ಗಿರೀಶ್ ಹುಣಸೂರು
ಮೈಸೂರು: ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಹೆಬ್ಬಾಗಿಲು ತೆರೆಯುವ ಪ್ರಮುಖ ಘಟ್ಟವಾದ ದ್ವಿತೀಯ ಪಿಯುಸಿ ಪರೀಕ್ಷೆ-೧ ೨೦೨೬ರ -ಬ್ರವರಿ ೨೮ರಿಂದ ಮಾರ್ಚ್ ೧೭ರವರೆಗೆ ನಡೆಯಲಿದ್ದು, ಸಿಬಿಎಸ್‌ಇ ಮಾದರಿಯಲ್ಲಿ ಕರ್ನಾಟಕ ಕೂಡ ರಾಜ್ಯ ಪಠ್ಯಕ್ರಮದ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವ ದೃಷ್ಟಿದೋಷವುಳ್ಳ ವಿದ್ಯಾರ್ಥಿಗಳಿಗೆ ಇದೇ ಮೊದಲ ಬಾರಿಗೆ ಕಂಪ್ಯೂಟರ್ ಬಳಸಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ೨೦೨೫-೨೬ನೇ ಸಾಲಿನ ಶೈಕ್ಷಣಿಕ ವರ್ಷದ ಪರೀಕ್ಷೆಗೆ ಈ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ದೃಷ್ಟಿ ದೋಷವುಳ್ಳ ವಿದ್ಯಾರ್ಥಿಗಳಿರುವ ಕಾಲೇಜುಗಳ ಪ್ರಾಂಶು ಪಾಲರು ಹಾಗೂ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಪರೀಕ್ಷಾ ಪೂರ್ವ ಹಾಗೂ ಪರೀಕ್ಷೆಯ ದಿನಗಳಂದು ಈ ಬಗ್ಗೆ ಅಗತ್ಯ ಕ್ರಮವಹಿಸುವಂತೆ ತಿಳಿಸಿದೆ.
ದೃಷ್ಟಿದೋಷವುಳ್ಳ ವಿದ್ಯಾರ್ಥಿಗಳಿರುವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುವ ವಿಶೇಷ ಉಪನ್ಯಾ ಸಕರನ್ನು ಕೊಠಡಿ ಮೇಲ್ವಿಚಾರಕರನ್ನಾಗಿ ನೇಮಿಸಿಕೊಳ್ಳ ಬೇಕು. ಪರೀಕ್ಷೆಯ ದಿನ ಆಯಾಯ ವಿಷಯವನ್ನು ಬೋಽಸುವ ಉಪನ್ಯಾಸಕರನ್ನು ಕೊಠಡಿ ಮೇಲ್ವಿಚಾರಕರ ನ್ನಾಗಿ ನೇಮಿಸಬಾರದು ಜತೆಗೆ ಅವರು ವಿದ್ಯಾರ್ಥಿಯು ಓದುತ್ತಿರುವ ಕಾಲೇಜಿನ ಉಪನ್ಯಾಸಕರಾಗಿರಬಾರದು.
ದೃಷ್ಟಿದೋಷವುಳ್ಳ ವಿದ್ಯಾರ್ಥಿಗಳು ಉತ್ತರಗಳನ್ನು ಬರೆಯಲು ಕಂಪ್ಯೂಟರ್‌ಗಳನ್ನು ಬಳಸಲು ಸಂಬಂಧಿಸಿದ ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಪೂರ್ವಾನುಮತಿ ಪಡೆಯಬೇಕು. ಉತ್ತರಗಳನ್ನು ಟೈಪ್ ಮಾಡಲು ಮಾತ್ರ ಕಂಪ್ಯೂಟರ್ ಬಳಕೆ ಸೀಮಿತವಾಗಿರುತ್ತದೆ. ಹೀಗಾಗಿ ಸಂಬಂಧಪಟ್ಟ ವಿದ್ಯಾರ್ಥಿಯು ತನ್ನ ಸ್ವಂತ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಅನ್ನು ತರಬೇಕು. ಈ ರೀತಿ ತಂದ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಅನ್ನು ಸರಿಯಾಗಿ ಫಾರ್ಮ್ಯಾಟ್ ಮಾಡಿರಬೇಕು. ಪರೀಕ್ಷಾ ಕೇಂದ್ರದ ಮುಖ್ಯ ಅಧಿಕ್ಷಕರು ಅಂತಹ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಅನ್ನು ಕಂಪ್ಯೂಟರ್ ಜ್ಞಾನವುಳ್ಳ ಉಪನ್ಯಾಸಕರಿಂದ ತಪಾಸಣೆ ಮಾಡಿಸಿ ಖಚಿತಪಡಿಸಿ ಕೊಂಡ ನಂತರವೇ ಅಂತಹ ವಿದ್ಯಾರ್ಥಿಗೆ ತನ್ನ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಅನ್ನು ಬಳಸಲು ಅನುಮತಿಸಬೇಕು. ಪರೀಕ್ಷೆಯ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಲು ವಿದ್ಯಾರ್ಥಿಯು ತಂದಿರುವ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಯಾವುದೇ ಇಂಟರ್‌ನೆಟ್ ಸಂಪರ್ಕ ಹೊಂದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಲಾಗಿದೆ.
ಪರೀಕ್ಷೆಯಲ್ಲಿ ವಿದ್ಯಾರ್ಥಿಯು ಉತ್ತರವನ್ನು ಟೈಪ್ ಮಾಡಲು ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಅನುಮೋದಿತ ಸಾಫ್ಟ್ವೇರ್ ಅನ್ನು ಮಾತ್ರ ಅಳವಡಿಸಿಕೊಂಡಿರಬೇಕು. ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ ಬಳಕೆಯ ಕಾರಣದಿಂದಾಗಿ ಯಾವುದೇ ತಪ್ಪುಗಳು, ತಾಂತ್ರಿಕ ದೋಷಗಳು ಂಟದಲ್ಲಿ ಅದರಿಂದ ಎದುರಾಗುವ ಪರಿಣಾಮಗಳಿಗೆ ವಿದ್ಯಾರ್ಥಿಗಳೇ ನೇರ ಹೊಣೆಗಾರರು. ಈ ವಿಷಯದಲ್ಲಿ ಮಂಡಲಿ ಅಥವಾ ಪರೀಕ್ಷಾ ಕೇಂದ್ರದ ಮುಖ್ಯ ಅಧಿಕ್ಷಕರ ಪಾತ್ರ ಇರುವುದಿಲ್ಲ ಎಂದು ಮಂಡಲಿ ಸುತ್ತೋಲೆ ಹೊರಡಿಸಿದೆ.
ಪರೀಕ್ಷೆ ಪ್ರಾರಂಭವಾಗುವುದಕ್ಕೆ ಒಂದು ಗಂಟೆ ಮುಂಚಿತವಾಗಿ ವಿದ್ಯಾರ್ಥಿ ತನ್ನ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಟೈಪ್ ಮಾಡಿರುವುದನ್ನು ಪರೀಕ್ಷಾ ಕೇಂದ್ರದ ಮುಖ್ಯ ಅಧಿಕ್ಷಕರು ಸ್ಯಾಂಪಲ್‌ಗಾಗಿ ಪ್ರಿಂಟ್ ಔಟ್ ತೆಗೆದು ಪರಿಶೀಲಿಸಿಕೊಳ್ಳಬೇಕು. ಕೊಠಡಿ ಮೇಲ್ವಿಚಾರಕರು ನೀಡಿದ ಪ್ರಶ್ನೆಪತ್ರಿಕೆಯಿಂದ ರೀಡರ್ ಕಮ್ ಸ್ಕ್ರೈಬ್ ಅವರು ಪ್ರಶ್ನೆಯನ್ನು ಓದಬೇಕು, ಪರೀಕ್ಷಾರ್ಥಿಯು ಅದನ್ನು ಕೇಳಿಸಿಕೊಂಡು ಉತ್ತರವನ್ನು ಟೈಪ್ ಮಾಡಬೇಕು. ಒಂದು ವೇಳೆ ಪರೀಕ್ಷಾ ಸಮಯದಲ್ಲಿ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಯಾವುದೇ ತೊಂದರೆಯುಂಟಾಗಿ ಪರೀಕ್ಷಾರ್ಥಿಗೆ ಟೈಪ್ ಮಾಡಲು ಸಾಧ್ಯವಾಗದಿದ್ದಾಗ ರೀಡರ್ ಕಮ್ ಸ್ಕ್ರೈಬ್ ಪರೀಕ್ಷಾರ್ಥಿಯು ಹೇಳುವ ಉತ್ತರಗಳನ್ನು ಬರೆಯಬಹುದಾಗಿದೆ. ಪರೀಕ್ಷಾ ಸಮಯದಲ್ಲಿ ಸಮಯ ನಷ್ಟ ಸಂಭವಿಸಿದಲ್ಲಿ ಅಂತಹ ಸಮಯದ ನಷ್ಟವನ್ನು ಪರೀಕ್ಷಾ ಕೇಂದ್ರದ ಮುಖ್ಯ ಅಧಿಕ್ಷಕರು ದಿನಚರಿಯಲ್ಲಿ ದಾಖಲಿಸಬೇಕು. ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯು ಟೈಪ್ ಮಾಡಿರುವ ಉತ್ತರಗಳ ಪ್ರಿಂಟ್ ಔಟ್ ತೆಗೆಯಲು ಪರೀಕ್ಷಾ ಕೇಂದ್ರದ ಮುಖ್ಯ ಅಧಿಕ್ಷಕರು ಪ್ರಿಂಟರ್‌ನ ವ್ಯವಸ್ಥೆ ಮಾಡಿಕೊಂಡಿರಬೇಕು.
ಪರೀಕ್ಷೆಯ ಕೊನೆಯಲ್ಲಿ ವಿದ್ಯಾರ್ಥಿಯು ಟೈಪ್ ಮಾಡಿರುವ ಉತ್ತರಗಳನ್ನು ಪುಟ ಸಂಖ್ಯೆಯನ್ನು ಹೊಂದಿರುವಂತೆ ಸರಳ ಕಾಗದದ ಮೇಲೆ ಮುದ್ರಿಸಿ, ಕೊನೆಯ ಪುಟದಲ್ಲಿ ಕೇಂದ್ರದ ಮುಖ್ಯ ಅಧಿಕ್ಷಕರು ಮುದ್ರೆ ಮತ್ತು ಸಹಿಯನ್ನು ನಮೂದಿಸಬೇಕು. ವಿದ್ಯಾರ್ಥಿಗೆ ಮಂಡಲಿಯಿಂದ ಒದಗಿಸಲಾಗಿರುವ ಉತ್ತರ ಪತ್ರಿಕೆಯ ಪ್ರಿಸಿಂಗ್ ಶೀಟ್‌ನಲ್ಲಿನ ಎಲ್ಲಾ ವಿವರಗಳನ್ನು ಭರ್ತಿ ಮಾಡಬೇಕು. ಕೊಠಡಿ ಮೇಲ್ವಿಚಾರಕರು ಭರ್ತಿ ಮಾಡಿದ ವಿವರಗಳನ್ನು ಪರಿಶೀಲಿಸಿ ಸಹಿ ಮಾಡಬೇಕು. ಕೊಠಡಿ ಮೇಲ್ವಿಚಾರಕರು ಉತ್ತರ ಪುಸ್ತಕದ ಮುಖಪುಟದ ನಂತರದ ಪುಟದಲ್ಲಿ ಈ ವಿದ್ಯಾರ್ಥಿಯು ದೃಷ್ಟಿದೋಷವುಳ್ಳ ವಿದ್ಯಾರ್ಥಿ ಎಂಬುದನ್ನು ತನ್ನ ಉತ್ತರಗಳನ್ನು ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಟೈಪ್ ಮಾಡಿದ್ದು, ಪ್ರಿಂಟ್‌ಔಟ್‌ಗಳನ್ನು ತೆಗೆದು ಉತ್ತರ ಪುಸ್ತಕಕ್ಕೆ ಲಗತ್ತಿಸಲಾಗಿದೆ ಎಂಬುದನ್ನು ನಮೂದಿಸಬೇಕು. ಅದಕ್ಕೆ ಕೇಂದ್ರದ ಮುಖ್ಯ ಅಧಿಕ್ಷಕರು ಮುದ್ರೆ ಮತ್ತು ಸಹಿ ಹಾಕಿ, ಮುಖಪುಟದ ಉಳಿದ ಎಲ್ಲಾ ಪುಟಗಳಲ್ಲಿ ಅಡ್ಡಗೆರೆ ಎಳೆಯಬೇಕು. ಹೀಗೆ ಉತ್ತರಗಳನ್ನು ಮುದ್ರಿಸಿದ ಪುಟಗಳಲ್ಲಿ ಕಾಲೇಜು/ಕೇಂದ್ರ/ವಿದ್ಯಾರ್ಥಿಗಳ ವಿವರಗಳಿಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಮುಖ್ಯ ಉತ್ತರ ಪತ್ರಿಕೆ ಮತ್ತು ಪ್ರಿಂಟ್‌ಔಟ್ ತೆಗೆದ ಪುಟಗಳನ್ನು ಸೇರಿಸಿ ಮಂಡಳಿಯಿಂದ ಒದಗಿಸಲಾಗುವ ವಿಶೇಷ ಅಗತ್ಯತೆಯುಳ್ಳ ವಿದ್ಯಾರ್ಥಿ ಗಳ ಉತ್ತರ ಪತ್ರಿಕೆಗೆ ಅಳವಡಿಸುವ ಹಸಿರು ಸ್ಟಿಕ್ಕರ್ ಅನ್ನು ಅಂಟಿಸಿ ಭದ್ರಪಡಿಸುವಂತೆ ಹೇಳಲಾಗಿದೆ. ಪರೀಕ್ಷೆಯಲ್ಲಿ ವಿದ್ಯಾರ್ಥಿಯು ಈ ಸೌಲಭ್ಯವನ್ನು ಪಡೆಯಲು ದೃಷ್ಟಿದೋಷವುಳ್ಳ ವಿದ್ಯಾರ್ಥಿ ಎಂಬ ವೈದ್ಯಕೀಯ ಪ್ರಮಾಣಪತ್ರವನ್ನು ಹಾಜರುಪಡಿಸಬೇಕು ಎಂದು ಸೂಚಿಸಿದೆ.
” ದೃಷ್ಟಿದೋಷವುಳ್ಳ ವಿದ್ಯಾರ್ಥಿಗಳಿಗೆ ೨೦೨೫-೨೬ನೇ ಶೈಕ್ಷಣಿಕ ಸಾಲಿನಿಂದದ್ವಿತೀಯ ಪಿಯುಸಿ ಪರೀಕ್ಷೆಯ ಪ್ರಶ್ನೆಗಳಿಗೆ ಡಿಜಿಟಲ್ ರೂಪದಲ್ಲಿ ಉತ್ತರ ಬರೆಯಲು ಅವಕಾಶ ಕಲ್ಪಿಸಲಾಗಿದೆ.”
-ಸಿ.ಎಂ.ಮಹಾಲಿಂಗಯ್ಯ, ಜಂಟಿ ನಿರ್ದೇಶಕರು, ಪಿಯು ಪರೀಕ್ಷೆ





