Mysore
19
overcast clouds

Social Media

ಶನಿವಾರ, 10 ಜನವರಿ 2026
Light
Dark

ಅಭಿವೃದ್ಧಿ ಹರಿಕಾರ ದುಗ್ಗಹಟ್ಟಿ ವೀರಭದ್ರ  

ಜಿ.ಎಲ್.ತ್ರಿಪುರಾಂತಕ 

ಇಂದು ದುಗ್ಗಹಟ್ಟಿ ವೀರಭದ್ರಪ್ಪ ಅವರ ಸ್ಮರಣೆ, ನುಡಿನಮನ ಕಾರ್ಯಕ್ರಮ

ತನಗಾಗಿ ಬದುಕಿದವರನ್ನು ಸಮಾಜ ಬೇಗ ಮರೆಯುತ್ತದೆ, ಸಮಾಜಕ್ಕಾಗಿ ಬದುಕಿದವರನ್ನು ಸದಾ ಸ್ಮರಿಸುತ್ತದೆ. ಅಂತಹ ಸ್ಮರಣೀಯ ವ್ಯಕ್ತಿ ಅಭಿವೃದ್ಧಿಯ ಹರಿಕಾರರಾದ ದುಗ್ಗಹಟ್ಟಿ ವೀರಭದ್ರಪ್ಪನವರು.

೯೩ ವರ್ಷಗಳ ತುಂಬು ಜೀವನವನ್ನು ನಡೆಸಿದ ವೀರಭದ್ರಪ್ಪನವರು (೨೦೨೫ರ ಡಿ.೩೧ರಂದು ನಿಧನರಾದರು) ಸಮಾಜದ ಶಕ್ತಿಯಾಗಿ ಬದುಕಿದ್ದರು. ಪ್ರಗತಿಪರ ಕೃಷಿಕ ರಾಗಿ, ರಾಜಕಾರಣಿಯಾಗಿ, ಸಹಕಾರ, ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ… ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿಯನ್ನೇ ಬೀಜ ಮಂತ್ರವಾಗಿಸಿಕೊಂಡು, ತನು ಮನ ಧನ ವನ್ನು ಅರ್ಪಿಸಿ ಸಮಾಜೋದ್ಧಾರದ ಹರಿಕಾರ ಎನಿಸಿಕೊಂಡವರು.

ಅವಿಭಜಿತ ಮೈಸೂರು ಜಿಲ್ಲೆಯಲ್ಲಿ ಚಿರಪರಿಚಿತರಾಗಿದ್ದ ಪಟೇಲ್ ಪುಟ್ಟಲಿಂಗಪ್ಪನವರ ಸಮಾಜಸೇವೆಯನ್ನು ಗುರುತಿಸಿ ಅಂದು ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ಜಯಚಾಮ ರಾಜೇಂದ್ರ ಒಡೆಯರ್ ಅವರು ‘ರಾಜ ಸೇವಾ ಪ್ರಸಕ್ತ’ ಬಿರುದನ್ನು ನೀಡಿ ಗೌರವಿಸಿದ್ದರು. ತಮ್ಮ ಗ್ರಾಮದ ಮಕ್ಕಳು ವಿದ್ಯಾವಂತರಾಗಲಿ ಎಂಬ ಕಾರಣಕ್ಕೆ ಗ್ರಾಮದ ಮುಖ್ಯರಸ್ತೆಯಲ್ಲಿಯೇ ಎಕರೆಗಟ್ಟಲೆ ಜಾಗವನ್ನು ಶಾಲೆ ನಿರ್ಮಾಣಕ್ಕೆ ದಾನವಾಗಿ ನೀಡಿದ್ದ ಪುಟ್ಟಲಿಂಗಪ್ಪ ಅವರ ಐದು ಮಂದಿ ಮಕ್ಕಳಲ್ಲಿ ಒಬ್ಬರಾಗಿ ೧೯೩೫ರ ಜನವರಿ ೧೬ರಂದು ಜನಿಸಿದ ದುಗ್ಗಹಟ್ಟಿ ಪಿ.ವೀರಭದ್ರಪ್ಪನವರು ತಂದೆ ಯಂತೆಯೇ ಸಮಾಜಸೇವೆಗೆ ತೆರೆದುಕೊಂಡರು.

ಯಳಂದೂರು ಪಟ್ಟಣದಲ್ಲಿ ನಶಿಸಿ ಹೋಗುತ್ತಿದ್ದ ಕವಿ ಷಡಕ್ಷರದೇವನ ಗದ್ದುಗೆಯನ್ನು ೧೯೭೫ ರಲ್ಲಿ ನವೀಕರಣ ಮಾಡಿ, ಉದ್ಘಾಟನೆಗೆ ಅಂದಿನ ಉಪರಾಷ್ಟ್ರಪತಿ ಬಿ.ಡಿ.ಜತ್ತಿ ಹಾಗೂ ಮುಖ್ಯಮಂತ್ರಿ ನಿಜಲಿಂಗಪ್ಪನವ ರನ್ನು ಅತಿಥಿಗಳಾಗಿ ಆಹ್ವಾನಿಸಿ ಅರ್ಥಪೂರ್ಣ ಕಾರ್ಯಕ್ರಮ ಮಾಡಿದ್ದು ಅವರ ಹೆಗ್ಗಳಿಕೆಗೆ ಸಾಕ್ಷಿ. ಒಂದು ವಿಲಕ್ಷಣ ಸನ್ನಿವೇಶದಲ್ಲಿ ಯಳಂದೂರು ತಾಲ್ಲೂಕು ಕೇಂದ್ರ ವನ್ನು ರದ್ದುಪಡಿಸಿ, ಸಂತೇಮರಹಳ್ಳಿ ಯನ್ನು ತಾಲ್ಲೂಕು ಕೇಂದ್ರವಾಗಿ ಮಾಡಬೇಕೆಂಬ ತೀರ್ಮಾನವಾಗಿರು ತ್ತದೆ. ಸರ್ಕಾ ರದ ಮಟ್ಟದಲ್ಲಿ ಇದಕ್ಕೆ ಸಿದ್ಧತೆಗಳೂ ನಡೆದಿರುತ್ತವೆ. ಆದರೆ ವೀರಭದ್ರಪ್ಪನವರು ಪಟ್ಟುಬಿಡದೆ, ೩೩ ಹಳ್ಳಿಗಳನ್ನೊಳಗೊಂಡ ಈ ಪುಟ್ಟ ತಾಲ್ಲೂಕು ಕೇಂದ್ರ ಉಳಿಯಬೇಕೆಂದು ಹೋರಾಟ ನಡೆಸಿದ ಫಲವಾಗಿ ಇಂದು ಯಳಂದೂರು ಒಂದು ತಾಲ್ಲೂಕು ಎನಿಸಿಕೊಂಡಿದೆ.

೧೯೬೧-೬೮ರ ಅವಽಯಲ್ಲಿ ತಾಲ್ಲೂಕು ಬೋರ್ಡ್ ಅಧ್ಯಕ್ಷರಾಗಿದ್ದಾಗ ಯಳಂದೂರು ತಾಲ್ಲೂಕಿನಲ್ಲಿ ತಮ್ಮ ನೇತೃತ್ವದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರು. ಅವುಗಳಲ್ಲಿ ಪ್ರಧಾನವಾದ ಕೆಲಸ ಬಿಳಿಗಿರಿರಂಗನಬೆಟ್ಟಕ್ಕೆ ಡಾಂಬರು ರಸ್ತೆ ಮಾಡಿಸಿದುದು. ವಿಶೇಷವೆಂದರೆ ರಸ್ತೆ ನಿರ್ಮಾಣಕ್ಕೆ ಬಿಡುಗಡೆ ಯಾಗಿದ್ದ ೪.೫೦ ಲಕ್ಷ ರೂ. ಅನುದಾನದಲ್ಲಿ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಿಸಿ, ಬಾಕಿ ಉಳಿದ ೧.೬೦ ಲಕ್ಷ ರೂ.ಗಳನ್ನು ಸರ್ಕಾರಕ್ಕೆ ಹಿಂತಿರುಗಿಸಿದ ಅಪರೂಪದ ಮಾದರಿ ರಾಜಕಾರಣಿ ಅವರು. ಬಿ.ಆರ್.ಹಿಲ್ಸ್‌ಗೆ ವಿದ್ಯುತ್ ಸಂಪರ್ಕ, ದೂರವಾಣಿ ಸಂಪರ್ಕ ಇತ್ಯಾದಿ ಸೌಲಭ್ಯಗಳನ್ನು ವಿಸ್ತರಿಸಿ ಆ ಭಾಗದ ಜನ ಮುಖ್ಯ ವಾಹಿನಿಗೆ ಬರಲು ಕಾರಣರಾದರು. ಮಲೆ ಮಹದೇಶ್ವರ ಬೆಟ್ಟದ ದೊಡ್ಡರಥ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಅವರ ಸಾಮಾಜಿಕ ಕಾಳಜಿ ಕುರಿತ ರೋಚಕ ಸಂಗತಿ ಎಂದರೆ ೧೯೭೪ರಲ್ಲಿ ಚಿಕ್ಕಹೊಳೆ ಅಣೆಕಟ್ಟೆಗೆ ಹಾನಿಯಾಗಿ ಪ್ರವಾಹ ಉಂಟಾದಾಗ, ಯಳಂದೂರು ತಾಲ್ಲೂಕಿನ ಗ್ರಾಮಗಳಿಗೆ ಹೆಚ್ಚಿನಹಾನಿಯಾ ಗುತ್ತಿದ್ದ ಸಂದರ್ಭದಲ್ಲಿ ಗ್ರಾಮಸ್ಥರನ್ನು ಸ್ಥಳಾಂತರಿಸುವ ಕಾರ್ಯಾಚರಣೆ ಮಾಡಲು ಹೊರಟ ಮಿಲಿಟರಿ ಯೋಧರೊಂದಿಗೆ ವೀರಭದ್ರಪ್ಪನವರು ಜೀವದ ಹಂಗು ತೊರೆದು ಹೋರಾಡಿದ್ದರು.

ಗುಂಡ್ಲುಪೇಟೆ ತಾಲ್ಲೂಕು ಮಂಚಳ್ಳಿಯಲ್ಲಿ ರುವ ನಾಗಲಿಂಗ ಶಿವಯೋಗಿಗಳ ಐಕ್ಯಸ್ಥಳ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಕೊಳ್ಳೇಗಾಲ ತಾಲ್ಲೂಕು ಚಿಲಕವಾಡಿಯ ಶ್ರೀ ಶಂಭು ಲಿಂಗೇಶ್ವರ ಕ್ಷೇತ್ರದಲ್ಲಿ ಕುಮಾರ ನಿಜಗುಣರ ಜೊತೆಗೂಡಿ ಅನುಭವ ಮಂಟಪ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಅದಮಾರು ಮಠದ ಶ್ರೀಗಳೊಂದಿಗೆ ಒಡನಾಟ ಹೊಂದಿದ್ದರಲ್ಲದೆ, ಅವರ ಹೆಸರಿನಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಿದ್ದರು. ಚಾಮರಾಜನಗರದ ಚಾಮರಾಜೇಶ್ವರ ದೇವಾಲಯದ ನೂತನ ರಥದ ನಿರ್ಮಾಣ ಕಾರ್ಯದಲ್ಲಿ ಶಾಸಕ ಪುಟ್ಟರಂಗಶೆಟ್ಟಿ ಅವರ ಜೊತೆಗೂಡಿ ರಥ ನಿರ್ಮಾಣವಾಗಲು ಕಾರಣಕರ್ತರಾದರು. ಯಳಂದೂರಿನ ಲಯನ್ಸ್ ಶಾಲೆಗೆ ಮೂರು ಕೊಠಡಿಗಳನ್ನು ಕೊಡುಗೆಯಾಗಿ ನಿರ್ಮಿಸಿಕೊಟ್ಟಿದ್ದಾರೆ. ಬಿಳಿಗಿರಿರಂಗನ ಬೆಟ್ಟದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಡಾ.ಸುದರ್ಶನ್ ಅವರ ಜೊತೆಗೂಡಿ ಯಳಂದೂರಿನಲ್ಲಿ ಆಸ್ಪತ್ರೆ ಪ್ರಾರಂಭಿಸಲು ತಮ್ಮ ಕುಟುಂಬದ ಕಟ್ಟಡವನ್ನೇ ಟ್ರಸ್ಟಿಗೆ ನೀಡಿದ್ದಾರೆ. ಹೀಗೆ ಪಟ್ಟಿ ಮಾಡುತ್ತಾ ಹೋದರೆ ನೂರಾರು ಸೇವಾ ಕಾರ್ಯಗಳನ್ನು ಹೆಸರಿಸಬಹುದು. ಕೊಳ್ಳೇಗಾಲ ತಾಲ್ಲೂಕಿನ ಕುಂತೂರಿನಲ್ಲಿ ೧೯೬೦ರ ದಶಕದಲ್ಲಿ ಶ್ರೀ ಮಹದೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ (ಈಗಿನ ಬಣ್ಣಾರಿ ಶುಗರ‍್ಸ್) ಸ್ಥಾಪನೆಯಲ್ಲಿ ವೀರಭದ್ರಪ್ಪನವರ ಪರಿಶ್ರಮಮ, ಕಾಳಜಿ ಅಡಗಿದೆ. ಈ ಕಾರ್ಖಾನೆಯ ಸಂಸ್ಥಾಪಕ ನಿರ್ದೇಶಕರಾಗಿ ಅತಿ ಹೆಚ್ಚು ಷೇರುದಾರರನ್ನು ಸೇರಿಸಿದ ಕೀರ್ತಿ ಅವರಿಗೆ ಸಂದಿದೆ. ಅವರಿಗೆ ಸದಾ ತಮ್ಮ ಭಾಗದ ಗ್ರಾಮಗಳು,ತಾಲ್ಲೂಕಿನ ಅಭಿವೃದ್ಧಿಯ ತುಡಿತ ಇತ್ತು.

ದೈವಭಕ್ತರಾಗಿದ್ದ ವೀರಭದ್ರಪ್ಪನವರು ಬಸವಣ್ಣನವರ ತತ್ವಗಳನ್ನು ಪಾಲಿಸುತ್ತಿದ್ದರು. ಅವರ ಮನೆ ಒಂದು ಮಠದಂತೆ ಗೋಚರಿಸುತ್ತಿತ್ತು. ಮನೆಗೆ ಬಂದ ಅತಿಥಿಗಳಿಗೆ ಸಕಾಲದಲ್ಲಿ ಊಟ-ತಿಂಡಿ ವ್ಯವಸ್ಥೆ ಮಾಡಿ ಅನ್ನದಾಸೋಹ ಪರಿಕಲ್ಪನೆಯನ್ನು ಅಳವಡಿಸಿದ್ದರು. ಸುತ್ತೂರು ಮಠದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ ಆಪ್ತ ಭಕ್ತವಲಯದಲ್ಲಿ ಒಬ್ಬರಾಗಿ ಅವರ ನೆಚ್ಚಿನ ಶಿಷ್ಯರಾಗಿದ್ದರು. ಸುತ್ತೂರು ಮಠದ ಸಾಮಾಜಿಕ ಕಾರ್ಯಗಳಲ್ಲಿ ತನುಮನ ಪೂರ್ವಕವಾಗಿ ಸೇವೆಗೈಯುತ್ತಿದ್ದರು. ಯಳಂದೂರು ಪಟ್ಟಣದಲ್ಲಿ ೨೦೦೨ರಲ್ಲಿ ಸುತ್ತೂರು ಮಠದ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ೧೦೪೨ನೇ ಜಯಂತಿ ಮಹೋತ್ಸವವ ಆಚರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಬಗ್ಗೆ ಅಪಾರ ಗೌರವ ಹೊಂದಿದ್ದರು. ಸಿದ್ದಗಂಗಾ ಮಠದ ಹಿರಿಯ ವಿದ್ಯಾರ್ಥಿಗಳ ಸಂಘ ಪ್ರದಾನ ಮಾಡುವ ೨೦೨೫ನೇ ‘ಸಂಘಸಿರಿ’ ಪ್ರಶಸ್ತಿಯನ್ನು ಈಗಿನ ಶ್ರೀಗಳಾದ ಸಿದ್ಧಲಿಂಗ ಸ್ವಾಮೀಜಿ ಅವರು ವೀರಭದ್ರಪ್ಪನವರಿಗೆ ಪ್ರದಾನ ಮಾಡಿದ್ದನ್ನು ಸ್ಮರಿಸಬಹುದು. ಅಲ್ಲದೆ ಅವರು ಹತ್ತಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ ಆಶಯದಂತೆ ಯಳಂದೂರು ತಾಲ್ಲೂಕಿನ ಗಂಗವಾಡಿ ಕ್ಷೇತ್ರದಲ್ಲಿನ ಶ್ರೀ ಭದ್ರಕಾಳಮ್ಮ ಮತ್ತು ಶ್ರೀ ವೀರಭದ್ರೇಶ್ವರ ದೇವಸ್ಥಾನವನ್ನುಜೀರ್ಣೋದ್ಧಾರ ಮಾಡಿ, ಕಲ್ಯಾಣ ಮಂಟಪಗಳನ್ನು ನಿರ್ಮಿಸಿ ಗ್ರಾಮೀಣ ಜನತೆಗೆ ಕಡಿಮೆ ದರದಲ್ಲಿ ಶುಭಕಾರ್ಯಗಳನ್ನು ಮಾಡಿಕೊಳ್ಳಲು ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ. ೨೦೦೦ನೇ ಇಸವಿಯಲ್ಲಿ ಅಗಲಿದ ತಮ್ಮ ಪತ್ನಿ ಸುಂದರಮ್ಮನವರ ಸ್ಮರಣಾರ್ಥ ಪ್ರಾರಂಭವಾದ ಎಸ್‌ಡಿವಿಎಸ್ ವಿದ್ಯಾಸಂಸ್ಥೆಯು ಗುಣಮಟ್ಟದ ಶಿಕ್ಷಣ ನೀಡುತ್ತಾ, ಯಳಂದೂರು ತಾಲ್ಲೂಕಿನ ವಿದ್ಯಾರ್ಥಿಗಳ ಆಶಾಕಿರಣವಾಗಿ ಹೊರಹೊಮ್ಮಿದ್ದು, ಆ ಭಾಗದ ಜನರು ಇವರ ಶಿಕ್ಷಣ ಸೇವೆಯನ್ನು ಕೊಂಡಾಡುತ್ತಾರೆ. ಇತ್ತೀಚಿಗೆ ಕಾಗಲವಾಡಿ ಗ್ರಾಮದಲ್ಲಿ ಕೆಲ ವರ್ಷಗಳ ಹಿಂದೆ ವಿಭ ಆಂಗ್ಲ ಮಾಧ್ಯಮ ಶಾಲೆಯನ್ನು ಪ್ರಾರಂಭಿಸಿದ್ದುದು ಅವರ ಶಿಕ್ಷಣ ಪ್ರೇಮವನ್ನು ಸಾರುತ್ತದೆ.ವೀರಭದ್ರಪ್ಪನವರಿಗೆ ಕೃಷಿ ಅಚ್ಚುಮೆಚ್ಚಿನ ಕ್ಷೇತ್ರವಾಗಿತ್ತು.

ಪ್ರಗತಿಪರ ರೈತರಾಗಿ ಹಲವಾರು ದೇಶಗಳಿಗೆ ಭೇಟಿ ನೀಡಿ, ಆಧುನಿಕ ಕೃಷಿ ತಂತ್ರಜ್ಞಾನವನ್ನು ತಮ್ಮ ಜಮೀನಿನಲ್ಲಿಅಳವಡಿಸಿಕೊಂಡು ಮಾದರಿ ಕೃಷಿಕರಾಗಿದ್ದರು. ಜಪಾನ್ ದೇಶಕ್ಕೆ ಪ್ರವಾಸ ಕೈಗೊಂಡು ಹಿಪ್ಪುನೇರಳೆ ಕೃಷಿ ಬಗ್ಗೆ ಸ್ಥಳೀಯವಾಗಿ ಸಾಕಷ್ಟು ಪ್ರಯೋಗಗಳನ್ನು ಮಾಡಿದ್ದರು. ಉದ್ಯಮ ಕ್ಷೇತ್ರದಲ್ಲಿಯೂ ಸೈ ಎನಿಸಿಕೊಂಡಿದ್ದರು. ೧೯೭೦ರ ದಶಕದಲ್ಲಿ ಯಳಂದೂರಿನಲ್ಲಿ ಶ್ರೀ ಮಹದೇಶ್ವರ ಚಿತ್ರಮಂದಿರ ಹಾಗೂ ಕಾಗಲವಾಡಿಯಲ್ಲಿಯೂ ಒಂದು ಚಿತ್ರ ಮಂದಿರ ಸ್ಥಾಪಿಸಿ ಆ ಭಾಗದ ಜನರ ಮನರಂಜನೆಯ ಕೊರತೆಯನ್ನು ನೀಗಿಸಿದ್ದರು.

ಅನೇಕ ಸಂಘ ಸಂಸ್ಥೆಗಳ ನಿರ್ದೇಶಕರಾಗಿ, ಸದಸ್ಯರಾಗಿ ಆ ಸಂಸ್ಥೆಗಳ ಏಳ್ಗೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಮಕ್ಕಳಾದ ವಿ. ಮಲ್ಲಿಕಾರ್ಜುನ ಸ್ವಾಮಿ, ವಿ.ಗಂಗಾಧರಸ್ವಾಮಿ ಹಾಗೂ ಅವರ ಸಹೋದರ ಡಿ.ಪಿ.ಗುರುಸಿದ್ದಪ್ಪ ಅವರ ಪುತ್ರ ಡಿ.ಜಿ.ರಾಜೇಶ್ ಅವರು ವೀರಭದ್ರಪ್ಪನವರ ಎಲ್ಲಾ ಕಾರ್ಯಗಳಿಗೆ ಕೈಜೋಡಿಸಿ ಅವರ ಆಶಯಗಳಿಗೆ ಬೆನ್ನೆಲುಬಾಗಿದ್ದುದು ವಿಶೇಷ. ನಾಲ್ಕು ಜನ ಮಕ್ಕಳು ಹಾಗೂ ಏಳು ಜನ ಮೊಮ್ಮಕ್ಕಳನ್ನು ಅಗಲಿರುವ ವೀರಭದ್ರ ಪ್ಪನವರ ಸ್ಮರಣಾರ್ಥ ಸ್ವಗ್ರಾಮವಾದ ದುಗ್ಗಹಟ್ಟಿಯಲ್ಲಿ ಜ.೯ರಂದು ಬೆಳಿಗ್ಗೆ ಸ್ಮರಣೆ ಹಾಗೂ ನುಡಿ ನಮನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

“ವೀರಭದ್ರಪ್ಪನವರು ತಂದೆಯವರಿಂದ ಕೇವಲ ಆಸ್ತಿಯನ್ನು ಬಳುವಳಿಯಾಗಿ ಪಡೆಯದೆ ಅವರ ಉದಾರತೆ, ದೂರದೃಷ್ಟಿ, ಸಮಾಜಸೇವೆಯನ್ನು ಬಳುವಳಿ ಯಾಗಿ ಪಡೆದು, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನಮಾನಸದಲ್ಲಿ ಎತ್ತರದ ಸ್ಥಾನ ಗಳಿಸಿದರು. ತನ್ಮೂಲಕ ತಮ್ಮ ಕುಟುಂಬದ ಹೆಸರನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸಿದರು. ಹಣವಂತರೆಲ್ಲಾ ಹೃದಯವಂತರಾಗಿರುವುದು ವಿರಳ. ದುಗ್ಗಹಟ್ಟಿ ವೀರಭದ್ರಪ್ಪ ಅವರ ಕುಟುಂಬದವರನ್ನು ಸಾಹುಕಾರ್ ಕುಟುಂಬ ಎಂದೇ ಕರೆಯುವುದು ವಾಡಿಕೆ. ಈ ಸಾಹುಕಾರ್ ಕುಟುಂಬ ಸಮಾಜಕ್ಕೆ ತಮ್ಮಿಂದ ಏನು ಕೊಡುಗೆ ನೀಡಬಹುದು ಎಂಬುದನ್ನು ಮನಗಂಡು ಆರ್ಥಿಕ ನೆರವು ನೀಡುವ ಮೂಲಕ ದಾನವೂ ಒಂದು ಶ್ರೇಷ್ಠವಾದ ಧರ್ಮ ಎಂಬುದನ್ನು ಸಾಬೀತು ಮಾಡಿದ್ದಾರೆ. ಅನೇಕ ಸಂಘಸಂಸ್ಥೆಗಳ ಏಳ್ಗೆಗೆ ಉದಾರವಾಗಿ ಧನಸಹಾಯ ಮಾಡಿ ನೆರವಾಗಿದ್ದಾರೆ.”

Tags:
error: Content is protected !!