Mysore
15
broken clouds

Social Media

ಗುರುವಾರ, 02 ಜನವರಿ 2025
Light
Dark

ಹೊಸ ವರ್ಷಕ್ಕೆ ಮ.ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಬರುತ್ತಿರುವ ಭಕ್ತರು 

ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದಿಂದ ಸಿದ್ಧತೆ 

ಮಹಾದೇಶ್‌ ಎಂ ಗೌಡ

ಹನೂರು: ಹೊಸ ವರ್ಷದ ಪ್ರಯುಕ್ತ ಮಲೆಮಹದೇಶ್ವರ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಲಿರುವ ಹಿನ್ನೆಲೆಯಲ್ಲಿ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

೪ ದಿನಗಳಿಂದ ಸಾವಿರಾರು ಮಂದಿ ಹನೂರು ಮಾರ್ಗವಾಗಿ ಕಾಲ್ನಡಿಗೆಯ (ಪಾದಯಾತ್ರೆ) ಮೂಲಕ ತೆರಳುತ್ತಿದ್ದಾರೆ. ಹೊಸ ವರ್ಷದ ದಿನದಂದು ಮಾದಪ್ಪನ ದೇಗುಲದಲ್ಲಿ ಪೂಜೆ ನೆರವೇರಿಸಲು ಪ್ರತಿ ವರ್ಷ ಮಹದೇಶ್ವರ ಬೆಟ್ಟಕ್ಕೆ ಜನರು ಭೇಟಿ ನೀಡುತ್ತಾರೆ.

ರಾಜ್ಯದ ವಿವಿಧೆಡೆಯಿಂದ ಸಾವಿರಾರು ಜನರು ಪ್ರತಿವರ್ಷವೂ ಮಹಾಶಿವರಾತ್ರಿ, ಯುಗಾದಿ, ಮಹಾಲಯ, ದೀಪಾವಳಿ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಕಾಲ್ನಡಿಗೆಯ ಮೂಲಕ ಮಾದಪ್ಪನ ಬೆಟ್ಟಕ್ಕೆ ತೆರಳುವುದು ವಾಡಿಕೆ. ಈ ಬಾರಿ ಹರಕೆ ಹೊತ್ತ ಸಾವಿರಾರು ಜನರು ೪ ದಿನಗಳಿಂದ ಹಗಲು-ರಾತ್ರಿ, ಚಳಿ, ಬಿಸಿಲೆನ್ನದೆ ತೆರಳು ತ್ತಿದ್ದಾರೆ. ಜನರು ಸರದಿಯ ರೂಪದಲ್ಲಿ ಹಣವನ್ನು ಸಂಗ್ರಹಿಸಿ, ಮಾರ್ಗಮಧ್ಯದ ಮರದ ನೆರಳಿನಲ್ಲಿ ಅಲ್ಲಲ್ಲಿ ವಿಶ್ರಾಂತಿಯನ್ನು ಪಡೆಯುತ್ತಾ, ಅಡುಗೆ ತಯಾರಿಸಿ ಒಟ್ಟಿಗೆ ಸೇರಿ ಸಹಭೋಜನವನ್ನು ಸವಿದು ಸಂಚರಿಸುತ್ತಿರುವುದು ಹನೂರು ಭಾಗದಲ್ಲಿ ಕಂಡುಬರುತ್ತಿದೆ.

ಮ.ಬೆಟ್ಟಕ್ಕೆ ಚನ್ನಪಟ್ಟಣ, ರಾಮನಗರ, ಮಂಡ್ಯ, ಕೆ.ಎಂ.ದೊಡ್ಡಿ, ಮಳವಳ್ಳಿ ಸೇರಿದಂತೆ ಈ ಭಾಗದ ವಿವಿಧ ಗ್ರಾಮಗಳಿಂದ ೪ ಸಾವಿರಾರು ಜನರು ಕಾಲ್ನಡಿಗೆಯ ಮೂಲಕ ಮ.ಬೆಟ್ಟಕ್ಕೆ ಹನೂರು ಮಾರ್ಗವಾಗಿ ಪ್ರಯಾಣ ಬೆಳೆಸಿದ್ದಾರೆ.

ಪ್ರಾಧಿಕಾರದ ವತಿಯಿಂದ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ, ದಾಸೋಹ ಸೇರಿದಂತೆ ಮೂಲ ಸೌಕರ್ಯ ಒದಗಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮುನ್ನೆಚ್ಚರಿಕೆಯಾಗಿ ಮ.ಬೆಟ್ಟದ ಪೊಲೀಸರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದಾರೆ. ಇದೇ ವೇಳೆ ಅನೇಕರು ಚಿನ್ನದ ರಥೋತ್ಸವದಲ್ಲಿ ಭಾಗಿಯಾಗಿ ತಮ್ಮ ಹರಕೆ ಕಾಣಿಕೆಗಳನ್ನು ಸಮರ್ಪಿಸಿದರು.

ಪಾದಯಾತ್ರೆಯಲ್ಲಿ ಮಹಿಳೆಯರೇ ಹೆಚ್ಚು:  ಪಾದಯಾತ್ರೆಯಲ್ಲಿ ಮಾದಪ್ಪನ ದೇವರಗುಡ್ಡರು ಕಂಸಾಳೆ ನುಡಿಸುತ್ತಾ ಮಾದಪ್ಪನ ಮಹಿಮೆಯ ಹಾಡುಗಳನ್ನು ಹಾಡುತ್ತಾ ಭಕ್ತಿಭಾವದಿಂದ ತೆರಳುತ್ತಿದ್ದರೆ, ಯುವಕರು ತಮಟೆ ಬಾರಿಸುತ್ತಾ ಅಲ್ಲಲ್ಲಿ ಕುಣಿದು ಕುಪ್ಪಳಿಸುತ್ತಾ ತೆರಳುತ್ತಿದ್ದಾರೆ. ಈ ಬಾರಿ ಮಹಿಳಾ ಸಂಘಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಕಾಲ್ನಡಿಗೆಯ ಮೂಲಕ ತೆರಳುತ್ತಿರುವುದು ವಿಶೇಷ.

Tags: