ನಾಗರಹೊಳೆ ಉದ್ಯಾನದಂಚಿನ ಗ್ರಾಮಗಳ ಜಮೀನುಗಳಿಗೆ ಜಿಂಕೆಗಳ ಹಿಂಡು ಲಗ್ಗೆ; ಬೆಳೆ ನಾಶ
ದಾ.ರಾ.ಮಹೇಶ್
ವೀರನಹೊಸಹಳ್ಳಿ: ಹುಣಸೂರು ತಾಲ್ಲೂಕಿನ ಬಿ.ಆರ್. ಕಾವಲು, ಹೆಬ್ಬಾಳ, ಕಿಕ್ಕೇರಿಕಟ್ಟೆ, ಬೆಕ್ಯಶೆಡ್, ಮುದಗನೂರು, ಕೊಳವಿಗೆ, ಕಚುವಿನಹಳ್ಳಿ, ನೇರಳಕುಪ್ಪೆ ಮತ್ತಿತರ ಭಾಗಗಳಲ್ಲಿ ಜಿಂಕೆಗಳು ಹೊಲಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿರುವುದು ರೈತರನ್ನು ಕಂಗಾಲಾಗಿಸಿದೆ.
ಬೇಸಿಗೆಯಲ್ಲಿ ಬರುವ ಅಲ್ಪ ಸ್ವಲ್ಪ ಕೊಳವೆಬಾವಿ ನೀರಿನಿಂದ ಬಿತ್ತನೆ ಮಾಡಿ ಜೋಳ, ಹತ್ತಿ ಹಾಗೂ ಎಲೆಕೋಸು, ಬೀನ್ಸ್ ಮುಂತಾದ ತರಕಾರಿಗಳು, ಬೆಳೆಗಳನ್ನು ಬೆಳೆಯುವ ಪ್ರಯತ್ನದಲ್ಲಿರುವ ರೈತರು ಜಿಂಕೆಗಳ ಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೆಳೆದ ಬೆಳೆಯನ್ನು ಉಳಿಸಿಕೊಳ್ಳಬೇಕೆಂದು ರೈತರು ಹಗಲು, ರಾತ್ರಿ -ಸಲು ಕಾಯುತ್ತಿದ್ದಾರೆ. ಒಂದೊಂದು ಹಿಂಡಿನಲ್ಲಿ ೩೦- ೪೦ರಷ್ಟಿರುವ ಜಿಂಕೆಗಳು ಕೇವಲ ಅರ್ಧ ಗಂಟೆಯಲ್ಲಿ ೨-೩ ಎಕರೆ ಪ್ರದೇಶದಲ್ಲಿನ ಬೆಳೆಗಳನ್ನು ನಾಶಪಡಿಸುತ್ತಿವೆ. ಮನುಷ್ಯನ ವಾಸನೆ ಬಂದೊಡನೆಯೇ ಅಲ್ಲಿಂದ ಜಾಗ ಖಾಲಿ ಮಾಡುತ್ತವೆ ಎನ್ನುತ್ತಾರೆ ರೈತರು.
ಜವಾಬ್ದಾರಿ ಮರೆತ ಅರಣ್ಯ ಇಲಾಖೆ: ಜಿಂಕೆಗಳ ಸಂರಕ್ಷ ಣೆ ಜವಾಬ್ದಾರಿ ಹೊರಬೇಕಿದ್ದ ಅರಣ್ಯ ಇಲಾಖೆಯ ಬೇಜವಾಬ್ದಾರಿಯಿಂದ ಜಿಂಕೆಗಳು ಕೃಷಿಕರ ಜಮೀನುಗಳಲ್ಲಿ ಬೆಳೆ ತಿನ್ನುತ್ತಿವೆ. ಮಳೆಯಾಶ್ರಿತ ಬೆಳೆಗಳು ಜಿಂಕೆಗಳ ಪಾಲಾಗುತ್ತಿವೆ. ಬೆಳೆ ರಕ್ಷಿಸಿಕೊಳ್ಳಲು ಬೆಳಿಗ್ಗೆಯಿಂದ ಸಂಜೆಯವರೆಗೂ ಹಾಗೂ ರಾತ್ರಿಯಿಂದ ಬೆಳಗಿನವರೆಗೂ ಸರದಿಯಲ್ಲಿ ಕಾಯಬೇಕಿದೆ. ಸ್ವಲ್ಪ ಯಾಮಾರಿದರೂ ಜಿಂಕೆಗಳು ಜಮೀನಿಗೆ ಬಂದು ಪೈರು ತಿಂದು ಹಾಕುತ್ತವೆ ಎನ್ನುವುದು ಈ ಭಾಗದ ರೈತರ ಆರೋಪವಾಗಿದೆ.
ಜಿಂಕೆಗಳ ಸಂತತಿ ಹೆಚ್ಚಳ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಪಕ್ಕದಲ್ಲೇ ಇರುವುದರಿಂದ ಪ್ರತಿ ವರ್ಷ ಜಿಂಕೆಗಳ ಸಂತತಿ ಹೆಚ್ಚುತ್ತಲೇ ಇದೆ. ರೈತರ ಬೆಳೆ ಪ್ರತಿವರ್ಷ ನಾಶವಾಗುವುದನ್ನು ಸರ್ಕಾರ ಗಮನಿಸುತ್ತಿಲ್ಲ. ಪ್ರತಿ ವರ್ಷಗಳ ಮುಂಗಾರು ಬೆಳೆಯನ್ನು ಸಂಪೂರ್ಣವಾಗಿ ನಾಶ ಮಾಡುತ್ತಿವೆ. ಆದರೆ, ಪರಿಹಾರ ಮಾತ್ರ ಸಿಕ್ಕಿಲ್ಲ ಎನ್ನುತ್ತಾರೆ ರೈತರು.
ಪುಡಿಗಾಸಿನ ಪರಿಹಾರ: ರೈತರು ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದ ಬೆಳೆ ಹಾನಿಗೆ ಅರಣ್ಯ ಇಲಾಖೆ ಕೊಡುವ ಪುಡಿಗಾಸಿನ ಪರಿಹಾರ ಯಾವುದಕ್ಕೂ ಸರಿಯಾಗುವುದಿಲ್ಲ. ಬೀನ್ಸ್, ಅವರೆಕಾಯಿ, ಜೋಳ, ಹತ್ತಿ ಸೇರಿದಂತೆ ಇತರೆ ಸಸಿಗಳು ಜಿಂಕೆಗಳ ಹಾವಳಿಗೆ ನಲುಗುತ್ತಿದ್ದು, ಈ ಭಾಗದ ರೈತರಲ್ಲಿ ಆತಂಕ ಸೃಷ್ಟಿಯಾಗಿದೆ.
” ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಲವು ಸಭೆ ಸಮಾರಂಭಗಳಲ್ಲಿ ರೈತರು ಜಿಂಕೆಗಳ ಹಾವಳಿ ಬಗ್ಗೆ ನನ್ನ ಗಮನಕ್ಕೆ ತಂದಿದ್ದಾರೆ. ಮಾರ್ಚ್ ತಿಂಗಳಲ್ಲಿ ನಡೆಯುವ ವಿಧಾನಸಭೆ ಅಽವೇಶನದಲ್ಲಿ ಈ ಕುರಿತು ಚರ್ಚೆ ಮಾಡಿ ಜಿಂಕೆಗಳ ಹಾವಳಿ ತಡೆಯುವಂತೆ ಒತ್ತಾಯ ಮಾಡುತ್ತೇನೆ.”
-ಜಿ.ಡಿ.ಹರೀಶ್ ಗೌಡ, ಶಾಸಕರು, ಹುಣಸೂರು
” ಜಿಂಕೆಗಳ ಹಾವಳಿ ತಡೆಗಟ್ಟಲು ಶಾಶ್ವತ ಕ್ರಮ ಕೈಗೊಳ್ಳಬೇಕು ಮತ್ತು ದಾಳಿಯಿಂದಾದ ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕೆಂದು ಪ್ರತಿ ವರ್ಷ ರೈತರು ಅರಣ್ಯ, ಕಂದಾಯ ಇಲಾಖೆಗಳ ಮೂಲಕ ಜಿಲ್ಲಾಧಿಕಾರಿ ಹಾಗೂ ಸರ್ಕಾರಕ್ಕೆ ಸಾಕಷ್ಟು ಬಾರಿ ಮನವಿ ಮಾಡಿದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.”
–ಭರತವಾಡಿ ವೆಂಕಟೇಶ್, ಗ್ರಾಪಂ ಉಪಾಧ್ಯಕ್ಷ, ದೊಡ್ಡಹೆಜ್ಜೂರು





