ಪಟಾಕಿ ಮಾರಾಟ ಮಳಿಗೆ ತೆರೆಯಲು ಐದು ಇಲಾಖೆಗಳ ಅಭಿಪ್ರಾಯ ಕಡ್ಡಾಯ
ಚಾಮರಾಜನಗರ: ಬೆಳಕಿನ ಹಬ್ಬ ದೀಪಾವಳಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಕುರಿತು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟ ನಿರ್ದೇಶನ ನೀಡಿದ್ದು, ಅದರಂತೆ ರಾತ್ರಿ ೮ ರಿಂದ ೧೦ ಗಂಟೆಯವರೆಗೆ ಮಾತ್ರ ಪಟಾಕಿಗಳನ್ನು ಸಿಡಿಸಲು ಅವಕಾಶ ನೀಡಲಾಗಿದೆ. ೧೨೫ ಡೆಸಿಬಲ್‌ಗಿಂತ ಕಡಿಮೆ ಶಬ್ದದ ಹಸಿರು ಪಟಾಕಿಗಳನ್ನೇ ಬಳಸಬೇಕಿದೆ. ಸರ್ವೋಚ್ಚ ನ್ಯಾಯಾಲಯ ಅನುಮತಿಸಿರುವ ಹಸಿರು ಪಟಾಕಿಗಳನ್ನು ಬಿಟ್ಟು ಇತರ ಪಟಾಕಿಗಳ ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಲಾಗಿದೆ.
ಚಾಮರಾಜನಗರ ಸೇರಿದಂತೆ ಎಲ್ಲಿಯೇ ಆಗಲಿ ಪಟಾಕಿ ಮಾರಾಟ ಮಾಡುವವರು ಹಾಗೂ ಪಟಾಕಿ ಸಂಗ್ರಹಿಸುವ ಗೋದಾಮುಗಳ ಮಾಲೀಕರು ಪೊಲೀಸ್ ಠಾಣೆ, ಅಗ್ನಿ ಶಾಮಕ ಠಾಣೆ, ಪರಿಸರ ಇಲಾಖೆ, ತಹಸಿ ಲ್ದಾರ್ ಹಾಗೂ ನಗರಸಭೆ ಅಥವಾ ಸಂಬಂಧಿಸಿದ ಸ್ಥಳೀಯ ಆಡಳಿತದ ಅಭಿಪ್ರಾಯ ಪಡೆಯಬೇಕಿದೆ. ಇದರ ಆಧಾರದ ಮೇಲೆ ಜಿಲ್ಲಾಡಳಿತ ಅನುಮತಿ ನೀಡಲಿದೆ. ಇದುವರೆಗೆ ಜಿಲ್ಲಾಡಳಿತಕ್ಕೆ ಇಂತಹ ೩೮ ಅರ್ಜಿಗಳು ಬಂದಿವೆ.
ನ್ಯಾಯಪೀಠದ ಆದೇಶದಂತೆ ಎಲ್ಲಾ ಪಟಾಕಿ ಹಾಗೂ ಅವುಗಳ ಪ್ಯಾಕೆಟ್ ಮೇಲೆ ಹಸಿರು ಪಟಾಕಿಯ ಚಿಹ್ನೆ ಮತ್ತು ಕ್ಯೂಆರ್ ಕೋಡ್ ಇರಲಿದೆ. ೧೨೫ ಡೆಸಿಬಲ್‌ಗಿಂತ (ಡಿಬಿ) ಹೆಚ್ಚು ಶಬ್ದವನ್ನು ಉತ್ಪಾದಿಸುವ ಪಟಾಕಿಗಳನ್ನು ಕಾನೂನು ಬಾಹಿರವೆಂದು ಪರಿಗಣಿಸಲಾಗಿದೆ. ಹೆಚ್ಚಿನ ಮಿತಿಯ ಪಟಾಕಿ ಬಳಕೆ ಪರಿಸರಕ್ಕೆ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಹಾನಿಕಾರಕ ಎಂದು ಪರಿಗಣಿಸಲಾಗಿದೆ.
ಹಸಿರು ಪಟಾಕಿಗಳು ಮಾಲಿನ್ಯವನ್ನು ಕಡಿಮೆ ಮಾಡುತ್ತವೆ. ಧ್ವನಿಮಟ್ಟದ ಮಿತಿಯ ನಿಯಮಕ್ಕೆ ಪೂರಕವಾಗಿವೆ ಎಂಬುದು ಪರಿಸರ ಇಲಾಖೆಯ ಹೇಳಿಕೆ. ೧೨೫ ಡೆಸಿಬೆಲ್ ಮೀರಿದರೆ ಅದರಿಂದ ಶ್ರವಣ ಶಕ್ತಿಗೆ, ಕಿವಿಯ ಸೂಕ್ಷ್ಮ ರಚನೆಗಳಿಗೆ ಹಾನಿ ಉಂಟಾಗಲೂಬಹುದು. ಇದರಿಂದಾಗಿ ತಾತ್ಕಾಲಿಕವಾಗಿ ಅಥವಾ ಶಾಶ್ವತ ವಾಗಿ ಕಿವುಡುತನ ಎದುರಾಗಲೂಬಹುದು. ಇಂತಹ ಅಪಾಯ ತಪ್ಪಿಸಲು ಹಸಿರು ಪಟಾಕಿಗಳನ್ನು ಬಳಸಲು ತಿಳಿಸಲಾಗಿದೆ.
ಅದೂ ಅಲ್ಲದೇ, ಹೆಚ್ಚಿನ ಶಬ್ದವು ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಅದರಲ್ಲಿಯೂ ವೃದ್ಧರು, ಗರ್ಭಿಣಿಯರು ಮತ್ತು ಚಿಕ್ಕ ಮಕ್ಕಳು ಹೆಚ್ಚಿನ ಶಬ್ದದಿಂದ ಘಾಸಿಯಾಗುವಂತಹ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸಬಹುದಾದ ಸನ್ನಿವೇಶ ಬರಲೂಬಹುದು. ಶ್ವಾನ, ಇನ್ನಿತರ ಪ್ರಾಣಿಗಳೂ ದೊಡ್ಡ ಮಟ್ಟದ ಶಬ್ದದಿಂದ ಭಾರೀ ಗಾಬರಿಯಾಗುತ್ತವೆ. ಅವುಗಳಲ್ಲಿಯೂ ಮಾನಸಿಕ ಒತ್ತಡ ಉಂಟಾಗಿ ಶ್ರವಣ ಶಕ್ತಿ ನಷ್ಟ ಆಗುವುದಿದೆ. ಈ ಎಲ್ಲಾ ಕಾರಣಗಳಿಂದ ಹಸಿರು ಪಟಾಕಿಗಳನ್ನು ಮಾತ್ರವೇ ಬಳಸಬೇಕು ಎಂಬುದು ಜಿಲ್ಲಾಧಿಕಾರಿ ಅವರ ಮನವಿ.
” ಅ.೨೦ರಂದು ನರಕಚತುರ್ದಶಿ, ಅ.೨೧ರಂದು ಅಮಾವಾಸ್ಯೆ, ೨೨ರಂದು ದೀಪಾವಳಿ ಹಬ್ಬ ಇದ್ದು ಈ ಮೂರು ದಿನಗಳಂದು ಎಲ್ಲೆಡೆ ಅಧಿಕವಾಗಿ ಪಟಾಕಿ ಬಳಕೆ ಮಾಡಲಾಗುತ್ತದೆ. ನರಕಚತುದರ್ಶಿಯ ಹಿಂದಿನ, ದೀಪಾವಳಿಯ ನಂತರದ ದಿನಗಳಲ್ಲೂ ಸ್ವಲ್ಪ ಮಟ್ಟಿಗೆ ಪಟಾಕಿ ಸದ್ದು ಕೇಳಿಬರುತ್ತದೆ. ಪಟಾಕಿ ಮಾರಾಟವನ್ನು ನಿರ್ದಿಷ್ಟ ಸ್ಥಳದಲ್ಲಿಯೇ ಮಾರಾಟ ಮಾಡಬೇಕಿದೆ. ಅದರಂತೆ ಚಾಮರಾಜನಗರದಲ್ಲಿ ಮೆಗಾ ಕಾಂಪ್ಲೆಕ್ಸ್ ಹತ್ತಿರದಲ್ಲಿ ಮಾರಾಟ ಮಾಡಲು ಅನುಮತಿ ನೀಡಲಾಗಿದೆ.
” ರಾತ್ರಿ ೮ರಿಂದ ೧೦ರವರೆಗಿನ ನಿಗದಿತ ಸಮಯ ಬಿಟ್ಟು ಉಳಿದ ವೇಳೆಯಲ್ಲಿ ಪಟಾಕಿಗಳ ಬಳಕೆಯನ್ನು ಸಂಪೂರ್ಣವಾಗಿ ನೀಷೇಧಿಸಲಾಗಿದೆ.”
-ಸಿ.ಟಿ.ಶಿಲ್ಪಾ ನಾಗ್, ಜಿಲ್ಲಾಧಿಕಾರಿ
” ಜಿಲ್ಲೆಯ ಜನತೆ ಹಸಿರು ಪಟಾಕಿಯನ್ನೇ ಬಳಕೆ ಮಾಡಬೇಕು. ಸಾಧ್ಯವಾದರೆ, ಪಟಾಕಿ ಬದಲು ದೀಪ ಹಚ್ಚಿ ಬೆಳಕಿನ ಹಬ್ಬ ಆಚರಿಸಬೇಕು. ಇದರಿಂದ ಮನುಷ್ಯ, ಪ್ರಾಣಿ, ಸಸ್ಯ ಸಂಕುಲಗಳಿಗೆ ಅತ್ಯಂತ ಒಳ್ಳೆಯದು.”
-ಕೆ.ಎಲ್.ಸವಿತಾ, ಪರಿಸರ ಅಧಿಕಾರಿ, ಚಾ.ನಗರ





