• ಉಷಾ ಪ್ರೀತಮ್
ಹಲಸು ಬುಡಕಟ್ಟು ಜನರ ಪಾಲಿಗೆ ತಾಯಿಯಂತೆ ಎನ್ನುತ್ತಾರೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಗ್ರಾಮದ ಪಡಚ್ಚಿಕಾಡಿನ ಕುಡಿಯರ ಗೋಪಮ್ಮ. ಏಕೆಂದರೆ ಅದರ ಹಣ್ಣು, ಮಿಡಿ, ಬೀಜ, ಪ್ರತಿಯೊಂದು ಕೂಡ ಬುಡಕಟ್ಟು ಜನರನ್ನು ಕಾಡಿನಲ್ಲಿ ಪೊರೆಯುವಂಥ ಹಣ್ಣು. ಮಿಡಿಯಿಂದ ಪಲ್ಯ ಮಾಡುವುದು, ಹಣ್ಣು ತಿನ್ನುವುದು, ಅದರಿಂದ ಮಾಡುವ ಸಿಹಿ ತಿನಿಸುಗಳು, ಹಲಸಿನ ಹಿಟ್ಟುಗಳು, ಅದರ ಬೀಜದಿಂದ ಸಾರು ಮಾಡಬಹುದು, ಪಾಯಸ ಮಾಡಬಹುದು, ಬೇರೆ ಬೇರೆ ಸಾರುಗಳ ಮಧ್ಯೆ ಜಜ್ಜಿ ಹಾಕಬಹುದು. ಹಲಸಿನ ಬೀಜವನ್ನು ಪುಡಿಮಾಡಿ ಜೇನು ಬೆರೆಸಿ ತಿನ್ನಬಹುದು. ಆಗಿನ ಕಾಲದ ಸಿಹಿಗಳು ಅಂದರೇ ಇವುಗಳೇ. ಅಲ್ಲದೇ ಹಲಸಿನ ಮರದ ಎಲೆಗಳು ಮಣ್ಣಿನ ಫಲವತ್ತತೆ ಹೆಚ್ಚು ಮಾಡುತ್ತವೆ. ಒಳ್ಳೆಯ ಗೊಬ್ಬರವನ್ನು ಭೂಮಿಗೆ ನೀಡುತ್ತವೆ. ಹಲಸಿನ ಮರದ ಬೇರುಗಳು ಭೂಮಿಯ ನೀರನ್ನು ಶೇಖರಣೆ ಮಾಡಿಟ್ಟುಕೊಳ್ಳುತ್ತವೆ. ದೇವರಿಗೂ ಹಲಸಿನ ಬೇಕಾದ ಮರ. ಇದರ ಚಕ್ಕೆಗಳನ್ನು ಹೋಮಕ್ಕೆ ಬಳಸುತ್ತಾರೆ. ಹಲಸಿನ ಮರ ಬಹಳ ಉಪಕಾರಿ ಮೆರ. ಹಳೇಕಾಲದಲ್ಲಿ ದಾರಿಯುದ್ದಕ್ಕೂ ಹಲಸಿನ ಮರಗಳಿರುತ್ತಿದ್ದವು. ಮಳೆಗಾಲಕ್ಕೆ ಬೇಕಾಗುತ್ತವೆ ಎಂದು ಹಲಸಿನ ಬೀಜಗಳಿಗೆ ಮಣ್ಣು ಕಲೆಸಿ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಅದನ್ನು ಬಿದಿರಿನ ಬುಟ್ಟಿಗಳು ಅಥವಾ ಬೆತ್ತದ ಕುಕ್ಕೆಗಳಲ್ಲಿ ಶೇಖರಿಸಿ ಇಟ್ಟುಕೊಳ್ಳುತ್ತಿದ್ದರು. ಆವಾಗ ಕಾಡಿನಲ್ಲಿ ಯಥೇಚ್ಛವಾಗಿ ಜೇನು ಸಿಗುತಿತ್ತು. ಜೇನನ್ನು ಮಣ್ಣಿನ ಮಡಿಕೆಗಳಲ್ಲಿ ಹಾಕಿ ಅದರ ಬಾಯಿಗೆ ಬಾಳೆ ಎಲೆಗಳನ್ನು ಬಾಡಿಸಿ ಬಟ್ಟೆಗಳಿಂದ ಗಟ್ಟಿಯಾಗಿ ಗಾಳಿ ಹೋಗದ ಹಾಗೇ ಮುಚ್ಚಿಡುತ್ತಿದ್ದರು. ಕಾಡಿನಲ್ಲಿ ಸಿಗುತ್ತಿದ್ದ ಕಾಳು ಮೆಣಸು, ಗಾಂಧಾರಿ (ಜೀರಿಗೆ) ಮೆಣಸನ್ನು ಮಸಾಲೆಗಾಗಿ ಬಳಸುತ್ತಿದ್ದರು.
ಊಟವಿಲ್ಲದಾಗ ಬಿದಿರೇ ಬುಡಕಟ್ಟು ಜನರ ಹಸಿವು ತಣಿಸುತಿತ್ತು. ಊಟಕ್ಕೆ ಬುಡಕಟ್ಟು ಜನರಿಗೆ ಅಕ್ಕಿಯೇ ಬೇಕು ಅಂತಿರಲಿಲ್ಲ. ಕೆಲವೊಮ್ಮೆ ಬೇಕು ಎಂದರೊ ಸಿಗದಿದ್ದಾಗ, ಬಿದಿರಿನ ಎಳೆಯದಾದ ಕಂದುಗಳನ್ನು ಕಡಿದು ಸಣ್ಣದಾಗಿ ಕತ್ತರಿಸಿ ಅದರ ಒಗರು ಅಂಶ ಹೋಗಿಸಿ ಉಪ್ಪು ಹಾಕಿ ಬೇಯಿಸಿ ಅನ್ನದ ಹಾಗೇ ತಿನ್ನುತ್ತಿದ್ದರು.
ಮರಕೆಸವನ್ನು ಬುಡಕಟ್ಟು ಜನರು ಆಟಿ ಮಾಸ ಅಂದರೆ ಜೂನ್ ಕೊನೆ ಹಾಗೂ ಜುಲೈ ತಿಂಗಳಿನಲ್ಲಿ ಬರುವ ಆಷಾಡ ಮಾಸದ ಸಮಯದಲ್ಲಿ ಉಪಯೋಗಿ ಸುತ್ತಿದ್ದರು. ಮರದ ಕೆಸವಿನ ಸೊಪ್ಪಿನಿಂದ ಸಾರು, ದಂಟಿನಿಂದ ಪಲ್ಯ, ಅದರ ಬೇರನ್ನು ಕೂಡಾ ಸಾರಿನಲ್ಲಿ ಬಳಸುತ್ತಿದರು. ಬೇರಿನಲ್ಲಿ ಹೇರಳವಾದ ಪೌಷ್ಟಿಕಾಂಶ ಇರುತ್ತದೆ. ಕೆಸದ ಗೆಡ್ಡೆಯನ್ನು ದೋಸೆ ಮತ್ತು ಇಡ್ಲಿ ಹಿಟ್ಟು ರುಬ್ಬವಾಗ ಒಂದು ತುಂಡು ಹಾಕಿ ರುಬ್ಬಿದರೆ ಹಿಟ್ಟು ಚೆನ್ನಾಗಿ ಉಬ್ಬಿ ಬರುತ್ತದೆ. ಅಲ್ಲದೇ ಉದ್ದಿನಬೇಳೆ ಬಳಸುವುದು ಬೇಡ ಎನ್ನುವುದು ಗೋಪಮ್ಬರ ಸಲಹೆ.
ಮಾವಿನಕಾಯಿ ಮತ್ತು ಮಾವಿನಹಣ್ಣುಗಳನ್ನು ಜಾಡಿಗೆ ಹಾಕಿ ಉಪ್ಪು ನೀರಿನಲ್ಲಿ ಮುಳುಗಿಸಿಡುತ್ತಿದ್ದರು. ಮಾವಿನಹಣ್ಣಿನ ಸೀಸನ್ ಇಲ್ಲದಾಗ ಮಾವಿನಹಣ್ಣಿನ ಸಾರಿನ ನೆನಪಾದರೆ ಉಪ್ಪಿನಿಂದ ಹೊರತೆಗೆದು ಸಾಂಬಾರ್ ಮಾಡಿ ಸವಿಯುತ್ತಿದ್ದರು.
ಬೈನೇ ಮರವನ್ನು ಕತ್ತರಿಸಿ ಅದರ ಬುಡವನ್ನು ಮದ್ಯಕ್ಕೆ ಸೀಳಿದಾಗ ಅಲ್ಲಿ ಬಿಳಿಬಣ್ಣದ ಬೆಂಡು ಸಿಗುತ್ತಿತ್ತು. ಅದನ್ನು ಮರದ ದೊಡ್ಡ ಗಾತ್ರದ ಹಿಟ್ಟು ಕುಟ್ಟುವ ಕುಟ್ಟಣಿಯಲ್ಲಿ ಹಾಕಿ ಕುಟ್ಟಿ, ಬಟ್ಟೆಯಲ್ಲಿ ಹಿಟ್ಟನ್ನು ಸೋಸಿಕೊಂಡರೆ ತೆಳುವಾದ ಹಿಟ್ಟು ಸಿಗುತಿತ್ತು. ಆ ಹಿಟ್ಟಿಗೆ ಜೇನುತುಪ್ಪ ಸೇರಿಸಿ ತಂಬಿಟ್ಟು ಮಾಡಿ ತಿಂದರೆ ತಿನ್ನುತ್ತಲೇ ಇರಬೇಕು ಎನ್ನುವಷ್ಟು ರುಚಿಯಿರುತ್ತಿತ್ತು. ಮತ್ತು ದೇಹಕ್ಕೂ ಪುಷ್ಟಿ ಕೊಡುತಿತ್ತು. ಆದೇ ಬೈನೆ ಹಿಟ್ಟಿನಿಂದ ಒತ್ತು ಶಾವಿಗೆಯನ್ನು ಮಾಡುತ್ತಿದ್ದರು. ಈಗಲೂ ಆ ರುಚಿ ನೆನಪಾದರೂ ಮರ ಕಡಿದು ಅದನ್ನು ಕುಟ್ಟಿ ಪುಡಿ ಮಾಡುವುದು ಕಷ್ಟಕರವಾದ್ದರಿಂದ ಮಾಡಲು ಹೋಗುವುದಿಲ್ಲ. ಇನ್ನು ಬೈನೇ ಮರದ ಚಿಕ್ಕ ತಿರುಳನ್ನು ಸಾರು ಮಾಡಿದರೆ ರುಚಿಯೋ ರುಚಿ.
ಹೊಳೆಸಾಲಿನಲ್ಲಿ ಸಿಗುವ ತೆರ್ಮೆ ಸೊಪ್ಪು ಒಂದು ಮಾದರಿ ಒಗರಾಗಿದ್ದರೂ ಕಣ್ಣಿಗೆ ಬಹಳ ಒಳ್ಳೆಯದು. ಚಿಟ್ಟ ಕುಡಿ ಸೊಪ್ಪನ್ನು ಕಷಾಯ ಮಾಡಿ ಕುಡಿದರೆ ಕೆಮ್ಮು, ಜ್ವರ ಓಡಿಹೋಗುತ್ತದೆ. ಆಗಿನ ಕಾಲಕ್ಕೆ ಈ ಕಷಾಯವೇ ಜ್ವರಕ್ಕೆ ಮದ್ದು. . ತಾತೇ ಸೊಪ್ಪು ಎಂದು ಸಿಗುತ್ತದೆ. ಇದರಲ್ಲಿ ಕಬ್ಬಿಣದ ಅಂಶ ಅತ್ಯಧಿಕವಾಗಿರುತ್ತದೆ. ಹಿಂದಿನ ಕಾಲದಲ್ಲಿ ಈ ಸೊಪ್ಪನ್ನು ಬೇಯಿಸಿ ಉಪ್ಪು ಹಾಕಿ ತಿನ್ನುತ್ತಿದ್ದರು. ಮದ್ದು ಸೊಪ್ಪು ಹದಿನೆಂಟು ಬಗ್ಗೆಯ ಔಷಧಿ ಗುಣಗಳನ್ನು ಹೊಂದಿದ ಈ ಸೊಪ್ಪು ಕೊಡಗಿನ ಎಲ್ಲಾ ಕಡೆಯೂ ಸಿಗುತ್ತದೆ. ಈ ಸೊಪ್ಪನ್ನು ಬೇಯಿಸಿ ಪಾಯಸ ಮಾಡಿ ಕುಡಿಯುತ್ತಿದ್ದರು.
ಮಳೆಗಾಲದಲ್ಲಿ ಮೀನು, ಏಡಿ ಹೆಚ್ಚಾಗಿ ಸಿಗುತ್ತಿದ್ದರಿಂದ ಮೀನು ಮತ್ತು ಏಡಿ ಸಾರು, ಏಡಿ ಕಾಲಿನ ಸೂಪು ಮಾಡಿ ಕುಡಿಯುತ್ತಿದ್ದರು. ಏಡಿ ಕಾಲಿನ ಹಾಗೇ ಗಟ್ಟಿಯಾದ ಕಾಲುಗಳು ನಮ್ಮದಾಗುತ್ತವೆ ಎಂದು ಹಿರಿಯರು ಹೇಳುತ್ತಿದ್ದರು. ಹಳೇ ಕಾಲದಲ್ಲಿ ಬೇಟೆ ನಿಷಿದ್ಧವಾಗಿಲ್ಲದ ಕಾರಣ ಆಗ ಬೇಟೆಯಾಡಿ ಮಾಂಸ ತಿನ್ನುತ್ತಿದ್ದರು. ಆದರೀಗ ಬೇಟೆ ಅಪರಾಧವಾದ ಕಾರಣ ಪೇಟೆಯಿಂದ ಮಾಂಸ ತಂದು ತಿನ್ನುತ್ತಾರೆ ಅನ್ನುತ್ತಾರೆ ಗೋಪಮ್ಮ.
skandavp@gmail.com