಾತೆಗೆ ವಾಪಸ್ ಬರುವುದು ಕಷ್ಟಕರವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. ನಿವೃತ್ತ ಅಽಕಾರಿಗಳೂ ಸೇರಿ ದೊಡ್ಡ ಉದ್ಯಮಿಗಳೇ ಆನ್‌ಲೈನ್ ವಂಚನೆಯ ಮೂಲಕ ದೊಡ್ಡ ಪ್ರಮಾಣದಲ್ಲಿ ಕೋಟಿಗಟ್ಟಲೇ ಹಣ ಕಳೆದುಕೊಂಡಿದ್ದಾರೆ ಎನ್ನುತ್ತಾರೆ ಸೆನ್ ಠಾಣೆ ಪೊಲೀಸ್ ಅಧಿಕಾರಿಗಳು.

ಆನ್‌ಲೈನ್‌ನಲ್ಲಿ ೨ ೦೪೭ ಕೋಟಿ ರೂ.ವಂಚನೆ: ಕಳೆದ ೧೧ ತಿಂಗಳುಗಳಲ್ಲಿ ಮೈಸೂರು ಸೇರಿದಂತೆ ರಾಜ್ಯದಲ್ಲಿ ೨೦,೮೭೫ ಮಂದಿ ಆನ್‌ಲೈನ್ ವಂಚನೆಯಿಂದಾಗಿ ೨,೦೪೭ ಕೋಟಿ ರೂ. ಕಳೆದುಕೊಂಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಪ್ರಸ್ತುತ ಮೂರು ಪಟ್ಟು ಹೆಚ್ಚಾಗಿದೆ. ೨೦೨೩ರಲ್ಲಿ ೮೬೨ ಕೋಟಿ ರೂ. ಗಳನ್ನು ೨೨,೧೯೪ ಮಂದಿ ಸಾರ್ವಜನಿಕರು ಕಳೆದುಕೊಂಡಿದ್ದರು. ೨೦೨೩ರಲ್ಲಿ ಆನ್‌ಲೈನ್ ವಂಚನೆಗೀಡಾದವರ ಸಂಖ್ಯೆಗಿಂತ ೨೦೨೪ರ ೧೧ ತಿಂಗಳುಗಳಲ್ಲಿ ವಂಚನೆಗೊಳಗಾದವರ ಸಂಖ್ಯೆ ಕಡಿಮೆ ಇದ್ದರೂ ವಂಚನೆಗೋಳಗಾಗಿ ಕಳೆದುಕೊಂಡ ಮೊತ್ತ ಹೆಚ್ಚಾಗಿದೆ.

” ನಾನಾ ಬಗೆಯ ಆನ್‌ಲೈನ್ ವಂಚನೆಯಿಂದ ಸಾರ್ವಜನಿಕರು ಹಣ ಕಳೆದುಕೊಳ್ಳುತ್ತಿದ್ದು, ಸೈಬರ್ ವಂಚನೆಯ ಬಗ್ಗೆ ಜಾಗೃತಿ ಅಗತ್ಯ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಶಾಲಾ, ಕಾಲೇಜು ವಿದ್ಯಾರ್ಥಿಗಳೂ ಸೇರಿದಂತೆ ಸಾರ್ವಜನಿಕರಲ್ಲಿ ಸೈಬರ್ ವಂಚನೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಆನ್‌ಲೈನ್ ವಂಚನೆಗೊಳಗಾದವರು ತಕ್ಷಣ ಸೈಬರ್ ಸಹಾಯವಾಣಿ ೧೯೩೦ಗೆ ಸಂಪರ್ಕಿಸಿ ದೂರು ನೀಡಬೇಕು.”

ಪ್ರಸನ್ನಕುಮಾರ್, ಇನ್‌ಸ್ಪೆಕ್ಟರ್, ಸೆನ್ ಠಾಣೆ.

Tags: