Mysore
17
scattered clouds

Social Media

ಭಾನುವಾರ, 11 ಜನವರಿ 2026
Light
Dark

ಮೈಸೂರು ಜಿಲ್ಲೆಯಲ್ಲಿ ಡೆಂಗ್ಯು ಪ್ರಕರಣ ಇಳಿಕೆ

ಪ್ರಶಾಂತ್ ಎಸ್.

ಮೈಸೂರು: ನಗರ ಹಾಗೂ ಗ್ರಾಮೀಣ ಪ್ರದೇಶಗಳ ಸಾಕಷ್ಟು ಮಂದಿಗೆ ಜ್ವರದ ಬಾಧೆ ಕಾಡಿತ್ತು. ಈಗ ನಿಯಂತ್ರಣಕ್ಕೆ ಬಂದಿದೆಯಾದರೂ, ಮಳೆಯಿಂದಾಗಿ ಇನ್ನಷ್ಟು ಕಾಡಬಹುದುಎಂಬ ಆತಂಕವಿದೆ. ಕಳೆದ ಕೆಲವು ದಿನಗಳಿಂದ ಬಿಟ್ಟೂ ಬಿಡದೆ ಸುರಿಯುತ್ತಿದ್ದ ಮಳೆಯಿಂದಾಗಿ ಡೆಂಗ್ಯು ಆತಂಕ ಹೆಚ್ಚಾಗುತ್ತಿದೆ. ಈ ಮಾರಕ ಸೋಂಕು ಹರಡದಂತೆ ಕಟ್ಟೆಚ್ಚರ ವಹಿಸುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿಬ್ಬಂದಿ ಮನೆ ಮನೆ ಸಮೀಕ್ಷೆ ಕೈಗೊಂಡು, ಜಾಗೃತಿ ಮೂಡಿಸಲು ಆರಂಭಿಸಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳುಗಳಿಗೆ ಹೋಲಿಸಿದರೆ, ಈಗ ಡೆಂಗ್ಯು ಪ್ರಕರಣ ಇಳಿ ಮುಖವಾಗಿದೆ. ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾದರೆ, ಡೆಂಗ್ಯು ಪ್ರಕರಣ ಹೆಚ್ಚಾಗಬಹುದು ಎಂದು ಭಾವಿಸುವುದು ಸರಿಯಲ್ಲ. ಈ ಕಾಯಿಲೆ ಒಮ್ಮೆ ನಿಯಂತ್ರಣಕ್ಕೆ ಬಂದರೆ, ಅದು ಮುಂದಿನ ದಿನಗಳಲ್ಲಿ ಇಳಿಮುಖವಾಗುತ್ತಲೇ ಹೋಗುತ್ತದೆ. ಹಾಗಾಗಿ ಜಿಲ್ಲೆಯ ಜನತೆ ಡೆಂಗ್ಯು ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎನ್ನುತ್ತಾರೆ ಡಿಎಚ್‌ಒ ಡಾ.ಪಿ.ಸಿ.ಕುಮಾರಸ್ವಾಮಿ.

ಪ್ರತಿ ಶುಕ್ರವಾರ ಡೆಂಗ್ಯು ನಿಯಂತ್ರಣ ಅಭಿಯಾನ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೈದ್ಯರು, ಅಧಿಕಾರಿಗಳು, ಸಿಬ್ಬಂದಿ ಪ್ರತಿ ಶುಕ್ರವಾರ ಮನೆ ಮನೆಗೆ ಭೇಟಿ ನೀಡಿ ಸೊಳ್ಳೆ ಲಾರ್ವಾ ನಾಶದ ಕುರಿತು ತೆಗೆದುಕೊಳ್ಳುತ್ತಿರುವ ಕ್ರಮಗಳ ಮೇಲ್ವಿಚಾರಣೆ ನಡೆಸುತ್ತಾರೆ. ಜೊತೆಗೆ ಸಂಗ್ರಹವಾಗಿರುವ ನೀರಿನಲ್ಲಿ ಲಾರ್ವಾಗಳನ್ನು ನಾಶಪಡಿಸಲು ಕ್ರಮಗಳನ್ನು ಕೈಗೊಳ್ಳುವಂತೆ ಮಾಹಿತಿ ನೀಡುತ್ತಿದ್ದಾರೆ.

ಮಳೆ ನೀರು ನಿಂತಾಗ ಕ್ರಮವೇನು?: ಮಳೆ ನೀರು ಒಂದೆಡೆ ಬಹಳ ದಿನ ನಿಂತಿದ್ದರೆ ಈಡಿಸ್ ಸೊಳ್ಳೆ ಉತ್ಪತ್ತಿಯಾಗುತ್ತದೆ. ಈ ಸೊಳ್ಳೆಗಳು ಹಗಲು ವೇಳೆ ಮನುಷ್ಯನನ್ನು ಕಚ್ಚುತ್ತವೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಸಣ್ಣ ಮಕ್ಕಳು, ಹಿರಿಯ ನಾಗರಿಕರು, ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಹಾಗೂ ಹಗಲು ವೇಳೆ ಹೆಚ್ಚಾಗಿ ಮಲಗುವಂತಹ ವ್ಯಕ್ತಿಗಳಿಗೆ ಡೆಂಗ್ಯು ಹರಡುವ ಸಾಧ್ಯತೆ ಹೆಚ್ಚು. ಹಾಗಾಗಿ ಜನರು ತಮ್ಮ ಮನೆಯಲ್ಲಿ ನೀರಿನ ತೊಟ್ಟಿಗಳನ್ನು ದಿನಬಿಟ್ಟು ದಿನ ಶುದ್ಧೀಕರಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

” ಹಿಂದಿನ ವರ್ಷಕ್ಕೆ ಹೋಲಿಸಿದರೆ ಡೆಂಗ್ಯು ಪ್ರಕರಣಗಳು ಕಡಿಮೆಯಾಗಿವೆ. ಪ್ರತಿ ಶುಕ್ರವಾರ ಅರಿವು ಮೂಡಿಸುವ ಮೂಲಕ ನೀರಿನ ಮೂಲಗಳನ್ನು ಸ್ವಚ್ಛಗೊಳಿಸಲು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಜೊತೆಗೆ ಸೊಳ್ಳೆ ಲಾರ್ವಾಗಳ ಸಮೀಕ್ಷೆಯನ್ನು ನಡೆಸುತ್ತಿದ್ದೇವೆ. ಡೆಂಗ್ಯು ಪಾಸಿಟಿವ್ ಪ್ರಕರಣಗಳು ಕಂಡುಬಂದಾಗ, ನಮ್ಮ ವೈದ್ಯಕೀಯ ಅಧಿಕಾರಿಗಳು ಸುತ್ತಮುತ್ತಲಿನ ೪೦-೫೦ ಮನೆಗಳಲ್ಲಿ ಸಮೀಕ್ಷೆ ನಡೆಸುವುದರ ಜೊತೆಗೆ ಅಗತ್ಯ ಚಿಕಿತ್ಸೆ ನೀಡಲು ಮತ್ತು ರೋಗ ಹರಡುವುದನ್ನು ತಡೆಯಲು ಇತರ ಪಾಸಿಟಿವ್ ಪ್ರಕರಣಗಳನ್ನು ಪತ್ತೆಹಚ್ಚಲು ನಿಯಮಿತವಾಗಿ ಮೇಲ್ವಿಚಾರಣೆ ನಡೆಸುತ್ತಾರೆ.”

– ಡಾ.ಪಿ.ಸಿ.ಕುಮಾರಸ್ವಾಮಿ, ಡಿ.ಎಚ್.ಒ.

ಜನವರಿಯಿಂದ ಜುಲೈವರೆಗೆ ೫೨ ಪ್ರಕರಣ:  ೨೦೨೪ ಜನವರಿಯಿಂದ ಡಿಸೆಂಬರ್‌ವರೆಗೆ ಒಟ್ಟು ೨,೦೨೪ ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿದ್ದು,ಅವುಗಳಲ್ಲಿ ೮೨ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದರೆ, ೨೦೨೫ ಜನವರಿಯಿಂದ ಜುಲೈ ಅಂತ್ಯದವರೆಗೆ ಒಟ್ಟು ೪೦೬ ರಕ್ತದ ಮಾದರಿಗಳನ್ನುಪರೀಕ್ಷಿಸಲಾಗಿದ್ದು, ಒಟ್ಟು ೫೨ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.

Tags:
error: Content is protected !!