Mysore
19
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ರಾಜೀವ್‌ನಗರದಲ್ಲಿ ಡೆಂಗ್ಯು ಪಾರ್ಕ್!

 ಸ್ಥಳೀಯರಿಗೆ ಭೀತಿ: ಪಾಲಿಕೆಯದು ನಿರ್ಲಕ್ಷ್ಯ ನೀತಿ
ನೂರಾರು ಗುಂಡಿಗಳಲ್ಲಿ ನೀರು ನಿಂತು ಸೊಳ್ಳೆ ಉತ್ಪಾದನೆ

ಮೈಸೂರು: ಎರಡು ವರ್ಷಗಳ ಹಿಂದೆ ಉದ್ಯಾನವೊಂದರಲ್ಲಿ ಗಿಡ ನೆಡುವ ಉದ್ದೇಶದಿಂದ ತೋಡಿದ್ದ ಗುಂಡಿಗಳಲ್ಲಿ ಮಳೆ ನೀರು ಸಂಗ್ರಹವಾಗಿ ಸೊಳ್ಳೆಗಳು ಉತ್ಪತ್ತಿಯಾಗಿ ಸುತ್ತಲಿನವರಿಗೆ ಬಾಧೆಯುಂಟು ಮಾಡುತ್ತಿವೆ. ಸೊಳ್ಳೆ ಕಾಟದಿಂದ ಹೈರಾಣಾದ ಸ್ಥಳೀಯರು ಉದ್ಯಾನಕ್ಕೆ ‘ಡೆಂಗು’ ಪಾರ್ಕ್‌’ ಎಂದು ನಾಮಕರಣ ಮಾಡಿ ತಮ್ಮ ಸಂಕಷ್ಟಕ್ಕೆ ಹಾಸ್ಯ ರೂಪ ಕೊಟ್ಟಿದ್ದಾರೆ.

ನಗರದ ರಾಜೀವ್‌ನಗರ ಬಡಾವಣೆಯ 11ನೇ ಅಡ್ಡ ರಸ್ತೆಯಲ್ಲಿರುವ ಉದ್ಯಾನದಲ್ಲಿ ಪಾಲಿಕೆ ಸದಸ್ಯರು ಗಿಡ ನೆಡುವುದಾಗಿ ಹೇಳಿ ಸುಮಾರು 200 ಗುಂಡಿಗಳನ್ನು ತೋಡಿಸಿದ್ದರು. ಹತ್ತಾರು ಗಿಡ ನೆಟ್ಟರು ನಿರ್ವಹಣೆ ಮಾಡದೆ, ಉಳಿದ ಗುಂಡಿಗಳನ್ನೂ ಮುಚ್ಚದ ಕಾರಣ, ಅದೇ ಗುಂಡಿಗಳಲ್ಲಿ ಸೊಳ್ಳೆಗಳ ಸಂತತಿ ಹೆಚ್ಚಾಗಿದೆ. ಸುತ್ತಲಿನ ನಿವಾಸಿಗಳು ತಮಗೆ ವಿಪರೀತ ಸೊಳ್ಳೆಗಳ ಕಾಟ ಇದೆ ಗುಂಡಿ ಮುಚ್ಚಿ ಪಾರ್ಕ್ ಸ್ವಚ್ಛ ಮಾಡುವಂತೆ ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಏನೂ ಪ್ರಯೋಜನ ಆಗಲಿಲ್ಲ.

ಇತ್ತೀಚೆಗೆ ಡೆಂಗ್ಯು ಕಾಯಿಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಜನರು ಭಯ ಭೀತರಾಗಿದ್ದಾರೆ. ಅವರುಗಳ ಮನವಿಯನ್ನು ಯಾರೂ ಕೇಳದ ಕಾರಣ ಆತಂಕಗೊಂಡಿದ್ದಾರೆ. ವಯಸ್ಸಾದವರು ಸಣ್ಣ ಮಕ್ಕಳ ಆರೋಗ್ಯ ಕಾಪಾಡುವುದು ದೊಡ್ಡ ಸವಾಲಾಗಿದೆ.

ತಮ್ಮ ಸಂಕಟಕ್ಕೆ ಸ್ಪಂದಿಸದ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ನಿತ್ಯವೂ ಹಿಡಿಶಾಪ ಹಾಕುತ್ತಿದ್ದಾರೆ. ಉದ್ಯಾನದ ಸಮೀಪ ವಾಸವಾಗಿದ್ದ ನಿವಾಸಿಯೊಬ್ಬರು ಜ್ವರ ಬಂದ ಕಾರಣದಿಂದಲೇ ಮೃತಪಟ್ಟಿದ್ದರಿಂದ ಸ್ಥಳೀಯರು ಭಯಗೊಂಡಿದ್ದಾರೆ. ಸೊಳ್ಳೆಗಳ ಕಾಟದಿಂದ ಸುತ್ತಲಿನ ಜನರು ಹಿಂಸೆ ಅನುಭವಿಸುತ್ತಿದ್ದಾರೆ.


ಸೊಳ್ಳೆಗಳಿಂದ ಸಂಭವಿಸುವ ಎಲ್ಲ ರೀತಿಯ ದೈಹಿಕ ಅನಾರೋಗ್ಯ ಭೀತಿಯಿಂದ ಜೀವ ಹಿಡಿದುಕೊಂಡು ಬದುಕುತ್ತಿರುವ ಜನರು ಪಾಲಿಕೆ ಅಧಿಕಾರಿಗಳಿಗೆ ಬಗೆಬಗೆಯಾಗಿ ಕೇಳಿಕೊಂಡರೂ ಸಮಸ್ಯೆ ಬಗೆ ಹರಿಸಿಲ್ಲ ಎಂದು ಆರೋಪಿಸಿದ್ದಾರೆ.

ಪಾರ್ಕ್‌ನಲ್ಲಿ ಗುಂಡಿಗಳಿರುವುದ ರಿಂದ ಸೊಳ್ಳೆಗಳು ಹೆಚ್ಚಾಗಿದೆ. ಈ ಬಗ್ಗೆ ಒಂದು ವರ್ಷದ ಹಿಂದೆಯೇ ಪಾಲಿಕೆಗೆ ದೂರು ನೀಡಿದ್ದೇವೆ. ಆದರೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಇತ್ತೀಚೆಗೆ ಡೆಂಗ್ಯು ಪ್ರಕರಣಗಳು ನಗರದಲ್ಲಿ ಹೆಚ್ಚಾಗುತ್ತಿದೆ. ಜನರಿಗೆಲ್ಲ ತುಂಬಾ ಗಾಬರಿಯಾಗಿದೆ. ಡೆಂಗ್ಯು ನಿರ್ಮೂಲನೆ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ನಮಗೆ ಆತಂಕವಾಗಿದೆ.
ರಫಿ ಅಹಮದ್‌

ಹಿಂದೆ ಇದ್ದ ಪಾಲಿಕೆ ಸದಸ್ಯರು ಗಿಡ ನೆಟ್ಟು ಕಾಡು ಬೆಳೆಸುತ್ತೇನೆ 200ಕ್ಕೂ ಎಂದು ಹೇಳಿ ಸುಮಾರು ಹೆಚ್ಚು ಗುಂಡಿಗಳನ್ನು ತೋಡಿಸಿ ಐದಾರು ಗಿಡ ನೆಟ್ಟಿದ್ದರು. ಸೂಕ್ತ ನಿರ್ವಹಣೆ ಇಲ್ಲದೆ ಒಂದು ಗಿಡವೂ ಬೆಳೆಯಲಿಲ್ಲ. ಬಿಡಾಡಿ ಹಸುಗಳು ಇಲ್ಲೇ ಇರುತ್ತವೆ. ಜನರೂ ಕೂಡ ಇಲ್ಲೇ ಮೂತ್ರ ವಿಸರ್ಜನೆ ಮಾಡುತ್ತಾರೆ. ಈ ಗುಂಡಿಗಳಲ್ಲಿ ನೀರು ತುಂಬಿಕೊಂಡು ಸೊಳ್ಳೆಗಳು ಉತ್ಪತ್ತಿ ಆಗುತ್ತಿದೆ. ಅನೇಕ ಬಾರಿ ಅಧಿಕಾರಿಗಳಿಗೆ ಮನವಿ ಪತ್ರ ನೀಡಿದ್ದರೂ ಏನೂ ಪ್ರಯೋಜನ ಆಗಿಲ್ಲ.

ಬಾಲಕೃಷ್ಣ, ಸ್ಥಳೀಯರು

Tags: