ಬೈಲಕುಪ್ಪೆ: ಬೈಲಕುಪ್ಪೆ-ಆಲನಹಳ್ಳಿ ಮುಖ್ಯ ರಸ್ತೆಯ ಡಾಂಬರು ಕಿತ್ತು ಬಂದು, ವಾಹನ ಸವಾರರು ಪ್ರತಿನಿತ್ಯ ಸಂಚರಿಸಲು ಹರಸಾಹಸ ಪಡುತ್ತಿದ್ದಾರೆ.
ಪಿರಿಯಾಪಟ್ಟಣ ತಾಲ್ಲೂಕಿನ ಆಲನಹಳ್ಳಿ, ಹಕ್ಕೆಮಾಳದಿಂದ ಟಿಡಿಎಲ್ ಕ್ಯಾಂಪ್‌ತನಕ ಸಂಪೂರ್ಣವಾಗಿ ಡಾಂಬರು ಕಿತ್ತುಬಂದಿದ್ದು ರಸ್ತೆ ತೀರಾ ಹಾಳಾಗಿದೆ.
ಆಲನಹಳ್ಳಿ, ನವಿಲೂರು, ಹಕ್ಕೆಮಾಳ, ಗಿರಿಜನರ ಹಾಡಿ, ರೈತರ ಜಮೀನುಗಳಿಗೆ ತೆರಳಲು ಇದೇ ರಸ್ತೆಯಲ್ಲಿ ಓಡಾಡಬೇಕಿದೆ. ಅಲ್ಲದೆ, ಶಾಲಾ ಮಕ್ಕಳು ಕುಶಾಲ ನಗರ, ಕೊಪ್ಪ ಬೈಲಕುಪ್ಪೆಗೆ ಇದೇ ಮಾರ್ಗದಲ್ಲಿ ಬಂದು ಹೋಗಬೇಕಾಗಿದೆ. ಗುಂಡಿಮಯವಾದ ಈ ರಸ್ತೆಯಲ್ಲಿ ಈಗಾಗಲೇ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯ ಗೊಂಡಿರುವ ಉದಾಹರಣೆಗಳಿವೆ.
ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ರಸ್ತೆಯನ್ನು ದುರಸ್ತಿ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಆಲನಹಳ್ಳಿ, ಹಕ್ಕೆಮಾಳದಿಂದ ಟಿಡಿಎಲ್ ಕ್ಯಾಂಪ್ ಮುಖ್ಯರಸ್ತೆ ವರೆಗೂ ಸಂಪೂರ್ಣ ಹದಗೆಟ್ಟಿದೆ.
ಈ ಭಾಗದ ರೈತರು ಜಮೀನು ಚಟುವಟಿಕೆಗಳಿಗೆ ತೆರಳಲು, ವಾಹನ ಸವಾರರು ಸಂಚರಿಸಲು ಪರದಾಡುತ್ತಿದ್ದಾರೆ. ಅಧಿಕಾರಿಗಳು ಕೂಡಲೇ ಈ ರಸ್ತೆಯನ್ನು ದುರಸ್ತಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಹುಣಸೇವಾಡಿ ಗ್ರಾಪಂ ಮಾಜಿ ಅಧ್ಯಕ್ಷ ರಾಜಣ್ಣ ಒತ್ತಾಯಿಸಿದ್ದಾರೆ.
” ನಂದಿನಾಥಪುರ, ಬೂತನಹಳ್ಳಿ, ಆಲನಹಳ್ಳಿ ಮುಖ್ಯರಸ್ತೆ ಲೋಕೋಪಯೋಗಿ ಇಲಾಖೆಗೆ ಸೇರಿದೆ. ಈ ರಸ್ತೆಯಲ್ಲಿ ನಂದಿನಾಥಪುರ, ಬೂತನಹಳ್ಳಿ, ಆಲನಹಳ್ಳಿ ತನಕ ಗುಂಡಿಗಳಿಗೆ ತೇಪೆ ಹಾಕಲಾಗಿದೆ. ಹಕ್ಕೆಮಾಳದಿಂದ ಟಿಡಿಎಲ್ ಕ್ಯಾಂಪ್ ತನಕ ರಸ್ತೆ ದುರಸ್ತಿಗೆ ಈಗಾಗಲೇ ಹಣ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಸಚಿವರಾದ ಕೆ.ವೆಂಕಟೇಶ್ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ.”
-ಎಂ.ಆರ್.ವೆಂಕಟೇಶ್, ಎಇಇ, ಲೋಕೋಪಯೋಗಿ ಇಲಾಖೆ, ಪಿರಿಯಾಪಟ್ಟಣ





