• ಎಂ.ಆರ್.ಚಕ್ರಪಾಣಿ
ಶೈಕ್ಷಣಿಕ ಸಾಲಿನಲ್ಲಿ 30ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಇರುವ ಸರ್ಕಾರಿ ಶಾಲೆಗಳ ಪಟ್ಟಿಯಲ್ಲಿ ಮಂಡ್ಯ ಜಿಲ್ಲೆ ಮೊದಲ ಸ್ಥಾನ
197- ಕಳೆದ 10 ವರ್ಷಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ ಮುಚ್ಚಿ ಹೋದ ಶಾಲೆಗಳ ಸಂಖ್ಯೆ
209- 2023-24ನೇ ಸಾಲಿನಲ್ಲಿ ಏಕೋಪಾಧ್ಯಾಯ ಕಿರಿಯ ಪ್ರಾಥಮಿಕ ಶಾಲೆಗಳು
69- 2023-24ನೇ ಸಾಲನಲ್ಲಿ ಏಕೋಪಾಧ್ಯಾಯ ಹಿರಿಯ ಪ್ರಾಧಮಿಕ ಶಾಲೆಗಳು.
680 2023-24ನೇ ಸಾಲಿನಲ್ಲಿ ಮಂಡ್ಯ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಪಡೆದಿರುವ ಮಕ್ಕಳ ಸಂಖ್ಯೆ
ಮದ್ದೂರು: ಬ್ರಿಟಿಷರ ಕಾಲದಲ್ಲಿ ಸ್ಥಾಪನೆಯಾದ ಶಾಲೆಯ ಕಟ್ಟಡ ಇಂದು ಶಿಥಿಲಾವಸ್ಥೆಗೆ ತಲುಪಿ ಯಾವ ಕ್ಷಣದಲ್ಲಿ ಬೇಕಾದರೂ ಕುಸಿದು ಬೀಳುವ ಸ್ಥಿತಿಯಲ್ಲಿವೆ…. ಚಾವಣಿಯಿಂದ ಮಳೆ, ಬಿಸಿಲು ಯಾವುದೇ ಅಡಚಣೆ ಇಲ್ಲದೆ, ನಿರಾತಂಕವಾಗಿ ಕೊಠಡಿ ಪ್ರವೇಶಿಸುತ್ತವೆ… ಶತಮಾನವನ್ನೂ ಕಂಡುಂಡು ಮೆರೆದಿರುವ ಸರ್ಕಾರಿ ಶಾಲೆಯೊಂದರ ದುಸ್ಥಿತಿ ಇದು.
ಮದ್ದೂರು ಪಟ್ಟಣದಲ್ಲಿರುವ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಈಗ ಈ ಸ್ಥಿತಿಯನ್ನು ತಲುಪಿದೆ. ಇದೇ ಶಾಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ಎಂ.ಕೃಷ್ಣ ಅವರು ಒಂದನೇ ತರಗತಿ ವ್ಯಾಸಂಗ ಮಾಡಿದ್ದರು. ಕ್ರಿ.ಶ.1885ರಲ್ಲಿ ಬ್ರಿಟಿಷರ ಅವಧಿಯಲ್ಲಿ ಅವರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಿರ್ಮಿಸಿರುವ ಸುಂದರವಾದ, ವಿಶಾಲವಾದ ಕೊಠಡಿಗಳನ್ನು ಹೊಂದಿರುವ ಈ ಶಾಲೆ ಇಂದು ಕಿಟಕಿಗಳನ್ನು ಕಳೆದುಕೊಂಡಿದೆ,
ಚಾವಣಿಯ ಹೆಂಚುಗಳು ಕಾಣೆಯಾಗಿವೆ. ಗೋಡೆಗಳು ಕೂಡ ಶಿಥಿಲವಾಗಿವೆ. ನೆಲದ ಗಾರೆ ಕೂಡ ಅಲ್ಲಲ್ಲಿ ಕಿತ್ತುಬಂದಿದೆ. ಕೊಟ್ಟಿಗೆ ಮಾಡುವುದಕ್ಕೂ ಯೋಗ್ಯವಲ್ಲ ದಂತಹ ಕೊಠಡಿಯಲ್ಲಿ ಮಕ್ಕಳಿಗೆ ಪಾಠ ಮಾಡಬೇಕಾದ ಶೋಚನೀಯ ಪರಿಸ್ಥಿತಿ ಇದೆ. ಇಲ್ಲಿ 51 ವಿದ್ಯಾರ್ಥಿಗಳಿದ್ದು, ನಾಲ್ವರು ಶಿಕ್ಷಕರು ಇದ್ದಾರೆ. ಇದು ಈ ಒಂದು ಶಾಲೆಯ ದುಸ್ಥಿತಿ ಮಾತ್ರವಲ್ಲ ಜಿಲ್ಲೆಯಲ್ಲಿ ದುಸ್ಥಿತಿಯಲ್ಲಿರುವ ಶಾಲೆಗಳು ಬಹಳಷ್ಟಿವೆ.
ಕೋಟ್ಸ್))
ಜಿಲ್ಲೆಯ ಹಲವು ಸರ್ಕಾರಿ ಶಾಲಾ ಕಟ್ಟಡಗಳು ಶಿಥಿಲಗೊಂಡಿರುವ ಬಗ್ಗೆ ನಾನು ಶಿಕ್ಷಣ ಸಚಿವರ ಗಮನಕ್ಕೆ ತಂದಿದ್ದೇನೆ. ಈಗಾಗಲೇ ಕೆಲವು ಶಾಲಾ ಕಟ್ಟಡಗಳ ನವೀಕರಣ ಕಾರ್ಯ ಸಾಗುತ್ತಿದ್ದು, ಉಳಿದ ಕಟ್ಟಡಗಳನ್ನೂ ಆದ್ಯತೆಯ ಮೇಲೆ ಅಭಿವೃದ್ಧಿಪಡಿಸ ಲಾಗುವುದು. ಈ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳು ಸಂಪರ್ಕದಲ್ಲಿದ್ದು, ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಲಾಗಿದೆ.
-ಎನ್.ಚಲುವರಾಯಸ್ವಾಮಿ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು.
ಶಾಲೆಗಳ ಉನ್ನತೀಕರಣ ಅಗತ್ಯ: ಆಳುವ ಸರ್ಕಾರ ಶಾಲೆಗಳ ಅಭಿವೃದ್ಧಿ ಕಡೆ ಗಮನ ಹರಿಸದೆ ಇರುವ ಕಾರಣ ಸರ್ಕಾರಿ ಶಾಲೆಗಳು ಮುಚ್ಚುವ ಪರಿಸ್ಥಿತಿಗೆ ಬಂದಿವೆ. ದಿನೇ ದಿನೇ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಹಾಗಾಗಿ ಕೂಡಲೇ ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಅಗತ್ಯವಾದ ಎಲ್ಲ ಸವಲತ್ತುಗಳನ್ನೂ ಒದಗಿಸಬೇಕು.
-ಎ.ಸಿ.ಚನ್ನಪ್ಪ ಆಲೂರು, ನಿವೃತ್ತ ಶಿಕ್ಷಕರು.
ಶಾಲೆ ಜೀರ್ಣೋದ್ಧಾರ ಮಾಡಬೇಕು: ಬ್ರಿಟಿಷರ ಕಾಲದಲ್ಲಿ ನಿರ್ಮಿಸಿದ ಈ ಶಾಲೆಯಲ್ಲಿ ಮಾಜಿ ಸಿಎಂ ಎಸ್.ಎಂ. ಕೃಷ್ಣ ಸೇರಿದಂತೆ ಗಣ್ಯಾತಿಗಣ್ಯರು ಓದಿದ್ದು, ಇದನ್ನು ಜೀರ್ಣೋದ್ದಾರ ಮಾಡಿ ಅನುಕೂಲ ಕಲ್ಪಿಸಿದರೆ, ಮುಂದಿನ ದಿನಗಳಲ್ಲಿ ಆ ಮಕ್ಕಳು ನಾನು ಇಂಥ ಗಣ್ಯರು ಓದಿದ ಶಾಲೆಯಲ್ಲಿ ಓದಿದೆ ಎಂದು ಹೇಳಿ ಕೊಳ್ಳುವ ಹೆಗ್ಗಳಿಕೆಗೆ ಅನುವು ಮಾಡಿಕೊಟ್ಟಂತಾಗು ತದೆ. ಸರ್ಕಾರ ಹಾಗೂ ಅಧಿಕಾರಿಗಳು ಕೂಡಲೇ ಇತ್ತ ಗಮನಹರಿಸಿ ಶಾಲೆಯ ಅಭಿವೃದ್ಧಿಗೆ ಮುಂದಾಗಬೇಕು.
-ಡಾ.ಬಿ.ಕೃಷ್ಣ, ನಿವೃತ್ತ ಪ್ರಾಂಶುಪಾಲರು
ದುರಸ್ತಿಗಾಗಿ ಪ್ರಸ್ತಾವನೆ ಸಲ್ಲಿಕೆ: ಮದ್ದೂರು ತಾಲ್ಲೂಕಿನಲ್ಲಿ ಕೆಲವು ಶಾಲೆಗಳು ಶಿಥಿಲವಾಗಿದ್ದು, ದುರಸ್ತಿ ಕೆಲಸ ಕೈಗೊಳ್ಳಲು ಅನುಮತಿ ನೀಡುವಂತೆ ಶಾಸಕರು ಹಾಗೂ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ನೀಡಿದ್ದು, ಕೆಲವೇ ದಿನಗಳಲ್ಲಿ ದುರಸ್ತಿ ಮಾಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ.
-ಸಿ.ಎಚ್.ಕಾಳೀರಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ.
ಸ್ಥಳೀಯರು ಕೈಜೋಡಿಸಬೇಕು: ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಸರ್ಕಾರದ ಸಹಾಯವನ್ನೇ ಕಾಯುವುದ ರಲ್ಲಿ ಅರ್ಥವಿಲ್ಲ. ಅನುಕೂಲ ವಾಗಿರುವಂಥ ಸ್ಥಳೀಯರು ತಮ್ಮ ಗ್ರಾಮಗಳ ಶಾಲೆಗಳ ಪ್ರಗತಿಗೆ ಕೈಜೋಡಿಸಬೇಕು.
-ನಂದೀಶ್ ಗೌಡ, ಸಮಾಜ ಸೇವಕ, ಹುಳಗನಹಳ್ಳಿ.